ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರಿಗಾಗಿ ಬಂದಿದೆ ‘ರೈತ ಸಾರಥಿ ಯೋಜನೆ’

Last Updated 8 ಸೆಪ್ಟೆಂಬರ್ 2017, 6:58 IST
ಅಕ್ಷರ ಗಾತ್ರ

ರಾಯಚೂರು: ಯಾಂತ್ರಿಕ ಕೃಷಿಯಲ್ಲಿ ಅವಿಭಾಜ್ಯ ವಾಹನವೆಂದು ವ್ಯಾಪಕವಾಗಿ ಬಳಕೆ ಮಾಡುತ್ತಿರುವ ಟ್ರ್ಯಾಕ್ಟರ್‌ ಟ್ರೇಲರ್‌ ಚಾಲಕರಿಗೆ ಪತ್‌್ಯೇಕವಾಗಿ ಪರವಾನಗಿ ಕೊಡಲು ಸಾರಿಗೆ ಇಲಾಖೆಯು ‘ರೈತ ಸಾರಥಿ ಯೋಜನೆ’ ಜಾರಿಗೊಳಿಸಲಾಗಿದೆ.

ಟ್ರ್ಯಾಕ್ಟರ್‌ ಚಾಲನೆ ಮಾಡುತ್ತಿರುವ ಚಾಲಕರಿಂದ ಕನಿಷ್ಠ ಪ್ರಮಾಣದ ದಾಖಲೆಗಳನ್ನು ಪಡೆದುಕೊಂಡು ಪರವಾನಗಿ ನೀಡಲಾಗುತ್ತಿದೆ. ಸಾರಿಗೆ ಇಲಾಖೆ ಅಧೀನದ ಪ್ರಾದೇಶಿಕ ಸಾರಿಗೆ ಆಧಿಕಾರಿಗಳು(ಆರ್‌ಟಿಒ) ರೈತರನ್ನು ಒಟ್ಟುಗೂಡಿಸಿ ಪರವಾನಗಿ ಪಡೆಯುವಂತೆ ಜಾಗೃತಿ ಮೂಡಿಸುವ ಕೆಲಸ ಈಗಾಗಲೇ ಆರಂಭಿಸಿದ್ದಾರೆ. ರೈತ ಸಾರಥಿ ಯೋಜನೆಯಡಿ ಜಿಲ್ಲೆಯಲ್ಲಿ ಈ ವರ್ಷ ಒಟ್ಟು 770 ಟ್ರ್ಯಾಕ್ಟರ್‌ ಚಾಲಕರಿಗೆ ಪರವಾನಗಿ ನೀಡಲು ಯೋಜಿಸಲಾಗಿದೆ.

ಕರಪತ್ರಗಳನ್ನು ಹಂಚುವ ಮೂಲಕ ರಾಯಚೂರು ಆರ್‌ಟಿಒ ಅಧಿಕಾರಿಗಳು ಈ ಯೋಜನೆಯ ಪ್ರಚಾರ ಮಾಡಿದ್ದರೂ ರೈತರಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಬಹುತೇಕ ಗ್ರಾಮೀಣ ಭಾಗದಲ್ಲಿ ಟ್ರ್ಯಾಕ್ಟರ್‌ಗಳು ಬಳಕೆ ಆಗುತ್ತಿರುವುದರಿಂದ ಅಲ್ಲಿನ ರೈತರಿಗೆ ಯೋಜನೆ ತಲುಪಿಸುವ ಪ್ರಯತ್ನ ಮುಂದುವರಿಸಿದ್ದಾರೆ. ರೈತ ಸಂಘಟನೆಗಳ ಮುಖಂಡರ ಮೂಲಕ ಸಾರಥಿ ಯೋಜನೆ ಬಗ್ಗೆ ಪ್ರಚಾರಗೊಳಿಸುವ ಕಾರ್ಯ ನಡೆಯುತ್ತಿದೆ.

ಇಲ್ಲಿಯವರೆಗೂ ಜಿಲ್ಲೆಯಲ್ಲಿ ಒಟ್ಟು 26,688 ಟ್ರ್ಯಾಕ್ಟರ್‌ಗಳು ನೋಂದಣಿಯಾಗಿವೆ. ಹಿಂದಿನ ವರ್ಷ 2016–17ನೇ ಸಾಲಿನಲ್ಲಿ 1,942 ಟ್ರ್ಯಾಕ್ಟರ್‌ಗಳ ನೋಂದಣಿ ಆಗಿದೆ. 2017 ರ ಏಪ್ರಿಲ್‌ನಿಂದ ಆಗಸ್ಟ್‌ 31 ರವರೆಗೂ 24 ಹೊಸ ಟ್ರ್ಯಾಕ್ಟರ್‌ಗಳು ನೋಂದಣಿ ಮಾಡಿಕೊಂಡಿವೆ.

ಕೃಷಿ ಕಾರ್ಯಗಳಲ್ಲಿ ರೈತರು ಟ್ರ್ಯಾಕ್ಟರ್‌ ಬಳಕೆ ಮಾಡುವುದು ಸಾಮಾನ್ಯವಾಗಿದೆ. ಆದರೆ ಇದಕ್ಕೂ ಚಾಲನಾ ಪರವಾನಿಗೆ ಹೊಂದುವ ಬಗ್ಗೆ ಮಾಹಿತಿ ಇರುವುದಿಲ್ಲ. ಟ್ರ್ಯಾಕ್ಟರ್‌ ಚಲಾಸುವವರು ಅನಕ್ಷರಸ್ಥರಾಗಿದ್ದರೂ ಕೂಡಾ ಪರವಾನಗಿ ಒದಗಿಸಲಾಗುತ್ತದೆ. ಪರವಾನಿಗೆ ಕೊಡುವ ಪೂರ್ವದಲ್ಲಿ ಅಧಿಕಾರಿಗಳು ಸೂಕ್ತ ತಿಳಿವಳಿಕೆ ನೀಡುತ್ತಾರೆ.

‘ಸಿಂಧನೂರು ತಾಲ್ಲೂಕಿನಲ್ಲೂ ಬಹಳಷ್ಟು ಟ್ರ್ಯಾಕ್ಟರ್‌ಗಳಿವೆ. ಅಲ್ಲಿನ ರೈತರು ಪರವಾನಿಗೆ ಪಡೆದುಕೊಳ್ಳಲು ರೈತ ಸಂಘಟನೆಗಳ ಮೂಲಕ ಪ್ರಯತ್ನಿಸುತ್ತಿದ್ದೇವೆ. ಎಲ್ಲ ತಾಲ್ಲೂಕುಗಳಲ್ಲೂ ಇದೇ ರೀತಿಯ ಪ್ರಯತ್ನದಿಂದ ರೈತರಿಗೆ ಚಾಲನಾ ಪರವಾನಗಿ ನೀಡಲಾಗುವುದು’ ಎಂದು ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ‘ಪ್ರಜಾವಾಣಿ’ಗೆ ತಿಳಿಸಿದರು.

18 ವರ್ಷದೊಳಗಿನ ವ್ಯಕ್ತಿಗಳಿಗೆ ಪರವಾನಗಿ ನೀಡುವುದಿಲ್ಲ. 40 ವರ್ಷ ಮೇಲ್ಪಟ್ಟ ವಯೋಮಿತಿಯ ರೈತರು ಟ್ರ್ಯಾಕ್ಟರ್‌ ಚಾಲನಾ ಪರವಾನಗಿ ಪಡೆಯಲು ವೈದ್ಯಕೀಯ ಪ್ರಮಾಣಪತ್ರ ಬೇಕಾಗುತ್ತದೆ. ಪರವಾನಗಿ ಪಡೆಯುವವರು ರೈತರಾಗಿರಬೇಕು. ಟ್ರ್ಯಾಕ್ಟರ್‌ ಮಾಲೀಕರು ಹಾಗೂ ಅವರ ಕುಟುಂಬದವರು ಅಥವಾ ಟ್ರ್ಯಾಕ್ಟರ್‌ ಮಾಲೀಕ ನೇಮಿಸಿದ ವ್ಯಕ್ತಿಗಳು ಈ ಯೋಜನೆಯಡಿ ಪರವಾನಗಿ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

ದಾಖಲೆಗಳನ್ನು ಒದಗಿಸುವ ರೈತರಿಂದ 200 ಶುಲ್ಕ ಭರಿಸಿಕೊಂಡು ಕಲಿಕಾ ಚಾಲನಾ ಅನುಜ್ಞಾಪತ್ರ (ಎಲ್‌ಎಲ್‌ಆರ್‌) ನೀಡಲಾಗುತ್ತದೆ. 30 ದಿನಗಳ ಬಳಿಕ ಚಾಲನಾ ಪರವಾನಗಿಯ ಸ್ಮಾರ್ಟ್‌ ಕಾರ್ಡ್‌ ಪಡೆದುಕೊಳ್ಳುವುದಕ್ಕೆ 700 ಶುಲ್ಕವನ್ನು ರೈತರು ಕಟ್ಟಬೇಕಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಪರವಾನಗಿ ಹೊಂದಲು ಆಸಕ್ತಿ ಇರುವ ರೈತರು ಮಂತ್ರಾಲಯ ರಸ್ತೆ ಮಾರ್ಗದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT