ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್‌ಗೆ ಕಸಾಪ ನುಡಿನಮನ

Last Updated 8 ಸೆಪ್ಟೆಂಬರ್ 2017, 5:37 IST
ಅಕ್ಷರ ಗಾತ್ರ

ಕಾರವಾರ: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಅವರಿಗೆ ಗುರುವಾರ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ವತಿಯಿಂದ ನುಡಿನಮನ ಸಲ್ಲಿಸಲಾಯಿತು.

ಪರಿಷತ್‌ನ ಹಿರಿಯ ಸದಸ್ಯ ಪ್ರೊ.ಎಸ್‌.ಡಿ.ನಾಯ್ಕ ಮಾತನಾಡಿ, ‘ಗೌರಿ ಲಂಕೇಶ್‌ರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು ಅಹಿಂಸೆ ಪರಂಪರೆಯ ಕಗ್ಗೂಲೆ. ಬರಹಗಾರರಿಗೆ ಸ್ವಾತಂತ್ರ್ಯ ಮುಖ್ಯ. ಹಾಗೆಯೇ ಪತ್ರಕರ್ತರು ಸಹ ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ಇರಬೇಕು. ಪ್ರಜಾಪ್ರಭುತ್ವದ ಬುಡಕ್ಕೆ ಬೆಂಕಿ ಇಡುವ ಕಾರ್ಯಗಳು ನಡೆಯುತ್ತಿವೆ. ಸತ್ಯ ಹೇಳುವುದು ಗೌರಿಯ ಗುಣ. ಆದರೆ ಅದೇ ಅವರ ಜೀವಕ್ಕೆ ಮುಳುವಾಯಿತೆಂದು ಕಾಣುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ವಿನಾಯಕ ಗಂಗೊಳ್ಳಿ ಮಾತನಾಡಿ, ‘ಗೌರಿ ಲಂಕೇಶ್‌ ಅವರು ಹತ್ತಾರು ಇಂಗ್ಲಿಷ್‌ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಾಧ್ಯಮಗಳು ಅವರ ಹತ್ಯೆಯನ್ನು ಖಂಡಿಸಿವೆ. ಇದನ್ನು ಹಿಂಸೆಯ ಪ್ರತಿಪಾದಕರು ಅರ್ಥಮಾಡಿ ಕೊಳ್ಳಬೇಕು’ ಎಂದರು.

ಮೊಹಮ್ಮದ್‌ ಖಲೀಲ್‌ ಉಲ್ಲಾ ಮಾತನಾಡಿ, ‘ಗಾಂಧೀಜಿ ಹಾಕಿಕೊಟ್ಟ ಸತ್ಯ ಮತ್ತು ಅಹಿಂಸೆಯ ದಾರಿ ನಮ್ಮದು. ಪ್ರಾಣಿ ಹತ್ಯೆಯನ್ನು ಟೀಕಿಸುವವರು ಮನುಷ್ಯರ ಹತ್ಯೆಯ ಬಗ್ಗೆ ಬಾಯಿ ಬಿಡುತ್ತಿಲ್ಲ. ಹಿಂಸಾವಾದ ಮನುಷ್ಯರನ್ನು ಬಲಿ ತೆಗೆದುಕೊಳ್ಳುತ್ತಿದೆ’ ಎಂದು ವಿಷಾದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ, ‘ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಮತ್ತು ಹೋರಾಡುತ್ತಿದ್ದ ಗೌರಿ ಲಂಕೇಶ್ ಅವರು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖಪಾತ್ರ ವಹಿಸಿದ್ದರು. ಆದಿವಾಸಿಗಳ ಮತ್ತು ದಲಿತರ ಸಮಸ್ಯೆಗಳಿಗೆ ಸದಾ ಧ್ವನಿಯಾಗಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜೀವನದ ಕೊನೆಯವರೆಗೆ ಪ್ರತಿಪಾದಿಸಿದರು’ ಎಂದು ಸ್ಮರಿಸಿದರು.

ಮೌನಾಚರಣೆ: ನುಡಿ ನಮನದ ಕೊನೆಗೆ ಕಸಾಪ ಸದಸ್ಯರು ಮತ್ತು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಗಣ್ಯರು ಒಂದು ನಿಮಿಷ ಮೌನ ಆಚರಣೆ ಮೂಲಕ ಗೌರಿ ಲಂಕೇಶ್‌ರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಉಪನ್ಯಾಸಕಿ ಮಹೇಶ್ವರಿ, ಕಸಾಪ ಸದಸ್ಯರಾದ ಅರವಿಂದ ನಾಯಕ, ಅಚ್ಯುತ್ ಕುಮಾರ್, ಉದಯ್ ಬರ್ಗಿ, ದರ್ಶನ್ ನಾಯ್ಕ, ನಜೀರ್ ಅಹಮ್ಮದ್ ಯು ಶೇಖ್. ವಿ.ಎಂ.ನಾಯ್ಕ ಉಪಸ್ಥಿತರಿದ್ದರು.

ಮನವಿ ಸಲ್ಲಿಕೆ:  ಗೌರಿ ಲಂಕೇಶ್ ಹತ್ಯೆಗೈದ ದುಷ್ಕರ್ಮಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿ ಕಸಾಪ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ ಅವರಿಗೆ ಮನವಿ ಸಲ್ಲಿಸಿದರು.

* * 

ಗೌರಿ ಲಂಕೇಶ್‌ ಅವರು ತುಳಿದ ಹಾದಿ ನಿಷ್ಠುರವಾದುದು. ವಿದ್ಯಾರ್ಥಿನಿಯರು, ಮಹಿಳೆಯರು ಅವರಿಂದ ಕಲಿಯಬೇಕಾದ ಸಾಕಷ್ಟು ಅಂಶಗಳಿವೆ
ನಾಗರಾಜ ಹರಪನಹಳ್ಳಿ
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT