ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಹಂಚಿಕೆಯಲ್ಲಿ ವಿಳಂಬವಾಗಿಲ್ಲ – ಶಾಸಕ

Last Updated 8 ಸೆಪ್ಟೆಂಬರ್ 2017, 7:12 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನ ಕೊಲ್ಲಹಳ್ಳಿ ಗ್ರಾಮಠಾಣಾ ಭೂಮಿ ಹಂಚಿಕೆ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಿಲ್ಲ. ಕಾನೂನು ತೊಡಕುಗಳಿಂದಾಗಿ ಸ್ಪಷ್ಟ ನಿಲುವು ತಳೆಯಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲಹಳ್ಳಿ ಗ್ರಾಮಠಾಣಾ ಭೂಮಿ ಸರ್ವೆ ದಾಖಲೆಯಲ್ಲಿ ವ್ಯತ್ಯಾಸವಾಗಿದೆ. ನಿಗದಿತ ಭೂಮಿ ಬಿಟ್ಟು ಬೇರೆ ಕಡೆ ಸರ್ವೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಜತೆಗೆ ನಿವೇಶನಕ್ಕಾಗಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿಯೂ ಸಾಕಷ್ಟು ಲೋಪಗಳಿರುವ ಬಗ್ಗೆ ಸ್ಥಳೀಯ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ನಿರ್ಗತಿಕರಿಗೆ ಭೂಮಿ ನೀಡಬಾರದು ಎಂಬ ಯಾವುದೇ ದುರುದ್ದೇಶ ತಮಗಿಲ್ಲ. ಮಳಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 177 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ಕೆಲವರು ಪಟ್ಟಣದ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತಾವು ಕೊಲ್ಲಹಳ್ಳಿ ಗ್ರಾಮ ಠಾಣಾ ಭೂಮಿಯಲ್ಲಿ ವರ್ಷಗಳ ಹಿಂದಿನಿಂದ ಆಶ್ರಯ ಪಡೆದಿದ್ದು, ಕಾನೂನು ಪ್ರಕಾರ ಭೂಮಿ ಹಂಚಿಕೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ವಿಚಾರಣೆ ನಡೆಸಿದ ನ್ಯಾಯಾಲಯ ಬಹುತೇಕರ ಅರ್ಜಿಗಳನ್ನು ತಿರಸ್ಕರಿಸಿದೆ. ನಿವೇಶನ ಪಡೆಯುವ ಉದ್ದೇಶದಿಂದಲೇ ಸ್ಥಳದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಅರ್ಜಿ ಸಲ್ಲಿಸಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ, ಎಲ್ಲ ಅರ್ಜಿಗಳನ್ನು ಪರಿಸೀಲಿಸಿ ಅರ್ಹರಿದ್ದಲ್ಲಿ ನಿವೇಶನ ಹಂಚಿಕೆ ಮಾಡಬಹುದು ಎಂದು ಹೇಳಿದರು.

ಗ್ರಾಮಠಾಣಾ ಭೂಮಿಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಲು ಮೊದಲ ಆದ್ಯತೆ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದ್ದರೂ, ಸ್ಥಳೀಯ ನಿರ್ಗತಿಕರಿಗೆ ಕೊಡಬಾರದು ಎಂದಲ್ಲ. ಜಿಲ್ಲಾಧಿಕಾರಿ ಈ ಬಗ್ಗೆ ಕೂಲಂಕಶ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸದಸ್ಯ ಸುಪ್ರದೀಪ್ತ ಯಜಮಾನ್, ಚಂಚಲಾ ಕುಮಾರಸ್ವಾಮಿ, ಮಳಲಿ ಗ್ರಾ.ಪಂ. ಅಧ್ಯಕ್ಷೆ ರಾಣಿ ಗಣೇಶ್, ಮಾಜಿ ಅಧ್ಯಕ್ಷ ಕುಮಾರ್ ತಾ.ಪಂ ಸದಸ್ಯೆ ರುಕ್ಮಿಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT