ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ಲೋಟ, ಶಿಕ್ಷಕಿಯರಿಗೆ ಕುಂಕುಮ ಭರಣಿ!

Last Updated 8 ಸೆಪ್ಟೆಂಬರ್ 2017, 8:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕಾದ ‘ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮವನ್ನು ಕಳೆದ ಎರಡು ವರ್ಷಗಳಿಂದ ನಗರದಿಂದ ಸುಮಾರು 15 ಕಿ.ಮೀ ದೂರದ ಪೆರೇಸಂದ್ರ ಕ್ರಾಸ್‌ನಲ್ಲಿರುವ ಶಾಸಕ ಡಾ.ಕೆ.ಸುಧಾಕರ್ ಅವರ ಒಡೆತನದ ಖಾಸಗಿ ಶಾಲೆಯಲ್ಲಿ ಆಯೋಜಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

ಇತ್ತೀಚೆಗಷ್ಟೇ ಪೆರೇಸಂದ್ರ ಕ್ರಾಸ್‌ನಲ್ಲಿರುವ ಶಾಂತಾ ವಿದ್ಯಾನಿಕೇತನ ಸಂಸ್ಥೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕಿನಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸುಮಾರು 2,000 ಶಿಕ್ಷಕರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರಿಗೆ ಬೆಳ್ಳಿ ಲೋಟ, ಶಿಕ್ಷಕಿಯರಿಗೆ ಬೆಳ್ಳಿ ಕುಂಕುಮ ಭರಣಿ ಶಾಸಕರ ಕಾಣಿಕೆಯಾಗಿ ನೀಡಲಾಗಿದೆ.

ಶಾಸಕರ ಈ ನಡೆ ಕುರಿತು ಸಾರ್ವಜನಿಕ ವಲಯದಲ್ಲಿ ‘ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಶಾಸಕ ಸುಧಾಕರ್‌ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಶಿಕ್ಷಕರನ್ನು ತಮ್ಮ ಮತ ಬ್ಯಾಂಕ್‌ ಆಗಿ ಬದಲಾಯಿಸಿಕೊಳ್ಳಲು ಇಂತಹ ತಂತ್ರ ಹೂಡುತ್ತಿದ್ದಾರೆ’ ಎಂದು ಮಾತುಗಳು ಹರಿದಾಡುತ್ತಿವೆ.

‘ರಾಜ್ಯದಲ್ಲಿ ದಿನೇ ದಿನೇ ಸರ್ಕಾರಿ ಶಾಲೆಗಳು ಬೀಗ ಹಾಕುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಖಾಸಗಿ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶಿಕ್ಷಕರು ಕಡ್ಡಾಯವಾಗಿ ಹಾಜರಾಗಬೇಕು ಎಂದು ನೋಟಿಸ್‌ ನೀಡುವ ಔಚಿತ್ಯವೇನು? ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿರಬೇಕೋ ಅಥವಾ ಅದ್ಧೂರಿಯಾಗಿರಬೇಕೋ ಎನ್ನುವುದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಸಕರು ಉತ್ತರಿಸಲಿ’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

‘ಶಿಕ್ಷಕ ದಿನಾಚರಣೆ ಜಿಲ್ಲಾ ಕೇಂದ್ರದಲ್ಲಿ ಆಚರಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಕಳೆದ ಎರಡು ವರ್ಷಗಳಿಂದ ಶಾಸಕರು ಶಿಕ್ಷಣ ಇಲಾಖೆ ಮತ್ತು ಶಿಕ್ಷಕರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬ ಭ್ರಷ್ಟನಾದರೆ ಆತ ಇರುವ ಇಲಾಖೆ ಮಾತ್ರ ಕೆಡುತ್ತದೆ. ಶಿಕ್ಷಕನೊಬ್ಬ ಭ್ರಷ್ಟನಾದರೆ ಎಲ್ಲ ಇಲಾಖೆಗಳು ಕೆಡುತ್ತವೆ’ ಎಂದು ಸಾಮಾಜಿಕ ಹೋರಾಟಗಾರ ಯಲುವಹಳ್ಳಿ ಸೊಣ್ಣೇಗೌಡ ತಿಳಿಸಿದರು.

‘ರಾಜ್ಯದಲ್ಲಿ ಕಳೆದ ಏಳು ವರ್ಷಗಳಲ್ಲಿ 1,782 ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇತ್ತೀಚೆಗಷ್ಟೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ.ಸರ್ಕಾರಿ ಶಾಲೆಗಳಿಗೆ ಏಕೆ ಇಂತಹ ಸ್ಥಿತಿ ಬಂತು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಶಿಕ್ಷಕರೇ ಖಾಸಗಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಿ ಸಂಭ್ರಮಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಪ್ರತಿಯೊಬ್ಬ ಶಿಕ್ಷಕರಿಗೂ ಶಾಸಕರು ಸುಮಾರು ₹ 3 ರಿಂದ ₹ 4 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳ ಕಾಣಿಕೆ ನೀಡಿದ್ದಾರೆ. ಇದರ ಮೊತ್ತವೇ ಸುಮಾರು ₹ 50 ಲಕ್ಷದ ಗಡಿ ದಾಟುತ್ತದೆ. ಶಿಕ್ಷಕರ ದಿನಾಚರಣೆಗಾಗಿಯೇ ಶಾಸಕರೊಬ್ಬರು ಇಷ್ಟೊಂದು ಖರ್ಚು ಮಾಡುತ್ತಾರೆ ಎಂದರೆ ನಂಬಬೇಕೆ? ಇದರಲ್ಲಿ ರಾಜಕೀಯ ಲೆಕ್ಕಾಚಾರ ಅಡಗಿದೆ. ಉಡುಗೊರೆ ಕೊಟ್ಟು ಶಿಕ್ಷಕರನ್ನು ಬುಟ್ಟಿಗೆ ಹಾಕಿಕೊಳ್ಳುವ ಹುನ್ನಾರವಿದು’ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ತಿಳಿಸಿದರು.

‘ಪೂರ್ವಭಾವಿ ಸಭೆಯಲ್ಲಿ ನಾವು ಜಿಲ್ಲಾ ಕೇಂದ್ರದಲ್ಲಿಯೇ ಕಾರ್ಯಕ್ರಮ ಮಾಡೋಣ ಎಂದು ಶಾಸಕರಿಗೆ ಹೇಳಿದರೆ ಅದಕ್ಕೆ ಅವರು ಒಪ್ಪಲಿಲ್ಲ. ನಮ್ಮ ಶಾಲೆಯಲ್ಲಿಯೇ ಮಾಡಬೇಕು ಎಂದು ಹೇಳಿದರು. ಅದಕ್ಕೆ ಸಭೆಯಲ್ಲಿದ್ದ ಎಲ್ಲರೂ ಒಪ್ಪಿಗೆ ಸೂಚಿಸಿದರು. ಬಿಇಒ, ಡಿಡಿಪಿಐ ಮನಸು ಮಾಡಿದರೆ ನಗರದಲ್ಲಿಯೇ ಕಾರ್ಯಕ್ರಮ ಆಯೋಜಿಸಬಹುದಿತ್ತು. ಆದರೆ ನಮ್ಮ ಅಧಿಕಾರಿಗಳು ತುಟಿ ಬಿಚ್ಚುವುದಿಲ್ಲ. ಕಾರ್ಯಕ್ರಮದಲ್ಲಿ ಶಾಸಕರು ಕಾಣಿಕೆ ಕೊಟ್ಟಿದ್ದು ನಿಜ’ ಎಂದು ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಹೇಳಿದರು.

‘ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಇಲಾಖೆ ಕಡೆಯಿಂದ ₹ 15 ಸಾವಿರ ಅನುದಾನ ನೀಡಲಾಗುತ್ತದೆ. ಇಷ್ಟು ವರ್ಷಗಳ ಕಾಲ ಅದರಲ್ಲಿಯೇ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಇತ್ತೀಚೆಗೆ ಶಿಕ್ಷಕರ ಸಂಘದವರೇ ಶಾಸಕರಿಗೆ ಕಾರ್ಯಕ್ರಮ ನಡೆಸುವಂತೆ ದುಂಬಾಲು ಬೀಳುತ್ತಿದ್ದಾರೆ. ಹೀಗಾಗಿ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದು ಹಾಲು ಅನ್ನ ಎನ್ನುವ ಗಾದೆಯಂತಾಗಿದೆ ಸದ್ಯದ ಸ್ಥಿತಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT