ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಡರರ್‌ಗೆ ಆಘಾತ ನೀಡಿದ ಪೊಟ್ರೊ

ಅಮೆರಿಕ ಓಪನ್ ಟೆನಿಸ್ ಟೂರ್ನಿ; ತವರಿನ ಆಟಗಾರ್ತಿಯರ ಪ್ರಾಬಲ್ಯ
Last Updated 7 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಎಎಫ್‌ಪಿ): ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್‌ಗೆ ಆಘಾತ ನೀಡಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದ ಫೆಡರರ್‌ ಅವರ ಗೆಲುವಿನ ಓಟಕ್ಕೆ ಅರ್ಜೆಂಟೀನಾದ ಆಟಗಾರ
ತಡೆಯೊಡ್ಡಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಮೊದಲ ಬಾರಿಗೆ ಫೈನಲ್‌ನಲ್ಲಿ ಫೆಡರರ್‌ ಹಾಗೂ ನಡಾಲ್ ಮುಖಾಮುಖಿಯಾಗಲಿದ್ದಾರೆ ಎಂಬ ಅಭಿಮಾನಿಗಳ ನಿರೀಕ್ಷೆಗೆ ಈಗ ತೆರೆಬಿದ್ದಿದೆ. ಸ್ವಿಸ್ ಆಟಗಾರ ಆರ್ಥರ್ ಆ್ಯಷ್‌ ಅಂಗಳದಲ್ಲಿ ತಮ್ಮ ಹೋರಾಟ ಕೊನೆಗೊಳಿಸಿದ್ದಾರೆ.

2009ರ ಅಮೆರಿಕ ಓಪನ್‌ ಫೈನಲ್‌ನಲ್ಲಿ ಫೆಡರರ್‌ ಅವರನ್ನು ಮಣಿಸುವ ಮೂಲಕ ಪೊಟ್ರೊ ತಮ್ಮ ಮೊದಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಎತ್ತಿಹಿಡಿದಿದ್ದರು. ಇಲ್ಲಿ 7–5, 3–6, 7–6, 6–4ರಲ್ಲಿ ಮತ್ತೊಮ್ಮೆ ಸ್ವಿಸ್ ಆಟಗಾರನಿಗೆ ಸೋಲುಣಿಸಿದ್ದಾರೆ.

36 ವರ್ಷದ ಫೆಡರರ್‌ ಒಟ್ಟು 19 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಫೆಡರರ್‌ ಹಾಗೂ ಪೊಟ್ರೊ ಈ ಹಿಂದೆ ಒಟ್ಟು 21 ಬಾರಿ ಮುಖಾಮುಖಿಯಾಗಿದ್ದಾರೆ. ಇದರಲ್ಲಿ ಫೆಡರರ್‌ 16–5ರಲ್ಲಿ ಗೆಲುವಿನ ದಾಖಲೆ ಹೊಂದಿದ್ದಾರೆ.

‘ಈ ಪಂದ್ಯದ ಬಗ್ಗೆ ಮಾತನಾಡುವುದು ಕಷ್ಟ. ನಾನು ಸಂಪೂರ್ಣ ಪ್ರಯತ್ನ ಮಾಡಿದ್ದೇನೆ. ಕೆಟ್ಟದಾಗಿ ಆಡಿಲ್ಲ. ಆದರೆ ಎದುರಾಳಿಯ ದಿಟ್ಟ ಆಟದಿಂದ ನನಗೆ ಸೋಲು ಎದುರಾಯಿತು’ ಎಂದು ಫೆಡರರ್‌ ಹೇಳಿದ್ದಾರೆ.

ಶುಕ್ರವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ 28 ವರ್ಷದ ಪೊಟ್ರೊ ಎರಡನೇ ಬಾರಿಗೆ ನಡಾಲ್‌ ಎದುರು ಆಡಲಿದ್ದಾರೆ. ಪ್ರೀ ಕ್ವಾರ್ಟರ್‌
ನಲ್ಲಿ ಪೊಟ್ರೊ ಆರನೇ ಶ್ರೇಯಾಂಕದ ಡೊಮಿನಿಕ್ ಥೀಮ್‌ಗೆ ಆಘಾತ ನೀಡಿದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ನಡಾಲ್‌ ಇಲ್ಲಿ ಗೆಲುವಿನ ಓಟ ಮುಂದುವರಿಸಿದ್ದು, ರಷ್ಯಾದ ಯುವ ಆಟಗಾರ ಆಂಡ್ರೆ ರುಬ್ಲೆವ್ ಅವರನ್ನು 6–1, 6–2, 6–2ರಲ್ಲಿ ಮಣಿಸಿ ಸೆಮಿಫೈನಲ್ ತಲುಪಿದ್ದಾರೆ.

ಕೇವಲ 97 ನಿಮಿಷದ ಹಣಾಹಣಿ ಇದಾಗಿತ್ತು. ನಡಾಲ್‌ಗೆ ಇದು ಆರನೇ ಅಮೆರಿಕ ಓಪನ್ ಸೆಮಿಫೈನಲ್ ಪಂದ್ಯವಾಗಿದೆ. ಡೆಲ್ ಪೊಟ್ರೊ ಇಲ್ಲಿ 24ನೇ ಶ್ರೇಯಾಂಕ ಹೊಂದಿದ್ದಾರೆ. ಇವರಿಗೆ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲೇ ನಾಲ್ಕನೇ ಸೆಮಿಫೈನಲ್ ಪಂದ್ಯ ಇದಾಗಿದೆ.

‘ಫೋರ್‌ಹ್ಯಾಂಡ್ ಹೊಡೆತಗಳು ಹಾಗೂ ಸರ್ವಿಸ್‌ನಲ್ಲಿ ನಾನು ಉತ್ತಮ ಸಾಮರ್ಥ್ಯ ತೋರಿದೆ. ಇಲ್ಲಿ ನನಗೆ ತವರಿನಲ್ಲಿ ಆಡಿದ ಅನುಭವ ಆಗುತ್ತದೆ. 2009ರ ಪ್ರಶಸ್ತಿ ಕೂಡ ಸ್ಮರಣೀಯ. ಆ ವರ್ಷ ಕೂಡ ನಾನು ನಡಾಲ್ ಎದುರು ಕೂಡ ಗೆದ್ದಿದ್ದೆ. ಇದೇ ರೀತಿ ಆಟ ಮುಂದುವರಿಸುವ ಉದ್ದೇಶ ಹೊಂದಿದ್ದೇನೆ’ ಎಂದು ಪೊಟ್ರೊ ಹೇಳಿದ್ದಾರೆ.

ನಡಾಲ್‌ ಈ ಹಿಂದೆ ಆಡಿದ ಪಂದ್ಯಗಳಲ್ಲಿ 8–5ರಲ್ಲಿ ಡೆಲ್ ಪೊಟ್ರೊ ಎದುರು ಜಯದ ದಾಖಲೆ ಹೊಂದಿದ್ದಾರೆ. ‘ಪೊಟ್ರೊ ಅತ್ಯುತ್ತಮ ಆಟಗಾರ. ಅವರು ಉತ್ತಮವಾಗಿ ಆಡಲು ಆರಂಭಿಸಿದರೆ ತಡೆಯುವುದು ತುಂಬಾ ಕಷ್ಟ. ಫೋರ್‌ಹ್ಯಾಂಡ್ ಹೊಡೆತಗಳನ್ನು ತಡೆದು ಆಡುವುದು ಇನ್ನೂ ಕಷ್ಟ’ ಎಂದು ನಡಾಲ್ ಹೇಳಿದ್ದಾರೆ.

ಅಮೆರಿಕದ ಆಟಗಾರ್ತಿಯರ ಪ್ರಾಬಲ್ಯ: ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ನಾಲ್ವರು ಅಮೆರಿಕದ ಆಟಗಾರ್ತಿಯರು ಆಡುತ್ತಿರುವುದು ವಿಶೇಷ ಎನಿಸಿದೆ. ಕೊಕೊ ವಾಂವೇವ್‌ –ಮ್ಯಾಡಿಸನ್ ಕೀಸ್‌ ಹಾಗೂ ವೀನಸ್‌ ವಿಲಿಯಮ್ಸ್ – ಸಾಲನೆ ಸ್ಟೀಫನ್ಸ್‌ ಪರಸ್ಪರ ಪೈಪೋಟಿ ನಡೆಸಲಿದ್ದಾರೆ.

ಶುಕ್ರವಾರ ನಡೆಯುವ ಸೆಮಿಫೈನಲ್ ಪಂದ್ಯ ವಿಶೇಷವಾಗಿದೆ. ಕ್ವಾರ್ಟರ್‌ನಲ್ಲಿ ವೀನಸ್‌ ವಿಲಿಯಮ್ಸ್‌ ಅವರು ಸೊಲನೆ ಸ್ಡೆಫನ್ಸ್‌ಗೆ ಸೋಲುಣಿಸಿದ್ದರು. 20ನೇ ಶ್ರೇಯಾಂಕದ ಅಮೆರಿಕದ ವಾಂಡೆವೆಘೆ 7–6, 6–3, 6–3ರಲ್ಲಿ ಜೆಕ್‌ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾ ಎದುರು ಗೆಲುವು ಪಡೆದಿದ್ದಾರೆ.

ಕೀಸ್‌ 6–3, 6–3ರಲ್ಲಿ ನೇರ ಸೆಟ್‌ಗಳಿಂದ ಕೈಯಾ ಕೆನಪಿ ಎದುರು ಗೆದ್ದರು. 1981ರಲ್ಲಿ ಮೊದಲ ಬಾರಿಗೆ ನಾಲ್ವರು ಅಮೆರಿಕದ ಆಟಗಾರ್ತಿಯರು ಇಲ್ಲಿ ಸೆಮಿಫೈನಲ್ ಆಡಿದ್ದರು.

‘16 ವರ್ಷದವಳಿದ್ದಾಗ ಜೂನಿಯರ್ ವಿಭಾಗದಲ್ಲಿ ಇಲ್ಲಿ ಪ್ರಶಸ್ತಿ ಗೆದ್ದಿದ್ದೆ. ಈಗ ನಾನು ನನ್ನ ವೃತ್ತಿಜೀವನದ ಬಹುದೊಡ್ಡ ಕನಸು ನನಸಾಗುವ ಹಾದಿಯಲ್ಲಿ ಇದ್ದೇನೆ’ ಎಂದು ವಾಂಡೆವೆಘೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT