ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕಟ್ಟಡ; ತೆರವಿಗೆ ಬಿಜೆಪಿ ಪಟ್ಟು

Last Updated 8 ಸೆಪ್ಟೆಂಬರ್ 2017, 5:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವೀರಾಪುರ ಓಣಿಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಜಾಗ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಗುರುವಾರ ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಗುರುವಾರ ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಅಕ್ರಮ ಕಟ್ಟಡವನ್ನು ತೆರವುಗಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದರು.

‘ಕಮಿಷನರ್‌ ಹಠಾವೊ, ಹುಬ್ಬಳ್ಳಿ ಬಚಾವೊ’, ‘ಕಾಂಗ್ರೆಸ್‌ ಏಜೆಂಟ್‌ ಕಮಿಷನರ್‌ಗೆ ಧಿಕ್ಕಾರ’ ಎಂಬ ಘೋಷಣೆ ಕೂಗಿದರು. ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ನೇತೃತ್ವದಲ್ಲಿ ಪಾಲಿಕೆ ಬಿಜೆಪಿ ಸದಸ್ಯರು, ಒತ್ತುವರಿ ತೆರವುಗೊಳಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ  ನಡೆಸಿದರು.

ಇದೇ ಶುಕ್ರವಾರ ಬೆಳಿಗ್ಗೆ ಕಟ್ಟಡವನ್ನು ತೆರವುಗೊಳಿಸುವುದಾಗಿ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದ ಬಳಿಕ ಬಿಜೆಪಿ ಮುಖಂಡರು ಧರಣಿ ಹಿಂಪಡೆದರು. ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ರಾಮಣ್ಣ ಬಡಿಗೇರ, ಸುಧೀರ ಸರಾಫ್‌, ಲಕ್ಷ್ಮಣ ಗಂಡಗಾಳೇಕರ, ಶಾಂತಾ ಚನ್ನೋಜಿ, ಸ್ಮಿತಾ ಜಾಧವ್‌, ಮೇನಕಾ ಹುರುಳಿ, ವಿಜಯಾನಂದ ಶೆಟ್ಟಿ, ಸಂಜಯ ಕಪಟಕರ, ಮಹೇಶ್‌ ಬುರ್ಲಿ, ಬೀರಪ್ಪ ಖಂಡೇಕರ ಮುಖಂಡರಾದ ಮಹೇಶ ಕಾಜಗಾರ, ತಿಪ್ಪಣ್ಣ ಮಜ್ಜಗಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪೊಲೀಸ್‌ ವಶಕ್ಕೆ: ಜಾಗ ಒತ್ತುವರಿ ತೆರವು ಮಾಡದ ಕ್ರಮವನ್ನು ಖಂಡಿಸಿ ಪಾಲಿಕೆ ಆಯುಕ್ತರ ಕಚೇರಿಗೆ ಬೀಗ ಜಡಿದು, ಆಹೋರಾತ್ರಿ ಭಜನೆ ನಡೆಸಿದ ಸದಸ್ಯ ಶಿವಾನಂದ ಮುತ್ತಣ್ಣವರ ಅವರನ್ನು ಗುರುವಾರ ಬೆಳಿಗ್ಗೆ 11ಕ್ಕೆ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ ಬಳಿಕ ಸಂಜೆ 4ಕ್ಕೆ ಬಿಡುಗಡೆ ಮಾಡಿದರು.

ಆಯುಕ್ತರ ಕಚೇರಿಗೆ ಮುತ್ತಣ್ಣವರ ಬೀಗ ಹಾಕಿದ್ದರಿಂದ ಗುರುವಾರ ಬೆಳಿಗ್ಗೆ 11.30ರ ವರೆಗೂ ಆಯುಕ್ತರು ಮತ್ತು ಸಿಬ್ಬಂದಿ ಕಚೇರಿ ಒಳಗೆ ಪ್ರವೇಶಿಸಲು ಸಾಧ್ಯವಾಗದೇ ಹೊರಗೆ ಉಳಿದರು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಬೀಗ ಒಡೆದು ಕೆಲಸಕ್ಕೆ ಅನುವು ಮಾಡಿಕೊಟ್ಟರು.

ಆಯುಕ್ತರಿಂದ ದೂರು ದಾಖಲು: ಕಚೇರಿಗೆ ಬೀಗ ಹಾಕಿ ಸರ್ಕಾರಿ ಕೆಲಸಕ್ಕೆ ಅಡಚಣೆ ಮಾಡಿದ್ದಾರೆ ಎಂದು ಆರೋಪಿಸಿ ಶಿವಾನಂದ ಮುತ್ತಣ್ಣವರ ವಿರುದ್ಧ ಆಯುಕ್ತರು, ಇಲ್ಲಿನ ಉಪನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು.

ಸಿಬ್ಬಂದಿ ಪ್ರತಿಭಟನೆ: ಮೇಯರ್‌ ಆಪ್ತ ಸಹಾಯಕ ಆಲದಕಟ್ಟಿ ಅವರನ್ನು ಮುತ್ತಣ್ಣವರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ, ಪಾಲಿಕೆ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಆ ನಂತರ ಠಾಣೆಯಲ್ಲಿದ್ದ ಮುತ್ತಣ್ಣವರ ಅವರನ್ನು ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಕರೆದುಕೊಂಡು ಬಂದರು. ‘ನನ್ನ ಮಾತಿನಿಂದ ನೌಕರರ ಮನಸ್ಸಿಗೆ ಬೇಸರ ವಾಗಿದ್ದರೆ ವಿಷಾದಿಸುತ್ತೇನೆ’ ಎಂದು ಮುತ್ತಣ್ಣವರ ಕ್ಷಮೆಯಾಚಿಸಿದ ಬಳಿಕ ಪಾಲಿಕೆ ನೌಕರರು ಪ್ರತಿಭಟನೆ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT