ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಹೆಬ್ರಿ ತಾಲ್ಲೂಕು ಘೋಷಣೆ

Last Updated 8 ಸೆಪ್ಟೆಂಬರ್ 2017, 9:14 IST
ಅಕ್ಷರ ಗಾತ್ರ

ಹೆಬ್ರಿ: ಹೆಬ್ರಿ ಜನತೆಯ 50 ವರ್ಷಗಳ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ಈ ಮೂಲಕ ತಾಲ್ಲೂಕು ಹೋರಾಟದ ಕಡತಗಳಿಗೆ ಮುಕ್ತಿ ದೊರೆ ತಿದೆ. ಹೆಬ್ರಿ ತಾಲ್ಲೂಕು ರಚನೆ ಸಂಬಂಧ ರಾಜ್ಯ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಗುರುವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ. ಹೀಗಾಗಿ, ಹೆಬ್ರಿಯೆಲ್ಲೆಡೆ ಸಂಭ್ರಮ ಮನೆಮಾಡಿದೆ.

ಪಶ್ಚಿಮಘಟ್ಟದ ತಪ್ಪಲಲ್ಲಿ ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕೇಂದ್ರವಾಗಿರುವ ಹೆಬ್ರಿ ಮಲೆನಾಡ ವಲಯದ ಗ್ರಾಮೀಣ ಪ್ರದೇಶದ ತಾಲ್ಲೂಕಾಗಬೇಕೆನ್ನುವ ಹೋರಾಟ ರಾಜಕೀಯ ವಲಯದ ಸಹಿತ ಹಲವು ಆಯಾಮಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿತ್ತು. ಹಲವು ದಶಕಗಳ ಹಿಂದೆ ಹೆಬ್ರಿಯ ಎಚ್. ಸುಭೋದ್ ಬಲ್ಲಾಳ್ ಮತ್ತು ಬೇಳಂಜೆಯ ವಿಠ್ಠಲ ಹೆಗ್ಡೆ ಅವರ ನೇತೃತ್ವದಲ್ಲಿ ಅನೇಕರು ಹೆಬ್ರಿ ತಾಲ್ಲೂಕಿನ ಹೋರಾಟಕ್ಕೆ ನಾಂದಿ ಹಾಡಿದ್ದರು.

ತಾಲ್ಲೂಕು ರಚನೆ ಕನಸು ಗರಿಗೆ ದರುತ್ತಿರುವಾಗಲೇ ಒಮ್ಮೆ ಟಿ.ಎಂ.ಹುಂಡೇಕರ್ ನೇತೃತ್ವದ ತಾಲ್ಲೂಕು ಪುನರ್‌ ರಚನಾ ಆಯೋಗ ಮಧ್ಯರಾತ್ರಿ ಹೆಬ್ರಿಗೆ ಬಂದು, ‘ಹೆಬ್ರಿ ತಾಲ್ಲೂಕು ಅನಾ ವಶ್ಯಕ’ ಎಂದು ಶಿಫಾರಸು ಮಾಡಿತ್ತು. ಬಳಿಕ ತಾಲ್ಲೂಕಿನ ಹೋರಾಟ ತೆರೆ ಮರೆಗೆ ಸರಿದಿತ್ತು. ಮತ್ತೆ ಎಂ.ಬಿ.ಪ್ರಕಾಶ್ ನೇತೃತ್ವದ ತಾಲ್ಲೂಕು ಪುನರ್ ರಚನಾ ಸಮಿತಿ ಉಡುಪಿಗೆ ಬಂದಾಗ ಅಂದಿನ ಶಾಸಕ ಎಚ್. ಗೋಪಾಲ ಭಂಡಾರಿ ನೇತೃತ್ವದಲ್ಲಿ ಹೋರಾಟ ಸಮಿತಿ, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪ್ರಮುಖರು ಸಮಗ್ರ ದಾಖಲೆಯ ಸಹಿತ ಮನವಿ ಮಾಡಿದ್ದರು. ಸಮಿತಿಯ ಪ್ರಮುಖರು ಹೆಬ್ರಿಯ ಬಗೆಗಿನ ಅಭಿ ಪ್ರಾಯ ಮಂಡನೆಯನ್ನು ಕಂಡು ಹೆಬ್ರಿ ತಾಲ್ಲೂಕಿಗೆ ತಲೆದೂಗಿದ್ದರು.

40 ಪುಟಗಳ ವರದಿ: ಎಂ.ಬಿ.ಪ್ರಕಾಶ್ ನೇತೃತ್ವದ ಸಮಿತಿಯು ಹೆಬ್ರಿಯು ಅತ್ಯಂತ ಅಗತ್ಯವಾಗಿ ತಾಲ್ಲೂಕು ಆಗಲೇ ಬೇಕು ಎಂದು ಹೇಳಿತ್ತು. ಸಮಿತಿಯ 800 ಪುಟಗಳ ವರದಿಯಲ್ಲಿ ಸುಮಾರು 40 ಪುಟಗಳಷ್ಟು ಹೆಬ್ರಿಯ ವಿಚಾರ ಮಂಡಿಸಿ, ‘ಉಡುಪಿ ಜಿಲ್ಲೆಯಲ್ಲಿ ಮಾಡು ವುದಿದ್ದರೆ ಅದು ಹೆಬ್ರಿಯನ್ನೇ ಮಾಡಬೇಕು’ ಎಂದು ತಿಳಿಸಿದ್ದರಿಂದ ಹೋರಾಟಕ್ಕೆ ಮತ್ತೆ ಬಲ ಬಂದಿತ್ತು.

ಆದರೆ, ಜಗದೀಶ ಶೆಟ್ಟರ್ ಸರ್ಕಾರ 43 ಹೊಸ ತಾಲ್ಲೂಕು ಘೋಷಣೆ ಮಾಡಿ ಹೆಬ್ರಿಯನ್ನು ಕೈ ಬಿಟ್ಟಿತು. ನಿರಾಸೆ ನಡುವೆ ಹೆಬ್ರಿ ಜನತೆ ದೊಡ್ಡ ಮಟ್ಟದ ಹೋರಾಟ ಮಾಡಿದರು. ಶಾಸಕರಾಗಿದ್ದ ಗೋಪಾಲ ಭಂಡಾರಿ ಮತ್ತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ವಿಧಾನಸಭೆಯ ಒಳಗೆ ಹೊರಗೆ ಬಿರುಸಿನ ಹೋರಾಟಕ್ಕೆ ನಾಂದಿ ಹಾಡಿದರು. ತಾಲ್ಲೂಕು ರಚನೆ ಸಂಬಂಧ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ನಿರ್ಣಯ ಕೈಗೊಳ್ಳಲಾಗಿತ್ತು.

ಬದಲಾದ ಹೊಸ ನಿರೀಕ್ಷೆ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಹೊಸ ನಿರೀಕ್ಷೆಗಳು ಹುಟ್ಟಿಕೊಂಡವು. ಉಸ್ತು ವಾರಿ ಸಚಿವರ ಮೂಲಕ ಕಂದಾಯ ಸಚಿವರಿಗೆ, ಮುಖ್ಯಮಂತ್ರಿಗೆ ಮತ್ತೆ ಮತ್ತೆ ಮನವಿ ಸಲ್ಲಿಸಲಾಯಿತು. ನೀರೆ ಕೃಷ್ಣ ಶೆಟ್ಟಿ, ಭಾಸ್ಕರ ಜೋಯಿಸ್ ಮುಂ ದಾಳತ್ವದ ತಾಲ್ಲೂಕು ಹೋರಾಟ ಸಮಿ ತಿಯು ನಿರಂತರ ಮನವಿ ಸಲ್ಲಿಸುತ್ತ ಬಂತು. ಹೋರಾಟಗಳು ರಾಜಕೀಯದ ಬಣ್ಣ ಪಡೆದು ‘ಚುನಾವಣಾ ಟ್ರಂಪ್’ ಕಾರ್ಡಾಗಿ ಬಳಕೆಯಾಯಿತು. ಈ ನಡುವೆ ಹುಟ್ಟಿಕೊಂಡ ಶಾಸಕ ಸುನೀಲ್ ಕುಮಾರ್ ನೇತೃತ್ವದ ಸಮಾನ ಮನಸ್ಕ ಹೆಬ್ರಿ ತಾಲ್ಲೂಕು ಹೋರಾಟ ಸಮಿತಿಯೂ ಹೆಬ್ರಿ ತಾಲ್ಲೂಕಿಗೆ ಒತ್ತಾಯಿಸಿತು.

ನಿರಾಸೆ– ಪ್ರತಿಭಟನೆ: ವೀರಪ್ಪ ಮೊಯಿಲಿ ಅವರ ಶಿಫಾರಸಿನಂತೆ ಕಳೆದ ಬಟೆಟಿನಲ್ಲಿ ಹೆಬ್ರಿ ತಾಲ್ಲೂಕು ಘೋಷಣೆ ಇನ್ನೇನು ಆಗಿಯೇ ಬಿಟ್ಟಿತು ಎನ್ನುವಾಗ ಕೊನೆಯ ಗಳಿಗೆಯಲ್ಲಿ ಉಡುಪಿ ಜಿಲ್ಲೆಯ ಹಲವು ನಾಯಕರ ಕ್ಷೇತ್ರ ರಾಜಕೀಯದ ಒತ್ತಾಸೆಯಿಂದಾಗಿ ಹೆಬ್ರಿಯನ್ನು ಬಲಿ ಕೊಡಲಾಯಿತು. ಈ ಘಟನೆ ಹೆಬ್ರಿ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೂ ಕಾರಣವಾಯಿತು.

ಹೋರಾಟಗಳು ನಡೆದವು, ಹೋರಾಟ ಸಮಿತಿ ನಿರಾಸೆಯಿಂದ ಮೌನ ವಹಿಸಿತು. ತಾಲ್ಲೂಕು ಕೈತಪ್ಪಿದ ನೋವಿನಿಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ನೀರೆ ಕೃಷ್ಣ ಶೆಟ್ಟಿ ರಾಜೀನಾಮೆ ನೀಡಿದರು. ಬಿಜೆಪಿ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು. ಶಾಸಕ ಸುನೀಲ್ ಕುಮಾರ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ತಾಲ್ಲೂಕು ರಚನೆಯ ಅಗತ್ಯದ ಬಗ್ಗೆ ಮನವರಿಕೆ ಮಾಡಿದ್ದರು.

ಕೊನೆಗೂ ಅಸ್ತು: ಸರ್ಕಾರದ ತೀರ್ಮಾನ ದಿಂದ ಮುಜುಗರ ಅನುಭವಿಸಿದ ಗೋಪಾಲ ಭಂಡಾರಿ ಅವರು ವೀರಪ್ಪ ಮೊಯಿಲಿ ಅವರಲ್ಲಿ ದುಂಬಾಲು ಬಿದ್ದು  ತಾಲ್ಲೂಕು ರಚನೆಗೆ ಹಟ ತೊಟ್ಟರು. ಮತ್ತೆ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಂದಾಯ ಸಚಿವರ ಸಹಿತ ಹಲವರಿಗೆ ಮನವಿ ಮಾಡುತ್ತಾ ಬಂದರು. ಕೊನೆಗೂ ಬಹುಕಾಲದ ಕನಸು ನನಸಾಗಿದೆ. ಸರ್ಕಾರ ಹೆಬ್ರಿ ತಾಲ್ಲೂಕಿಗೆ ಅಸ್ತು ಎಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT