ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮಳಿಗೆ ತೆರವಿಗೆ ಒತ್ತಾಯ

Last Updated 8 ಸೆಪ್ಟೆಂಬರ್ 2017, 7:07 IST
ಅಕ್ಷರ ಗಾತ್ರ

ಚಾಮರಾಜನಗರ: ‘ನಗರಸಭೆ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೆ ತಲೆ ಎತ್ತಿರುವ ಅಂಗಡಿ, ಮಳಿಗೆಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ಸದಸ್ಯ ಸಿ.ಎಸ್. ಸೈಯದ್‌ ಆರೀಫ್‌ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಅಕ್ರಮವಾಗಿ 17ಕ್ಕೂ ಹೆಚ್ಚು ಮಾಂಸದಂಗಡಿಗಳು ತಲೆ ಎತ್ತಿವೆ. ಇವುಗಳ ವಿರುದ್ಧ ಅಧಿಕಾರಿಗಳು ಕ್ರಮವಹಿಸಬೇಕು. ಜತೆಗೆ, ನಗರಸಭೆ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೆ ತೆರೆದಿರುವ ಔಷಧಿ ಅಂಗಡಿ, ದಿನಸಿ ಅಂಗಡಿ ಸೇರಿದಂತೆ ಇತರೆ ಅಂಗಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯ ಶಿವಕುಮಾರ್‌ ಮಾತನಾಡಿ, ಕೋಳಿ ಮಾಂಸದ ಅಂಗಡಿಗಳು ಎಲ್ಲೆಂದರಲ್ಲಿ ತಲೆ ಎತ್ತಿದ್ದು, ನಗರದ ಸ್ವಚ್ಛತೆಗೆ ಅಡ್ಡಿಯುಂಟು ಮಾಡುತ್ತಿದೆ. ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಬಿಸಾಡುತ್ತಿದ್ದಾರೆ. ಬೀದಿ ನಾಯಿಗಳಿಗೆ ಮಾಂಸದ ಚೂರುಗಳನ್ನು ಹಾಕುತ್ತಿದ್ದಾರೆ. ಇದರಿಂದ ವಾರ್ಡ್‌ನಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದೆ ಎಂದು ದೂರಿದರು.‌

ಸದಸ್ಯ ಚೆಂಗುಮಣಿ ಮಾತನಾಡಿ, ಡಿವಿಯೇಷನ್‌ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್‌ಲೈನ್‌ಗಳನ್ನು ಒಡೆದು ಹಾಕಲಾಗಿದೆ. ಅಪಾರ ನೀರು ಪೋಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ಸದಸ್ಯ ಚಿನ್ನಸ್ವಾಮಿ ಮಾತನಾಡಿ, ಒಳಚರಂಡಿ ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ. ಇದರಿಂದ ರಸ್ತೆ ಕುಸಿತ ಉಂಟಾಗುತ್ತಿದೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಕುಸಿತವಾಗಿರುವ ಕಡೆಗಳಲ್ಲಿ ಶೀಘ್ರವೇ ಮಣ್ಣು ಹಾಕಿಸಬೇಕು ಎಂದು ತಿಳಿಸಿದರು.

‘ನಗರ ಸಭೆಯಲ್ಲಿ ಸಾರ್ವಜನಿಕ ಕೆಲಸಗಳು ಸಮರ್ಪಕವಾಗಿ ನಡೆ ಯುತ್ತಿಲ್ಲ. ಅಧಿಕಾರಿಗಳು ಕಡತಗಳ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ. ನಲ್ಲಿ, ಮನೆ ಕಂದಾಯ ಗಳನ್ನು ವ್ಯವಸ್ಥಿತವಾಗಿ ಸಂಗ್ರಹಣೆ ಮಾಡುತ್ತಿಲ್ಲ’ ಎಂದು ಸದಸ್ಯ ನಾರಾಯಣಸ್ವಾಮಿ ಆರೋಪಿಸಿದರು.

ಎಸ್‌.ಇ.ಪಿ ಹಾಗೂ ಟಿ.ಎಸ್‌.ಪಿ. ಯೋಜನೆಯಡಿ ಎಸ್‌ಸಿ, ಎಸ್‌ಟಿ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿ ಹಂಚಿಕೆಯನ್ನು ಸರಿಯಾಗಿ ಮಾಡಿಲ್ಲ. 9, 16, 20 ಹಾಗೂ 31ನೇ ವಾರ್ಡ್‌ಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ದೂರಿದರು.

ಪೌರಾಯುಕ್ತ ಎಂ. ರಾಜಣ್ಣ ಮಾತನಾಡಿ, ಅಕ್ರಮವಾಗಿ ತಲೆ ಎತ್ತಿರುವ ಮಾಂಸದಂಗಡಿಗಳನ್ನು ಕೂಡಲೇ ತೆರವುಗೊಳಿಸಲಾಗುವುದು. ಜತೆಗೆ, ಪರವಾನಗಿ ನವೀಕರಣಕ್ಕೆ ಮತ್ತು ಹೊಸ ಪರವಾನಗಿ ಪಡೆದುಕೊಳ್ಳಲು ಪತ್ರಿಕೆಗಳಲ್ಲಿ ಸೂಚನೆ ನೀಡಲಾಗುವುದು. ಬಳಿಕ, ಪರವಾನಗಿ ಇಲ್ಲದ ಅಂಗಡಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

‘ಪ್ರವಾಸಿ ಮಂದಿರದಿಂದ ಹೊಸದಾಗಿ ಪೈಪ್‌ಲೈನ್‌ ಕಾಮಗಾರಿ ಪ್ರಾರಂಭಿಸಲಾಗಿದೆ. ₹ 18.5 ಲಕ್ಷ ವೆಚ್ಚದಡಿ ಟೆಂಡರ್‌ ಕರೆದು ರಸ್ತೆಯ ಎರಡೂ ಬದಿಯಲ್ಲಿ ಹೊಸ ಪೈಪ್‌ಲೈನ್‌ ಅಳವಡಿಸಲಾಗುವುದು’ ಎಂದರು. ಸಭೆಯಲ್ಲಿ ಪ್ರಭಾರ ಅಧ್ಯಕ್ಷ ಆರ್.ಎಂ. ರಾಜಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT