ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ನಿಮಿಷ ಮೀಸಲಿಡಿ, ಒಂದು ಜೀವನವನ್ನು ಬದಲಿಸಿ

Last Updated 8 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

–ಡಾ. ಶಿವಾನಂದ ಬಿ. ಹಿರೇಮಠ, ಎಂ.ಡಿ

**

ಲಿಂಕಿನ್ ಪಾರ್ಕ್‌ನ ಗಾಯಕ ಚೆಸ್ಟರ್ ಬ್ಯಾನಿಂಗ್ಟನ್, ಐಎಎಸ್ ಅಧಿಕಾರಿ ಮುಕೇಶ್ ಪಾಂಡೆ, ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಾಲಿಖೊ ಪುಲ್, ಚಿತ್ರನಟಿ ಜಿಯಾ ಖಾನ್ ಹಾಗೂ ಪೊಲೀಸ್ ಅಧಿಕಾರಿ ಗಣಪತಿ - ಈ ಹೆಸರುಗಳನ್ನು ಕೇಳಿದಾಗ ಆತ್ಮಹತ್ಯೆ ಎಂಬ ಘೋರ ಸಮಸ್ಯೆಯು ಜನಾಂಗ, ದೇಶ, ಭಾಷೆ, ವಯಸ್ಸು, ಲಿಂಗ, ಶಿಕ್ಷಣ, ವೃತ್ತಿ, ಭೌಗೋಳಿಕ ಪ್ರದೇಶ ಹಾಗೂ ಬಡವ-ಬಲ್ಲಿದರೆಂಬ ಭೇದವಿಲ್ಲದೇ ಸರ್ವವ್ಯಾಪಿ ಎಂಬುದು ತಿಳಿಯುತ್ತದೆ. ಪ್ರತಿದಿನ ಕೇಳುವ ರೈತರ ಹಾಗೂ ಪರೀಕ್ಷೆ ಫಲಿತಾಂಶಗಳ ಪ್ರಕಟಣೆ ನಂತರ ವಿದ್ಯಾರ್ಥಿಗಳ ಆತ್ಮಹತ್ಯೆ ಸುದ್ದಿಗಳು, ಈ ಬಿಕ್ಕಟ್ಟಿನ ಗಂಭೀರತೆಯನ್ನು ಸಾರಿ ಸಾರಿ ಹೇಳುತ್ತಿವೆ.

ನರಳುವ ಮನಸ್ಸಿನೊಳಗೊಂದು ಇಣುಕು ನೋಟ: ಬದುಕಿನ ಮೂಲ ಸೆಲೆ, ಜೀವನದ ಮೇಲಿನ ಪ್ರೀತಿ ಅನೇಕ ಸಂದರ್ಭಗಳಲ್ಲಿ ಬತ್ತಲಾರಂಭಿಸುತ್ತದೆ. ಹೀಗಾದಾಗ, ಜೀವನ ಅರ್ಥಹೀನವೆಂದೆನಿಸುತ್ತದೆ. ಮನಸ್ಸಿನ ತೊಳಲಾಟ, ಭಾವನೆಗಳ ಭಾರ ಹಾಗೂ ಭವಿಷ್ಯದ ಬಗೆಗಿನ ಜುಗುಪ್ಸೆ ವಿಪರೀತ ಯಾತನಾಮಯವಾದಾಗ, ಅಸ್ತಿತ್ವವೇ ಅರ್ಥಹೀನವೆನ್ನಿಸುತ್ತದೆ. ಆಗ ವ್ಯಕ್ತಿಯು, ತನ್ನ ಪ್ರೀತಿಪಾತ್ರರಿಂದ ದೂರವಾಗಲು ಬಯಸದಿದ್ದರೂ, ತಾಳಲಾರದ ಬಾಧೆಯಿಂದ ತನ್ನನ್ನು ಮುಕ್ತವನ್ನಾಗಿಸಲು ಆತನ ಮನಸ್ಸು ಹವಣಿಸುತ್ತದೆ. ಸಮಾಜ ಆತ್ಮಹತ್ಯೆಗೆ ಪ್ರಯತ್ನಿಸುವವರನ್ನು ಹೇಡಿಗಳೆನ್ನಬಹುದು.

ಆತ್ಮಹತ್ಯೆಯ ಪ್ರಯತ್ನದಿಂದ ಪಾರಾಗಿ ಉಳಿದವರ ಅನುಭವಗಳ ಪ್ರಕಾರ, ಅವರು ತಮ್ಮೊಡನೆ ಯಾರಾದರೂ ಮಾತನಾಡಬಹುದು, ತಮ್ಮ ಚರಮ ಸಂಕಲ್ಪದ ಅಂತಿಮ ಹಂತದಿಂದ ತಮ್ಮನ್ನು ಮರಳಿ ಕರೆತರಬಹುದು ಎಂದು ಕಾಯುತ್ತಿದ್ದರಂತೆ. ನೀನು ಹೇಗಿದ್ದಿಯ? ನಿನ್ನೊಡನೆ ನಾನಿದ್ದೇನೆ ಎಂಬ ಲೋಕಾರೂಢಿಯ ಮಾತುಗಳು ಸಹ ಅತಿಯಾಗಿ ಹಿತವೆನ್ನಿಸುತ್ತವೆ ಎನ್ನುತ್ತಾರೆ.

ಪ್ರತಿ ವರ್ಷದಂತೆ ಈ ವರ್ಷವೂ ‘ಸೆಪ್ಟೆಂಬರ್ 10’ನ್ನು ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನವೆಂದು ಆಚರಿಸಲಾಗುತ್ತಿದೆ. ‘ಒಂದು ನಿಮಿಷವನ್ನು ಮೀಸಲಿಡಿ, ಒಂದು ಜೀವನ ಬದಲಿಸಿ’ ಎಂಬುದು ಈ ವರ್ಷದ ಧ್ಯೇಯವಾಕ್ಯ.

ಎಚ್ಚರಿಕೆ ಚಿಹ್ನೆಗಳು

* ಸಾವು, ಆತ್ಮಹತ್ಯೆ ಅಥವಾ ಸ್ವ-ಹಾನಿಯ ಬಗ್ಗೆ ಮಾತನಾಡುವುದು. ನಾನು ಹುಟ್ಟಲೇಬಾರದಿತ್ತು , ನಾನು ಸತ್ತರೇ ಉತ್ತಮ ಎನ್ನುವ ಹೇಳಿಕೆಗಳು.

* ಸಾವಿನ ಬಗ್ಗೆ ಹೆಚ್ಚಿದ ಆಸಕ್ತಿ, ಮಾತು, ಬರವಣಿಗೆ, ಓದು ಎಲ್ಲವೂ ಸಾವಿನ ಬಗ್ಗೆಯೇ ಇರುವುದು.‌

* ಭವಿಷ್ಯದ ಬಗ್ಗೆ ಹತಾಶೆ ಭಾವನೆ. ಸಮಸ್ಯೆಗೆ ಪರಿಹಾರವೇ ಇಲ್ಲ ಎಂಬ ದೃಢವಾದ ನಂಬಿಕೆ.

* ನಿರಾಸೆ, ಹತಾಶೆ, ತನ್ನ ಮೇಲೆ ಕೋಪ, ತಾನು ಈ ಭೂಮಿಗೆ ಭಾರ ಎಂಬ ಭಾವನೆಗಳನ್ನು ವ್ಯಕ್ತಪಡಿಸುವುದು.

* ವಿಲ್ ಬರೆಯುವುದು, ಸಾಲಗಳನ್ನು ತೀರಿಸುವುದು, ದಾನ ಮಾಡುವುದು.

* ಒಂಟಿತನದ ಮೇಲೆ ಹೆಚ್ಚಿದ ಒಲವು.

* ಅತಿಯಾದ ಮದ್ಯಪಾನ, ಬೇಜವಾಬ್ದಾರಿ ವಾಹನ ಚಾಲನೆ, ಅಪಾಯಕಾರಿ ಕೆಲಸಗಳನ್ನು ಎಚ್ಚರಿಕೆಯಿಲ್ಲದೇ ಮಾಡುವುದು.

ನಾವೇನು ಮಾಡಬಹುದು?

ನಮ್ಮ ಕೆಲವರು ಹತ್ತಿರದವರಲ್ಲಿ ಈ ಮೇಲಿನ ಎಚ್ಚರಿಕೆ ಚಿಹ್ನೆಗಳನ್ನು ನಾವು ಗಮನಿಸಿರುತ್ತೇವೆ. ಗಮನಿಸಿಯೂ ಸಹ, ಅವರೊಂದಿಗೆ ಮಾತನಾಡಲು ಧೈರ್ಯ ಮಾಡುವುದಿಲ್ಲ. ಏಕೆಂದರೆ, ಆ ವ್ಯಕ್ತಿಯು ತಮಗೆ ಪರಿಹಾರ ಸೂಚಿಸಲು ಕೇಳಬಹುದು ಮತ್ತು ಹಾಗೆ ಕೇಳಿದರೆ ಅವುಗಳಿಗೆ ನಮ್ಮ ಬಳಿ ಉತ್ತರವಿರುವುದಿಲ್ಲ ಎಂದು ಹಿಂಜರಿಯುತ್ತೇವೆ. ಎಲ್ಲರ ಬಳಿಯೂ ಎಲ್ಲದಕ್ಕೂ ಉತ್ತರ ಅಥವಾ ಪರಿಹಾರವಿರಲೇಬೇಕು ಎಂದೇನಿಲ್ಲ. ಆತ್ಮಹತ್ಯೆಗೆ ಪ್ರಯತ್ನ ಮಾಡುವವರು, ಯಾವುದೇ ನಿಖರವಾದ ಸಲಹೆ, ಸೂಚನೆಗಳನ್ನು ಅಪೇಕ್ಷಿಸುವುದಿಲ್ಲ. ಕನಿಕರ, ಅನೂಭೂತಿಯ ಮಾತುಗಳು ಆ ವ್ಯಕ್ತಿಯನ್ನು ಆ ಕ್ಷಣದಿಂದ ಪಾರು ಮಾಡುವುದು.

ಅಂತಹ ವ್ಯಕ್ತಿಯನ್ನು ಅನುಭೂತಿಯಿಂದ ಮಾತನಾಡಿಸಿ. ‘ನಿನ್ನಲ್ಲಿ ಏನೋ ಬದಲಾವಣೆ ಕಾಣುತ್ತಿದ್ದೇವೆ. ನಿನ್ನನ್ನು ಏನಾದರೂ ಕಾಡುತ್ತಿದೆಯೇ? ಯಾವಾಗಿನಿಂದ ಈ ರೀತಿ ಎನ್ನಿಸುತ್ತಿದೆ? ನಾನು ನಿನಗೆ ಯಾವ ರೀತಿ ಸಹಾಯ ಮಾಡಬಹುದು? ನೀನು ಏಕಾಂಗಿಯಲ್ಲ. ನಾನು ನಿನ್ನೊಂದಿಗಿದ್ದೇನೆ’ – ಎಂಬ ಮಾತುಗಳು ಆ ಕ್ಷಣದಲ್ಲಿ ವ್ಯಕ್ತಿಗೆ ಸಹಾಯ ಮಾಡುತ್ತವೆ. ನಂತರ ಆ ವ್ಯಕ್ತಿಯನ್ನು, ತಜ್ಞ ಮನೋವೈದ್ಯರು ಹಾಗೂ ಆಪ್ತ ಸಮಾಲೋಚಕರ ಬಳಿ ಕರೆದೊಯ್ದು ಸಹಾಯ ಪಡೆದುಕೊಳ್ಳಬಹುದು.

ಬಿಕ್ಕಟ್ಟು ಪರಿಹಾರ:

ವ್ಯಕ್ತಿಯ ಆತ್ಮಹತ್ಯೆಯ ಯೋಜನೆಯ ಬಗ್ಗೆ ತಮಗೆ ಖಾತ್ರಿ ಇದ್ದರೆ ಆತನನ್ನು ಯಾವುದೇ ಕಾರಣಕ್ಕೂ ಒಂಟಿಯಾಗಿ ಬಿಡಬೇಡಿ. ತಕ್ಷಣ ಹೆಚ್ಚುವರಿ ಸಹಾಯಕ್ಕಾಗಿ, ಕುಟುಂಬದವರು ಅಥವ ಸ್ನೇಹಿತರಿಗೆ ಕರೆ ಮಾಡಿ. ಅಪಾಯಕಾರಿ (ಹರಿತವಾದ ಆಯುಧ, ಹಗ್ಗದಂತಹ ವಸ್ತು, ಎತ್ತರ ಪ್ರದೇಶ) ವಸ್ತುಗಳಿಂದ ವ್ಯಕ್ತಿಯನ್ನು ದೂರವಿಡಿ. ಆಸ್ಪತ್ರೆ ಅಥವಾ ಸಹಾಯವಾಣಿಯನ್ನು ತಕ್ಷಣವೇ ಸಂಪರ್ಕಿಸಿ.

ಬ್ಲೂ ವೇಲ್ ಚಾಲೆಂಜ್:

ಆಧುನಿಕ ಜಗತ್ತಿನ ಭಯಾನಕ ಕೊಡುಗೆಗಳಲ್ಲಿ ಅಂತರ್ಜಾಲದ ಅತಿಯಾದ ಬಳಕೆಯೂ ಒಂದು. ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಕಳವಳಕಾರಿ ಸಂಗತಿ ಬ್ಲ್ಯೂವೇಲ್ ಚಾಲೆಂಜ್ ಎಂಬ ಇಂಟರ್‌ನೆಟ್ ಗೇಮ್. ಈ ಆಟದಲ್ಲಿ, ಹದಿಹರೆಯದವರನ್ನು ಪುಸಲಾಯಿಸಿ ಅದರಲ್ಲಿ ಭಾಗವಹಿಸುವಂತೆ ಪ್ರಚೋದಿಸಲಾಗುತ್ತದೆ. ಆಟದ ಅನೇಕ ಹಂತಗಳನ್ನು ಮುಗಿಸಿದಾಗ, ಕೊನೆಯ ಹಂತವು ಭಾಗವಹಿಸಿದವರನ್ನು ಆತ್ಮಹತ್ಯೆಗೆ ಪ್ರೇರೆಪಿಸುತ್ತದೆ. ಇಲ್ಲಿಯವರೆಗೆ, ಈ ಪಿಡುಗು ಕೇವಲ ರಷ್ಯಾ ಹಾಗೂ ಇನ್ನಿತರ ಪಾಶ್ಚ್ಯಾತ್ಯ ರಾಷ್ಟ್ರಗಳಲ್ಲಿ ಮಾತ್ರ ಇತ್ತು. ಇತ್ತೀಚಿಗೆ ಭಾರತದಲ್ಲಿಯೂ ಈ ಆಟಕ್ಕೆ ಸಂಬಂಧಿಸಿದ ಕೆಲವು ಅನುಮಾನಾಸ್ಪದ ಸಾವುಗಳು, ಸ್ವಹಾನಿಯ ಪ್ರಯತ್ನಗಳು ಸಂಭವಿಸಿವೆ. ಈ ವಿಷಯದಲ್ಲಿ ಪಾಲಕರು ಹಾಗೂ ಶಿಕ್ಷಕರು ಮಕ್ಕಳ ಅಂತರ್ಜಾಲ ಚಟುವಟಿಕೆಗಳ ಬಗ್ಗೆ ಗಮನವಿಡಬೇಕು. ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ, ತಕ್ಷಣವೇ ಮಕ್ಕಳನ್ನು ಅಂತರ್ಜಾಲದ ಸಂಪರ್ಕದಿಂದ ದೂರವಿಡಿ ಹಾಗೂ ಹತ್ತಿರದ ತಜ್ಞ ಮನೋವೈದ್ಯರೊಂದಿಗೆ ಸಮಾಲೋಚನೆ ನಡೆಸಿ.

ಕೊನೆಯದಾಗಿ,

ಇಂದಿನ ಸ್ಪರ್ಧಾತ್ಮಕ ಹಾಗೂ ಯಾಂತ್ರಿಕ ಬದುಕಿನಲ್ಲಿ, ನಮಗೆ ಬಹುಶಃ ಸಮಾಜದ ಬಗ್ಗೆ ಚಿಂತನೆ ನಡೆಸಲು ಸಮಯ ಅಥವಾ ತಾಳ್ಮೆ ಇಲ್ಲದಿರಬಹುದು. ಆದರೆ, ಎಷ್ಟೇ ಆದರೂ ನಾವು ಮನುಷ್ಯರು, ಸಮಾಜಜೀವಿಗಳು. ನಮ್ಮ ಮೂಲ ಸ್ವಬಾವ ಇತರರ ವರ್ತನೆ ಹಾಗೂ ಭಾವನೆಗಳಿಗೆ ಸ್ಪಂದಿಸುವುದು. ಆ ಮೂಲಸ್ವಭಾವ ನಮ್ಮಲ್ಲಿ ಗೌಣವಾಗದಿರಲಿ. ಬನ್ನಿ, ಒಂದು ನಿಮಿಷವನ್ನು ಮೀಸಲಿಟ್ಟು, ಒಂದು ಜೀವನವನ್ನು ಬದಲಿಸೋಣ.

**

ಅಂಕಿಅಂಶ:

ವಿಶ್ವದಲ್ಲಿ, ಪ್ರತಿ 40 ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಒಂದು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಎಂಟು ಲಕ್ಷ. 15–16ರ ವಯೋಮಿತಿಯಲ್ಲಿನ ಸಾವುಗಳಿಗೆ, ಆತ್ಮಹತ್ಯೆ ಎರಡನೇ ಅತಿ ಮುಖ್ಯವಾದ ಕಾರಣವಾಗಿದೆ.

ಯಾರು ಆತ್ಮಹತ್ಯೆ ಪ್ರಯತ್ನ ಮಾಡಿಕೊಳ್ಳುವ ಅಪಾಯದಲ್ಲಿರುತ್ತಾರೆ?

ಯಾರು ಈ ಹಿಂದೆ ಆತ್ಮಹತ್ಯೆ ಪ್ರಯತ್ನ ಮಾಡಿರುವವರು.

ಮನೋರೋಗ(ಖಿನ್ನತೆ, ಸ್ಕಿಝೋಫ್ರೇನಿಯ ಇತ್ಯಾದಿ)ದಿಂದ ಬಳಲುತ್ತಿರುವವರು.

ದುಶ್ಚಟ ಮಾಡುವವರು (ಮದ್ಯಪಾನ, ಗಾಂಜಾ ಸೇವನೆ).

ಭಾವನಾತ್ಮಕ ಯಾತನೆ ಅನುಭವಿಸುತ್ತಿರುವವರು (ತುಂಬ ಹತ್ತಿರದವರ ಸಾವು, ಪ್ರೇಮವಿರಹ).

ಜೀವನದಲ್ಲಿ ಅತಿ ಒತ್ತಡದ ಸನ್ನಿವೇಶಗಳನ್ನು ಎದುರಿಸುತ್ತಿರುವವರು. (ವ್ಯಾಪಾರದಲ್ಲಿ ನಷ್ಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆತ, ತನಿಖೆಗಳು ಇತ್ಯಾದಿ).

ಮಾರಣಾಂತಿಕ ಕಾಯಿಲೆ ಅಥವಾ ದೀರ್ಘಕಾಲದ ನೋವಿನಿಂದ ಬಳಲುತ್ತಿರುವವರು.

**

ಮಾಧ್ಯಮದ ಪಾತ್ರ

ಮಾಧ್ಯಮಗಳು ಇಂದು ಆತ್ಮಹತ್ಯೆಯನ್ನು ಕೇವಲ ಒಂದು ಘಟನೆಯಾಗಿ ಬಿತ್ತರಿಸದೇ, ಅದನ್ನು ಸಿನಿಮೀಯ ರೀತಿಯಲ್ಲಿ ವೈಭವೀಕರಿಸುತ್ತಿವೆ. ದೃಶ್ಯಗಳನ್ನು ಪದೇ ಪದೇ ಪ್ರಸಾರ ಮಾಡುವುದು, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ವ್ಯಯಕ್ತಿಕ ಜೀವನವನ್ನು ಕೆಟ್ಟದಾಗಿ ಬಿಂಬಿಸುವುದು ಹಾಗೂ ರಾಜಕೀಯ ಪ್ರೇರಿತ ವಿಷಯಗಳ ಬಗ್ಗೆ ಅತಿಯಾದ ಚರ್ಚೆಗಳು ಸಮಾಜದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತವೆ. ಪದೇ ಪದೇ ವರದಿಯನ್ನು ಬಿತ್ತರಿಸುವುದರಿಂದ ಸನ್ನಿಯ ಆತಂಕ ಹೆಚ್ಚುವುದು. ಹೀಗಾಗಿ, ಸರ್ಕಾರವು ಆತ್ಮಹತ್ಯೆಯ ಬಗ್ಗೆ ವರದಿ ಪ್ರಸಾರಣೆಯ ಬಗ್ಗೆ ಮಾಧ್ಯಮಗಳಿಗೆ ಮಾರ್ಗದರ್ಶಿ ಸೂಚನೆಗಳನ್ನು ರೂಪಿಸಿ, ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

* ಕೆಲವು ಸಲಹೆಗಳು ಈ ರೀತಿ ಇವೆ:
ನಿಖರ ಹಾಗೂ ಸಂಕ್ಷಿಪ್ತವಾದ ವರದಿ ಪ್ರಸಾರ. ಪದೆ ಪದೇ ವರದಿಯನ್ನು ಪ್ರಸಾರ ಮಾಡದಿರುವುದು.

* ಆತ್ಮಹತ್ಯೆ ತುಂಬಾ ಸಂಕೀರ್ಣವಾದ ವಿಷಯ. ಅದರ ಮೇಲ್ನೋಟದ ಕಾರಣಗಳ ಕುಚೇಷ್ಟೆ, ಕುಚೋದ್ಯ ಮಾಡಬಾರದು.

* ವ್ಯಕ್ತಿತ್ವದ ಅಥವಾ ವ್ಯಕ್ತಿಯ ಕೃತ್ಯದ ವೈಭವೀಕರಣ ಬೇಡ.

* ವರದಿಗಳಲ್ಲಿ ಆತ್ಮಹತ್ಯಾ ವಿಧಾನ ಅಥವಾ ಅದರ ಭೀಕರತೆಯನ್ನು ಪ್ರಕಟಿಸಿಬಾರದು.

* ಭಾವನಾತ್ಮಕ ಸಂಕಷ್ಟದಲ್ಲಿರುವವರ ಸಹಾಯಕ್ಕೆಂದೇ ಇರುವ ಸಹಾಯವಾಣಿಗಳು, ಸಹಾಯ ಸಂಘಗಳು ಹಾಗೂ ಬಿಕ್ಕಟ್ಟು ಪರಿಹಾರಕ್ಕಾಗಿ ಕೈಗೊಳ್ಳಬೇಕಾಗಿರುವ ತುರ್ತು ಕ್ರಮಗಳ ಬಗ್ಗೆ ಮಾಹಿತಿ ಪ್ರಸಾರ ಮಾಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT