ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆಗೆ ಮೂಲಸೌಕರ್ಯ ಮರೀಚಿಕೆ

Last Updated 8 ಸೆಪ್ಟೆಂಬರ್ 2017, 9:31 IST
ಅಕ್ಷರ ಗಾತ್ರ

ಹೊಸದುರ್ಗ: ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ಥಾಪಿಸಿರುವ ಗೋಶಾಲೆಯಲ್ಲಿ ಜಾನುವಾರಿಗೆ ಹಾಗೂ ರೈತರಿಗೆ ಕುಡಿಯುವ ನೀರು, ಶೌಚಾಲಯ, ಸಮರ್ಪಕ ಮೇವಿನ ವ್ಯವಸ್ಥೆ ಕಲ್ಪಿಸದೆ ಇರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರಜಾವಾಣಿ’ ಪ್ರತಿನಿಧಿ ಗೋಶಾಲೆಗೆ ಭೇಟಿ ನೀಡಿದ್ದಾಗ ಅಲ್ಲಿದ್ದ ರೈತರು ಸಮಸ್ಯೆ ತಿಳಿಸಿದರು. ಸಾವಿರಕ್ಕೂ ಅಧಿಕ ಜಾನುವಾರು ಇದ್ದು ಕುಡಿಯಲು ಶುದ್ಧ ನೀರಿಲ್ಲ. ಇಲ್ಲಿರುವ ನೀರಿನ ತೊಟ್ಟಿಗಳು ಶುಚಿತ್ವ ಕಾಪಾಡಿಲ್ಲ. ಕಸ, ಕಡ್ಡಿ, ಮಣ್ಣು ತುಂಬಿಕೊಂಡಿದೆ. ಕೊಳಚೆ ನೀರನ್ನು ಜಾನುವಾರಿಗೆ ಕುಡಿಸಬೇಕಿದೆ.

ತೊಟ್ಟಿ ಹಾಳಾಗಿದ್ದು, ನೀರು ಸೋರಿಕೆ ಆಗುತ್ತಿದೆ. ಸರಿಪಡಿಸಿ ಎಂದು ಎರಡು ದಿನಗಳ ಹಿಂದೆ ತಹಶೀಲ್ದಾರ್‌ಗೆ ತಿಳಿಸಿದ್ದರೂ ಏನು ಕ್ರಮ ಕೈಗೊಂಡಿಲ್ಲ. ಇದರಿಂದ ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತ ಸಂಘದ ಮುಖಂಡರಾದ ಕಂಗುವಳ್ಳಿ ಮಹೇಶ್ವರಪ್ಪ, ಗಂಗಾಧರಪ್ಪ.

ಪ್ರತಿ ರಾಸಿಗೆ ದಿನಕ್ಕೆ 10 ಕೆ.ಜಿ ಮೇವು ಕೊಡುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ವಾಸ್ತವದಲ್ಲಿ ಆ ನಿಯಮ ಪಾಲನೆ ಆಗುತ್ತಿಲ್ಲ. ಮಂಗಳವಾರ ಬೆಳಿಗ್ಗೆ ಒಂದು ರಾಸಿಗೆ ಕೇವಲ 8 ಕೆ.ಜಿ ಮೆಕ್ಕೆಜೋಳದ ಸೆಪ್ಪೆ ಕೊಟ್ಟವರು ಬುಧವಾರ ಮಧ್ಯಾಹ್ನ 12 ಗಂಟೆಯಾದರೂ ಒಂದು ಹಿಡಿ ಮೇವನ್ನು ಕೊಟ್ಟಿಲ್ಲ.

ಜಾನುವಾರಿಗೆ ಸಮರ್ಪಕವಾಗಿ ಮೇವು ಸಿಗದಿರುವುದರಿಂದ ಬಡಕಲಾಗುತ್ತಿವೆ. ಕೆಲವು ರೈತರು ಜಾನುವಾರು ಉಳಿಸಿಕೊಳ್ಳಲು ಗುಡ್ಡಕ್ಕೆ ಹೋಗಿ ಹುಲ್ಲು ತಂದು ಹಾಕುತ್ತಿದ್ದಾರೆ. ಅಧಿಕಾರಿಗಳು ಮನಸ್ಸಿಗೆ ಬಂದಾಗ ಮೇವು ವಿತರಿಸಿ ಹೋಗುತ್ತಾರೆ. ರಾತ್ರಿ ಇಡೀ ಇಲ್ಲೇ ಇರುವ ಜಾನುವಾರಿಗೆ 8 ಕೆ.ಜಿ. ಹಸಿಸೆಪ್ಪೆ ಸಾಕಾಗುವುದಿಲ್ಲ.

ನಿಯಮ ಪಾಲನೆಯೂ ಆಗುತ್ತಿಲ್ಲ. ಮೂರ್ನಾಲ್ಕು ದಿನ ಸಂಗ್ರಹಿಸಿಟ್ಟಿರುವ ಸೆಪ್ಪೆ ಕೊಟ್ಟರೆ ಅದನ್ನು ಜಾನುವಾರು ತಿನ್ನುವುದಿಲ್ಲ ಎನ್ನುತ್ತಾರೆ ರೈತರಾದ ದೇವರಾಜು, ಭೈರೇಶ್‌, ತಿಮ್ಮಪ್ಪ, ಸಿದ್ದಪ್ಪ.

‘ಗೋಶಾಲೆ ಶುಚಿತ್ವ ಕಾಪಾಡಲು ತಾಲ್ಲೂಕು ಆಡಳಿತದಿಂದ ಒಬ್ಬ ಸಿಬ್ಬಂದಿಯೂ ಇಲ್ಲಿ ಇರುವುದಿಲ್ಲ. ತಹಶೀಲ್ದಾರ್‌ ಬಂದಾಗ ಅವರ ಹಿಂದೆ ಬರುತ್ತಾರೆ ಅಷ್ಟೆ. ನಾವು ಒಂದು ಕಡೆ ಹಾಕಿರುವ ಸಗಣಿಯನ್ನು ಎತ್ತಿ ಹಾಕುತ್ತಿಲ್ಲ. ಇದರಿಂದ ನೊಣಗಳ ಕಾಟ ಹೆಚ್ಚಾಗುತ್ತಿದೆ. ನಾವೂ ಕುಡಿಯುವ ನೀರು ಹಾಗೂ ಶೌಚಾಲಯಕ್ಕೆ ದೂರ ಹೋಗಬೇಕು. ಹಳ್ಳಿಯವರಾದ ನಮಗೆ ಎಲ್ಲಿಗೆ ಹೋಗಬೇಕು ಎಂದು ತಿಳಿಯುತ್ತಿಲ್ಲ’ ಎನ್ನುತ್ತಾರೆ ಚಂದ್ರಪ್ಪ, ಓಂಕಾರಪ್ಪ.

ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳು ಗೋಶಾಲೆಯ ಅಗತ್ಯಗಳನ್ನು ಪೂರೈಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT