ಸವಿರುಚಿ

ಇದು ಮಾವಿನ ಕುಚ್ಚುಕಾಯಿ ವಿಶೇಷ

ಮಲೆನಾಡಿಗರಿಗೂ ಮಾವಿನ ಕಾಯಿಗೂ ಏನೋ ಅವಿನಾಭಾವ ಸಂಬಂಧ. ಭಿನ್ನ ತಳಿಯ ಮಾವಿನಹಣ್ಣು ಹಾಗೂ ಕಾಯಿಗಳಿಗೆ ಮಲೆನಾಡು ತವರು. ಮಾವಿನಕಾಯಿ ಸೀಸನ್‌ನಲ್ಲಿ ಮಾವಿನಕಾಯಿ ದೊರಕುವುದು ಸಾಮಾನ್ಯ. ಆದರೆ ಮಾವಿನಕಾಯಿ ಸೀಸನ್ ಅಲ್ಲದ ಸಮಯದಲ್ಲೂ ಮಲೆನಾಡಿನಲ್ಲಿ ಮಾವಿನಕಾಯಿ ಖಾದ್ಯಗಳನ್ನು ತಯಾರಿಸುತ್ತಾರೆ. ಅದೇ ಕುಚ್ಚುಕಾಯಿ. ಬಲಿತ ಮಾವಿನ ಕಾಯಿಯನ್ನು ಬೇಯಿಸಿ, ಅದನ್ನು ಉಪ್ಪು ನೀರಿನಲ್ಲಿ ಹಾಕಿ ಇಡುತ್ತಾರೆ. ಅದು ಒಂದು ವರ್ಷದವರೆಗೂ ಕಡೆದೇ ಹಾಗೆ ಇರುತ್ತದೆ. ಅಲ್ಲದೇ ಇದರಿಂದ ಪಲ್ಯ, ಸಾರು, ಗೊಜ್ಜುಗಳನ್ನು ತಯಾರಿಸಿ ತಿನ್ನಬಹುದು. ಕುಚ್ಚುಕಾಯಿಯಿಂದ ತಯಾರಿಸಬಹುದಾದ ಅಡುಗೆಗಳನ್ನು ಮಾಡುವ ಬಗೆಯನ್ನು ವಿವರಿಸಿದ್ದಾರೆ, ಅರುಂಧತಿ ಎಸ್‌.

ಇದು ಮಾವಿನ ಕುಚ್ಚುಕಾಯಿ ವಿಶೇಷ

ಕುಚ್ಚುಕಾಯಿ ಪಲ್ಯ

ಬೇಕಾಗುವ ಸಾಮಗ್ರಿಗಳು: ಗಟ್ಟಿ ಮಾವಿನಕಾಯಿ ಹೋಳು – 4 (ಮಾವಿನಕಾಯಿ), ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಉಪ್ಪು, ಹಸಿಮೆಣಸಿನಕಾಯಿ, ಅರಿಶಿಣ.

ತಯಾರಿಸುವ ವಿಧಾನ: ಗಟ್ಟಿಯಾಗಿರುವ ಬೇಯಿಸಿದ ಮಾವಿನ ಕಾಯಿಯನ್ನು ಹೋಳು ಹೋಳಾಗಿ ಹೆಚ್ಚಿಕೊಳ್ಳಬೇಕು. ನಂತರ ಬಾಣಲಿಗೆ ಎಣ್ಣೆ ಹಾಕಿ ಕಾದ ಮೇಲೆ ಅರಿಶಿಣ, ಸಾಸಿವೆ, ಉದ್ದಿನ ಬೇಳೆ, ಮೆಣಸಿನಕಾಯಿಗಳನ್ನು ಹಾಕಿ ಅದು ಚಟಪಟ ಸದ್ದು ಮಾಡಿದಾಗ, ಹೆಚ್ಚಿಕೊಂಡಿಟ್ಟ ಮಾವಿನ ಕಾಯಿ ಹೋಳುಗಳನ್ನು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರನ್ನು ಬೆರೆಸದೆ ಎಣ್ಣೆಯಲ್ಲಿ ಬೇಯಿಸಬೇಕು. ಇದು ಮೊಸರನ್ನದ ಜೊತೆ ತಿನ್ನಲು ಒಳ್ಳೆಯ ಕಾಂಬಿನೇಷನ್‌.

**

ಕುಚ್ಚುಕಾಯಿ ಸಾರು

ಬೇಕಾಗುವ ಸಾಮಗ್ರಿಗಳು: ಕುಚ್ಚುಕಾಯಿ– 1–2, ಎಣ್ಣೆ, ಸಾಸಿವೆ, ಅರಿಶಿಣ, ಮೆಂತ್ಯ, ಕರಿಬೇವು, ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ, ಉಪ್ಪು.

ತಯಾರಿಸುವ ವಿಧಾನ: ನೀರಿನಲ್ಲಿ ತೊಳೆದ ಕುಚ್ಚುಕಾಯಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಹಿಚುಕಿ ರಸ ತಯಾರಿಸಿ. ನಂತರ ಬಾಣಲೆಗೆ ಎಣ್ಣೆ, ಸಾಸಿವೆ, ಅರಿಶಿಣ, ಕರಿಬೇವು, ಮೆಂತ್ಯ, ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ ಹಾಕಿ ಬಾಡಿಸಿ. ಇದಕ್ಕೆ ತಯಾರಿಸಿದ ಕುಚ್ಚುಕಾಯಿ ರಸ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಾರಿನ ಹದಕ್ಕೆ ಬೇಕಾದಷ್ಟು ನೀರನ್ನು ಹಾಕಿ ಕುದಿಸಬೇಕು. ಮಳೆಗಾಲದಲ್ಲಿ ಊಟದ ಜೊತೆ ಈ ಸಾರು ಸವಿಯುವುದೆಂದರೆ ಅದರ ಆನಂದ ಊಟ ಮಾಡಿದವರಿಗೆ ಗೊತ್ತು!

**

ಕುಚ್ಚುಕಾಯಿ ಮೊಸರು ಗೊಜ್ಜು

ಬೇಕಾಗುವ ಸಾಮಗ್ರಿಗಳು: ಕುಚ್ಚುಕಾಯಿ –1-2 , ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ, ಮೊಸರು,  ಬೆಳ್ಳುಳ್ಳಿ – 8ರಿಂದ 10 ಎಸಳು.

ತಯಾರಿಸುವ ವಿಧಾನ: ಉಪ್ಪುನೀರಿನಿಂದ ಕುಚ್ಚುಕಾಯಿಯನ್ನು ತಗೆದು ತೊಳೆದು ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಹಿಚುಕಿ ಮಿಶ್ರಣ ತಯಾರಿಸಿ. ರುಚಿಗೆ ಉಪ್ಪು, ಸಿಹಿ ಮೊಸರು ಹಾಕಿ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಒಗ್ಗರಣೆ ಹಾಕಿದರೆ ದಿಢೀರ್ ಅಡುಗೆ ಸವಿಯಲು ಸಿದ್ಧ.

**

ಕುಚ್ಚುಕಾಯಿ ಗೊಜ್ಜು

ಬೇಕಾಗುವ ಸಾಮಗ್ರಿಗಳು: ಕುಚ್ಚುಕಾಯಿ –2-3, ಬೆಳ್ಳುಳ್ಳಿ – 8-10 ಎಸಳು, ಉಪ್ಪು, ಎಣ್ಣೆ, ಸಾಸಿವೆ, ಹಸಿಮೆಣಸಿನಕಾಯಿ, ಸಕ್ಕರೆ.

ತಯಾರಿಸುವ ವಿಧಾನ: ಉಪ್ಪು ನೀರಿನಿಂದ ಕುಚ್ಚುಕಾಯಿಯನ್ನು ತಗೆದು ತೊಳೆದು ಒಂದು ಪಾತ್ರೆಗೆ ಚೆನ್ನಾಗಿ ಹಿಚುಕಿ ಮಿಶ್ರಣ ತಯಾರಿಸಿ ಹಾಗು ಬೆಳ್ಳುಳ್ಳಿ ಮತ್ತು ಹಸಿಮೆಣಸನ್ನು ತರಿತರಿಯಾಗಿ ರುಬ್ಬಿಕೊಳ್ಳಬೇಕು. ಬಾಣಲೆಗೆ ಎಣ್ಣೆ, ಸಾಸಿವೆ, ಅರಿಶಿಣ, ರುಬ್ಬಿಕೊಂಡ ಮಿಶ್ರಣ ಹಾಕಿ ಹಸಿವಾಸನೆ ಹೋಗುವವರೆಗೂ ಹುರಿಯಬೇಕು. ಇದಕ್ಕೆ ಕುಚ್ಚುಕಾಯಿ ರಸ, ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚನ್ನಾಗಿ ಕುದಿಸಿದರೆ ರುಚಿ ಇಲ್ಲದ ನಾಲಿಗೆಗೆ ರುಚಿ ಹೆಚ್ಚಿಸುವ ಕುಚ್ಚುಕಾಯಿ ಗೊಜ್ಜು ರೆಡಿ.

*

ಅರುಂಧತಿ ಎಸ್‌.

Comments
ಈ ವಿಭಾಗದಿಂದ ಇನ್ನಷ್ಟು
ಮಾಡಿ ತಿನ್ನಿ ಚಿಕನ್‌ ಸುಕ್ಕ!

ನಳಪಾಕ
ಮಾಡಿ ತಿನ್ನಿ ಚಿಕನ್‌ ಸುಕ್ಕ!

21 Apr, 2018
ಕನ್ನಡ ಚಿಕನ್ ಫುಡ್

ಇ ರುಚಿ
ಕನ್ನಡ ಚಿಕನ್ ಫುಡ್

19 Apr, 2018
ಸ್ಟಾರ್ ಹೋಟೆಲ್‌ನಲ್ಲಿ ಪಂಜಾಬಿ ಸ್ವಾದ

ರಸಸ್ವಾದ
ಸ್ಟಾರ್ ಹೋಟೆಲ್‌ನಲ್ಲಿ ಪಂಜಾಬಿ ಸ್ವಾದ

19 Apr, 2018
ದಿಢೀರ್‌ ತಿಂಡಿ

ಸವಿರುಚಿ
ದಿಢೀರ್‌ ತಿಂಡಿ

19 Apr, 2018
ನಾ ಮಾಡಿದ ‘ಜಿಗುಟು ಬಿಲ್ಲೆ’

ಮೊದಲ ಅಡುಗೆ
ನಾ ಮಾಡಿದ ‘ಜಿಗುಟು ಬಿಲ್ಲೆ’

19 Apr, 2018