ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬನೆಗೆ ಟಿಕೆಎಂ ಯೋಜನೆ

Last Updated 8 ಸೆಪ್ಟೆಂಬರ್ 2017, 9:54 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ನೀರು ಮತ್ತು ವಿದ್ಯುತ್‌ ಶಕ್ತಿಯ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸುವ ದಿಸೆಯಲ್ಲಿ ಇಲ್ಲಿನ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ (ಟಿಕೆಎಂ) ಕಂಪೆನಿಯು ಹೆಜ್ಜೆ ಇಟ್ಟಿದೆ. ಬೃಹತ್ತಾದ ಕೊಳ ನಿರ್ಮಾಣದ ಮೂಲಕ ಮಳೆಯ ನೀರನ್ನು ಹಿಡಿದಿಡುವ ಪ್ರಯತ್ನ ಇಲ್ಲಿ ನಡೆದಿದೆ. ಅಂತೆಯೇ ದೊಡ್ಡದಾದ ಕಟ್ಟಡಗಳ ಮೇಲ್ಛಾವಣಿಗಳಲ್ಲಿ ದೊಡ್ಡ ಸೌರ ವಿದ್ಯುತ್‌ ಕೋಶವನ್ನು ಅಳವಡಿಸುವ ಮೂಲಕ ವಿದ್ಯುತ್‌ ಉತ್ಪಾದನೆಗೂ ಮುಂದಾಗಿದೆ. ಈ ಮೂಲಕ 2050 ಒಳಗೆ ಸಂಪೂರ್ಣ ಕಾರ್ಬನ್ ಮುಕ್ತ, ಪರಿಸರಸ್ನೇಹಿ ವಾತಾವರಣ ಕಲ್ಪಿಸುವ ಗುರಿ ಹೊಂದಲಾಗಿದೆ.

423 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಇರುವ ಕಂಪೆನಿಯ ಆವರಣದಲ್ಲಿ ಕೈಗೊಳ್ಳಲಾಗುತ್ತಿರುವ ಹೊಸ ಬಗೆಯ ಪ್ರಯತ್ನಗಳ ಕುರಿತು ಕಂಪೆನಿಯ ಉಪಾಧ್ಯಕ್ಷ ರಾಜು ಕೇತ್ಕಲೆ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ‘ಕೆಲವು ವರ್ಷಗಳ ಕಂಪೆನಿಯು ನಿತ್ಯ ಸುಮಾರು 6 ಎಂಎಲ್‌ಡಿಯಷ್ಟು ಕಾವೇರಿ ನೀರನ್ನು ಬಳಸಿಕೊಳ್ಳುತ್ತಿತ್ತು. ಈಗ ಅದರ ಪ್ರಮಾಣವು ದಿನಕ್ಕೆ 0.8 ಎಂಎಲ್‌ಡಿಯಷ್ಟು ಆಗಿದೆ. ಶೇ 96ರಷ್ಟು ನೀರನ್ನು ಪುನರ್‌ಬಳಕೆ ಮಾಡಿಕೊಳ್ಳಲಾಗುತ್ತಿದೆ ’ ಎಂದು ಅವರು ವಿವರಿಸಿದರು.

ತ್ಯಾಜ್ಯ ನೀರು ಶುದ್ಧೀಕರಣ ಘಟಕ: ಉತ್ಪಾದನಾ ಘಟಕದ ವಿವಿಧ ಹಂತಗಳಲ್ಲಿ ಬಳಕೆಯಾಗಿ ಉಳಿಯುವ ನೀರನ್ನು ಸಂಸ್ಕರಿಸುವ ಘಟಕವು ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಸಂಸ್ಕರಿತವಾದ ನೀರಿನ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಗುಣಮಟ್ಟದ ನೀರನ್ನು ಪುನರ್‌ಬಳಕೆ ಮಾಡಲಾಗುತ್ತಿದೆ. ಉಳಿದ ನೀರನ್ನು ಗಿಡಗಳಿಗೆ ಹಾಗೂ ಶೌಚಾಲಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಈ ನೀರು ಸಂಸ್ಕರಣೆಯ ಪ್ರಕ್ರಿಯೆಯ ಸಂದರ್ಭ ಸಂಗ್ರಹವಾಗುವ ರಾಸಾಯನಿಕವನ್ನೂ ಸಂಗ್ರಹಿಸಿ ಒಣಗಿಸಲು ಪ್ರತ್ಯೇಕ ಘಟಕ ನಿರ್ಮಿಸಲಾಗಿದೆ. ಹೀಗೆ ಒಣಗಿದ ರಾಸಾಯನಿಕವನ್ನು ಚೀಲಗಳಲ್ಲಿ ತುಂಬಿ ಸಿಮೆಂಟ್‌ ಕಾರ್ಖಾನೆಗಳಿಗೆ ನೀಡಲಾಗುತ್ತಿದೆ. ಇದಲ್ಲದೆ ಎರೆಹುಳು ಗೊಬ್ಬರ ಉತ್ಪಾದನೆಯೂ ಪ್ರಗತಿಯಲ್ಲಿ ಇದ್ದು, ಅಂತೆಯೇ ಉತ್ಪಾದನೆಯ ಪ್ರತಿ ಹಂತದಲ್ಲಿನ ತ್ಯಾಜ್ಯವನ್ನು ಸಂಸ್ಕರಿಸಿ, ಮರು ಬಳಕೆಗೆ ಉತ್ತೇಜಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಸೌರ ವಿದ್ಯುತ್‌ ಉತ್ಪಾದನೆ: ಕಂಪೆನಿಯ ಕಟ್ಟಡದ ಮೇಲೆ, ಖಾಲಿ ಜಾಗಗಳಲ್ಲಿ ಸೌರ ಕೋಶಗಳನ್ನು ಅಳವಡಿಸಿದ್ದು, ಸದ್ಯ ಒಟ್ಟು ಬಳಕೆಯ ಶೇ 39ರಷ್ಟು ವಿದ್ಯುತ್ ಅನ್ನು ಇಲ್ಲಿನ ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಪಡೆಯಲಾಗುತ್ತಿದೆ. ಒಟ್ಟು 2.5 ಮೆಗಾವ್ಯಾಟ್‌ನಷ್ಟು ಸೌರ ವಿದ್ಯುತ್‌ ಉತ್ಪಾದನಾ ಘಟಕವನ್ನು ಇಲ್ಲಿ ಸ್ಥಾಪಿಸಲಾಗಿದೆ. ಇದಲ್ಲದೆ ಅಕ್ಟೋಬರ್‌ ವೇಳೆಗೆ 20 ಮೆಗಾ ವ್ಯಾಟ್‌ನಷ್ಟು ಸೌರಶಕ್ತಿ ವಿದ್ಯುತ್‌ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜು ತಿಳಿಸಿದರು.

ಮಳೆನೀರು ಕೊಯ್ಲು: ಇಡೀ ಕ್ಯಾಂಪಸ್‌ನಲ್ಲಿ ಬೀಳುವ ಮಳೆಯ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ 14,500 ಚದರ ಮೀಟರ್ ವಿಸ್ತೀರ್ಣದಲ್ಲಿ ಬೃಹತ್ ಆದ ಕೊಳ ನಿರ್ಮಿಸಲಾಗಿದ್ದು, 5 ಮೀಟರ್‌ನಷ್ಟು ಆಳದವರೆಗೆಗೂ ನೀರು ಸಂಗ್ರಹವಾಗಿದೆ. 2.5 ಕೋಟಿ ಲೀಟರ್‌ನಷ್ಟು ನೀರು ಸಂಗ್ರಹಣಾ ಸಾಮರ್ಥ್ಯ ಇದಕ್ಕೆ ಇದೆ. ಇದನ್ನು ಸದ್ಬಳಕೆ ಮಾಡಿಕೊಂಡಿದ್ದೇ ಆದಲ್ಲಿ ನಿತ್ಯ ನಗರದ 10 ಸಾವಿರ ಜನರಿಗೆ ನೀರನ್ನು ಪೂರೈಕೆ ಮಾಡಬಹುದಾಗಿದೆ.
ಇದರಿಂದ ಟಿಕೆಎಂನಲ್ಲಿ ಕೆಲವು ವರ್ಷಗಳಲ್ಲಿ ಜಲ ಸ್ವಾವಲಂಬನೆ ಸಾಧ್ಯವಾಗಲಿದೆ ಎಂದು ಅವರು ವಿವರಿಸಿದರು.

‘ಸುಮಾರು ₹ 10 ಕೋಟಿ ವೆಚ್ಚದಲ್ಲಿ 20 ಎಕರೆ ಪ್ರದೇಶದಲ್ಲಿ ಪರಿಸರ ಸ್ನೇಹಿ ಪಾರ್ಕ್ ನಿರ್ಮಾಣ ಕಾಮಗಾರಿಯು ಆರಂಭಗೊಂಡಿದೆ. ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಪ್ರಯತ್ನ ಇದಾಗಿದೆ’ ಎಂದರು.

ಉದ್ಯೋಗ ಕಡಿತ ಇಲ್ಲ: ‘ಕಾರ್ಖಾನೆಯಲ್ಲಿ ಈಗಾಗಲೇ ಸುಮಾರು 300 ರೋಬೋ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಉತ್ಕೃಷ್ಟ ಗುಣಮಟ್ಟದ ಉತ್ಪಾದನೆಗೆ ಇವುಗಳ ಬಳಕೆ ಅನಿವಾರ್ಯವಾಗಲಿದೆ. ಆದರೆ ಅದರಿಂದ ಉದ್ಯೋಗ ಕಡಿತದ ಭೀತಿ ಸದ್ಯಕ್ಕೆ ಇಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾಮಾಜಿಕ ಹೊಣೆಗಾರಿಕೆ: ಟಿಕೆಎಂನ ಸಿಎಸ್‌ಆರ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಕೆ.ವಿ. ರಾಜೇಂದ್ರ ಹೆಗಡೆ ಮಾತನಾಡಿ ‘ಸಿಎಸ್‌ಆರ್‌ ನಿಧಿಯ ಅಡಿ ಬಿಡದಿ ಸುತ್ತಮುತ್ತ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವರ್ಷ ₹13.6 ಕೋಟಿಯಷ್ಟು ಹಣ ವ್ಯಯಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT