ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಗಳ ಗಣಿ

Last Updated 31 ಜುಲೈ 2018, 16:14 IST
ಅಕ್ಷರ ಗಾತ್ರ

ಜಗತ್ತಿನಲ್ಲಿ ಈಗ ಯಾರಾದರೂ ಒಳ್ಳೆಯವರು ಇದ್ದಾರೆಯೇ?

ನಮಗೆ ಈ ಕಾಲದಲ್ಲೂ ಬರುವಂಥ ಪ್ರಶ್ನೆಯೇ ವಾಲ್ಮೀಕಿ ಮಹರ್ಷಿಗೂ ಬಂದಿರುವಂಥದ್ದು. ಈ ಕಾರಣದಿಂದಲೇ ನಮಗೆ ರಾಮಾಯಣ ಹತ್ತಿರವಾಗುವಂಥದ್ದು. ಮಹರ್ಷಿಗೆ ಉತ್ತರ ದೊರೆಯಿತು; ದಿಟ. ಆದರೆ ಅದು ನಮಗೂ ಉತ್ತರ ಆದೀತೆ? ಇದಕ್ಕಾಗಿ ನಾವು ರಾಮಾಯಣವನ್ನೇ ಆಶ್ರಯಿಸಬೇಕು. ವಾಲ್ಮೀಕಿಗಳಿಗೆ ದೊರೆತ ಉತ್ತರವೇ– ರಾಮ.

ನಾರದರು ರಾಮನ ಕಥೆಯನ್ನು ವಾಲ್ಮೀಕಿಗಳಿಗೆ ಹೇಳಿದರು. ಇಡಿಯ ರಾಮಾಯಣದ ಸಂಗ್ರಹರೂಪವಾದ ಈ ನಿರೂಪಣೆಯ ಭಾಗವನ್ನು ‘ಬಾಲರಾಮಾಯಣ’ವೆಂದೂ ‘ಸಂಕ್ಷೇಪ ರಾಮಾಯಣ’ವೆಂದೂ ಕರೆಯುವುದುಂಟು. ರಾಮಾಯಣದ ಕಥೆ ಏಳು ಕಾಂಡಗಳಲ್ಲಿ ಹರಡಿದೆ; ಮೊದಲನೆಯ ಕಾಂಡವೇ ಬಾಲಕಾಂಡ. ಅದರ ಮೊದಲನೆಯ ಸರ್ಗದಲ್ಲಿ ಈ ಭಾಗವಿದೆ. ಎಂಟನೆಯ ಶ್ಲೋಕದಿಂದ ಕೊನೆಯ ನೂರನೆಯ ಶ್ಲೋಕದವರೆಗೂ ಈ ನಿರೂಪಣೆ ಸಾಗಿದೆ. ಸರ್ಗದ ಕೊನೆಯ ಶ್ಲೋಕಗಳಲ್ಲಿ ಫಲಶ್ರುತಿಯೂ ಇದೆ. ರಾಮಾಯಣವನ್ನು ಪಠಿಸುವುದರಿಂದ ಏನೆಲ್ಲ ಫಲಗಳು ಸಿಗುತ್ತವೆ ಎನ್ನುವ ಸೊಲ್ಲುಗಳಿವೆ. ಪಾರಾಯಣಕ್ಕೆ ಒದಗುವಂಥ ಎಲ್ಲ ಗ್ರಂಥಗಳಿಗೂ ಸಾಮಾನ್ಯವಾಗಿ ಫಲಶ್ರುತಿ ಇರಲೇಬೇಕಾಗುತ್ತದೆ. ಏಕೆಂದರೆ ಪಾರಾಯಣದ ಉದ್ದೇಶವೇ ಫಲವನ್ನು ಪಡೆಯುವುದು. ನಮ್ಮ ಪರಂಪರೆಯಲ್ಲಿ ವಾಲ್ಮೀಕಿ ರಾಮಾಯಣ ಪ್ರಮುಖ ಪಾರಾಯಣಗ್ರಂಥ.

ರಾಮನ ವ್ಯಕ್ತಿತ್ವದ ವರ್ಣನೆಯೊಂದಿಗೆ ಕಥೆ ಆರಂಭವಾಗುತ್ತದೆ. ‘ಒಳ್ಳೆಯವರು ಈಗ ಯಾರಾದರೂ ಇದ್ದಾರೆಯೆ?’ ಇದು ವಾಲ್ಮೀಕಿಗಳು ಕೇಳಿದ ಪ್ರಶ್ನೆ. ಅವರೇನೂ ‘ಯಾರಾದರೂ ಈಗ ಸುಂದರಪುರುಷ ರಿದ್ದಾರೆಯೆ?’ ಎಂದೇನೂ ಕೇಳಲಿಲ್ಲ. ಆದರೆ ನಾರದರು ಮೊದಲು ವಿಸ್ತೃತವಾಗಿ
ವರ್ಣಿಸಲು ತೊಡಗುವುದು ರಾಮನ ರೂಪವನ್ನೇ! ದೈಹಿಕವಾಗಿ ಅವನು ಎಷ್ಟು ಸ್ಫುರದ್ರೂಪಿ; ಶಕ್ತಿವಂತ ಎಂದು ಅವನ ರೂಪವನ್ನು ಕಟ್ಟಿಕೊಟ್ಟು, ಆ ಬಳಿಕ ಅವನ ಅಂತರಂಗವೂ ಎಷ್ಟು ಗಟ್ಟಿಯಾದದ್ದು; ಆರ್ದ್ರವಾದುದು – ಎಂದು ನಿರೂಪಿಸುತ್ತಾರೆ. ದೇಹ–ಮನಸ್ಸುಗಳು ಸೇರಿಯೇ ಸಮಗ್ರ ವ್ಯಕ್ತಿತ್ವ– ಎನ್ನುವುದು ಇದರ ಧ್ವನಿಯೋ? ಅಥವಾ ದೇಹಸೌಂದರ್ಯಕ್ಕೂ ಭಾವಸೌಂದರ್ಯಕ್ಕೂ ನಂಟಿದೆ– ಎನ್ನುವುದು ತಾತ್ಪರ್ಯವೋ? ಇದನ್ನು ಆಲೋಚಿಸಬೇಕಾಗುತ್ತದೆ. ವಾಲ್ಮೀಕಿಗಳು ಕೇಳಿದ ಗುಣಗಳ ಪಟ್ಟಿಗಿಂತಲೂ ಹೆಚ್ಚು ಗುಣಗಳನ್ನೇ ನಾರದರು ಹೇಳುತ್ತಾರೆ. ದಿಟ, ಇಲ್ಲಿ ವಿಶೇಷಣಗಳಾಗಿ ಮಾತ್ರವೇ ಈ ಗುಣಗಳು ಬಳಕೆಯಾಗಿರುವಂತೆ ಮೇಲ್ನೋಟಕ್ಕೆ ಕಾಣುತ್ತವೆ; ಆದರೆ ಈ ಗುಣಗಳು ಹೇಗೆ ರಾಮನಿಗೆ ಸಾರ್ಥಕವಾಗಿ ಒಪ್ಪುತ್ತವೆ ಎಂದು ಸುಂದರವಾಗಿ ಹೇಳಲು ಹೊರಟಿರುವುದೇ ರಾಮಾಯಣ.

ಇಕ್ಷ್ವಾಕುವಂಶದವನು ರಾಮ. ಅವನು ಮನಸ್ಸನ್ನು ಗೆದ್ದವನು (ನಿಯತಾತ್ಮ); ಮಹಾಪರಾಕ್ರಮಿ (ಮಹಾವೀರ್ಯ); ಕಾಂತಿಯುಕ್ತ (ದ್ಯುತಿಮಾನ್); ಧೀರ (ಧೃತಿಮಾನ್); ಬುದ್ಧಿವಂತ; ನೀತಿವಂತ; ವಾಗ್ಮಿ; ಶತ್ರುನಾಶಕ – ಇವಿಷ್ಟು ಗುಣಗಳನ್ನು ಹೇಳಿದ ಮೇಲೆ ಅವನ ಆಕಾರವನ್ನು ವರ್ಣಿಸಲಾಗಿದೆ. ಅವನಿಗೆ ಬಲಿಷ್ಠ ಬಾಹುಗಳಿವೆ; ಅವನ ಕಂಠ ಶಂಖದಂತಿದೆ; ವಿಶಾಲವಾದ ಎದೆಯುಳ್ಳವನು; ಮಹತ್ತರವಾದ ಬಿಲ್ಲನ್ನು ಹಿಡಿಯತಕ್ಕವನು; ಆಜಾನುಬಾಹು; ಲಕ್ಷಣವಾದ ಶಿರಸ್ಸು ಅವನದ್ದು; ಸುಂದರವಾದ ಹಣೆ; ಅವನದ್ದು ಗಂಭೀರವಾದ ನಡಿಗೆ. ಅವನಆಕೃತಿ ಬಹಳ ಎತ್ತರವೂ ಇಲ್ಲ, ಬಹಳ ಗಿಡ್ಡಾಗಿಯೂ ಇಲ್ಲ – ಸಮಕಟ್ಟಾಗಿದೆ (ಸಮಃ); ದೇಹಕ್ಕೆ ತಕ್ಕಂಥ ಅಳತೆಯ ಅವಯವಗಳನ್ನು ಹೊಂದಿದ್ದಾನೆ (ಸಮವಿಭಕ್ತಾಂಗಃ); ಮಿಂಚುವ ಮೈಬಣ್ಣ; ಅವನು ಮಹಾಪ್ರತಾಪಶಾಲಿ; ಅಗಲವಾದ ಕಣ್ಣುಗಳು; ಸುಂದರ; ಒಳ್ಳೆಯ ಲಕ್ಷಣವಂತ. ಅವನ ಗುಣಗಳ ವಿಶೇಷತೆಯನ್ನು ಮುಂದೆ ಹೇಳಲಾಗಿದೆ: ಅವನು ಧರ್ಮವಂತ; ಸತ್ಯವನ್ನೇ ನುಡಿಯುವವನು (ಸತ್ಯಸಂಧ); ಪ್ರಜೆಗಳ ಹಿತವನ್ನು ಕಾಪಾಡುವುದರಲ್ಲೇ ಸದಾ ನಿರತ; ಯಶಸ್ಸನ್ನು ಸಂಪಾದಿಸಿರುವವ; ಅವನು ಜ್ಞಾನಸಂಪನ್ನ; ಪರಿಶುದ್ಧವಾಗಿರುವವನು; ಸದಾ ನೆಮ್ಮದಿಯಾಗಿರುವವನು (ಸಮಾಧಿಮಾನ್); ಬ್ರಹ್ಮನಷ್ಟು ತೇಜಸ್ವಿ; ಶತ್ರುಗಳನ್ನು ಧ್ವಂಸಮಾಡಬಲ್ಲವ; ಜಗತ್ತಿನಲ್ಲಿರುವ ಎಲ್ಲ ಜೀವರಾಶಿಗಳನ್ನೂ ರಕ್ಷಿಸುವಷ್ಟು ಸಮರ್ಥಶಾಲಿ; ಧರ್ಮವನ್ನು ಪಾಲಿಸುವವನು: ಸ್ವಧರ್ಮವನ್ನು ಪಾಲಿಸುವವ; ತನ್ನವರನ್ನು ರಕ್ಷಿಸುವವ; ವೇದವೇದಾಂಗಗಳನ್ನು ಚೆನ್ನಾಗಿ ಅರಿತವ; ಧನುರ್ವಿದ್ಯೆಯಲ್ಲೂ ನಿಷ್ಣಾತ; ಸಕಲ ಶಾಸ್ತ್ರಗಳ ತತ್ತ್ವವನ್ನು ಬಲ್ಲವ; ಚೆನ್ನಾದ ಜ್ಞಾಪಕಶಕ್ತಿಯುಳ್ಳವ;
ಪ್ರತಿಭಾವಂತ. ಈ ಪಟ್ಟಿ ಇನ್ನೂ ಮುಗಿದಿಲ್ಲ. ರಾಮ ಸರ್ವಲೋಕಪ್ರಿಯ– ಎಲ್ಲರೂ ಅವನನ್ನು ಇಷ್ಟಪಡುತ್ತಾರೆ. ಅವನು ಜನರಲ್ಲಿ ಮೃದುವಾಗಿ (ಸಾಧು) ನಡೆದು
ಕೊಳ್ಳುವವನು. ಈ ಕಾರಣದಿಂದಲೂ ಅವನು ಜನರಿಗೆ ಇಷ್ಟ. ಅವನು ಗಂಭೀರನೂ ಹೌದು. ಅಷ್ಟೇ ಅಲ್ಲ. ಅವನು ಪಕ್ಷಪಾತವಿಲ್ಲದೆ ನಡೆದುಕೊಳ್ಳುವವನು. ಜನರು ಅವನನ್ನು ಯಾವಾಗ ನೋಡಿದರೂ ಆನಂದಿಸುತ್ತಿದ್ದರು (ಸದೈವ ಪ್ರಿಯದರ್ಶನಃ). ಅವನ ತಾಯಿಯಾದ ಕೌಸಲ್ಯೆಯ ಆನಂದವನ್ನು ಹೆಚ್ಚಿಸುವವನು (ಕೌಸಲ್ಯಾನಂದವರ್ಧನಃ). ಅವನು ಎಲ್ಲ ಗುಣಗಳ ಗಣಿ (ಸರ್ವಗುಣೋಪೇತ). ಅಂಥ ಮಗ ತಾಯಿಗೆ ಸಂತಸವನ್ನುಂಟುಮಾಡುವುದು ಸಹಜವೇ.

ಮುಂದಿನ ವರ್ಣನೆಗಳಲ್ಲಿ ಉಪಮೆಗಳ ಸರಣಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT