ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಂಶದ ಅನನ್ಯ ‘ಹೂವು’!

Last Updated 8 ಸೆಪ್ಟೆಂಬರ್ 2017, 20:12 IST
ಅಕ್ಷರ ಗಾತ್ರ

2011ರ ಜನವರಿಯ ಒಂದು ದಿನ ಬೆಂಗಳೂರಿನ ಬಾದಾಮಿ ಹೌಸ್‌ನಲ್ಲಿ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮಕ್ಕೆಂದು ಬಂದಿದ್ದ ಆರ್‌.ಎನ್. ಸುದರ್ಶನ್ ತಮ್ಮದೇ ಚಿತ್ರಗಳ ಫೋಟೊಗಳನ್ನು ಕೂಲಂಕಷವಾಗಿ ಗಮನಿಸುತ್ತಾ ನಿಂತರು.

ಆ ಜಾಗದಲ್ಲಿ ಪೇಂಟಿಂಗ್ ವಾಸನೆ ಬರುತ್ತಿತ್ತು. ಹಾಗೆ ನೋಡಿದರೆ ಬಾದಾಮಿ ಹೌಸ್‌ನಲ್ಲಿ ಬೇರೆಯದೇ ವಾಸನೆ ಮೂಗಿಗೆ ಬಡಿಯುತ್ತದೆ. ಅದನ್ನು ‘ಸಿನಿಮಾ ವಾಸನೆ’ ಎಂದು ಚಲನಚಿತ್ರ ಪ್ರೇಮಿಗಳು ಕರೆಯುತ್ತಿದ್ದುದೂ ಇದೆ. ಸುದರ್ಶನ್ ಆ ದಿನ ತಮ್ಮ ಗತಕಾಲವನ್ನು ನೆನಪಿಸಿಕೊಳ್ಳುತ್ತಾ ಬಾಲ್ಯದ ಪ್ರಸಂಗವೊಂದನ್ನು ಹಂಚಿಕೊಂಡಿದ್ದರು. ತಂದೆ ಆರ್. ನಾಗೇಂದ್ರರಾಯರು ಅವರನ್ನು ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ಗಳಿಗೆ ಕರೆದುಕೊಂಡು ಹೋಗುತ್ತಿದ್ದರಂತೆ. ಆಗ ಸೆಟ್‌ಗಳಿಗೆ ಪೇಂಟಿಂಗ್ ಹೊಡೆಯುವುದೆಂದರೆ ಸಂಭ್ರಮ. ಆ ಕಾಲದ ಪೇಂಟಿಂಗ್ ವಾಸನೆ ಸುದರ್ಶನ್‌ಗೆ ಆಗುತ್ತಿರಲಿಲ್ಲ. ‘ಈ ಸಿನಿಮಾ ಸಹವಾಸವೇ ನನಗೆ ಬೇಡ’ ಎಂದು ಆಗ ಅಪ್ಪನಲ್ಲಿ ಸುದರ್ಶನ್ ಹೇಳಿದ್ದರಂತೆ. ಆದರೆ, ಅವರು ತಮ್ಮ ಬದುಕಿನ ಐದು ದಶಕ ಬಣ್ಣ ಹಚ್ಚಿದ್ದು ಬಾಲ್ಯದ ಆ ಮಾತು ಎಷ್ಟರ ಮಟ್ಟಿಗೆ ಸುಳ್ಳಾಯಿತು ಎನ್ನುವುದಕ್ಕೆ ಸಾಕ್ಷಿ.

ಆರ್. ನಾಗೇಂದ್ರರಾಯರು ಚಿತ್ರರಂಗದ ಪ್ರಾತಃಸ್ಮರಣೀಯರಲ್ಲಿ ಒಬ್ಬರು. ಅವರ ಮೂವರೂ ಮಕ್ಕಳು ಚಿತ್ರರಂಗದಲ್ಲಿಯೇ ತೊಡಗಿಕೊಂಡದ್ದು ವಿಶೇಷ. ಆರ್‌.ಎನ್. ಜಯಗೋಪಾಲ್ ಸೊಗಸಾದ ಹಾಡುಗಳು, ಸಂಭಾಷಣೆ, ಚಿತ್ರಕಥೆಗಳನ್ನು ಕೊಟ್ಟವರು. ದೊಡ್ಡ ಮಗ ಆರ್.ಎನ್. ಕೃಷ್ಣ ಪ್ರಸಾದ್ ಸಿನಿಮಾಟೊಗ್ರಫರ್ ಆಗಿ ಪ್ರಯೋಗಕ್ಕೆ ಒಡ್ಡಿಕೊಂಡವರು. ತಮಿಳಿನ ‘ಮೈಕಲ್ ಮದನ್ ಕಾಮರಾಜನ್’ ಚಿತ್ರದ ಕ್ಯಾಮೆರಾ ಕೌಶಲ ಅವರದ್ದೆ. ಕೊನೆಯ ಮಗ ಸುದರ್ಶನ್ ‘ರೊಮ್ಯಾಂಟಿಕ್ ಹೀರೊ’ ಆಗಿ ಮೊದಲ ಇನಿಂಗ್ಸ್ ಪ್ರದರ್ಶಿಸಿದರು. ಆಮೇಲೆ ಖಳನಾಗುವ ಅವಕಾಶ ಬಂದಾಗಲೂ ಬೆನ್ನುಮಾಡಲಿಲ್ಲ. ಮಾಂತ್ರಿಕನ ಪಾತ್ರದಲ್ಲಿಯೂ ಕಣ್ಣರಳಿಸಿ ಕಾಡಿದರು. ಸ್ವಾಮೀಜಿಯಾಗಿ ಕಾವಿ ತೊಡಲೂ ಹಿಂಜರಿಯಲಿಲ್ಲ.

1939ರ ಮೇ 2ರಂದು ಹುಟ್ಟಿದ ರಟ್ಟಿಹಳ್ಳಿ ನಾಗೇಂದ್ರರಾವ್ ಸುದರ್ಶನ್, ‘ವಿಜಯನಗರದ ವೀರಪುತ್ರ’ ಸಿನಿಮಾ ನಾಯಕನಾದಾಗ 21ರ ಯುವಕ. ಅಣ್ಣ ಜಯಗೋಪಾಲ್ ಬರೆದ ಕಥೆಯನ್ನು ಅಪ್ಪ ನಾಗೇಂದ್ರ ರಾಯರು ನಿರ್ದೇಶಿಸಿದ್ದು ಅದರ ವಿಶೇಷ. ಆ ಚಿತ್ರದ ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು’ ಹಾಡು ಇವತ್ತಿಗೂ ಜನಮಾನಸದಲ್ಲಿ ಉಳಿದಿದೆ. ನಟಿ ಶೈಲಶ್ರೀ ಅವರಿಗೆ ಕೈತುಂಬ ಅವಕಾಶಗಳಿದ್ದಾಗ ಅವರನ್ನು ಮದುವೆಯಾದ ಸುದರ್ಶನ್, ಆಮೇಲೂ ಚಿತ್ರಯಾತ್ರೆಯನ್ನು ಒಟ್ಟಾಗಿ ಮುಂದುವರಿಸಿದ್ದು ಅಪರೂಪವೇ ಹೌದು. ಇಬ್ಬರ ನಡುವೆ ಬದುಕಿನಲ್ಲಷ್ಟೇ ಅಲ್ಲ, ವೃತ್ತಿಬದುಕಿನಲ್ಲಿಯೂ ತಾಳ–ಮೇಳ ಚೆನ್ನಾಗಿತ್ತು. ‘ಕಾಡಿನ ರಹಸ್ಯ’, ‘ಸುವರ್ಣ ಭೂಮಿ’, ‘ಕಳ್ಳರ ಕಳ್ಳ’, ‘ನಗುವ ಹೂವು’, ‘ವಾಗ್ದಾನ’, ‘ಮಾಲತಿ ಮಾಧವ’– ಇವು 1960ರ ದಶಕದ ಕೊನೆಯ ಭಾಗದಿಂದ 1970ರ ದಶಕದ ಮೊದಲರ್ಧದವರೆಗೆ ಗಂಡ–ಹೆಂಡತಿ ಇಬ್ಬರೂ ಒಟ್ಟಾಗಿ ನಟಿಸಿದ ಚಿತ್ರಗಳು. ‘ನಗುವ ಹೂವು’ ಚಿತ್ರಕ್ಕೆ ಶೈಲಶ್ರೀ ಅವರೇ ಕಥೆ ಬರೆದಿದ್ದರೆನ್ನುವುದು ವಿಶೇಷ. ಕ್ಯಾನ್ಸರ್‌ ಕಾಯಿಲೆ ಇರುವವನ ಮೇಲೆ ಕಕ್ಕುಲತೆ ತೋರುವ ನರ್ಸ್‌ಳ ಕಥಾನಕದ ಆ ಸಿನಿಮಾಗೆ ಉತ್ತಮ ವಿಮರ್ಶೆಗಳು ವ್ಯಕ್ತವಾಗಿದ್ದವು. ಆ ಚಿತ್ರದ ‘ಇರಬೇಕು ಇರಬೇಕು ಅರಿಯದ ಕಂದನ ತರಹ’ ಹಾಡನ್ನು ಸುದರ್ಶನ್ ಅವರೇ ಹಾಡಿದ್ದನ್ನೂ ಮರೆಯಲಾಗದು.

ಅರವತ್ತು ಸಿನಿಮಾಗಳಲ್ಲಿ ಅವರು ಮುಖ್ಯಪಾತ್ರಗಳಲ್ಲಿ ಅಭಿನಯಿಸಿದರು. ನಾಯಕನಾಗಿ ಗುರುತಾದ ಮೇಲೆ ಖಳನಾಗಿ ನಟಿಸಲು ಎಲ್ಲರೂ ಒಪ್ಪುವುದಿಲ್ಲ. ಆದರೆ, ಸುದರ್ಶನ್‌ ಎಲ್ಲ ಪಾತ್ರಗಳನ್ನೂ ಏಕರೀತಿಯಾಗಿ ಭಾವಿಸಿದರು. ಶ್ರದ್ಧೆಯಿಂದ ಅಭಿನಯಿಸಿದರು. ಪೋಷಕ ಪಾತ್ರಗಳಲ್ಲೂ ಅವರ ತಾದಾತ್ಮ್ಯ ಕಾಣಬಹುದು. ಅಷ್ಟೇ ಏಕೆ, ಧಾರಾವಾಹಿಗಳ ನಟನೆಗೂ ಸೈ ಎಂದರು. 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಬಲ್ಲವರು ಲೆಕ್ಕ ಕೊಡುತ್ತಾರೆ.

ಮದ್ರಾಸ್‌ನಲ್ಲೇ (ಈಗಿನ ಚೆನ್ನೈ) ಅವರು ಬದುಕಿನ ಬಹುಕಾಲ ಕಳೆದರು. ತಮ್ಮ ನಾಡಿಗೆ ಮರಳಲೇಬೇಕು ಎಂದು ದಶಕದ ಹಿಂದೆ ಬೆಂಗಳೂರಿಗೆ ಬಂದರು. ಮೊದಲು ಮಲ್ಲೇಶ್ವರದಲ್ಲಿ ಬಾಡಿಗೆ ಮನೆ ಹಿಡಿಯಲು ನಟ ಜಗ್ಗೇಶ್ ಅವರಿಗೆ ಸಹಾಯ ಮಾಡಿದರು ಎಂದು ಆಪ್ತರು ಹೇಳುತ್ತಾರೆ. ತಮಿಳಿನಲ್ಲಿ ಕೆ. ಬಾಲಚಂದರ್ ನಿರ್ದೇಶನದ ‘ಪುನ್ನಗೈ ಮನ್ನನ್’ನಲ್ಲಿ ಅಭಿನಯಿಸಿದರು. ‘ವೇಳೈಕಾರನ್’, ‘ನಾಯಕನ್’, ‘ಪಾಗದೈ ಪನಿರೇಂದು’ ಅದೇ ಭಾಷೆಯಲ್ಲಿ ಅವರು ನಟಿಸಿದ ಇತರ ಕೆಲವು ಚಿತ್ರಗಳು. ಮಲಯಾಳದ ‘ಪಾರಿಜಾತಂ’ನಲ್ಲೂ ಅವರ ಅಭಿನಯವಿದೆ.

ಜಗ್ಗೇಶ್ ಅವರಿಗೆ ಬಾಡಿಗೆ ಮನೆ ಕೊಡಿಸಿದ್ದಷ್ಟೇ ಅಲ್ಲ, ‘ಮಠ’ ಸಿನಿಮಾದ ಪ್ರಮುಖ ಪಾತ್ರವೊಂದನ್ನೂ ಕೊಡಿಸಿದರು. ಆಮೇಲೆ ದ್ವಾರಕೀಶ್ ಅವರಿಗೆ ‘ಚಾರುಲತಾ’ ಚಿತ್ರದಲ್ಲಿ ಅವಕಾಶ ಕೊಟ್ಟರು. ಗಣೇಶ್ ಅಭಿನಯದ ‘ಜೂಮ್’ನಲ್ಲೂ ಬಣ್ಣ ಹಚ್ಚಿದ ಅವರು, ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಎದುರು ಮತ್ತೆ ತೆರೆದುಕೊಂಡಿದ್ದರು.‘ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ...’ ಅವರ ಕಂಠದ ಮಧುರವಾದ ಹಾಡು.
‘ಶುಭಮಂಗಳ’ ಚಿತ್ರದ ಈ ಹಾಡು ಕೇಳಿದರೆ, ಅಂಥ ಶಾರೀರದ ಸುದರ್ಶನ್ ಖಳನಾಗಿ ಅದು ಹೇಗೆ ಅಭಿನಯಿಸಿದರೋ ಎಂಬ ಪ್ರಶ್ನೆ ಮೂಡಿಸುತ್ತದೆ. ನಟ, ನಿರ್ಮಾಪಕ, ಗಾಯಕ ಎಲ್ಲಕ್ಕೂ ಮಿಗಿಲಾಗಿ ಸಹೃದಯ ಹಾಗೂ ಶ್ರಮಜೀವಿಯಾಗಿ ಸುದರ್ಶನ್ ಕಾಡುತ್ತಲೇ ಇರುತ್ತಾರೆ.
*
ಸ್ನೇಹಜೀವಿ
ಅವನು ಒಳ್ಳೆಯ ನಟ. ‘ಪ್ರಚಂಡ ಕುಳ್ಳ’ ಸಿನಿಮಾದಲ್ಲಿ ಮಾಂತ್ರಿಕನ ಪಾತ್ರ ಅವನಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಮದ್ರಾಸ್‌ಗೆ ಹೋದಾಗ ಅವನನ್ನು ಮಾತನಾಡಿಸಿಕೊಂಡು ಬರುತ್ತಿದ್ದೆ. ನಮ್ಮ ‘ಚಾರುಲತಾ’ ಚಿತ್ರದ ಒಂದು ಪಾತ್ರಕ್ಕೆ ಅವನೇ ಹೊಂದುತ್ತಾನೆ ಎಂದು ಅವಕಾಶ ಕೊಟ್ಟೆ. ಅವನು ಸ್ನೇಹಜೀವಿ. ತಮಾಷೆಯಾಗಿ ಮಾತನಾಡುತ್ತಿದ್ದ. ಕಲೆಗೆ ಸದಾ ಬೆಲೆ ಕೊಟ್ಟ. ಹೀರೊ ಆಗಿದ್ದವನು ವಿಲನ್ ಆಗಲು ಒಲ್ಲೆ ಎನ್ನಲಿಲ್ಲ. ಕೊನೆಗಾಲದಲ್ಲೂ ಧಾರಾವಾಹಿಗಳಲ್ಲಿ ನಟಿಸಿದ ಅವನು ವೃತ್ತಿಬದುಕಿನ ಬದ್ಧತೆಗೆ ಒಳ್ಳೆಯ ಉದಾಹರಣೆ.
–ದ್ವಾರಕೀಶ್,
ನಿರ್ಮಾಪಕ, ನಟ.
*
ಹಿರಿಯ ನಟ ಆರ್‌. ಎನ್‌. ಸುದರ್ಶನ್‌ ನಿಧನ
ಬೆಂಗಳೂರು:
ದಕ್ಷಿಣ ಭಾರತದ ಹಿರಿಯ ನಟ, ನಿರ್ಮಾಪಕ, ಕಂಠದಾನ ಕಲಾವಿದ ಆರ್‌.ಎನ್‌. ಸುದರ್ಶನ್‌ (78) ಶುಕ್ರವಾರ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಸುದರ್ಶನ್‌ ಅವರನ್ನು ಬನ್ನೇರುಘಟ್ಟದ ಸಾಗರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹುಭಾಷಾ ನಟರಾಗಿದ್ದ ಅವರು, ಕನ್ನಡ, ತಮಿಳು, ಮಲಯಾಳಂ ಭಾಷೆಗಳ 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ‘ವಿಜಯನಗರದ ವೀರಪುತ್ರ’ ಅವರು ನಟಿಸಿದ ಮೊದಲ ಸಿನಿಮಾ. ‘ಚಾರುಲತಾ’ ಅವರು ನಟಿಸಿದ್ದ ಕೊನೆಯ ಸಿನಿಮಾ. ಕಿರುತೆರೆ ಧಾರಾವಾಹಿ ‘ಅಗ್ನಿಸಾಕ್ಷಿ’ಯಲ್ಲಿಯೂ ಅವರು ನಟಿಸುತ್ತಿದ್ದರು.

ದೀರ್ಘ ಕಾಲದಿಂದ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ಅವರು ಇತ್ತೀಚೆಗೆ ಬಚ್ಚಲುಮನೆಯಲ್ಲಿ ಕಾಲುಜಾರಿ ಬಿದ್ದಿದ್ದರು. ಮೂಳೆಮುರಿತದಿಂದಾಗಿ ಹಾಸಿಗೆ ಹಿಡಿದ ಅವರು ಚೇತರಿಸಿಕೊಳ್ಳಲಿಲ್ಲ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸುದರ್ಶನ್ ಅವರಿಗೆ ಪತ್ನಿ, ನಟಿ ಶೈಲಶ್ರೀ ಇದ್ದಾರೆ. ‘ಬೆಂಗಳೂರಿನ ಹರಿಶ್ವಂದ್ರ ಘಾಟ್‌ನಲ್ಲಿ ಅಂತ್ಯಸಂಸ್ಕಾರ ನಡೆಯಿತು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT