ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಘಡಕ್ಕೆ ಆಸ್ಪದ ಬೇಡ; ಪರ್ಯಾಯ ರೂಪಿಸಿ

Last Updated 8 ಸೆಪ್ಟೆಂಬರ್ 2017, 5:12 IST
ಅಕ್ಷರ ಗಾತ್ರ

ವಿಜಯಪುರ: ‘ಶಿಥಿಲಗೊಂಡ ಸರ್ಕಾರಿ ಶಾಲೆಗಳ ಕಟ್ಟಡಗಳಲ್ಲಿ ಯಾವುದೇ ಕಾರಣಕ್ಕೂ ತರಗತಿ ನಡೆಸಬಾರದು. ಗಂಡಾಂತರ ನಡೆಯುವುದಕ್ಕೆ ಆಸ್ಪದ ನೀಡದಂತೆ ಕ್ರಮ ಕೈಗೊಳ್ಳಿ. ತಕ್ಷಣವೇ ಈ ಬಗ್ಗೆ ಸ್ಪಷ್ಟ ಸೂಚನೆ ರವಾನಿಸಿ. ಪರ್ಯಾಯ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಈ ಕುರಿತಂತೆ ಆತಂಕ ವ್ಯಕ್ತಪಡಿಸಿದ ಸಚಿವರು ‘ಜಿಲ್ಲೆಯ ಬಹುತೇಕ ಶಾಲೆಗಳ ಕಟ್ಟಡಗಳು ಶೋಚನೀಯ ಸ್ಥಿತಿಯಲ್ಲಿವೆ. ಈ ಕಟ್ಟಡದೊಳಗೆ ತರಗತಿ ನಡೆಸುವ ಬದಲು ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ನಡೆಸಿ. ಇಲ್ಲದಿದ್ದರೆ ಸಮುದಾಯ ಭವನ ಬಳಸಿಕೊಳ್ಳಿ’ ಎಂದು ಆದೇಶಿಸಿದರು.

‘ಶಾಲೆಗಳಲ್ಲಿ ಸಂಭವಿಸಬಹುದಾದ ಗಂಡಾಂತರ ತಪ್ಪಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮರೋಪಾದಿ ಕಾರ್ಯ ನಡೆಯಬೇಕಿದೆ. ಅನಾಹುತ ನಡೆದರೆ ಜಿಲ್ಲಾಡಳಿತವನ್ನೇ ಹೊಣೆಗಾರ ರನ್ನಾಗಿಸಲಾಗುವುದು. ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ. ಮಕ್ಕಳನ್ನು ಅನಾಹುತದಿಂದ ರಕ್ಷಿಸಿ’ ಎಂಬ ಕಿವಿಮಾತು ಹೇಳಿದರು.

ಶಾಲಾ ಕಟ್ಟಡಗಳ ವಸ್ತುಸ್ಥಿತಿ ಕುರಿತು ವಿವರಣೆ ನೀಡಿದ ಜಿ.ಪಂ. ಸಿಇಓ ಎಂ.ಸುಂದರೇಶಬಾಬು ‘ಜಿಲ್ಲೆಯಲ್ಲಿ 135 ವರ್ಗ ಕೋಣೆಗಳು ಶಿಥಿಲಾವಸ್ಥೆಯ ಲ್ಲಿರುವುದರಿಂದ ಅಲ್ಲಿ ತರಗತಿಗಳನ್ನು ನಡೆಸಲು ನಿರ್ಬಂಧಿಸಲಾಗಿದೆ, 650 ಶಾಲೆಯ ಕಟ್ಟಡಗಳು ಬಹು ಪ್ರಮಾಣದಲ್ಲಿ ದುರಸ್ತಿಗೊಳ ಗಾಗ ಬೇಕಿದೆ’ ಎಂಬ ಮಾಹಿತಿ ನೀಡಿದರು.

ಇದರಿಂದ ಮತ್ತಷ್ಟು ಆತಂಕಕ್ಕೊಳಗಾದ ಸಚಿವ ಪಾಟೀಲ ‘ಈ ಸಮಸ್ಯೆ ಎಲ್ಲೆಡೆಯಿದೆ. ಜಿಲ್ಲೆಯ ಸಮಗ್ರ ಚಿತ್ರಣ ನೀಡುವ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿ. ಮುಖ್ಯಮಂತ್ರಿ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಎಲ್ಲ ಶಾಸಕರು ಯತ್ನಿಸುತ್ತೇವೆ. ಅದಕ್ಕೂ ಮುನ್ನ ನಾನು ಸೇರಿದಂತೆ ಇಂಡಿ ಶಾಸಕರು, ಶಾಸಕರ ಅನುದಾನದಿಂದ ತಲಾ ₨ 25 ಲಕ್ಷ ನೀಡುತ್ತೇವೆ. ಉಳಿದ ಶಾಸಕರನ್ನು ಕೇಳಿ. ಅನುದಾನ ಪಡೆದು ತುರ್ತು ಕಾಮಗಾರಿ ನಡೆಸಿ’ ಎಂದು ಸೂಚಿಸಿದರು.

ಸೆಟಲೈಟ್‌ ಮ್ಯಾಪಿಂಗ್‌ ನಡೆಸಿ; ‘ಬೃಹತ್ ನೀರಾವರಿಗೆ ನೀಡಿದ ಆದ್ಯತೆಯನ್ನು ಮೈಕ್ರೋ ಇರಿಗೇಷನ್‌ಗೂ ನೀಡಬೇಕಿದೆ. ಎಲ್ಲೆಲ್ಲಿ ನೀರು ಹಿಡಿದಿಡಲು ಸಾಧ್ಯವಿದೆ ಎಂಬುದನ್ನು ಪತ್ತೆ ಹಚ್ಚಲು ಜಿಲ್ಲೆಯ ಎಲ್ಲೆಡೆ ಸೆಟಲೈಟ್‌ ಮ್ಯಾಪಿಂಗ್‌ ವರ್ಕ್‌ಔಟ್‌ ಮಾಡಿ. ಈ ಪ್ರಕ್ರಿಯೆ ಬಳಿಕ ಅಗತ್ಯವಿರುವೆಡೆ ಬಾಂದಾರ, ಚೆಕ್‌ ಡ್ಯಾಂಗಳನ್ನು ನರೇಗಾ ಯೋಜನೆಯಡಿ ನಿರ್ಮಿಸುವುದು ಇಂದಿನ ತುರ್ತು ಅಗತ್ಯವಾಗಿದೆ’ ಎಂದು ಸಚಿವರು ಸಲಹೆ ನೀಡಿದರು.

ಸಿಎ ಸೈಟ್ ಬಳಸಿಕೊಳ್ಳಿ: ‘ಶೌಚಾಲಯ ಸಮಸ್ಯೆ ಬೃಹತ್‌ ಪ್ರಮಾಣದಲ್ಲಿ ಕಾಡುತ್ತಿದೆ. ಪ್ರತಿ ಮನೆಗೂ ಶೌಚಾಲಯ ವಿರಬೇಕು ಎಂಬುದು ಸರ್ಕಾರಗಳ ಕನಸು. ಆದರೆ ಶೇ 40 ಮಂದಿಗೆ ಸ್ಥಳದ ಕೊರತೆಯಿದೆ. ಸಣ್ಣ ಸಣ್ಣ ಮನೆಯಲ್ಲೇ ವಾಸವಿದ್ದಾರೆ. ಇಂತಹವರು ಶೌಚಾಲಯ ಹೇಗೆ ನಿರ್ಮಿಸಿಕೊಳ್ಳುತ್ತಾರೆ ಎಂಬುದನ್ನು ಎಲ್ಲರೂ ಯೋಚಿಸಬೇಕಿದೆ.
ಇದಕ್ಕೆ ಸಾರ್ವಜನಿಕ ಶೌಚಾಲಯ ನಿರ್ಮಾಣವೊಂದೇ ಪರಿಹಾರ. ಆದರೆ ಸರ್ಕಾರಿ, ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಸಿಎ ಸೈಟ್‌ ಉಳ್ಳವರ ಪಾಲಾಗುತ್ತಿವೆ.

ನ್ಮುಂದಾದರೂ ಇವುಗಳನ್ನು ಕಾಪಾಡಿಕೊಂಡು ಅಗತ್ಯವಿದ್ದೆಡೆ ಸಾಮೂಹಿಕ ಶೌಚಾಲಯ ನಿರ್ಮಿಸಿ’ ಎಂದು ಜಿಲ್ಲಾ ಪಂಚಾಯ್ತಿ ಆಡಳಿತಕ್ಕೆ ಪಾಟೀಲ ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿ.ಪಂ. ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ರಾಮು ರಾಠೋಡ, ಮಧುಶ್ರೀ ಖಂಡೇಕರ ಸಭೆಯಲ್ಲಿ ಉಪಸ್ಥಿತರಿದ್ದರು.

ಟ್ಯಾಂಕರ್ ನೀರು ನಿಲ್ಲಿಸಬೇಡಿ..!
‘ಮಳೆ ಸುರಿಯುತ್ತಿದ್ದಂತೆ ಜಿಲ್ಲಾಡಳಿತ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸು ವುದನ್ನು ಸ್ಥಗಿತಗೊಳಿಸ ಬಾರದು’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸೂಚಿಸಿದರು.

‘ಇದೀಗ ನಮ್ಮ ಭಾಗದಲ್ಲಿ ಸುರಿದಿರುವ ಮಳೆ ಅಂತರ್ಜಲ ಮಟ್ಟ ಹೆಚ್ಚಲು ಅನುಕೂಲಕಾರಿ ಯಾಗಿಲ್ಲ. ಸಸ್ಯಾನುಕೂಲ ಮಳೆಯಿದು. ಕುಡಿಯುವ ನೀರಿನ ಸಮಸ್ಯೆ ಇನ್ನೂ ಜೀವಂತವಿದೆ. ಜಿಲ್ಲಾಡಳಿತ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು.

ಬೇರೆ ತಾಲ್ಲೂಕುಗಳಿಗೂ ಇಂಡಿ ತಾಲ್ಲೂಕಿಗೂ ಸಾಕಷ್ಟು ವ್ಯತ್ಯಾಸವಿದೆ. ನಮ್ಮದು ಕಡಿಮೆ ಮಳೆ ಬೀಳುವ ಪ್ರದೇಶ. ಸತತ ಬರಕ್ಕೆ ತುತ್ತಾಗುತ್ತಿದೆ. ಇಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಆದ್ದರಿಂದ ಟ್ಯಾಂಕರ್‌ ನೀರಿನ ಪೂರೈಕೆ ಸ್ಥಗಿತಗೊಳಿಸಬಾರದು’ ಎಂದು ಹೇಳಿದರು. ಶಾಸಕರ ಬೇಡಿಕೆಗೆ ಸಚಿವರು ಸಹಮತ ವ್ಯಕ್ತಪಡಿಸಿ, ವಸ್ತುನಿಷ್ಠ ವರದಿ ತರಿಸಿಕೊಂಡು ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ಗೆ ಸೂಚಿಸಿದರು.

‘ವಿಜಯಪುರದಲ್ಲೂ ಮೋಡ ಬಿತ್ತನೆ ನಡೆಸಿ’
ವಿಜಯಪುರ: ‘ವಿವಿಧೆಡೆ ಮೋಡ ಬಿತ್ತನೆ ನಡೆದಿದೆ. ಆದರೆ ತೀವ್ರ ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಇದುವರೆಗೂ ಮೋಡ ಬಿತ್ತನೆಯೇ ನಡೆದಿಲ್ಲ. ರಾಜ್ಯ ಸರ್ಕಾರ, ಸಂಬಂಧಿಸಿದವರು ಇನ್ನಾದರೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆಗ್ರಹಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು ‘ಮೋಡ ಬಿತ್ತನೆಯ ಲಾಭವನ್ನು ಈಗಾಗಲೇ ಬೇರೆ ಬೇರೆ ಜಿಲ್ಲೆಯ ಜನತೆ ಪಡೆದಿದ್ದಾರೆ. ಭೀಕರ ಬರಕ್ಕೆ ತುತ್ತಾಗುವ ನಮಗೆ ಇದರ ಲಾಭ ಸಿಗದಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಧ್ಯ ಪ್ರವೇಶಿಸಿದ ಸಚಿವ ಎಂ.ಬಿ.ಪಾಟೀಲ ‘ಎಚ್‌.ಕೆ.ಪಾಟೀಲರ ಜತೆ ಈ ಕುರಿತಂತೆ ಚರ್ಚಿಸಿರುವೆ. ಫಲವತ್ತಾದ ಮೋಡಗಳ ಕೊರತೆಯಿಂದ ಮೋಡ ಬಿತ್ತನೆ ನಡೆಸಲಾಗಿಲ್ಲ ಎಂದು ಅವರು ಹೇಳಿದ್ದರು’ ಎಂಬ ಸಮಜಾಯಿಷಿ ಕೊಟ್ಟರು.

ಸಚಿವರ ಉತ್ತರ ಒಪ್ಪದ ಶಾಸಕರು ‘ನಮ್ಮಲ್ಲೂ ಮೋಡಗಳು ದಟ್ಟೈಸುತ್ತಿವೆ. ಹಲ ಬಾರಿ ಮಳೆಯೂ ಹನಿದಿದೆ. ರಾಜ್ಯದಲ್ಲಿ ಇದರ ಉಸ್ತುವಾರಿ ಹೊತ್ತವರು ಬರಪೀಡಿತ ಜಿಲ್ಲೆಯತ್ತಲೂ ಗಮನಹರಿಸಬೇಕು. ಮೋಡ ಬಿತ್ತನೆ ಇದುವರೆಗೂ ನಡೆಯದಿರಲು ವೈಜ್ಞಾನಿಕ ಕಾರಣ ವನ್ನು ತಿಳಿಸಬೇಕು’ ಎಂದರು.

ಶಾಸಕರ ಒತ್ತಾಯಕ್ಕೆ ಸಹಮತ ಸೂಚಿಸಿ, ದನಿಗೂಡಿಸಿದ ಸಚಿವ ಪಾಟೀಲ ‘ವಿಜಯಪುರ ಜಿಲ್ಲೆಯಲ್ಲೂ ಮೋಡ ಬಿತ್ತನೆ ಸಾಧ್ಯತೆ ಬಗ್ಗೆ ಪುನರ್‌ ಪರಿಶೀಲಿಸುವಂತೆ ಮತ್ತೊಮ್ಮೆ ಮನವಿ ಮಾಡಿಕೊಳ್ಳಲಾಗುವುದು. ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವರು ಹೇಳಿದ್ದ ಪರಿಸ್ಥಿತಿಗೂ ಈಗಿರುವ ಸನ್ನಿವೇಶಕ್ಕೂ ಬದಲಾಗಿರಬಹುದು, ಫಲವತ್ತತೆಯ ಮೋಡಗಳು ಬಾನಂಗಳದಲ್ಲಿ ಗೋಚರಿಸಬಹುದು’ ಎಂದು ಹೇಳಿದರು.

ಸಭೆಯಲ್ಲಿ ಪ್ರಸ್ತಾಪವಾದ ಪ್ರಮುಖ ಅಂಶಗಳು...
l ಚೆಕ್‌ ಡ್ಯಾಂ, ಬಾಂದಾರ ನಿರ್ಮಾಣಕ್ಕೆ 5 ವರ್ಷದ ಕ್ರಿಯಾಯೋಜನೆ ರೂಪಿಸಿ
l ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಿ
l ₹ 11 ಕೋಟಿ ವೆಚ್ಚದಲ್ಲಿ ಬೇಗಂ ತಾಲಾಬ್ ಅಭಿವೃದ್ಧಿ
l ಆಲಮಟ್ಟಿಯಲ್ಲಿ ಮದರ್‌ ಜಾಕ್‌ವೆಲ್‌ ನಿರ್ಮಾಣಕ್ಕೆ ಅನುಮೋದನೆ
l ಕೃಷಿ ಹೊಂಡಗಳ ನಿರ್ಮಾಣ ಹೆಚ್ಚಲಿ; 5 ಸಾವಿರ ಹೊಂಡ ಹೆಚ್ಚುವರಿ ಕೊಡಿಸುವೆ
l ಬಸ್‌ ಸೌಕರ್ಯವಿರದ 17 ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ
l ಅಣಚಿ ಕೆರೆ ತುಂಬುವ ಯೋಜನೆ ಉದ್ಘಾಟನೆಗೆ ಇದೇ 15 ಗಡುವು; ಇಇಗೆ ಕಟ್ಟುನಿಟ್ಟಿನ ಎಚ್ಚರಿಕೆ
l ಆರ್‌ಡಿಪಿಆರ್‌ನಿಂದ ₹ 8 ಕೋಟಿ ಬಾಕಿ ಕೊಡಿಸಲು ಹೆಸ್ಕಾಂ ಇಇ ಮನವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT