ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನನ್ನ ಕವನಗಳಿಂದ ನೋವಾಗಿದೆಯೇ?'

Last Updated 8 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

1.ನನಗೆ ಇಬ್ಬರು ಮಕ್ಕಳು. ಮಗನಿಗೆ 16 ವಯಸ್ಸು ಹಾಗೂ ಮಗಳಿಗೆ 12 ವರ್ಷ. ಮಗಳಿಗೆ ಹಸಿವಿನ ಸಮಸ್ಯೆ ಇದೆ. ಆಗಾಗ ಅವಳು ಹಸಿವು ಎನ್ನುತ್ತಿರುತ್ತಾಳೆ. ಕಾರಣವಿಲ್ಲದೆ ಅಳುತ್ತಾಳೆ. ನಾನು ಯಾವಾಗಲೂ ಜೊತೆಗೆ ಇರಬೇಕು ಎನ್ನುತ್ತಾಳೆ. ನಾನು ಶಿಕ್ಷಕಿ. ಆ ಕಾರಣಕ್ಕೆ ಶಾಲೆ ಮುಗಿದೆ ಮೇಲೆ ಅವಳನ್ನು ಕರೆ ತರಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಅವಳು ನನ್ನ ತಂದೆ–ತಾಯಿಯರ ಜೊತೆ ಅವರ ಮನೆಯಲ್ಲಿ ಇರುತ್ತಾಳೆ. ಅವಳು ತುಂಬಾ ಸೂಕ್ಷ್ಮವಾಗಿ ವರ್ತಿಸುತ್ತಾಳೆ. ಅವಳ ಅಣ್ಣ ತಮಾಷೆ ಮಾಡುವುದನ್ನು ಗಂಭೀರವಾಗಿ ಪರಿಗಣಿಸುತ್ತಾಳೆ; ಅದಕ್ಕೆ ಗಂಭೀರ ರೀತಿಯಲ್ಲೇ ಪ್ರತಿಕ್ರಿಯಿಸುತ್ತಾಳೆ. ಅವಳು ಇನ್ನು ಮೆಚ್ಯೂರ್ ಆಗಿಲ್ಲ. ದಯವಿಟ್ಟು ಅವಳ ವರ್ತನೆಯನ್ನು ಬದಲಾಯಿಸಲು ದಾರಿ ತಿಳಿಸಿ.

ನಿಮ್ಮ ಮಗಳು ಹರೆಯಕ್ಕೆ ಕಾಲಿಡುತ್ತಿದ್ದಾಳೆ. ಈಗ ಅವಳಲ್ಲಿ ಅನೇಕ ಹಾರ್ಮೋನ್‌ಗಳ ಬದಲಾವಣೆಗಳಾಗುತ್ತಿರುತ್ತವೆ. ಈಗ ಅವಳು ತಾಯಿಯ ಬೆಚ್ಚನೆಯ ಮಡಿಲಿಗಾಗಿ ಹಾತೊರೆಯುತ್ತಿರುತ್ತಾಳೆ. ಇನ್ನು ಸ್ವಲ್ಪ ದಿನ ತಾಯಿಯ ಜೊತೆ ಇರಬೇಕು ಎಂಬ ಭಾವನೆ ಅವಳಿಗಿರುತ್ತದೆ. ಹಾಗಾಗಿ ನೀವು ಅವಳೊಂದಿಗೆ ಸ್ವಲ್ಪ ಮೌಲ್ಯಯುತ ಸಮಯವನ್ನು ಕಳೆಯಿರಿ. ಅವಳ ತಲೆಯಲ್ಲಿ ಈಗ ಸಾವಿರ ಯೋಚನೆಗಳು ಓಡುತ್ತಿರಬಹುದು. ತನ್ನ ಮನದ ಮಾತಗಳನ್ನು ಹೊರಹಾಕಬೇಕು ಎಂದು ಅನ್ನಿಸುತ್ತಿರಬಹುದು. ಅಲ್ಲದೇ, ಅವಳು ಆ ಮಾತುಗಳನ್ನು ನಿಮ್ಮೊಂದಿಗೆ ಮಾತ್ರ ಹಂಚಿಕೊಳ್ಳಲು ಸಾಧ್ಯ. ಅವಳು ಕಂರ್ಪ್‌ಟೇಬಲ್‌ ಆಗಿರುವಂತೆ ನೋಡಿಕೊಳ್ಳಿ, ಅವಳೊಂದಿಗೆ ಮಾತನಾಡಿ. ಅವಳಿಗೆ ಏನಾದರೂ ತೊಂದರೆ ಇದೆಯಾ? ಯಾರಾದರೂ ಅವಳನ್ನು ನೋಯಿಸುತ್ತಿದ್ದಾರಾ? ಗುಪ್ತಾಂಗಗಳನ್ನು ಮುಟ್ಟುವುದು, ಅವಳೊಂದಿಗೆ ಅನುಚಿತವಾಗಿ ವರ್ತಿಸುವುದು ಮಾಡುತ್ತಿದ್ದಾರಾ? – ಎಂಬುದನ್ನು ತಿಳಿದುಕೊಳ್ಳಿ. ಒಮ್ಮೆ ಅವಳಿಗೆ ತಾನು ಸುರಕ್ಷಿತವಾಗಿದ್ದೇನೆ ಎಂಬ ಭಾವನೆ ಬಂದರೆ ಅವಳು ಎಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾಳೆ. ಆಗ ಅವಳು ಸರಿಯಾಗುತ್ತಾಳೆ.

2. ನನ್ನ ಹೆಸರು ಮೇಘಾ, ನಾನು ಎಂ.ಟೆಕ್. ಓದುತ್ತಿದ್ದೇನೆ. ನನಗೆ ಜನರ ಜೊತೆ ಮಾತನಾಡಲು ಭಯವಾಗುತ್ತದೆ. ನಾನು ಚಿಕ್ಕಪುಟ್ಟ ವಿಷಯಗಳಿಗೂ ಬೇಸರಗೊಳ್ಳುತ್ತೇನೆ. ನನ್ನಲ್ಲಿ ಯಾವುದೇ ಗುರಿ ಇಲ್ಲ. ನಾನು ಗುರಿ ಇರಿಸಿಕೊಂಡರು ಆ ಗುರಿಯನ್ನು ತಲುಪಲು ನನ್ನಿಂದ ಸಾಧ್ಯವಾಗುವುದಿಲ್ಲ. 2ರಿಂದ 3 ದಿನಗಳ ಒಳಗೆ ಆ ಗುರಿಯ ಯೋಚನೆ ಬಿಟ್ಟು ಬಿಡುತ್ತೇನೆ. ನನಗೆ ಆತ್ಮವಿಶ್ವಾಸವಿಲ್ಲ. ‘ಏನೋ ಹುಟ್ಟಿದೀನಿ, ಬದುಕಬೇಕಲ್ಲ’ ಎಂದುಕೊಂಡು ಜೀವನವನ್ನು ಸಾಗಿಸುತ್ತಿದ್ದೇನೆ. ನನಗೆ ಈ ತರಹದ ಜೀವನ ಇಷ್ಟವಿಲ್ಲ. ನನಗೆ ಯಾವುದೇ ಕೆಲಸ ಮಾಡಲು ಆಸಕ್ತಿ ಇಲ್ಲ. ಯಾವಾಗಲೂ ಮಲಗಬೇಕು ಅನ್ನಿಸುತ್ತದೆ. ನನ್ನಲ್ಲಿ ಧನಾತ್ಮಕ ಯೋಚನೆಗಳೇ ಇಲ್ಲ. ನನಗೆ ನಾನು ತುಂಬಾ ಚುರುಕಾಗಬೇಕು. ಗುರಿ ಇರಿಸಿಕೊಳ್ಳವಂತಾಗಬೇಕು; ಅಲ್ಲದೇ ಆ ಗುರಿಯನ್ನು ನಾನು ತಲುಪವಂತಾಗಬೇಕು. ನನಗೆ ಸಲಹೆ ನೀಡಿ.

ನೀವು ಈ ರೀತಿಯ ಮನಃಸ್ಥಿತಿ ಇರಿಸಿಕೊಂಡು ಸ್ನಾತಕೋತ್ತರ ಪದವಿವರೆಗೆ ಬಂದಿದ್ದು ನಿಜಕ್ಕೂ ಶಾಘ್ಲನೀಯ. ಇದರ ಅರ್ಥ ನಿಮ್ಮಲ್ಲಿ ಸಾಧನೆಯ ಗುಣ ಇದೆ ಎಂದು. ಒಮ್ಮೆ ನೀವು ಕೆಲಸಕ್ಕೆ ಹೋಗಲು ಆರಂಭಿಸಿ, ಜನರೊಂದಿಗೆ ಬೆರೆತು ಮಾತನಾಡಲು ಆರಂಭಿಸಿದರೆ ಆಗ ನೀವಾಗಿ ಸಮಾಜಕ್ಕೆ ತೆರೆದುಕೊಳ್ಳುತ್ತೀರಿ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇದನ್ನು ಹೊರತುಪಡಿಸಿ ಆಲಸ್ಯದ ಮನಸ್ಸು ಮತ್ತು ದೇಹ ನಿಮ್ಮ ಆತ್ಮವಿಶ್ವಾಸ ಮತ್ತು ಜೀವನದ ಉತ್ಸಾಹವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೊರ ಬರಲು ಇರುವ ಒಂದೇ ದಾರಿಯೆಂದರೆ ಸಮತೋಲಿತ ಡಯೆಟ್ ಮತ್ತು ಏಕ್ಸ್‌ಸೈಜ್‌. ಇದು ನೀವು ನಿಮ್ಮ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ನೀವು ಯಾವಾಗಲೂ ಉತ್ಸಾಹಭರಿತರಾಗಿರುವಂತೆ ನೋಡಿಕೊಳ್ಳುತ್ತದೆ. ಆಗ ಮಾತ್ರ ನೀವು ಗುರಿ ಇರಿಸಿಕೊಂಡು, ಆ ಗುರಿಯನ್ನು ತಲುಪಲು ಸಾಧ್ಯ. ಏಕ್ಸ್‌ಸೈಜ್‌ಗಳ ಬಗ್ಗೆ ತಿಳಿದುಕೊಳ್ಳಲು ಸ್ನೇಹಿತರು ಮತ್ತು ಸಹೋದರ, ಸಹೋದರಿಯರ ಸಹಾಯ ಪಡೆಯಲು ಹಿಂದೇಟು ಹಾಕಬೇಡಿ. ಈಗಿನ ಯುವಜನತೆ ಒಲವು ತೋರುವ ಯಾವುದಾದರೂ ಹವ್ಯಾಸವನ್ನು ರೂಢಿಸಿಕೊಳ್ಳಿ. ಆ ಹವ್ಯಾಸ ನಿಮ್ಮನ್ನು ಅದರಲ್ಲಿ ತೊಡಗಿಕೊಳ್ಳುವಂತೆ ಮಾಡಿ, ಧನಾತ್ಮಕ ಯೋಚನೆ ಮನಸ್ಸಿನಲ್ಲಿ ಸುಳಿಯದಂತೆ ನೋಡಿಕೊಳ್ಳುತ್ತದೆ. ಇಂತಹ ಅಭ್ಯಾಸಗಳು ಖಂಡಿತ ನಿಮ್ಮನ್ನು ನೆಗೆಟಿವ್‌ ಮನಃಸ್ಥಿತಿಯಿಂದ ಹೊರ ಬರಲು ಸಹಾಯ ಮಾಡುತ್ತದೆ. ಇದು ನಿಮಗೆ ಸಹಾಯ ಮಾಡಿಲ್ಲವೆಂದರೆ ನೀವು ವೈಯಕ್ತಿಕವಾಗಿ ವಾರಗಳ ಕಾಲ ಆಪ್ತಸಮಾಲೋಚಕರನ್ನು ಕಾಣುವುದು ಉತ್ತಮ.

4. ನನ್ನ ಹೆಸರು ಶಾಂತ್‌ರಾಜ್‌. ನನಗೆ ಮೂರು ವರ್ಷಗಳಿಂದ ಕವನಗಳು ಮತ್ತು ನುಡಿಮುತ್ತುಗಳಂತ ಸಾಲುಗಳನ್ನು ಬರೆಯುವುದು ಅಭ್ಯಾಸವಾಗಿದೆ. ಅದನ್ನು ಬರೆದ ನಂತರ ನನ್ನ ಸ್ನೇಹಿತರಿಗೆ ಕಳುಹಿಸುತ್ತೇನೆ, ಆದರೆ ಅವರು ಅದಕ್ಕೆ ಎಂದು ಪ್ರತಿಕ್ರಿಯೆ ನೀಡಿಲ್ಲ. ನನ್ನ ಕವನಗಳಿಂದ ಯಾರಿಗಾದರೂ ಬೇಜಾರು ಅಥವಾ ನೋವು ಆಗುತ್ತಿದ್ದೇಯೆ? ಅದನ್ನು ನಾನು ಹೇಗೆ ತಿಳಿದುಕೊಳ್ಳಬೇಕು? ತಿಳಿಸಿ.

ನಿಮ್ಮಲ್ಲಿರುವ ಕವನ ಬರೆಯುವ ಹವ್ಯಾಸ ನಿಜಕ್ಕೂ ಮೆಚ್ಚುವಂತಹದ್ದು. ಇಂದು ಇದು ಎಲ್ಲರೂ ಮಾಡಲು ಸಾಧ್ಯವಾಗದಂತಹ ಅಪರೂಪದ ಹವ್ಯಾಸ. ಇದು ಎಲ್ಲರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದಂತಹ ವೈಯಕ್ತಿಕ ಆಸಕ್ತಿ. ಹಾಗಾಗಿ ನೀವು ನಿಮ್ಮ ಸ್ನೇಹಿತರಿಗೆ ಅದನ್ನು ಕಳುಹಿಸಿದರೆ ಅವರು ಅದನ್ನು ಅರ್ಥಮಾಡಿಕೊಳ್ಳಬೇಕೆಂದೇನು ಇಲ್ಲ ಅಥವಾ ಅವರು ಅದನ್ನು ಓದಬೇಕಂತಲೂ ಇಲ್ಲ. ತುಂಬಾ ಕಡಿಮೆ ಮಂದಿಗೆ ಇಂದು ಕವಿತೆ ಬರೆಯುವ ಮತ್ತು ಓದುವ ಹವ್ಯಾಸವಿದೆ. ಹಾಗಾಗಿ ಯಾರು ನಿಮ್ಮ ಕವನವನ್ನು ಮೆಚ್ಚುತ್ತಾರೆ, ಮೆಚ್ಚುವುದಿಲ್ಲ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮಗೆ ಅದರ ಮೇಲೆ ಒಲವಿದೆ. ಹಾಗಾಗಿ ನೀವು ಬರೆಯವುದನ್ನು ನಿಲ್ಲಿಸಬೇಡಿ; ನಿಮ್ಮ ಕವನ ಚೆನ್ನಾಗಿಲ್ಲ ಎನ್ನಿಸಿದರೂ ಬರೆಯುವುದನ್ನು ನಿಲ್ಲಿಸಬೇಡಿ. ನೀವು ಬರೆದ ಕವನವನ್ನು ಯಾರಾದರೊಬ್ಬರು ಒಳ್ಳೆಯ ಕವಿಗೆ ತೋರಿಸಿ ಅಥವಾ ನಿಮ್ಮ ಸ್ನೇಹಿತರಲ್ಲೇ ಕವನದ ಬಗ್ಗೆ ತಿಳಿದುಕೊಂಡವರಿಗೆ ತೋರಿಸಿ. ನಿಮ್ಮ ಒಲವು ಹಾಗೂ ಆಸಕ್ತಿಯನ್ನ ಗುರುತಿಸಿ, ಪ್ರೋತ್ಸಾಹಿಸುವ ಸಮಾನಮನಸ್ಕ ಬರಹಗಾರರನ್ನು ತಂಡವನ್ನು ಸೇರಿಕೊಳ್ಳಿ. ಆನ್‌ಲೈನ್‌ನಲ್ಲಿ ಇಂತಹ ಗುಂಪುಗಳಿವೆ. ನಿಮ್ಮ ಈ ಹವ್ಯಾಸವನ್ನು ಮುಂದುವರೆಸಿ. ಅದರ ಜೊತೆ ಜೊತೆಗೆ ನೀವು ಜೀವನದಲ್ಲಿ ಇರಿಸಿಕೊಂಡ ಗುರಿಯನ್ನು ತಲುಪುವತ್ತಲೂ ನಿಮ್ಮ ಗಮನವಿರಲಿ.

*

ಸುನೀತಾ ರಾವ್‌, ಆಪ್ತ ಸಮಾಲೋಚಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT