ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀಟ್’ ನೀಟಾಗಿ ಅಂತೂ ಇಲ್ಲ

Last Updated 7 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

* ಕೆ. ಫಣಿರಾಜ್

‘ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ’ (ನೀಟ್), ತಮಿಳುನಾಡಿನ ದಲಿತ ಹುಡುಗಿ ಅನಿತಾಳನ್ನು ಮೊದಲ ಆಹುತಿಯಾಗಿ ನುಂಗಿದೆ. ಪದವಿಪೂರ್ವ ಪರೀಕ್ಷೆಯಲ್ಲಿ ಆ ಹುಡುಗಿ ಶೇ 98 ಅಂಕ ಪಡೆದಿದ್ದಳು. ರಾಜ್ಯ ಸರ್ಕಾರ ನಡೆಸುವ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲೂ ಶೇ 98 ಅಂಕ ಪಡೆದು ಉನ್ನತ ಸ್ಥಾನದಲ್ಲಿದ್ದಳು. ‘ನೀಟ್’ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಪಾಲಿಗೆ ಮಾರಕ. ಆದ್ದರಿಂದ ಈ ಅಸಮಾನ ಮಾಪನ ವ್ಯವಸ್ಥೆಯನ್ನು ತಡೆಯಬೇಕು ಎಂದು ಸುಪ್ರೀಂ ಕೋರ್ಟ್‌ನ ಬಾಗಿಲನ್ನೂ ತಟ್ಟಿದ್ದಳು.

ಆದರೆ, ದೇಶದ ಸುಶಿಕ್ಷಿತ ವ್ಯವಸ್ಥೆಯ ಕಿವಿ ಕಿವುಡಾಗಿ, ಅವಳ ಅಳಲು ಯಾರಿಗೂ ತಾಗಲೇ ಇಲ್ಲ. ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಆ ಹುಡುಗಿ ತಡವರಿಸುತ್ತಾ, ಕೂಡಿಸಿಕೊಂಡು ಕೊಟ್ಟ ಇಂಗ್ಲಿಷ್‌ ಸಂದೇಶ ಅವಳಂತಹ ಹಲವಾರು ಕೆಳಜಾತಿ- ವರ್ಗದ ಕೋಟ್ಯಂತರ ಹುಡುಗಿ- ಹುಡುಗರ ದನಿಗಳಿಗೆ ಪ್ರತಿಮೆಯಾಗಿದೆ- ರೋಹಿತ್ ವೇಮುಲನ ಕೊನೆಯ ಪತ್ರದಂತೆ.

ಅಷ್ಟು ಜಾಣೆಯಾದ, ಸುಪ್ರೀಂ ಕೋರ್ಟ್‌ಗೆ ಅಪೀಲು ಒಯ್ಯುವಷ್ಟು ಛಾತಿಯುಳ್ಳ ಹುಡುಗಿ ಒಂದು ‘ನೀಟ್’ ಬರೆದು ಅರ್ಹತೆ ಪಡೆಯಬಹುದಿತ್ತಲ್ಲ ಎಂಬ ಕುಹಕ ಸುಶಿಕ್ಷಿತರ ನಾಲಿಗೆ ತುದಿಯಲ್ಲಿರುತ್ತದೆ. ಆದರೆ ತಾವು, ತಮಗಾಗಿ, ತಾವೇ ರೂಪಿಸಿದ ‘ಸುಶಿಕ್ಷಿತರಿಗೋಸ್ಕರದ ಮೀಸಲಾತಿ ವ್ಯವಸ್ಥೆ’ಯು ತಳಮಟ್ಟದ ಹುಡುಗಿಯೊಬ್ಬಳನ್ನು ಬಲಿ ತೆಗೆದುಕೊಂಡಿರುವ ವಾಸ್ತವಿಕತೆಯನ್ನು ಸುಶಿಕ್ಷಿತ ವ್ಯವಸ್ಥೆ ಮನಸ್ಸಿಗೆ ಹಚ್ಚಿಕೊಳ್ಳುತ್ತಿಲ್ಲ. ಅವಳ ಸಾವು,‘ನೀಟ್‌’ಗೆ ಮಾತ್ರ ಸೀಮಿತವಾದುದಲ್ಲ. ಅದು ಮಾತೃಭಾಷೆಯಲ್ಲಿ ಶಿಕ್ಷಣ, ತಳಸಮುದಾಯದ ಶೈಕ್ಷಣಿಕ ಏಳ್ಗೆಗಾಗಿ ರೂಪಿಸಿದ ‘ಸಮಾನ ಪ್ರತಿನಿಧೀಕರಣ ಮಾದರಿ’ ಹಾಗೂ ಸರ್ವತೋಮುಖ ಮಾನವ ಅಭಿವೃದ್ಧಿಗಾಗಿ ಶಿಕ್ಷಣಗಳೆಂಬ ಪರಿಕಲ್ಪನೆಗಳನ್ನು ಅಸಡ್ಡೆ ಮಾಡುವ ‘ನವ ಸಿರಿವಂತಿಕೆಯ ಯುಗದ’ ಸಾಧಾರಣ ಮನೋಸ್ಥಿತಿಯಾಗಿ ಹೋಗಿದೆ.

‘ನೀಟ್‌’ನಂತಹ ಪರೀಕ್ಷಾ ಮಾದರಿ ಬೇಕೆಂಬ ಒತ್ತಾಯ ಬಂದದ್ದು ಸಿ.ಬಿ.ಎಸ್‌.ಇ. ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿಗಳ ಕಡೆಯಿಂದ. ಅದನ್ನು ಸಾಧುವೆಂದು ಪರಿಗಣಿಸಿ, ವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿಪರತೆಗಳನ್ನು ನಿಯಂತ್ರಿಸುವ ಅರೆ ಕಾನೂನು ಅಧಿಕಾರವುಳ್ಳ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂ.ಸಿ.ಐ.) ತರಾತುರಿಯಲ್ಲಿ ‘ಆಲ್
ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್‌’ (ಎ.ಐ.ಪಿ.ಎಂ.ಟಿ.) ಮೂಲಕ ಮಾತ್ರವೇ ದೇಶದಾದ್ಯಂತ ಮೆಡಿಕಲ್ ಸೀಟುಗಳ ಹಂಚಿಕೆ ನಡೆಸಬೇಕು ಎಂಬ ಆಜ್ಞೆ ಹೊರಡಿಸಿತು.

ಶಿಕ್ಷಣವು ರಾಜ್ಯ ಸರ್ಕಾರಗಳ ಸುಪರ್ದಿನಲ್ಲಿ ಬರುವ ವಿಷಯವಾದುದರಿಂದ ಎಂ.ಸಿ.ಐ. ಆಜ್ಞೆಯನ್ನು ಅಸಿಂಧುಗೊಳಿಸಬೇಕು ಎಂದು ಹಲವು ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್‌ಗೆ ಅಪೀಲು ಹೋದವು. ನ್ಯಾಯಾಲಯವು ಎಂ.ಸಿ.ಐ. ಸಂಸ್ಥೆಗೆ ಅರೆಕಾನೂನು ಅಧಿಕಾರ ನೀಡಿದ ಕೇಂದ್ರದ ‘ಇಂಡಿಯನ್ ಮೆಡಿಕಲ್ ಕೌನ್ಸಿಲ್ ಕಾಯ್ದೆ’ (1956) ಅನ್ವಯ ಪ್ರವೇಶಾತಿಯಲ್ಲಿ ಮೂಗು ತೂರಿಸುವ ಹಕ್ಕಿಲ್ಲವೆಂದು ಎ.ಐ.ಪಿ.ಎಂ.ಟಿ.ಯನ್ನು ಅಸಿಂಧುಗೊಳಿಸಿತು. ಸಿ.ಬಿ.ಎಸ್‌.ಇ. ಹಾಗೂ ಎಂ.ಸಿ.ಐ.ಗಳಂಥ ಸುಶಿಕ್ಷಿತರ ಅಧಿಕಾರಸ್ಥ ಸಂಸ್ಥೆಗಳು ಸುಮ್ಮನೆ ಕೂರುತ್ತವೆಯೇ! ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ಐ.ಎಂ.ಸಿ. ಕಾಯ್ದೆ-1956ಕ್ಕೆ ಮಾರ್ಪಾಡು ಮಾಡಿಸಿ, ಪ್ರವೇಶಾತಿಯನ್ನು ನಿಯಂತ್ರಿಸುವ ಹಕ್ಕುಗಳನ್ನು ಪಡೆದವು! ಕೂಡಲೇ ಎಂ.ಸಿ.ಐ.ಯು ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಾಷ್ಟ್ರೀಯ ಸಾಮಾನ್ಯ ಪರೀಕ್ಷೆಗೆ ಮಾದರಿ ರೂಪಿಸಿ, ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಸಿ.ಬಿ.ಎಸ್‌.ಇ.ಗೆ ನೀಡಿತು; ಸಿ.ಬಿ.ಎಸ್‌.ಇ . ರೂಪಿಸಿ, ನಡೆಸುತ್ತಿರುವ ಪರೀಕ್ಷೆಯೇ ಈ ‘ನೀಟ್’.

ಇದಾದ ತಕ್ಷಣ ಪದವಿಪೂರ್ವ ಶಿಕ್ಷಣದವರೆಗೂ ಮಾತೃಭಾಷೆಯಲ್ಲಿ ತಮ್ಮ ನಾಡಿಗೆ ತಕ್ಕುದಾದ ಶಿಕ್ಷಣ ವ್ಯವಸ್ಥೆ ರೂಢಿಸಿಕೊಂಡಿರುವ ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳು ಈ ಮಾದರಿಯ ವಿರುದ್ಧ ಮನವಿ ಒಯ್ದವು. ಈ ಮನವಿಗೆ ಸುಪ್ರೀಂ ಕೋರ್ಟ್‌, ಇಂಗ್ಲಿಷ್‌, ಹಿಂದಿಗಳ ಜೊತೆ ತಮಿಳು, ಬಂಗಾಳಿ ಹಾಗೂ ಉರ್ದುವಿನಲ್ಲೂ ಪರೀಕ್ಷೆ ನಡೆಸಬೇಕು ಎಂಬ ಮೇಲುಮೇಲಿನ ಬದಲಾವಣೆಗೆ ತೀರ್ಪಿತ್ತು, ‘ನೀಟ್‌’ ಕಡ್ಡಾಯಗೊಳಿಸಿಬಿಟ್ಟಿತು! ಇಷ್ಟೆಲ್ಲಾ ನಡೆದದ್ದು 2012– 2016ರವರೆಗಿನ ನಾಲ್ಕೇ ವರ್ಷಗಳಲ್ಲಿ! ದೇಶದ ಅಧಿಕಾರಸ್ಥರಿಗೆ ಎಲ್ಲವೂ ಸರಾಗ! ಇದು ವ್ಯಂಗ್ಯವಲ್ಲ, ವಾಸ್ತವ.

ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಉದ್ಯೋಗ ಮಾಡುವವರು ದೇಶದಾದ್ಯಂತ ವರ್ಗಾವಣೆಯಾಗುವ ಕಾರಣ, ಅವರ ಮಕ್ಕಳು ವೈವಿಧ್ಯಮಯವಾದ ರಾಜ್ಯ ಪದವಿಪೂರ್ವ ಶಿಕ್ಷಣ ಪದ್ಧತಿಗಳಿಗೆ ಒಗ್ಗುವುದು ಕಷ್ಟವಾಗುತ್ತದೆ ಎಂಬ ವಾಸ್ತವಿಕ ಸಮಸ್ಯೆಗೆ ಪರಿಹಾರವಾಗಿ 1960ರ ದಶಕದಲ್ಲಿ ಸಿ.ಬಿ.ಎಸ್‌.ಇ. ಪಠ್ಯಕ್ರಮದ ಕೇಂದ್ರೀಯ ವಿದ್ಯಾಲಯ, ಆ ಬಳಿಕ ಜವಾಹರ್ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲಾಯಿತು; ಆರಂಭದಲ್ಲಿ ಅವುಗಳ ಸಂಖ್ಯೆ 309 ಆಗಿತ್ತು. ಅಂದಿನಿಂದ ಆ ವ್ಯವಸ್ಥೆಯಲ್ಲಿ ಶಿಕ್ಷಣ ಪಡೆದ ಮಕ್ಕಳು, ವಿವಿಧ ರಾಜ್ಯಗಳ ವೃತ್ತಿ ಶಿಕ್ಷಣ ಪ್ರವೇಶಾತಿಗಳಲ್ಲಿ ಸೀಟು ಪಡೆಯುತ್ತಲೇ ಬರುತ್ತಿದ್ದರು. ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ಶಾಲೆಗಳು ಸಹ ಸಿ.ಬಿ.ಎಸ್‌.ಇ. ಮಾದರಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ರಾಜ್ಯಗಳಲ್ಲಿ ಮಾತೃಭಾಷಾ ಶಿಕ್ಷಣ, ಸರ್ಕಾರಿ, ಅನುದಾನಿತ ಶಾಲೆಗಳಲ್ಲಿನ ಶಿಕ್ಷಣಕ್ಕಿಂತ ಇಂಗ್ಲಿಷ್ ಖಾಸಗಿ ಶಾಲೆಗಳಲ್ಲಿನ ಶಿಕ್ಷಣ ಸ್ಪರ್ಧಾತ್ಮಕ ಜಗತ್ತಿಗೆ ಹೆಚ್ಚು ಉಪಯುಕ್ತ ಎನ್ನುವ ಮನೋಭಾವ ಗಟ್ಟಿಯಾಗುತ್ತಾ ಹೋದಂತೆ, ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಸಿ.ಬಿ.ಎಸ್‌.ಇ.ಗೆ ಮತಾಂತರಗೊಳ್ಳತೊಡಗಿದವು.

2014ರ ವೇಳೆಗೆ ಸಿ.ಬಿ.ಎಸ್‌.ಇ. ಪದ್ಧತಿಗೆ ನೋಂದಾಯಿಸಿಕೊಂಡಿರುವ ಶಾಲೆಗಳ ಸಂಖ್ಯೆ 15,799ಕ್ಕೆ ಏರಿತು; ಅವುಗಳಲ್ಲಿ ಖಾಸಗಿ ಶಾಲೆಗಳ ಸಂಖ್ಯೆ 11,443 (ಶೇ 72)! ಇದು ಇಂದು ಸಿ.ಬಿ.ಎಸ್‌.ಇ.ಯ ಸ್ವರೂಪ ಹಾಗೂ ‘ನೀಟ್’ ಅದರ ಹಿತಾಸಕ್ತಿಯ ಫಲಸ್ವರೂಪ.

ಬೇರೆ ಯಾವ ರಾಜ್ಯದ ಪಠ್ಯಪದ್ಧತಿಗಳನ್ನೂ ಪರಿಗಣಿಸದೇ, ಬರೀ ಸಿ.ಬಿ.ಎಸ್‌.ಇ. ಪಠ್ಯ ಪದ್ಧತಿಗೆ ಅನುಗುಣವಾಗಿ ‘ನೀಟ್‌’ ರೂಪುಗೊಂಡಿದೆ. ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ‘ನೀಟ್‌’ನಲ್ಲಿ ಗಳಿಸಿದ ಅಂಕಗಳನ್ನು ಮಾತ್ರವೇ ಪರಿಗಣಿಸಿ ಅರ್ಹತಾಪಟ್ಟಿಯನ್ನು ತಯಾರು ಮಾಡಲಾಗುತ್ತದೆ. ಹಾಗಾಗಿ ರಾಜ್ಯದ ಪದವಿಪೂರ್ವ ಶಿಕ್ಷಣ ಮಂಡಳಿಯ ಪರೀಕ್ಷೆಗಳಲ್ಲಿ ಏನೇ ಸಾಧನೆ ಮಾಡಿದರೂ ಅದು ಹೊಳೆಯಲ್ಲಿನ ಹುಣಸೆ. ಪದವಿ ಪೂರ್ವ ಪಠ್ಯ ಅಧ್ಯಯನ ನೆಪ ಮಾತ್ರದ್ದಾಗಿ, ‘ನೀಟ್‌’ಗೆ ತಯಾರಿ ಮಾಡುವ ಖಾಸಗಿ ಶಾಲೆಗಳಿಗೆ ಇದು ಹಬ್ಬವಾಗಿದೆ.

ದೇಶದಲ್ಲಿ ಪಿ.ಯು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿ ಸಿ.ಬಿ.ಎಸ್‌.ಇ. ಪದ್ಧತಿಯಲ್ಲಿ ಕಲಿಯುವವರ ಪ್ರಮಾಣವೆಷ್ಟು? ರಾಜ್ಯ ಮಂಡಳಿಗಳ ಪಠ್ಯ ಪದ್ಧತಿಗಳು ಸಾರಾಸಗಟು ಕಳಪೆಯೇ? ದೇಶದಾದ್ಯಂತ ಇರುವ ಶಿಕ್ಷಣ ವ್ಯವಸ್ಥೆಯ ಕುರಿತ ಸಂತುಲಿತ ಅಧ್ಯಯನಗಳನ್ನು ನಡೆಸದೇ, ಸಿ.ಬಿ.ಎಸ್‌.ಇ. ಮೂಗಿನ ನೇರಕ್ಕೆ ರೂಪಿಸಿದ ಕಡ್ಡಾಯ ಪರೀಕ್ಷಾ ವ್ಯವಸ್ಥೆ ಸರಿಯೇ?- ಈ ಸಮಸ್ಯೆಗಳನ್ನು ‘ನೀಟ್’ ಪರಿಗಣಿಸಿಯೇ ಇಲ್ಲ.

ರಾಜ್ಯ ಮಂಡಳಿ ಪದ್ಧತಿಯಡಿ ಕಲಿಯುವ ಬಹುಪಾಲು ವಿದ್ಯಾರ್ಥಿಗಳು ಆರ್ಥಿಕವಾಗಿ ದುರ್ಬಲರಾದ ಕೆಳಜಾತಿ– ವರ್ಗಗಳಿಗೆ ಸೇರಿದವರು; ‘ನೀಟ್’ ಪರೀಕ್ಷೆಯಲ್ಲಿ ಅರ್ಹತೆ ಪಡೆದರೂ, ಖಾಸಗಿ ಕಾಲೇಜುಗಳು ವಿಧಿಸುವ ಲಕ್ಷಾಂತರ ಶುಲ್ಕ ಕಟ್ಟಲಾಗದೆ ಸೀಟು ಬಿಟ್ಟುಕೊಡುವ ವಿದ್ಯಮಾನ ಈ ವರ್ಷ ಕೇರಳದಲ್ಲಿ ನಡೆದಿದೆ; ಆ ಸೀಟುಗಳು ಕೆಳ ಹಂತದ ರ‍್ಯಾಂಕ್ ಪಡೆದ ಸಿರಿವಂತರ ಪಾಲಾಗಿವೆ! ಕೂಲಿಕಾರನ ಮಗಳು ಅನಿತಾ ಪ್ರಾಣ ಕಳೆದುಕೊಂಡಿದ್ದಾಳೆ. ‘ನೀಟ್’ ನೀಟಾಗಿಲ್ಲ ಎನ್ನುವುದು ನಿಚ್ಚಳವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT