ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಕರಿಗೂ ಲಸಿಕೆಗಳಿವೆ...

Last Updated 8 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಲಸಿಕೆ ಎಂದಾಕ್ಷಣ ನಮಗೆ ನೆನಪಾಗುವುದು ಮಕ್ಕಳ ಲಸಿಕೆಗಳಷ್ಟೆ. ಆದರೆ ವಯಸ್ಕರು ಹಾಕಿಸಿಕೊಳ್ಳಬೇಕಾದ ಲಸಿಕೆಗಳೂ ಇವೆ ಎನ್ನುವುದು ಆನೇಕರಿಗೆ ತಿಳಿದಿಲ್ಲ. ನಿಜ, ಸೋಂಕಿನ ಕಾಯಿಲೆಗಳು ವಿಶ್ವದಾದ್ಯಂತ ಸಾವಿನ ಪ್ರಮಾಣದಲ್ಲಿ ಶೇ.25ಕ್ಕೂ ಹೆಚ್ಚು ಕಾರಣವಾಗುತ್ತಿರುವುದು ಅಂಕಿ ಅಂಶಗಳಿಂದ ತಿಳಿಯತ್ತಿದೆ. ಇದನ್ನು ಮನಗಂಡ ವೈದ್ಯವಿಜ್ಞಾನಿಗಳು ಸೋಂಕಿನ ಕಾಯಿಲೆಗಳನ್ನು ತಡೆಗಟ್ಟುವುದರ ಬಗ್ಗೆ ಕಾರ್ಯೋನ್ಮುಖರಾಗಿದ್ದಾರೆ. ಅದರ ಪರಿಣಾಮವಾಗಿಯೇ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸೋಂಕಿನ ಕಾಯಿಲೆಗಳನ್ನು ನಿಯಂತ್ರಿಸುವ ಹಾಗೂ ತಡೆಗಟ್ಟುವ ಕೇಂದ್ರವು ವಯಸ್ಕರು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕಾದ ಲಸಿಕೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲದೆ, ವಿವಿಧ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕಾದ ಸಂಪೂರ್ಣ ಕ್ರಮ ಹಾಗೂ ಇತ್ಯಾದಿ ವಿವರಣೆಯನ್ನೂ ತಿಳಿಸಿದೆ.

ಸುಮಾರು ಹದಿನಾಲ್ಕು ಸೋಂಕಿನ ಕಾಯಿಲೆಗಳನ್ನು ಬರದಂತೆ ತಡೆಗಟ್ಟಬಹುದಾದ ಈ ಲಸಿಕೆಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡರೆ ಒಳಿತು. ಏಕೆಂದರೆ, ಒಮ್ಮೆ ಕಾಯಿಲೆಗೆ ತುತ್ತಾದರೆ ಆ ವ್ಯಕ್ತಿಯು ಅದರಿಂದ ನರಳಬೇಕಲ್ಲದೆ, ಅದರ ಸಂಭವನೀಯ ಅಪಾಯಕರ ಪರಿಣಾಮಗಳಿಗೂ ಬಲಿಯಾಗಬೇಕು. ಅಷ್ಟೇ ಅಲ್ಲ, ಕಾಯಿಲೆಗೆ ತುತ್ತಾದ ನಂತರ ಅದರ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಬೇಕು. ಆದರೆ, ಕಾಯಿಲೆ ತುತ್ತಾಗುವ ಮೊದಲೇ ಲಸಿಕೆಯನ್ನು ಹಾಕಿಸಿಕೊಳ್ಳುವುದರಿಂದ ಕಾಯಿಲೆಯಿಂದ ನರಳುವುದನ್ನು ತಪ್ಪಿಸಬಹುದಲ್ಲದೆ ಚಿಕಿತ್ಸೆಯ ವೆಚ್ಚವನ್ನು ಉಳಿಸಬಹುದು. ಭಾರತದಂತಹ ದೇಶದಲ್ಲಿ ಅನೇಕ ಕುಟುಂಬಗಳು ತನ್ನ ಸದಸ್ಯರ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಕಷ್ಟ ಪಡುತ್ತವೆ. ಹೀಗಿದ್ದಾಗ ಈ ಲಸಿಕೆಗಳ ಬಗ್ಗೆ ಅರಿತು ವೈದ್ಯರ ಸಲಹೆಯ ಮೇರೆಗೆ ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಜಾಣತನವೇ ಸರಿ.

ಲಸಿಕೆಗಳು ಯಾವುವು?

ವಿಶ್ವ ಆರೋಗ್ಯ ಸಂಸ್ಥೆಯು ಹೊರಡಿಸಿದ ಲಸಿಕೆಗಳ ಪಟ್ಟಿಯಲ್ಲಿ ಹದಿನಾಲ್ಕು ಕಾಯಿಲೆಗಳಿಗೆ ಲಸಿಕೆಗಳಿವೆ. ಇನ್‌ಫ್ಲುಯೆಂಜಾ, ದಡಾರ ( ದೇವಿ, ಅಮ್ಮ), ಧನುರ್ವಾಯು, ದೊಡ್ಡ ದಡಾರ ( ಮಿಸಲ್ಸ್), ನಾಯಿಕೆಮ್ಮು, ಸರ್ಪಸುತ್ತು, ಜರ್ಮನ್ ದಡಾರ, ಗಂಟಲಮಾರಿ, ಮಂಗನ ಬಾವು, ಪಿತ್ತಜನಕಾಂಗದ ಉರಿಯೂತ ( ಹೆಪಟೈಟಿಸ್), ಮೆದುಳಿನ ಉರಿಯೂತ ( ಮೆನಿಂಗೋಕಾಕೈ), ಹಿಮೋಫಿಲಸ್ ಇನ್‌ಫ್ಲುಯೆಂಜಾ, ಹ್ಯುಮನ್ ಪ್ಯಾಪಿಲೋಮ ವೈರಾಣು, ನ್ಯುಮೋಕಾಕೈ ಲಸಿಕೆಗಳು ಲಭ್ಯವಿವೆ. ಆದರೆ, ಇವುಗಳಲ್ಲಿ ಸಾಕಷ್ಟು ಕಾಯಿಲೆಗಳು ನಮ್ಮನ್ನು ಸಾಮಾನ್ಯವಾಗಿ ಬಾಲ್ಯದಲ್ಲಿಯೇ ಭಾದಿಸಿರುತ್ತವೆ. ಅದರ ಪರಿಣಾಮವಾಗಿ ವ್ಯಕ್ತಿಯು ಆ ಕಾಯಿಲೆಯ ವಿರುದ್ಧ ರೋಗ–ನಿರೋಧಕಶಕ್ತಿಯನ್ನೂ ಪಡೆದಿರುತ್ತಾನೆ. ಹಾಗೆ ಪಡೆದ ರೋಗ–ನಿರೋಧಕಶಕ್ತಿಯು ಕೆಲವು ಕಾಯಿಲೆಗಳಲ್ಲಿ ವ್ಯಕ್ತಿಯ ಜೀವಿತಾವಧಿಯವರೆಗೂ ಇರುತ್ತದೆ. ಹಾಗಾಗಿ ಈ ಎಲ್ಲ ಲಸಿಕೆಗಳನ್ನು ಎಲ್ಲ ವಯಸ್ಕರರೂ ಹಾಕಿಸಿಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಆದರೆ, ಕೆಲವು ಲಸಿಕೆಗಳನ್ನು ಹಾಕಿಸಿಕೊಂಡರೆ ಮುಂದೆ ಬರಬಹುದಾದ ಕಾಯಿಲೆಯನ್ನು ತಡೆಗಟ್ಟಬಹುದು. ಯಾರು, ಯಾವ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು ಎಂಬುದನ್ನು ವ್ಯಕ್ತಿಯ ವಯಸ್ಸು, ವೃತ್ತಿ, ಆರೋಗ್ಯಸ್ಥಿತಿ, ಈ ಹಿಂದೆ ಹಾಕಿಸಿಕೊಂಡ ಲಸಿಕೆಗಳು, ಜೀವನಶೈಲಿ, ಆತ/ಆಕೆ ಪ್ರಯಾಣ ಮಾಡುವ ಸ್ಥಳಗಳು ಮುಂತಾದ ಅಂಶಗಳನ್ನು ನಿರ್ಧರಿಸುತ್ತವೆ. ಆತ ಅಥವಾ ಆಕೆಗೆ ಯಾವ ಯಾವ ಲಸಿಕೆಗಳು ಸೂಕ್ತ ಎಂಬುದನ್ನು ತಜ್ಞ ವೈದ್ಯರ ಸಲಹೆಯನ್ನು ಪಡೆದು ತಿಳಿದುಕೊಂಡರೆ ಒಳ್ಳೆಯದು.

ವಯಸ್ಕರು ಹಾಕಿಸಿಕೊಳ್ಳಬೇಕಾದ ಮುಖ್ಯ ಲಸಿಕೆಗಳು:

* ಇನ್‌ಫ್ಲುಯೆಂಜಾ (ಪ್ಲ್ಯೂ) ಲಸಿಕೆ

* ಪಿತ್ತಜನಕಾಂಗದ ಉರಿಯೂತದ ( ಹೆಪಟೈಟಿಸ್ ಎ ಮತ್ತು ಬಿ) ಲಸಿಕೆ

* ಹ್ಯಮನ್ ಪ್ಯಾಪಿಲ್ಲೋಮ ವೈರಾಣು ಲಸಿಕೆ

* ನ್ಯೂಮೋಕಾಕಲ್ ಲಸಿಕೆ

ಇನ್‌ಫ್ಲುಯೆಂಜಾ ಲಸಿಕೆ: ಇದು ಪ್ಲ್ಯೂ ಕಾಯಿಲೆಯ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಹತ್ತೊಂಬತ್ತು ವರ್ಷ ಮೇಲ್ಪಟ್ಟ ಎಲ್ಲರೂ ವರ್ಷಕ್ಕೊಮ್ಮೆ ಈ ಲಸಿಕೆಯನ್ನು ಹಾಕಿಸಿಕೊಳ್ಳುವುದು ಸೂಕ್ತ. ಅರವತ್ತೈದು ವರ್ಷ ಮೇಲ್ಪಟ್ಟವರಿಗೆ ಕೊಡುವ ಲಸಿಕೆ ಸ್ವಲ್ಪ ಬೇರೆ ಬಗೆಯದಾಗಿರುತ್ತದೆ. ಇದಕ್ಕೆ ವೈದ್ಯರ ಸಲಹೆ ಅತ್ಯಗತ್ಯ.

ನ್ಯುಮೋಕಾಕಲ್ ಲಸಿಕೆ: ಇದು ನ್ಯುಮೋಕಾಕೈ ಎಂಬ ಅಣುಜೀವಿಯಿಂದ ಉಂಟಾಗುವ ಶ್ವಾಸಕೋಶದ ಉರಿಯೂತದ ವಿರುದ್ಧ ವ್ಯಕ್ತಿಯನ್ನು ರಕ್ಷಿಸುತ್ತದೆ. ಈ ಲಸಿಕೆಯನ್ನೂ ಸಹ ಹತ್ತೊಂಬತ್ತು ವರ್ಷ ಮೇಲ್ಪಟ್ಟ ಎಲ್ಲರೂ ಐದು ವರ್ಷಕ್ಕೊಮ್ಮೆ ಈ ಲಸಿಕೆಯನ್ನು ಹಾಕಿಸಿಕೊಳ್ಳತಕ್ಕದ್ದು.

ಸೂಚನೆ: ಈ ಮೇಲಿನ ಎರಡು ಲಸಿಕೆಗಳು ಮುಖ್ಯವಾಗಿ ಶ್ವಾಸಕೋಶದ ಉರಿಯೂತ ಹಾಗೂ ಅದರ ಸಂಭವನೀಯ ಅಪಾಯಗಳಿಂದ ವ್ಯಕ್ತಿಯನ್ನು ರಕ್ಷಿಸುತ್ತವೆ. ಆದ್ದರಿಂದ ಶ್ವಾಸಕೋಶದ ಉರಿಯೂತದ ಅಪಾಯದಲ್ಲಿರುವವರು ಹಾಗೂ ಶ್ವಾಸಕೋಶದ ಉರಿಯೂತದಿಂದ ತೀವ್ರ ನರಳುವಿಕೆಗೆ ಗುರಿಯಾಗುವವರು ಈ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳತಕ್ಕದ್ದು. ಸಾಮಾನ್ಯವಾಗಿ ಉಬ್ಬಸ (ಅಸ್ತಮಾ), ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ದೀರ್ಘಕಾಲದ ಕೆಮ್ಮು, ದೀರ್ಘಕಾಲದ ಪಿತ್ತಜನಕಾಂಗದ ಸಮಸ್ಯೆ, ಮಧುಮೇಹದಿಂದ ಬಳಲುವವರು ಹಾಗೂ ಮದ್ಯಪಾನಿಗಳು, ಧೂಮಪಾನಿಗಳು ಈ ಲಸಿಕೆಯನ್ನು ಹಾಕಿಸಿಕೊಂಡರೆ ಮುಂದೆ ಕಾಯಿಲೆಯಿಂದ ನರಳುವುದನ್ನು ತಪ್ಪಿಸಬಹುದು. ಒಟ್ಟಾರೆ, ಶರೀರದ ರೋಗ–ನಿರೋಧಕ ಶಕ್ತಿಯು ಇಳಿಮುಖವಾಗುವ ಸೂಚನೆಯಿರುವ ಎಲ್ಲರೂ ಈ ಲಸಿಕೆಯನ್ನು ಹಾಕಿಸಿಕೊಂಡರೆ ಒಳಿತು.

ಹೆಪಟೈಟಿಸ್ ಎ ಲಸಿಕೆ: ಇದು ಪಿತ್ತಜನಕಾಂಗದ ಉರಿಯೂತದ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ. ವಿದ್ಯಾರ್ಥಿನಿಲಯ, ಉಪಹಾರಗೃಹ, ಭೋಜನಾಲಯ ಮುಂತಾದ ಕಡೆಗಳಲ್ಲಿ ಕೆಲಸ ಮಾಡುವವರು ಹಾಗೂ ದೀರ್ಘಕಾಲದ ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುವವರು ಈ ಲಸಿಕೆಯನ್ನು ಹಾಕಿಸಿಕೊಳ್ಳುವುದು ಉತ್ತಮ.

ಹೆಪಟೈಟಿಸ್ ಬಿ ಲಸಿಕೆ: ಈ ಲಸಿಕೆಯು ಇನ್ನೊಂದು ಬಗೆಯ ಪಿತ್ತಜನಕಾಂಗದ ಉರಿಯೂತದಿಂದ ವ್ಯಕ್ತಿಯನ್ನು ರಕ್ಷಿಸುತ್ತದೆ. ಈ ಬಗೆಯ ಪಿತ್ತಜನಕಾಂಗದ ಉರಿಯೂತವು ರೋಗಿಯ ರಕ್ತ ಹಾಗೂ ರಕ್ತದ ಘಟಕಗಳಿಂದ ಹರಡುವ ಸಾಧ್ಯತೆಗಳಿರುವುದರಿಂದ ಆರೋಗ್ಯವಲಯಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ (ವೈದ್ಯರು, ಶುಶ್ರೂಷಕರು, ಪ್ರಯೋಗಾಲಯ ತಂತ್ರಜ್ಞರು, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಹಾಯಕರು) ಈ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಅಲ್ಲದೆ, ದೀರ್ಘಕಾಲದ ಮೂತ್ರಪಿಂಡಗಳ ಸಮಸ್ಯೆಗೆ ತುತ್ತಾಗಿ ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳು ಮತ್ತು ವಿವಿಧ ಕಾರಣಗಳಿಗಾಗಿ ನಿಯಮಿತವಾಗಿ ರಕ್ತ ಹಾಗೂ ರಕ್ತದ ಘಟಕಗಳನ್ನು ತೆಗೆದುಕೊಳ್ಳುವವರು ಈ ಲಸಿಕೆಯನ್ನು ಹಾಕಿಸಿಕೊಳ್ಳಬೇಕು.

ಹುಮನ್ ಪ್ಯಾಪಿಲ್ಲೋಮ ವೈರಾಣುವಿನ ಲಸಿಕೆ: ಈ ಲಸಿಕೆಯು ಮಹಿಳೆಯರನ್ನು ಮುಂಬರುವ ಕೆಲವು ಬಗೆಯ ಗರ್ಭಕೊರಳಿನ ಕ್ಯಾನ್ಸರ್ ಹಾಗೂ ಪುರುಷರನ್ನು ಜನನಾಂಗದ ಕ್ಯಾನ್ಸರ್‌ಗಳಿಂದ ರಕ್ಷಿಸುತ್ತದೆ. ಈ ಲಸಿಕೆಯನ್ನು ಹನ್ನೊಂದರಿಂದ ಹನ್ನೆರಡು ವರ್ಷದ ಎಲ್ಲ ಬಾಲಕ ಬಾಲಕಿಯರಿಗೆ ಕಡ್ಡಾಯವಾಗಿ ಹಾಕಿಸಬೇಕು. ಮೊದಲ ಲಸಿಕೆಯ ನಂತರ ಒಂದು ತಿಂಗಳ ಅಂತರದಲ್ಲಿ ಎರಡನೆಯ ಲಸಿಕೆ ಹಾಗೂ ಆರು ತಿಂಗಳ ಅಂತರದಲ್ಲಿ ಮೂರನೆಯ ಲಸಿಕೆಯನ್ನು ಹಾಕಲಾಗುತ್ತದೆ. ಒಂದು ವೇಳೆ ಲಸಿಕೆಯನ್ನು ಆ ವಯಸ್ಸಿನಲ್ಲಿ ಹಾಕಿಸದೇ ಇದ್ದರೆ ಮಹಿಳೆಯರಿಗೆ ಇಪ್ಪತ್ತಾರು ವರ್ಷದವರೆಗೆ ಹಾಗೂ ಪುರುಷರಿಗೆ ಇಪ್ಪತ್ತೊಂದು ವರ್ಷದವರೆಗೆ ಈ ಲಸಿಕೆಯನ್ನು ಹಾಕಿಸಬಹುದು.

ಮುಖ್ಯ ಸೂಚನೆ: ಈ ಲಸಿಕೆಗಳನ್ನು ಹಾಕಿಸಿಕೊಳ್ಳುವ ಮೊದಲು ನಿಮ್ಮ ಹತ್ತಿರದ ತಜ್ಞವೈದ್ಯರ ಬಳಿ ಸಮಾಲೋಚನೆ ಹಾಗೂ ಸಲಹೆ ಅತ್ಯಗತ್ಯ. ವೈದ್ಯರು ನಿಮ್ಮ ಆರೋಗ್ಯ ಸ್ಥಿತಿ ಹಾಗೂ ನಿಮಗೆ ಇರಬಹುದಾದ ಅಲರ್ಜಿ ಮತ್ತಿತರ ಸಮಸ್ಯೆಗಳನ್ನು ಪರೀಕ್ಷಿಸಿ ನಿಮಗೆ ಅಗತ್ಯವಿರುವ ಲಸಿಕೆಗಳನ್ನು ಸೂಚಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT