ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಭಾರತ ಯೋಜನೆ ಹಿನ್ನಡೆ; ಪೌರಾಯುಕ್ತ ಹೊಣೆ

Last Updated 8 ಸೆಪ್ಟೆಂಬರ್ 2017, 7:03 IST
ಅಕ್ಷರ ಗಾತ್ರ

ಯಾದಗಿರಿ: ’ನಗರದಲ್ಲಿ ಸ್ವಚ್ಛ ಭಾರತ ಯೋಜನೆ ಹಿನ್ನಡೆಗೆ ನಗರಸಭೆ ಪೌರಾಯುಕ್ತರೇ ನೇರ ಹೊಣೆ’ ಎಂದು ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆರೋಪಿಸಿದರು. ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ನಗರದಲ್ಲಿ ಶೌಚಾಲಯ ಪ್ರಗತಿ ಕುರಿತು ಸದಸ್ಯ ಹಣಮಂತಪ್ಪ ಇಟಗಿ ಚರ್ಚೆ ಕೈಗೆತ್ತಿಕೊಂಡರು.

‘ನಗರದ ವಿವಿಧ ವಾರ್ಡುಗಳಲ್ಲಿ ಸ್ವಚ್ಛ ಭಾರತ ಯೋಜನೆಯಡಿ ನಿರ್ಮಾಣಗೊಂಡಿರುವ ಶೌಚಾಲಯ ಕಾಮಗಾರಿಯನ್ನು ಪೌರಾಯುಕ್ತರು ಪರಿಶೀಲಸಿಲ್ಲ.  ಪೂರ್ಣಗೊಂಡ ಹಾಗೂ ಆರಂಭಗೊಂಡ ಶೌಚಾಲಯ ಕಾಮಗಾರಿಗೆ ಸರ್ಕಾರ ಪ್ರೋತ್ಸಾಹಧನ ವಿತರಿಸಿಲ್ಲ’ ಎಂದು ಇಟಗಿ ಪ್ರಶ್ನಿಸಿದರು.

ಇದಕ್ಕೆ ಸದಸ್ಯರಾದ ಬಸವರಾಜಪ್ಪ ಜೈನ್, ನಾಗರತ್ನಾ ಅಲಿಪೂರ, ಶಂಕರ್ ರಾಥೋಡ ಧ್ವನಿಗೂಡಿಸಿದರು. ‘ಸಮುದಾಯ ಶೌಚಾಲಯಗಳ ಕಾಮಗಾರಿಗಳಲ್ಲೂ ಭಾರೀ ಬೋಗಸ್‌ ನಡೆದಿದೆ. ಕೆಲ ವಾರ್ಡುಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದ್ದರೂ ಉಪಯೋಗಕ್ಕೆ ಬಾರದಂತಾಗಿವೆ. ಕೂಡಲೇ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

‘ಶೌಚಾಲಯ ಪರಿಶೀಲನೆಗೆ ಸದಸ್ಯರು ಒಳಗೊಂಡಂತೆ ಒಂದೊಂದು ವಿಶೇಷ ಸಮಿತಿ ರಚಿಸಿ ಪರಿಶೀಲಿಸಲು ಚಿಂತನೆ ನಡೆದಿದೆ. ತಕ್ಷಣ ಸಮಿತಿ ರಚಿಸಲಾಗುವುದು. ಕೆಲ ಶೌಚಾಲಯ ಫಲಾನುಭವಿಗಳ ದಾಖಲಾತಿ ಅಸಮರ್ಪಕ ಇರುವ ಕಾರಣ ಪ್ರೋತ್ಸಾಹಧನ ಬಿಲ್‌ ತಡೆ ಹಿಡಿದಿದ್ದೇನೆ’ ಎಂದು ಪೌರಾಯುಕ್ತ ಸಂಗಪ್ಪ ಉಪಾಸಿ ಉತ್ತರಿಸಿದರು.

ಅಕ್ರಮ ನಳ ಸಂಪರ್ಕ ಕಠಿಣ ಕ್ರಮ: ‘ನಗರದ ಕುಡಿಯುವ ನೀರಿನ ಪೈಪ್‌ಲೈನ್‌ಗಳಿಗೆ ಅಕ್ರಮವಾಗಿ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದರಿಂದ ನಗರಸಭೆಗೆ ಶುಲ್ಕ ತುಂಬುತ್ತಿರುವ ನಾಗರಿಕರಿಗೆ ನೀರಿಲ್ಲದಂತಾಗಿದೆ. ಈ ಅಕ್ರಮದಲ್ಲಿ ನಗರಸಭೆ ಸಿಬ್ಬಂದಿ ನೇರವಾಗಿ ಭಾಗಿಯಾಗಿದ್ದಾರೆ. ಆದರೂ ನಗರಸಭೆ ಆಡಳಿತಾಧಿಕಾರಿಗಳು ಕಣ್ಮುಚ್ಚಿ ಕೂತಿದ್ದಾರೆ’ ಎಂದು ಸದಸ್ಯ ಹಣಮಂತ ಇಟಗಿ ನಗರಸಭೆ ಆಡಳಿತ ವೈಖರಿಯನ್ನು ಟೀಕಿಸಿದರು.

ಅಧ್ಯಕ್ಷೆ ಲಲಿತಾ ಅನಪೂರ,‘ನಗರಗಳಲ್ಲಿನ ಅಕ್ರಮ ನಳ ಸಂಪರ್ಕ ಪಡೆದಿರುವ ಕುರಿತು ಸರ್ವೆ ನಡೆಸಿ ತನಿಖೆ ಕೈಗೊಳ್ಳಲಾಗುವುದು. ತನಿಖೆಯಲ್ಲಿ ಸಿಬ್ಬಂದಿ ಕೈವಾಡ ಸಾಬೀತಾದರೆ ಅವರನ್ನು ವಜಾಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿ ವರದಿ ಕಳುಹಿಸಲಾಗುವುದು’ ಎಂದು ಉತ್ತರಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಶಶಿಧರರೆಡ್ಡಿ, ‘ಈಗಾಗಲೇ ನಗರಸಭೆ ಅಕ್ರಮ ನಳ ಸಂಪರ್ಕ ಹೊಂದಿರುವವರನ್ನು ಗುರುತಿಸಿ ಸಕ್ರಮಗೊಳಿಸಲು ಈ ಹಿಂದಿನ ಸಾಮಾನ್ಯ ಸಭೆ ನಿರ್ಣಯಿಸಿದೆ. ಮೊದಲು ಆ ನಿರ್ಣಯದಂತೆ ಅಕ್ರಮ ನಳಗಳನ್ನು ಸಕ್ರಮಗೊಳಿಸಿ ನಂತರ ಬಿಗಿಕ್ರಮ ಜಾರಿಗೊಳಿಸಿ’ ಎಂದರು.

ಲೇಔಟ್‌ಗಳಿಗೆ ಅನುಮತಿ ಬೇಡ: ನಗರದಲ್ಲಿ ನಾಯಿಕೊಡೆಗಳಂತೆ ಲೇಔಟ್‌ಗಳು ತಲೆಯೆತ್ತಿವೆ. ಸಂಪೂರ್ಣ ಅಭಿವೃದ್ಧ ಆಗಿರದ ಲೇಔಟ್‌ಗಳಿಗೆ ನಗರಸಭೆ ಅನುಮತಿ ನಿರಾಕರಿಸಬೇಕು’ ಎಂದು ಸದಸ್ಯ ಬಸವರಾಜ ಜೈನ್‌ ಒತ್ತಾಯಿಸಿದರು.

‘ಲೇಔಟ್‌ ಮಾಲೀಕರು ನಗರಸಭೆಗೆ ಅಭಿವೃದ್ಧಿ ಶುಲ್ಕವನ್ನೇ ತುಂಬಿಲ್ಲ. 1 ಎಕರೆಗೆ ₹ 10 ಸಾವಿರದಂತೆ ಅಭಿವೃದ್ಧಿ ಶುಲ್ಕ ತುಂಬಬೇಕು. ಆದರೆ, ಯಾವುದೇ ಅಭಿವೃದ್ಧಿ ಇಲ್ಲದ ಲೇಔಟ್‌ಗಳಿಗೆ ನಗರಸಭೆ ಅಧಿಕಾರಿಗಳು ಖಾತೆ ನಕಲು, ಮ್ಯುಟೇಶನ್ ಮಾಡಿಕೊಟ್ಟಿದ್ದು, ನಗರಾಭಿವೃದ್ಧಿ ಯೋಜನಾ ಕೋಶದ ನಿರ್ದೇಶನ ಹಾಗೂ ಸರ್ಕಾರದ ನಿಯಮಗಳನ್ನು ನಗರಸಭೆ ಸ್ಪಷ್ಟವಾಗಿ ಉಲ್ಲಂಘಿಸಿದೆ’ ಎಂದು ದೂರಿದರು. ಲೇಔಟ್‌ಗಳನ್ನು ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತ ಉಪಾಸಿ ಉತ್ತರಿಸಿದರು.

ಸರ್ಕಾರದ ಬೊಕ್ಕಸಕ್ಕೆ ಕೋಟಿ ನಷ್ಟ: ‘ನಗರ ವ್ಯಾಪ್ತಿಯ ಸರ್ವೆ ಸಂಖ್ಯೆ 383ರಲ್ಲಿ 9.03 ಗುಂಟೆ ಖಾಲಿ ಜಾಗದಲ್ಲಿ ಅದರ ಮಾಲೀಕ ಶಿವರಾಜ 1997ರಲ್ಲಿ ವಸತಿಗಾಗಿ ಭೂಪರಿವರ್ತನೆ ಮಾಡಿಸಿದ್ದಾರೆ. ಅದೇ ವರ್ಷದಲ್ಲಿ ಅಬ್ದುಲ್‌ ನಬೀ ಎಂಬುವರು ವಸತಿಗಾಗಿ ಭೂ ಪರಿವರ್ತಿತಗೊಂಡ 2 ಎಕರೆ ಭೂಮಿ ಖರೀದಿಸಿದ್ದಾರೆ.

2003ರಲ್ಲಿ ಅವರು ಅದೇ ಭೂಮಿಯನ್ನು ನಗರ ಯೋಜನಾ ಪ್ರಾಧಿಕಾರದಿಂದ ಪುನರ್‌ ವಿನ್ಯಾಸ ಮಾಡಿಸಿ ಅದರೊಂದಿಗೆ ನಗರಸಭೆಯ 20 ಗುಂಟೆ ಜಾಗವನ್ನು ಸೇರಿಸಿ ಮ್ಯುಟೇಶನ್ ಮಾಡಿಸಿದ್ದಾರೆ. ನಗರಸಭೆ ಅಧಿಕಾರಿಗಳ ಕುಮ್ಮಕ್ಕಿನಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ’ ಎಂದು ಸದಸ್ಯ ಶಿವಕುಮಾರ್ ದೊಡ್ಡಮನಿ ತಿಳಿಸಿದರು.

ನಗರಸಭೆ ಕಾನೂನು ಸಲಹೆಗಾರರ ಸಲಹೆ ಪಡೆದು ಮತ್ತು ಮೂಲ ದಾಖಲಾತಿ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಪೌರಾಯುಕ್ತರು ಪ್ರತಿಕ್ರಿಯಿಸಿದರು.
ಉಪಾಧ್ಯಕ್ಷ ಸ್ಯಾಂಸನ್ ಮಾಳಿಕೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ನಾಜೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT