ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೂರಿನ ಬೆಡಗಿ ಸಿನೋಲ್‌!

Last Updated 7 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಇವರು ಸಿನೋಲ್ ಮಿನೇಜಸ್. ಕಡಲ ತಡಿಯ ಮಂಗಳೂರಿನ ಬೆಡಗಿ ಇವರು. ತುಳು-ಕೊಂಕಣಿ ಸಿನಿಮಾವೊಂದರಲ್ಲಿ ಈಗಾಗಲೇ ಅಭಿನಯಿಸಿದ್ದಾರೆ. ಅಲ್ಲದೆ, ಟೆಲಿಸಿನಿಮಾ, ಧಾರಾವಾಹಿಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಈಗ ಇವರು ಮಂಜು ಹಾಸನ ನಿರ್ದೇಶನದ ‘ಕುಲ್ಫಿ’ ಚಿತ್ರದ ಮೂಲಕ ಕನ್ನಡ ಚಿತ್ರ ಲೋಕಕ್ಕೆ ಪ್ರವೇಶ ಕೊಟ್ಟಿದ್ದಾರೆ. ಇವರ ಜೊತೆ ಮಾತನಾಡಿದೆ ‘ಚಂದನವನ’ ತಂಡ. ಈ ಪುಟ್ಟ ಮಾತುಕತೆಯ ವೇಳೆ ಸಿನೋಲ್ ಅವರು ಸಿನಿಮಾ ಕುರಿತ ತಮ್ಮ ಪ್ರೀತಿ, ಆಸಕ್ತಿಯನ್ನು ಚಿಕ್ಕ ಚಿಕ್ಕ ಮಾತುಗಳ ಮೂಲಕವೇ ಹಂಚಿಕೊಂಡಿದ್ದಾರೆ.

* ಸಿನಿಮಾ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ? ಅಭಿನಯದ ಕಡೆ ಸೆಳೆತ ಬಂದಿದ್ದು ಏಕೆ?

ಸಿನಿಮಾ ರಂಗ ಪ್ರವೇಶಿಸಬೇಕು ಎಂಬ ಕನಸು ನನಗೆ ಸಣ್ಣ ವಯಸ್ಸಿನಿಂದಲೇ ಇತ್ತು. ಚಿಕ್ಕವಳಿದ್ದಾಗ, ಅಂದರೆ ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಮಯದಲ್ಲೇ, ಇಂಥದ್ದೊಂದು ಆಸೆ ಇತ್ತು. ನಾನು ನಾಟಕಗಳಲ್ಲಿ ಅಲ್ಲೊಂದು ಇಲ್ಲೊಂದು ಪಾತ್ರ ನಿಭಾಯಿಸುತ್ತಿದ್ದೆ. ಆ ಮೂಲಕ ಅಭಿನಯದ ಆಸಕ್ತಿ ಮೂಡಿತು.

ಸಿನಿಮಾಗಳನ್ನು ವೀಕ್ಷಿಸುವಾಗ, ನಾನೂ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಬೇಕು ಎಂಬ ಆಸೆಗಳು ಮೂಡಿದ್ದವು. ಹೀಗಿದ್ದ ನನಗೆ ಒಂದು ಟೆಲಿಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ‘ಮಾನಸ’ ಎಂಬುದು ಅದರ ಹೆಸರು. ಅದನ್ನು ನೀವು ಈಗ ಯೂಟ್ಯೂಬ್ ಮೂಲಕ ವೀಕ್ಷಿಸಬಹುದು. ಎರಡು ಲಕ್ಷಕ್ಕೂ ಹೆಚ್ಚು ಜನ ಅದನ್ನು ಇದುವರೆಗೆ ವೀಕ್ಷಿಸಿದ್ದಾರೆ. ಅದರ ಮೂಲಕ ನಾನು ಅಭಿನಯ ಲೋಕಕ್ಕೆ ಸಣ್ಣದೊಂದು ಪ್ರವೇಶ ಪಡೆದೆ. ನಂತರ ನನಗೆ ಒಂದು ಆಲ್ಬಂ ಹಾಡಿನಲ್ಲಿ ಅವಕಾಶ ಸಿಕ್ಕಿತು.

ಹಾಗೆಯೇ, ಡೈಜಿ ವರ್ಲ್ಡ್ ಎಂಬ ವೆಬ್‌ಸೈಟ್‌ನಲ್ಲಿ ಪ್ರಸಾರವಾಗುವ ಕೊಂಕಣಿ ಧಾರಾವಾಹಿಯೊಂದರಲ್ಲಿ ಅವಕಾಶ ಗಿಟ್ಟಿಸಿಕೊಂಡೆ. ಅದರೆ ‘ಕುಲ್ಫಿ’ ಸಿನಿಮಾ ಚಿತ್ರೀಕರಣ ಆರಂಭವಾದ ಕಾರಣ ನಾನು ಆ ಧಾರಾವಾಹಿಯನ್ನು ಮಧ್ಯದಲ್ಲೇ ಕೈಬಿಟ್ಟು ಬೆಂಗಳೂರಿಗೆ ಬರಬೇಕಾಯಿತು.

* ಕೊಂಕಣಿ ಅಥವಾ ತುಳು ಸಿನಿಮಾಗಳಲ್ಲಿ ಅಭಿನಯಿಸಿದ್ದೀರಾ?

ಕೊಂಕಣಿ ಮತ್ತು ತುಳುವಿನಲ್ಲಿ ಬಂದ ‘ಇಂಚ ಆಂಡ್‌ ಏಂಚ’ ಸಿನಿಮಾದಲ್ಲಿ ನಾನು ನಾಯಕಿಯಾಗಿ ಅಭಿನಯಿಸಿದೆ. ಅದಾದ ತಕ್ಷಣ ದೊರೆತಿದ್ದು ‘ಕುಲ್ಫಿ’ ಸಿನಿಮಾ ಅವಕಾಶ.

* ಈ ಸಿನಿಮಾ ಅವಕಾಶ ದೊರೆತಿದ್ದು ಹೇಗೆ?

ನಾನು ಮಂಜು ಹಾಸನ ಅವರೆದುರು ಆಡಿಷನ್ ನೀಡಿ, ಅವಕಾಶ ಪಡೆದುಕೊಂಡೆ. ತುಳು, ಕೊಂಕಣಿ ಹಾಗೂ ಕನ್ನಡ ಸಿನಿಮಾಗಳು ಒಂದರ್ಥದಲ್ಲಿ ಬೇರೆ ಬೇರೆ ಅನುಭವ ನೀಡುತ್ತವೆ. ಮಂಜು ಅವರಿಗೆ ನನ್ನ ಅಭಿನಯ ಇಷ್ಟವಾಯಿತು. ಅವರು ಹುಡುಕುತ್ತಿದ್ದಂತಹ ಅಭಿನಯ ಅವರಿಗೆ ನನ್ನಲ್ಲಿ ಸಿಕ್ಕಿತು. ನನ್ನ ಪಾಲಿಗೆ ಕನ್ನಡ ಸಿನಿಮಾ ಜಗತ್ತಿನ ಮೊದಲ ಅವಕಾಶ ‘ಕುಲ್ಫಿ’.

* ನಿಮ್ಮ ಕುಟುಂಬದಲ್ಲಿ ಯಾರಾದರೂ ಅಭಿನಯದ ಹಿನ್ನೆಲೆ ಹೊಂದಿದ್ದಾರಾ?

ನನ್ನ ಅಣ್ಣ ಸ್ಥಳೀಯ ಕೊಂಕಣಿ ನಾಟಕಗಳಲ್ಲಿ ಅಭಿನಯಿಸಿದ್ದ, ಅಷ್ಟೇ. ಇಷ್ಟನ್ನು ಹೊರತುಪಡಿಸಿದರೆ, ಕುಟುಂಬದ ಸದಸ್ಯರಲ್ಲಿ ಯಾರೂ ಅಭಿನಯಿಸಿದವರಲ್ಲ.

* ಗ್ಲಾಮರ್ ಸೇರಿದಂತೆ ಯಾವ ಬಗೆಯ ಪಾತ್ರಗಳು ನಿಮಗೆ ಇಷ್ಟ?

ನನಗೆ ಜೋರು ಅನಿಸುವ, ರೂಡ್ ಅನಿಸುವ, ಆfಯಕ್ಷನ್ ಇರುವ ಪಾತ್ರಗಳು ಇಷ್ಟ. ಮೃದು ವ್ಯಕ್ತಿತ್ವದ ಪಾತ್ರಗಳಿಗಿಂತಲೂ ಅವು ಹೆಚ್ಚು ಇಷ್ಟ ನನಗೆ. ಯಾಕೆ ಇಷ್ಟ ಅಂದರೆ, ಅವು ನನಗೆ ಹೆಚ್ಚು ಸೂಕ್ತವಾಗುತ್ತವೆ ಎಂದು ಅನಿಸುತ್ತದೆ. ಮುಂದೆ ಕೂಡ ಅಂತಹ ಪಾತ್ರಗಳನ್ನು ಹುಡುಕುವೆ. 'ಕುಲ್ಫಿ'ಯಲ್ಲಿ ಕೂಡ ಅಂತಹ ಒಂದು ಪಾತ್ರ ನನ್ನದು.

ಒಂದು ಹೆಣ್ಣು ಹೇಗೆಲ್ಲ ಇರುತ್ತಾಳೆ ಎಂಬುದನ್ನು ಕುಲ್ಫಿಯಲ್ಲಿನ ನನ್ನ ಪಾತ್ರ ಹೇಳುತ್ತದೆ. ಹಾಗಾಗಿಯೇ ಆ ಪಾತ್ರ ನನಗೆ ಬಹಳ ಇಷ್ಟವೂ ಆಯಿತು.

* ಕಮರ್ಷಿಯಲ್, ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಯಾವುದು ಇಷ್ಟ?

ನಾನು ಸ್ಕ್ರಿಪ್ಟ್‌ ನೋಡಿ ಇಷ್ಟವೋ ಇಲ್ಲವೋ ಎಂಬುದನ್ನು ನಿರ್ಧರಿಸುವವಳು. ನನಗೆ ಒಳ್ಳೆಯ ಕಥಾಹಂದರ ಇರುವ ಪ್ರಯೋಗಾತ್ಮಕ ಸಿನಿಮಾಗಳು ಇಷ್ಟ.

ಆ್ಯಕ್ಷನ್ ಆಧಾರಿತ ಸಿನಿಮಾಗಳಲ್ಲಿ ಪಾತ್ರ ನಿಭಾಯಿಸಬೇಕು ಎಂಬ ಆಸೆ ಇದೆ - ಮಾಲಾಶ್ರೀ ತರಹ! ಅದನ್ನು ಹೊರತುಪಡಿಸಿದರೆ, ಎಲ್ಲ ಬಗೆಯ ಪಾತ್ರಗಳನ್ನೂ ನಿಭಾಯಿಸುವ ಆಸೆ ಇದೆ. ಅದು ಕೂಡ ಸ್ಕ್ರಿಪ್ಟ್‌ ನೋಡಿ ತೀರ್ಮಾನಿಸಬೇಕು.

* ಸಿನಿಮಾ ಹೊರತುಪಡಿಸಿದರೆ ನಿಮ್ಮ ವೃತ್ತಿ ಏನು?

ನಾನು ವೃತ್ತಿಯಿಂದ ಮನಶಾಸ್ತ್ರಜ್ಞೆ. ನಾನು ಮಂಗಳೂರಿನಲ್ಲಿ ಶಾಲೆಯೊಂದರಲ್ಲಿ ಕೆಲಸ ಮಾಡಿದ್ದೇನೆ. ಇಲ್ಲಿ (ಬೆಂಗಳೂರಿನಲ್ಲಿ) ಕೂಡ ಶಾಲೆಯಲ್ಲಿ ಮನಶಾಸ್ತ್ರಜ್ಞೆಯಾಗಿ ಕೆಲಸ ಮಾಡುತ್ತಿರುವೆ. ಸಿನಿಮಾ ನನಗೆ ಪ್ಯಾಷನ್. ಪಾತ್ರಗಳ ವಿಚಾರದಲ್ಲಿ ನಾನು ಚೂಸಿ ಆಗಿಯೇ ಇರುವೆ. ನನಗೆ ಇಷ್ಟವಾದರೆ ಮಾತ್ರ ಒಪ್ಪಿಕೊಳ್ಳುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT