ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘದಿಂದ ರಸ್ತೆ ತಡೆದು ಧರಣಿ

Last Updated 8 ಸೆಪ್ಟೆಂಬರ್ 2017, 8:53 IST
ಅಕ್ಷರ ಗಾತ್ರ

ಕೋಲಾರ: ರಾಷ್ಟ್ರೀಯ ಹೆದ್ದಾರಿ 75ರ ನಿರ್ಮಾಣಕ್ಕೆ ಭೂಮಿ ಬಿಟ್ಟುಕೊಟ್ಟಿರುವ ರೈತರಿಗೆ ಪರಿಹಾರಧನ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ನಗರದ ಹೊರವಲಯದ ಕೆಂದಟ್ಟಿ ಗೇಟ್‌ ಬಳಿ ಗುರುವಾರ ರಸ್ತೆ ತಡೆ ಮಾಡಿ ಧರಣಿ ನಡೆಸಿದರು.

ಲ್ಯಾಂಕೊ ಕಂಪೆನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿ ನಿರ್ಮಾಣಕ್ಕೆ 2005ರಲ್ಲಿ ಜಿಲ್ಲೆಯ ಸುಮಾರು 1,500 ರೈತರ ಕೃಷಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದರು. ಆದರೆ, ಈವರೆಗೆ ಅರ್ಧದಷ್ಟು ರೈತರಿಗೆ ಮಾತ್ರ ಭೂಪರಿಹಾರ ಕೊಡಲಾಗಿದೆ. ಉಳಿದ ರೈತರು ಪರಿಹಾರಕ್ಕೆ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವಂತಾಗಿದೆ ಎಂದು ಧರಣಿನಿರತರು ಸರ್ಕಾರದ ಭೂತ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ಹೆದ್ದಾರಿಗೆ ರೈತರ ಕೃಷಿ ಭೂಮಿ ಸ್ವಾಧೀನಪಡಿಸಿಕೊಂಡು 13 ವರ್ಷ ಕಳೆದಿದೆ. ಡಿ.ಕೆ.ರವಿ ಅವರು 2014ರಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಎಕರೆಗೆ ₹ 25 ಲಕ್ಷ ಭೂಪರಿಹಾರ ಮತ್ತು ಪರಿಹಾರ ನೀಡಲು ವಿಳಂಬವಾಗಿದ್ದಕ್ಕೆ ಶೇ 9ರಷ್ಟು ಬಡ್ಡಿ ಕೊಡುವಂತೆ ಆದೇಶಿಸಿದ್ದರು. ಆದರೆ, ಲ್ಯಾಂಕೊ ಕಂಪೆನಿಯವರು ಈ ಆದೇಶದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಪರಿಹಾರ ಕೊಡದೆ ರೈತರನ್ನು ಸತಾಯಿಸುತ್ತಿದ್ದಾರೆ’ ಎಂದು ದೂರಿದರು.

ಭೂಮಿ ಕಳೆದುಕೊಂಡಿರುವ ರೈತರು ಪರಿಹಾರ ಸಿಗದೆ ಬೀದಿ ಪಾಲಾಗಿದ್ದಾರೆ. ಜೀವನ ನಿರ್ವಹಣೆಗೆ ತೀವ್ರ ಸಮಸ್ಯೆಯಾಗಿದ್ದು, ಜಿಲ್ಲಾಡಳಿತ ಸಂತ್ರಸ್ತ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಲ್ಯಾಂಕೊ ಕಂಪೆನಿಯವರು ಪರಿಹಾರ ಮೊತ್ತ ಕಡಿಮೆ ಮಾಡುವಂತೆ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದಾರೆ. ಭೂಮಿ ಇಲ್ಲದೆ, ಪರಿಹಾರವೂ ಸಿಗದೆ ರೈತರು ಅತಂತ್ರರಾಗಿದ್ದಾರೆ ಎಂದು ಹೇಳಿದರು.

ಧ್ವನಿ ಎತ್ತುತ್ತಿಲ್ಲ: ಲ್ಯಾಂಕೊ ಕಂಪೆನಿಯವರು ಸಂಪೂರ್ಣವಾಗಿ ರಸ್ತೆ ನಿರ್ಮಾಣ ಮಾಡದೆ ಟೋಲ್‌ ಸಂಗ್ರಹಿಸುತ್ತಾ ಹಗಲು ದರೋಡೆ ಮಾಡುತ್ತಿದ್ದಾರೆ. ಆದರೆ, ಸಂತ್ರಸ್ತ ರೈತರಿಗೆ ಪರಿಹಾರ ಮಾತ್ರ ಕೊಟ್ಟಿಲ್ಲ. ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಜಿಲ್ಲಾಡಳಿತವು ಲ್ಯಾಂಕೊ ಕಂಪೆನಿಯಿಂದ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ಧರಣಿನಿರತರು ಆರೋಪಿಸಿದರು.

ಯಾವುದೇ ಕಾರಣಕ್ಕೂ ಭೂಪರಿಹಾರ ಮೊತ್ತ ಕಡಿಮೆ ಮಾಡಬಾರದು. ಈ ಹಿಂದೆ ನಿಗದಿಯಾದ ಪ್ರಮಾಣದಲ್ಲೇ ಪರಿಹಾರ ಕೊಡಬೇಕು. ಲ್ಯಾಂಕೊ ಕಂಪೆನಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಧರಣಿಯ ವಿಷಯ ತಿಳಿದು ಸ್ಥಳಕ್ಕೆ ಬಂದ ತಹಶೀಲ್ದಾರ್‌ ವಿಜಯಣ್ಣ, 15 ದಿನದೊಳಗೆ ಪರಿಹಾರ ಕೊಡಿಸುವ ಭರವಸೆ ನೀಡಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹರಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ರಾಮಚಂದ್ರಪ್ಪ, ಸದಸ್ಯರಾದ ಉಮಾಗೌಡ, ವೆಂಕಟೇಶಪ್ಪ, ಚಂದ್ರಪ್ಪ ಹಾಗೂ ಸಂತ್ರಸ್ತ ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT