ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿಯವರಿಗೆ ಜನರಿಕ್‌ ಮಳಿಗೆ: ಆಕ್ರೋಶ

Last Updated 7 ಸೆಪ್ಟೆಂಬರ್ 2017, 9:37 IST
ಅಕ್ಷರ ಗಾತ್ರ

ಬೇಲೂರು: ‘ಕೇಂದ್ರ ಸರ್ಕಾರ ಬಡ ರೋಗಿಗಳಿಗೆ ಅನುಕೂಲವಾಗಲಿ ಎಂದು ಸ್ಥಾಪಿಸಿರುವ ಜನರಿಕ್‌ ಔಷಧ ಮಳಿಗೆಯನ್ನು ಇಲ್ಲಿಯ ಖಾಸಗಿ ಅಂಗಡಿಯೊಂದಕ್ಕೆ ನೀಡುವ ಮೂಲಕ ಜನರನ್ನು ವಂಚಿಸಲಾಗುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಣಸವಳ್ಳಿ ಅಶ್ವತ್ಥ್‌ ಆರೋಪಿಸಿದರು.

ಬುಧವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ತೆರೆಯಬೇಕಾದ ಜನರಿಕ್‌ ಔಷಧ ಮಳಿಗೆಯನ್ನು ಆಸ್ಪತ್ರೆ ಎದುರಿನ ಮಲ್ಲಿಕಾರ್ಜುನ ಮೆಡಿಕಲ್ಸ್‌ ಎಂಬ ಅಂಗಡಿಗೆ ಮಂಜೂರು ಮಾಡಲಾಗಿದೆ. ಇವರು ಸರ್ಕಾರದಿಂದ ಕಡಿಮೆ ಬೆಲೆಗೆ ಔಷಧವನ್ನು ಪಡೆದು ಅದನ್ನು ರೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯವರು ಈ ಅಂಗಡಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ದೂರಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಯೋಗೇಶ್‌ ಮಾತನಾಡಿ, ‘ಬೇಲೂರಿಗೆ ಜನರಿಕ್‌ ಔಷಧ ಮಳಿಗೆ ಮಂಜೂರಾಗಿಲ್ಲ’ ಎಂದು ಹೇಳಿದರು. ಇದರಿಂದ ಆಕ್ರೋಶಗೊಂಡ ಅಶ್ವತ್ಥ್‌, ‘ಆರು ತಿಂಗಳ ಹಿಂದೆಯೇ ಜನರಿಕ್‌ ಔಷಧ ಮಳಿಗೆ ಮಂಜೂರಾಗಿದೆ. ಮಲ್ಲಿಕಾರ್ಜುನ ಮೆಡಿಕಲ್ಸ್‌ನವರು ‘ಜನರಿಕ್‌ ಔಷಧ ಅಂಗಡಿ’ ಎಂದು ನಾಮಫಲಕ ಹಾಕಿಕೊಂಡಿದ್ದಾರೆ. ಆದರೆ, ಕಡಿಮೆ ಬೆಲೆಗೆ ಔಷಧ ನೀಡುತ್ತಿಲ್ಲ’ ಎಂದು ಮಳಿಗೆ ಮಂಜೂರಾಗಿರುವ ದಾಖಲೆಯನ್ನು ಸಭೆಯಲ್ಲಿ ಪ್ರದರ್ಶಿಸಿದರು.

ಇದಕ್ಕೆ ಉತ್ತರಿಸಿದ ಆರೋಗ್ಯಾಧಿಕಾರಿ, ‘ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಪರಿಶೀಲನೆ ನಡೆಸಿ ಮಲ್ಲಿಕಾರ್ಜುನ ಮೆಡಿಕಲ್ಸ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸಭೆಯಲ್ಲಿ ಮಾತನಾಡಿದ ಸದಸ್ಯ ನವಿಲಹಳ್ಳಿ ಕಿಟ್ಟಿ ‘ನಾಲ್ಕು ತಿಂಗಳ ಹಿಂದೆಯೇ ನಾನು ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ದಾಖಲೆಗಳನ್ನು ನೀಡಿದ್ದರೂ ಆರೋಗ್ಯ ಇಲಾಖೆಯವರು ಕ್ರಮ ಕೈಗೊಂಡಿಲ್ಲ. ಬೇಲೂರು ಆಸ್ಪತ್ರೆ ಹೆಸರಿಗಷ್ಟೇ ಮೇಲ್ದರ್ಜೆಗೇರಿದೆ. ಇಲ್ಲಿ ಜನರಿಗೆ ಯಾವ ಸೌಲಭ್ಯವೂ ದೊರಕುತ್ತಿಲ್ಲ. ಶೌಚಾಲಯ ಗಬ್ಬು ನಾರುತ್ತಿದೆ. ಯಾವ ಸೌಲಭ್ಯಗಳೂ ಇಲ್ಲವಾಗಿವೆ’ ಎಂದು ಆರೋಪಿಸಿದರು.

ಸದಸ್ಯೆ ಸುಮಾ ಪರಮೇಶ್‌, ‘ಹಳೇಬೀಡು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ತೀವ್ರವಾಗಿದೆ. ಸ್ತ್ರೀರೋಗ ತಜ್ಞರು, ಮಹಿಳಾ ವೈದ್ಯರು ಇಲ್ಲದೆ, ಜನರು ಪರದಾಡುತ್ತಿದ್ದಾರೆ. ಎಲ್ಲ ಚಿಕಿತ್ಸೆಗೆ ಹಾಸನಕ್ಕೆ ತೆರಳಬೇಕಾದ ದುಸ್ಥಿತಿ ಇದೆ. ತಕ್ಷಣ ವೈದ್ಯರನ್ನು ನೇಮಿಸಿ’ ಎಂದು ಆಗ್ರಹಿಸಿದರು.

ಸದಸ್ಯೆ ಸಂಗೀತಾ ಮಾತನಾಡಿ, ‘ತಾಲ್ಲೂಕಿನ ಅಂಗಡಿಹಳ್ಳಿ ಶಾಲೆಗೆ ಸೂಕ್ತ ಕಟ್ಟಡ ಇಲ್ಲ. 250ಕ್ಕೂ ಹೆಚ್ಚು ಮಕ್ಕಳು ನೆಲದಲ್ಲಿ ಕೂತು ಪಾಠ ಕೇಳುವ ದುಸ್ಥಿತಿ ಇದೆ. ಶಾಲೆಯಲ್ಲಿ ಶೌಚಾಲಯವೂ ಇಲ್ಲ. ಕುಡಿಯಲು ನೀರು ಸಿಗದೇ ಮಕ್ಕಳು ಪರದಾಡುತ್ತಿದ್ದಾರೆ. ಹೀಗಾದರೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಯಾರೂ ಕಳುಹಿಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಹರೀಶ್‌, ‘ಹಗರೆ ಆಟದ ಮೈದಾನದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಮಧ್ಯಾಹ್ನವೇ ಕುಡಿಯುತ್ತ ಕುಳಿತಿರುತ್ತಾರೆ. ಇಂತಹ ಶಾಲೆಯಲ್ಲಿ ಮಕ್ಕಳು ಏನನ್ನು ಕಲಿಯುತ್ತಾರೆ. ಮುಖ್ಯಶಿಕ್ಷಕರು ಪೊಲೀಸರಿಗೆ ದೂರು ಕೊಡಲೂ ಮುಂದಾಗುತ್ತಿಲ್ಲ’ ಎಂದು ಆರೋಪಿಸಿದರು.
ಉಪಾಧ್ಯಕ್ಷೆ ತೀರ್ಥಮ್ಮ, ಕಾರ್ಯ ನಿರ್ವಹಣಾಧಿಕಾರಿ ಬಿ.ವಿ.ಮಲ್ಲೇಶಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT