ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರಿರುವ ಮನೆ ಹೀಗಿರಲಿ

Last Updated 7 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅಜ್ಜ ಸ್ನಾನದ ಕೋಣೆಯಲ್ಲಿ ಜಾರಿ ಬಿದ್ದರು. ಅಜ್ಜಿಗೆ ಬಿದ್ದು ಸೊಂಟ ಮುರಿದಿದೆ. ಹೀಗೆ ವಯಸ್ಸಾದವರು ಮನೆಯಲ್ಲಿ ಜಾರಿ ಬಿದ್ದ ಹಲವು ಸನ್ನಿವೇಶಗಳನ್ನು ನೀವು ನೋಡಿರುತ್ತೀರಿ ಅಥವಾ ಕೇಳಿರುತ್ತೀರಿ. ಅಜ್ಜ, ಅಜ್ಜಿ ಮನೆಯಲ್ಲಿ ಜಾರಿ ಬೀಳಲು ಮನೆಯ ಒಳಾಂಗಣ ವಿನ್ಯಾಸವೂ ಕಾರಣವಾಗಿರುತ್ತದೆ. ಮನೆಯಲ್ಲಿ ಹಿರಿಯರು ಇರುವಾಗ ಒಳಾಂಗಣ ವಿನ್ಯಾಸದ ಬಗ್ಗೆ ಮುತುವರ್ಜಿ ವಹಿಸುವುದು ಅಗತ್ಯ.

ಸ್ನಾನದ ಕೋಣೆ: ಸ್ವಲ್ಪ ನೀರಿದ್ದರೂ ವಯಸ್ಸಾದವರು ಕಾಲು ಜಾರಿ ಬೀಳುವ ಸಂಭವವಿರುತ್ತದೆ. ಹಾಗಾಗಿ ಆ್ಯಂಟಿ ಸ್ಕಿಡ್‌ ಟೈಲ್ಸ್‌ಗಳನ್ನೇ ಬಳಸಬೇಕು. ಹ್ಯಾಂಡಲ್‌ ಬಾರ್‌ಗಳು ಇರಬೇಕು. ಅದನ್ನು ಹಿಡಿದು ನಡೆಯುವುದರಿಂದ ಬೀಳುವ ಸಂಭವ ಕಡಿಮೆಯಿರುತ್ತದೆ.

ಸ್ನಾನದ ಕೋಣೆಯ ಕುರ್ಚಿಗಳು ಚಿಕ್ಕದಾಗಿದ್ದರೆ ಅವರಿಗೆ ಕುಳಿತು, ಏಳುವುದು ತೊಂದರೆಯಾಗುತ್ತದೆ. ಹಾಗಾಗಿ ಅದು ಅಗತ್ಯಕ್ಕೆ ತಕ್ಕಷ್ಟು ಎತ್ತರವಾಗಿರಬೇಕು. ಕಮೋಡ್‌ ನೆಲದಿಂದ 1.6 ಅಡಿ ಎತ್ತರವಿರಬೇಕು. ಇದು 5.3 ರಿಂದ 5.8 ಎತ್ತರದ ಜನರಿಗೆ ಆರಾಮದಾಯಕವಾಗಿರುತ್ತದೆ. ಸ್ನಾನ ಮಾಡಲು ಸುಲಭವಾಗುವಂತೆ ಶವರ್ ಇರಬೇಕು.

ಮಲಗುವ ಕೋಣೆ: ಮಂಚದ ಎತ್ತರ ನೆಲದಿಂದ 1.8 ಅಡಿ ಇರಬೇಕು. ತುಂಬಾ ಎತ್ತರವಿದ್ದರೆ ಮಂಚ ಹತ್ತಿ, ಇಳಿಯುವುದು ಕಷ್ಟವಾಗುತ್ತದೆ. ಮೃದುವಾದ ಹಾಸಿಗೆ ಬಳಸಬೇಕು. ಮಲಗುವ ಕೋಣೆಯಲ್ಲಿ ಬೆಡ್‌ ಲೈಟ್‌ ಇರಬೇಕು.

ಲೈಟ್‌ ಇದ್ದರೆ ನಿದ್ರೆ ಬರುವುದಿಲ್ಲ ಎನ್ನುವವರು ಸೆನ್ಸಾರ್‌ ಲೈಟ್‌ಗಳನ್ನು ಅಳವಡಿಸಬಹುದು. ಇದರಿಂದ ಮಧ್ಯರಾತ್ರಿ ಶೌಚಾಲಯಕ್ಕೆ ಹೋಗಬೇಕೆಂದರೆ, ಅಥವಾ ಇನ್ಯಾವುದೋ ಕಾರಣಕ್ಕೆ ಲೈಟ್‌ ಸ್ವಿಚ್‌ ಹುಡುಕುವ ಅಗತ್ಯ ಬರುವುದಿಲ್ಲ. ಅವರು ಎದ್ದು ನಡೆಯುತ್ತಿದ್ದಂತೆ ತರಂಗಗಳನ್ನು ಗ್ರಹಿಸಿ ದೀಪ ಹೊತ್ತಿಕೊಳ್ಳಲು ನೆರವಾಗುತ್ತವೆ. ಕಾಲಿಂಗ್‌ ಬೆಲ್‌ ಇಟ್ಟುಕೊಳ್ಳುವುದು ಒಳ್ಳೆಯದು.

ಅಡುಗೆ ಮನೆ: ಅಡುಗೆ ಸಾಮಾನುಗಳನ್ನು ಇರಿಸುವ ಕಪಾಟು ಎತ್ತರದಲ್ಲಿದ್ದಾಗ ಅದನ್ನು ತೆಗೆಯಲು ಹರಸಾಹಸ ಪಡಬೇಕಾಗುತ್ತದೆ. ಇದನ್ನು ತೆಗೆಯಲು ಪಡಿಪಾಟಲು ಪಟ್ಟು ಬಿದ್ದವರು ಹಲವರಿದ್ದಾರೆ. ಹಾಗಾಗಿ ಸುಲಭವಾಗಿ ಕೈಗೆ ಸಿಗುವಂತೆ ಕಪಾಟುಗಳ ವಿನ್ಯಾಸ ಮಾಡಬೇಕು. ಮಾಡುಲರ್‌ ಕಿಚನ್‌ನಲ್ಲಿ ಹಿರಿಯರಿಗೆ ಅನುಕೂಲವಾಗುವಂತೆ ಹಲವು ವಿನ್ಯಾಸಗಳನ್ನು ಮಾಡಲಾಗುತ್ತದೆ.

ಲಿವಿಂಗ್ ರೂಮ್: ಹಿರಿಯರು ಮನೆಯಲ್ಲಿ ವಾಕಿಂಗ್‌ ಮಾಡುವುದರಿಂದ ಇಲ್ಲಿ ಹೆಚ್ಚು ನಿರ್ದಿಷ್ಟ ಅಳತೆಯಲ್ಲಿ ಕೂತು ವಿಶ್ರಾಂತಿ ಪಡೆಯುವ ವ್ಯವಸ್ಥೆ ಇರಬೇಕು. ಪೀಠೋಪಕರಣಗಳ ತುದಿಗಳು ಚೂಪಾಗಿರಬಾರದು. ವೈರ್‌ ಅರ್ತಿಂಗ್ ಸರಿಯಾಗಿರಬೇಕು. ಲೈಟ್‌ಸ್ವಿಚ್‌ ತುಂಬಾ ಎತ್ತರದಲ್ಲಿಬಾರದು ಅವರಿಗೆ ಕೈಗೆ ಸಿಗುವಂತಿರಬೇಕು. ಬೆಳಕು, ಗಾಳಿ ಸರಾಗವಾಗಿ ಬರುವಂತಿಬೇಕು. ಇಲ್ಲಿಯೂ ಹ್ಯಾಂಡಲ್‌ ಬಾರ್‌ಗಳಿರಬೇಕು.

ಹೊರಾಂಗಣ: ಮನೆಯಂಗಣದಲ್ಲಿ ಕುರ್ಚಿ ಇಟ್ಟು ಅವರಿಗೆ ಅನುಕೂಲವಾಗುವ ವಾತಾವರಣ ಕಲ್ಪಿಸಬಹುದು. ಮನೆಯ ಮುಂದೆ ಪುಟ್ಟ ಕೈತೋಟವಿದ್ದರೆ ಅವರ ಮನಸ್ಸು ಗಿಡಗಳನ್ನು ನೋಡಿ ಪ್ರಶಾಂತವಾಗುತ್ತದೆ.

**

ಹಿರಿಯರು ಮನೆಯಲ್ಲಿದ್ದಾಗ ಅವರಿಗೆ ಅನುಕೂಲವಾಗುವ ಹಾಗೆ ಒಳಾಂಗಣ ವಿನ್ಯಾಸವಿದ್ದರೆ ಅಪಘಾತಗಳನ್ನು ತಪ್ಪಿಸಬಹುದು. ಕಾಲಿಂಗ್‌ ಬೆಲ್‌, ಹ್ಯಾಂಡಲ್‌ ಬಾರ್‌ ಅನುಕೂಲಗಳನ್ನು ಕಲ್ಪಿಸಬೇಕು. ಅವರಿಗೆ ಒಂಟಿ ಎನ್ನುವಂತಹ ಭಾವ ಬರದಿರುವ ಹಾಗೆ ವಿನ್ಯಾಸ ಮಾಡಬೇಕು.
–ಅಖಿಲಾ ಶ್ರೀನಿವಾಸ್‌, ಮುಖ್ಯ ಆರ್ಕಿಟೆಕ್ಟ್, ಕೋರಾ ಆರ್ಕಿಟೆಕ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT