ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಹರಿಸುವುದು ಮುಂದುವರಿದರೆ ಹಾಹಾಕಾರ

Last Updated 8 ಸೆಪ್ಟೆಂಬರ್ 2017, 7:15 IST
ಅಕ್ಷರ ಗಾತ್ರ

ಹಾಸನ: ಹೇಮಾವತಿ ಜಲಾಶಯದಿಂದ ಪ್ರತಿನಿತ್ಯ 6,130 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಇದು ಹಿಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಲಿದೆ ಎಂದು ಸಂಸದ ಎಚ್‌.ಡಿ.ದೇವೇಗೌಡ ಆತಂಕ ವ್ಯಕ್ತಪಡಿಸಿದರು.

ಗುರುವಾರ ಜಲಾಶಯ ವೀಕ್ಷಿಸಿದ ಅವರು, ‘ಸೆ. 30 ರವರೆಗೆ ನೀರು ಬಿಟ್ಟರೆ ಜಲಾಶಯ ಸಂಪೂರ್ಣ ಬರಿದಾಗಿ ಹಾಹಾಕಾರ ಉಂಟಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ನೀರು ಬಿಡದಿದ್ದರೆ ತಮಿಳುನಾಡು ರೈತರು ದೆಹಲಿಯ ಜಂತರ್ ಮಂತರ್ ಎದುರು ಅರೆಬೆತ್ತಲೆ ಪ್ರತಿಭಟನೆ ಮಾಡುತ್ತಾರೆ. ಆದರೆ, ರಾಜ್ಯದ ರೈತರಲ್ಲಿ ತಾಳ್ಮೆ ಇದ್ದು, ಅವರು ಸ್ವಾಭಿಮಾನಕ್ಕಾಗಿ ನೀರಿಗೆ ಹಾರಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಮಿಳುನಾಡಿಗೆ ಹೇಮಾವತಿ ಜಲಾಶಯವೇ ಟಾರ್ಗೆಟ್ ಆಗಿದೆ. ತಮಿಳುನಾಡಿಗೆ ಕಳೆದ ವರ್ಷ 23 ಟಿ.ಎಂ.ಸಿ ಅಡಿ ನೀರು ಬಿಡಲಾಗಿದೆ. ಹೀಗಾದರೆ ಜಿಲ್ಲೆಯ ಜನರಿಗೆ ನೀರು ಪೂರೈಸಲು ಆಗುವುದಿಲ್ಲ. ಸರ್ಕಾರ ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನ್ಯಾಯಾಲಯದಲ್ಲಿ ಸಮರ್ಪಕ ವಾದ ಮಂಡಿಸಿ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಸಲಹೆ ನೀಡಿದರು.

ಕೆಆರ್‌ಎಸ್, ಹಾರಂಗಿ, ಕಬಿನಿ ಜಲಾಶಯದಿಂದ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಕಡಿಮೆ ಇದೆ. ಹೇಮಾವತಿ ಜಲಾಶಯದಿಂದ ಮಾತ್ರ ಹೆಚ್ಚಿನ ಪ್ರಮಾಣ ನೀರನ್ನು ಹರಿಸಲಾಗುತ್ತಿದೆ. ಈ ರೀತಿಯ ದಂದ್ವ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.

‘ಜಲಾಶಯದಲ್ಲಿ ಬಳಕೆಗೆ ಲಭ್ಯವಿರುವ ನೀರು ಕೇವಲ 10.42 ಟಿ.ಎಂ.ಸಿ. ಅಡಿ ಮಾತ್ರ. ಸೆ. 30ವರೆಗೆ ನೀರು ಬಿಟ್ಟರೆ ಉಳಿಯುವುದು ಕೇವಲ 2.8 ಟಿ.ಎಂ.ಸಿ. ಅಡಿ ಮಾತ್ರ. ಸಾಕಷ್ಟು ಹೋರಾಟ ನಡೆಸಿ ಕಟ್ಟಿಸಿದ ಜಲಾಶಯದಿಂದ ನಮ್ಮ ಜಿಲ್ಲೆಯ ರೈತರಿಗೆ ಯಾವ ಲಾಭವೂ ಆಗುತ್ತಿಲ್ಲ. ಕೇವಲ ಹೊಳೆನರಸೀಪುರ ತಾಲ್ಲೂಕಿನ ಅಭಿವೃದ್ಧಿಗೆ ಜಲಾಶಯ ನಿರ್ಮಿಸಿಲ್ಲ. ತುಮಕೂರು, ಮಂಡ್ಯ, ಮೈಸೂರು, ಹಾಗೂ ಹಾಸನ ಜಿಲ್ಲೆಯ ಜನತೆಗೆ ನೀರು ಪೂರೈಸುವುದಕ್ಕಾಗಿ ನಿರ್ಮಿಸಲಾಗಿದೆ. ಆದರೆ, ಜಿಲ್ಲೆಯ ಯಾವ ಕೆರೆ, ಕಟ್ಟೆಗಳೂ ಭರ್ತಿಯಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸುಪ್ರೀಂ ಕೋರ್ಟ್ ವ್ಯತಿರಿಕ್ತ ತೀರ್ಪು ನೀಡುವ ಮೊದಲೇ ಎಚ್ಚೆತ್ತುಕೊಳ್ಳಬೇಕು. ಒಂದು ವೇಳೆ ತಮಿಳುನಾಡಿಗೆ ನೀರು ಹರಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿದರೆ ರಾಜ್ಯದಲ್ಲಿ ಹೋರಾಟಗಳು ಶುರುವಾಗುತ್ತವೆ. ಎರಡು ವಾರಗಳಲ್ಲಿ ತೀರ್ಪು ಬರುವ ಸಂಭವ ಇದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ದೇವೇಗೌಡರು ಕೇವಲ ಜಿಲ್ಲೆಯ ರೈತರ ಕುರಿತು ಮಾತ್ರ ಮಾತನಾಡುತ್ತಾರೆ’ ಎಂದು ಅಪಸ್ವರ ಎತ್ತುತ್ತಾರೆ. ಜಿಲ್ಲೆಯ ಮಗನಾಗಿ ನಾನು ಮಾತನಾಡುವುದು ತಪ್ಪೇ? ಮೋಡ ಬಿತ್ತನೆ ಮಾಡಿದ ಸರ್ಕಾರ ಎಲ್ಲೆಲ್ಲಿ ಮಳೆ ಸುರಿಸಿದೆ’ ಎಂದು ಕೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಮ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗೇಶ್, ಕೆ.ಎಂ.ರಾಜೇಗೌಡ, ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್‌ ಕುಮಾರ್, ಗೊರೂರು ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಘಟ್ಟ ಜಗದೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT