ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ರೂಪಿಸಿದ ‘ಸವಿಜೇನು....’

Last Updated 8 ಸೆಪ್ಟೆಂಬರ್ 2017, 7:27 IST
ಅಕ್ಷರ ಗಾತ್ರ

ನಾಪೋಕ್ಲು: ಕಾಫಿ, ಕಾಳುಮೆಣಸು ಕೃಷಿಗೆ ಹೆಸರುವಾಸಿಯಾದ ಜಿಲ್ಲೆಯಲ್ಲಿ ಜೇನುಕೃಷಿಗೂ ಹೆಚ್ಚಿನ ಆದ್ಯತೆಯಿದೆ. ವಿಶೇಷವಾಗಿ ಭಾಗಮಂಡಲ ವ್ಯಾಪ್ತಿಯಲ್ಲಿ ಜೇನುಕೃಷಿಯಲ್ಲಿ ತೊಡಗಿಸಿಕೊಂಡು ಲಾಭ ಗಳಿಸುತ್ತಿರುವ ಕೃಷಿಕರು ಹಲವರು.

ಕಳೆದ 25 ವರ್ಷಗಳಿಂದ ಜೇನುಕೃಷಿಯಲ್ಲಿ ತೊಡಗಿಸಿಕೊಂಡಿರುವ ಭಾಗಮಂಡಲ ಸಮೀಪದ ಚೇರಂಗಾಲ ಗ್ರಾಮದ ಕೃಷಿಕ ಕುಸುಮಾಕರ ವಾರ್ಷಿಕವಾಗಿ 750 ಕೆ.ಜಿ ಗಿಂತಲೂ ಅಧಿಕ ಜೇನು ಸಂಗ್ರಹ ಮಾಡುತ್ತಿದ್ದಾರೆ. ಇವರ ಬಳಿ 150 ಪೆಟ್ಟಿಗೆಗಳಿದ್ದು ಜೇನು ಉತ್ಪಾದಿಸುತ್ತಿರುವುದಲ್ಲದೇ ಜೇನು ಕುಟುಂಬಗಳನ್ನು ಮಾರಾಟ ಮಾಡುತ್ತಿದ್ದಾರೆ.

ಸುಮಾರು 200ಕ್ಕೂ ಅಧಿಕ ಜೇನುಪಟ್ಟಿಗೆಗಳು ಇವರ ಬಳಿ ಇದ್ದು 150 ಪೆಟ್ಟಿಗೆಗಳಲ್ಲಿ ಜೇನು ಉತ್ಪಾದನೆ ಆಗುತ್ತಿದೆ. ಎರಡು ವರ್ಷಗಳಿಂದ ಸಹಕಾರ ಸಂಘಗಳ ಸಾಲ ಪಡೆದು ಜೇನುಕೃಷಿ ಮಾಡುತ್ತಿದ್ದಾರೆ. ಖಾಸಗಿ ಮಧುವನಕ್ಕಾಗಿ ₨ 50 ಸಾವಿರ ಸಹಾಯಧನ ಪಡೆದಿದ್ದಾರೆ.

ವಾರ್ಷಿಕ 750 ಕೆ.ಜಿ ಜೇನು ಉತ್ಪಾದಿಸಿರುವುದು ಇವರ ದಾಖಲೆ. ಪ್ರಸಕ್ತ ವರ್ಷ ಮೇ ತಿಂಗಳಲ್ಲಿ 550 ಕೆ.ಜಿ. ಜೇನು ಸಂಗ್ರಹಿಸಿದ್ದು ಜಿಲ್ಲೆಯ ಹೋಂಸ್ಟೇಗಳಿಗೆ ಹಾಗೂ ಖಾಸಗಿಯಾಗಿ ಜೇನು ಮಾರಾಟ ಮಾಡುತ್ತಿದ್ದಾರೆ.

1ಕೆ.ಜಿ. ಜೇನಿಗೆ ₨ 500ರಿಂದ 600ರವರೆಗೆ ದರ ಲಭಿಸುತ್ತಿದೆ. ಅಜ್ಜನ ಕಾಲದಿಂದಲೇ ಜೇನು ಕೃಷಿಯನ್ನು ಮುಂದುವರಿಸಿಕೊಂಡು ಬಂದ ಕುಸುಮಾಕರ ಮಾದರಿ ಜೇನು ಕೃಷಿಕ ಅನಿಸಿಕೊಂಡಿದ್ದಾರೆ.

ಹಿಂದೆ ಕೇವಲ 25 ಜೇನುಪಟ್ಟಿಗೆಗಳನ್ನು ಮಾತ್ರ ಹೊಂದಿದ್ದರೂ ಇದೀಗ ತೋಟಗಾರಿಕಾ ಇಲಾಖೆಯ ಸಹಾಯಧನವನ್ನು ಪಡೆದುಕೊಂಡು ಜೇನು ಪೆಟ್ಟಿಗೆಗಳ ಸಂಖ್ಯೆಯನ್ನು ಹಂತಹಂತವಾಗಿ ಹೆಚ್ಚಿಸುವುದರ ಮೂಲಕ ಆದಾಯವನ್ನು ಗಳಿಸುತ್ತಿದ್ದಾರೆ. ಚೇರಂಗಾಲ ಗ್ರಾಮವು ತಲಕಾವೇರಿ ಬೆಟ್ಟಶ್ರೇಣಿಯ ವ್ಯಾಪ್ತಿಯಲ್ಲಿರುವುದರಿಂದ ಇಲ್ಲಿ ಜೇನು ಕೃಷಿಗೆ ಪೂರಕ ವಾತಾವರಣವಿದೆ ಎಂದು ಅವರು ಹೇಳುತ್ತಾರೆ.

ಜೇನು ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು ಸಮೀಪದಲ್ಲಿ ಖಾಸಗಿ ಮಧುವನವನ್ನು ನಿರ್ಮಿಸಿದ್ದಾರೆ. ಕುಸುಮಾಕರ ಅವರು ಉತ್ಪಾದಿಸುತ್ತಿರುವ ಜೇನು ಉತ್ತಮ ಗುಣಮಟ್ಟದಿಂದ ಕೂಡಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯನ್ನು ಹೊಂದಿದೆ. ಇವರು ಉತ್ಪಾದಿಸುತ್ತಿರುವ ಜೇನು ದುಬೈ ರಾಷ್ಟ್ರಕ್ಕೆ ರಫ್ತಾಗುತ್ತಿದ್ದು ಹೆಚ್ಚಿನ ಆದಾಯ ಲಭಿಸುತ್ತಿದೆ. ಜೇನು ಶುದ್ಧವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.

ತಲಕಾವೇರಿ ವ್ಯಾಪ್ತಿಯಲ್ಲಿ ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಜೇನು ಕೆ.ಜಿಗೆ ₨ 200ರಿಂದ 300 ದರಕ್ಕೆ ಮಾರಾಟವಾಗುತ್ತಿರುವುದು ಸಮಸ್ಯೆ ತಂದೊಡ್ಡಿದೆ. ಶುದ್ಧ ಜೇನಿನ ಅರಿವಿಲ್ಲದ ಗ್ರಾಹಕರು ಕಡಿಮೆ ದರದ ಜೇನು ಖರೀದಿಸಲು ಬಯಸುವುದರಿಂದ ಮಾರಾಟ ಸಮಸ್ಯೆಯನ್ನು ಎದುರಿಸುವಂತಾಗಿದೆ ಎನ್ನುತ್ತಾರೆ ಕುಸುಮಾಕರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT