ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೈತ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಯುವಕರು

Last Updated 8 ಸೆಪ್ಟೆಂಬರ್ 2017, 6:35 IST
ಅಕ್ಷರ ಗಾತ್ರ

ಬೀದರ್: ಆಕರ್ಷಕ ವೇತನ ದೊರೆಯಲಿದೆ ಎನ್ನುವ ಆಸೆಯಿಂದ ಕುವೈತ್‌ಗೆ ತೆರಳಿದ್ದ ಬೀದರ್‌ ಜಿಲ್ಲೆಯ 12 ಯುವಕರು ಹಾಗೂ ವಿಜಯಪುರದ ಒಬ್ಬ ಸೇರಿ ರಾಜ್ಯದ 13 ಯುವಕರು ವೀಸಾ ಏಜೆಂಟರಿಂದ ಮೋಸ ಹೋಗಿ ಕೆಲಸವೂ ಇಲ್ಲದೇ, ಊರಿಗೆ ಮರಳಲು ಸಾಧ್ಯವೂ ಆಗದೆ ಹತ್ತು ದಿನಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹುಮನಾಬಾದ್ ತಾಲ್ಲೂಕಿನ ಶ್ರೀಕಟನಳ್ಳಿಯ ಮಿರಾಜ್‌, ಹೊಸಳ್ಳಿಯ ಶ್ರೀಕಾಂತ, ಕೂಡಂಬಲ ಶಿವರಾಜ, ಆನಂದ ಭೀಮರೆಡ್ಡಿ, ಚಿಟಗುಪ್ಪದ ರಾಜಶೇಖರ, ಶಿವಕುಮಾರ ಮುಸ್ತರಿ, ಬೇನ್‌ಚಿಂಚೋಳಿಯ ನಾಗೇಶ, ಮಂಗಲಗಿಯ ಗೌತಮ ಚಂದ್ರಪ್ಪ, ಬಸವಕಲ್ಯಾಣದ ರಮೇಶ, ಚಂದ್ರಕಾಂತ, ಆನಂದ ತುಕಾರಾಮ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿಯ ಪರಶುರಾಮ ಕುವೈತ್‌ನ ತೊಂದರೆಗೆ ಸಿಲುಕಿದ್ದಾರೆ.

ವೀಸಾ ಏಜೆಂಟರಾದ ಬಸವಕಲ್ಯಾಣದ ಆನಂದ, ಜಗಮೋಹನ, ಗೌತಮ ಹಾಗೂ ರಾಜೇಂದ್ರ ಮೂಲಕ ಜುಲೈ 27ರಂದು ಬೀದರ್‌ನಿಂದ ಮುಂಬೈಗೆ ತೆರಳಿ ಅಲ್ಲಿಂದ ಕುವೈತ್‌ಗೆ ಹೋಗಿದ್ದಾರೆ. ಯುವಕರನ್ನು ಗುತ್ತಿಗೆ ಆಧಾರದ ಮೇಲೆ ಕಟ್ಟಡ ಕಾರ್ಮಿಕರನ್ನು ಪೂರೈಸುವ ಕಂಪೆನಿಗೆ ಪ್ರವಾಸಿ ವೀಸಾದ ಅಡಿಯಲ್ಲಿ ಕಳಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

‘ಬಸವಕಲ್ಯಾಣದ ಏಜೆಂಟರು ಮುಂಬೈನ ಏಜೆಂಟರ ಮೂಲಕ ನಮ್ಮನ್ನು ಕುವೈತ್‌ಗೆ ಕಳಿಸಿದ್ದಾರೆ. ಆಗಸ್ಟ್‌ 27ರ ವರೆಗೂ ನಮಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ವೀಸಾ ಅವಧಿ ಮುಗಿದ ನಂತರ ಎಲ್ಲರನ್ನೂ ಬೃಹತ್‌ ಕಟ್ಟಡವೊಂದರ ಕೊಠಡಿಯಲ್ಲಿ ಇರಿಸಲಾಗಿದೆ. ಇಲ್ಲಿಯೇ ನಾವು ಅಡುಗೆ ಮಾಡಿ ಊಟ ಮಾಡುತ್ತಿದ್ದೇವೆ. ಊರಿನಿಂದ ಬರುವಾಗ ತಂದಿದ್ದ ಹಣ ಖಾಲಿಯಾಗಿದೆ. ಊಟಕ್ಕೆ ಸಮಸ್ಯೆಯಾಗುತ್ತಿದೆ. ನಮಗೆ ಕುಡಿಯಲು ನೀರು ಸಹ ಕೊಡುತ್ತಿಲ್ಲ’ ಎಂದು ಮಂಗಲಗಿ ಗ್ರಾಮದ ಗೌತಮ ಚಂದ್ರಪ್ಪ ‘ಪ್ರಜಾವಾಣಿ’ಗೆ ಕರೆ ಮಾಡಿ ತಿಳಿಸಿದರು.

‘ಏಜೆಂಟರು ವಿಮಾನದ ವೆಚ್ಚ ಹೊರತುಪಡಿಸಿ ಪ್ರತಿಯೊಬ್ಬರಿಂದ ₹ 55 ಸಾವಿರ ಪಡೆದಿದ್ದಾರೆ. ಜುಲೈ 27ರಂದು ಎಂಟು ಮಂದಿ ಹಾಗೂ 31ರಂದು ಐದು ಮಂದಿ ಇಲ್ಲಿಗೆ ಬಂದಿದ್ದೇವೆ. ನಾವು ಮೋಸ ಹೋಗಿರುವುದು ಆಗಸ್ಟ್‌ 27ರಂದು ಗೊತ್ತಾಗಿದೆ. ಇಲ್ಲಿ ಕೆಲವರು ಯಾರಿಗೂ ದೂರು ಕೊಡದಂತೆ ತಾಕೀತು ಮಾಡುತ್ತಿದ್ದಾರೆ’ ಎಂದು ಹೇಳಿದರು.
‘ನಾವು ಸಂಕಷ್ಟದಲ್ಲಿರುವುದು ನಮ್ಮ ಕುಟುಂಬದವರಿಗೆ ಗೊತ್ತಾದರೆ ಆಘಾತಕ್ಕೆ ಒಳಗಾಗಲಿದ್ದಾರೆ. ಹೀಗಾಗಿ ಅವರಿಗೆ ತಿಳಿಸಿಲ್ಲ. ನಮ್ಮೊಂದಿಗೆ ಇರುವವರು 7ನೇ, 8ನೇ, ಎಸ್‌ಎಸ್‌ಎಲ್‌ಎಸಿ ಹಾಗೂ ಪಿಯುಸಿ ಪಾಸಾದವರೇ ಇದ್ದಾರೆ.

ಯಾರಿಗೂ ಇಂಗ್ಲಿಷ್‌ ಬರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ. ನಮ್ಮನ್ನು ಇಲ್ಲಿಂದ ಹೇಗಾದರೂ ಮಾಡಿ ಊರಿಗೆ ಕರೆ ತರಲು ವ್ಯವಸ್ಥೆ ಮಾಡಬೇಕು’ ಎಂದು ಮನವಿ ಮಾಡಿದರು.

ದೂರು ಬಂದಿಲ್ಲ: ‘ಕುವೈತ್‌ನಲ್ಲಿ ಜಿಲ್ಲೆಯ ಯುವಕರು ತೊಂದರೆಯಲ್ಲಿ ಸಿಲುಕಿರುವ ದೂರು ಬಂದಿಲ್ಲ. ಯುವಕರು ಒಂದು ಮೇಲ್ ಮಾಡಿದರೆ ಅಥವಾ ಸಂಬಂಧಿಕರು ದೂರು ಕೊಟ್ಟರೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ತಿಳಿಸಿದರು.

ಯಾರೂ ಸಂಪರ್ಕಿಸಿಲ್ಲ: ‘ಕುವೈತ್‌ನಲ್ಲಿರುವ ಯುವಕರು ಇಲ್ಲವೇ ಅವರ ಸಂಬಂಧಿಗಳು ನನಗೆ ಸರಿಯಾದ ಮಾಹಿತಿ ನೀಡಿ, ಪಾಸ್‌ಪೋರ್ಟ್‌, ವೀಸಾ ಮತ್ತಿತರ ದಾಖಲೆಗಳನ್ನು ಒದಗಿಸಿದರೆ ವಿದೇಶಾಂಗ ಸಚಿವರ ಸಹಕಾರದೊಂದಿಗೆ ಕುವೈತ್‌ನಲ್ಲಿರುವ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಅವರನ್ನು ಬೀದರ್‌ಗೆ ಕರೆ ತರುವ ವ್ಯವಸ್ಥೆ ಮಾಡುತ್ತೇನೆ’ ಎಂದು ಸಂಸದ ಭಗವಂತ ಖೂಬಾ ಹೇಳಿದರು.

‘ಯುವಕರ ಸಂಬಂಧಿಗಳು ಮೊಬೈಲ್ ಸಂಖ್ಯೆ 08971755073 ಅಥವಾ ಕಚೇರಿ ದೂರವಾಣಿ ಸಂಖ್ಯೆ 08482–225925 ಗೆ ಕರೆ ಮಾಡಿ ಮಾಹಿತಿ ನೀಡಿದರೂ ಸಾಕು. ಅವರ ಬಿಡುಗಡೆಗೆ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT