ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದ ಆರೋಗ್ಯಕರ ತಂಬುಳಿ

Last Updated 9 ಸೆಪ್ಟೆಂಬರ್ 2017, 4:53 IST
ಅಕ್ಷರ ಗಾತ್ರ

ಅಮೃತಬಳ್ಳಿ ತಂಬುಳಿ
ಬೇಕಾಗುವ ವಸ್ತುಗಳು:
5-6 ಅಮೃತಬಳ್ಳಿಯ ಎಳೆ ಎಲೆಗಳು, ½ ಕಪ್ ಹಸಿ ತೆಂಗಿನಕಾಯಿ ತುರಿ, ¼ ಚಮಚ ಜೀರಿಗೆ, 2-3 ಕಪ್ ಸಿಹಿ ಮೊಸರು ಅಥವಾ ಮಜ್ಜಿಗೆ, ಉಪ್ಪು ರುಚಿಗೆ ತಕ್ಕಷ್ಟು, 2 ಚಮಚ ಬೆಣ್ಣೆ ಅಥವಾ ತುಪ್ಪ. ಸಣ್ಣ ತುಂಡು ಬೆಲ್ಲ.

ಮಾಡುವ ವಿಧಾನ: ಬಾಣಲೆಯನ್ನು ಒಲೆಯ ಮೇಲಿಟ್ಟು ಬೆಣ್ಣೆ ಅಥವಾ ತುಪ್ಪ ಹಾಕಿ. ಅಮೃತ ಬಳ್ಳಿಯ ಕಾಳುಮೆಣಸು ಮತ್ತು ಜೀರಿಗೆ ಹಾಕಿ ನಸು ಕಂದು ಬಣ್ಣ ಬರುವ ತನಕ ಹುರಿದು ಕೆಳಗಿಳಿಸಿ. ನಂತರ ಕಾಳುಮೆಣಸು ಮತ್ತು ಜೀರಿಗೆ ಹಾಕಿ ಸ್ವಲ್ಪ ಹುರಿಯಿರಿ. ನಂತರ ಕಾಯಿತುರಿಯ ಜೊತೆಗೆ ನೀರು ಹಾಕಿ ನುಣ್ಣಗೆ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಮಜ್ಜಿಗೆ, ಬೆಲ್ಲ, ಉಪ್ಪು ಬೆರೆಸಿ ಕಲಸಿ ಉಳಿದ ತುಪ್ಪದಲ್ಲಿ ಸಾಸಿವೆ ಒಗ್ಗರಣೆ ಮಾಡಿ ಬೆರೆಸಿ. ಶೀತವಾದಾಗ, ಜ್ವರ ಬಂದಾಗ ಈ ತಂಬುಳಿ ಊಟಕ್ಕೆ ಬಳಸಿದರೆ ಹಿತವೆನಿಸುತ್ತದೆ.

*
ತುಂಬೆ ಸೊಪ್ಪಿನ ತಂಬುಳಿ
ಬೇಕಾಗುವ ವಸ್ತುಗಳು:
½ ಕಪ್ ತುಂಬೆ ಸೊಪ್ಪು, ¼ ಚಮಚ ಕಾಳುಮೆಣಸು, 1 ಚಮಚ ಜೀರಿಗೆ, ½ ಕಪ್ ತೆಂಗಿನತುರಿ, ½ ಚಮಚ ಸಾಸಿವೆ, 1 ಒಣಮೆಣಸು, ½ ಚಮಚ ಉದ್ದಿನ ಬೇಳೆ, 1 ಚಮಚ ತುಪ್ಪ, ಉಪ್ಪು ರುಚಿಗೆ ತಕ್ಕಷ್ಟು, 2 ಕಪ್ ಮಜ್ಜಿಗೆ.

ಮಾಡುವ ವಿಧಾನ: ಬಾಣಲೆಯನ್ನು ಒಲೆಯ ಮೇಲಿಟ್ಟು ತುಪ್ಪ ಹಾಕಿ ಬಿಸಿಯಾದಾಗ ಜೀರಿಗೆ, ಕಾಳುಮೆಣಸು, ತುಂಬೆ ಸೊಪ್ಪು ಹಾಕಿ ಹುರಿಯಿರಿ. ನಂತರ ತೆಂಗಿನ ತುರಿ ಹಾಕಿ ತೊಳಸಿ ಕೆಳಗಿಳಿಸಿ ನಂತರ ಮಿಕ್ಸಿಗೆ ಹಾಕಿ ರುಬ್ಬಿ. ಮಜ್ಜಿಗೆ, ಉಪ್ಪು ಸೇರಿಸಿ. ನಂತರ ತುಪ್ಪದಲ್ಲಿ ಸಾಸಿವೆ, ಉದ್ದಿನ ಬೇಳೆ ಹಸಿಮೆಣಸು ಹಾಕಿ ಒಗ್ಗರಣೆ ಕೊಡಿ. ಈಗ ಆರೋಗ್ಯದಾಯಕ ತುಂಬೆ ಸೊಪ್ಪಿನ ತಂಬುಳಿ ಸವಿಯಲು ಸಿದ್ಧ. ಮಳೆಗಾಲದಲ್ಲಿ ಶೀತದಿಂದ ಬಾಧೆ ಪಡುವವರಿಗೆ ಇದರ ಸೇವನೆ ಒಳ್ಳೆಯದು.

*
ಚಿಗುರು ಎಲೆಗಳ ತಂಬುಳಿ
ಬೇಕಾಗುವ ವಸ್ತುಗಳು:
¼ ಕಪ್ ಪೇರಳೆ ಚಿಗುರು, ಕುಂಟಾಲ ಚಿಗುರೆಲೆ 7-8, ಎಳೆ ಗೇರುಮರದ ಚಿಗುರೆಲೆ 5-6, ಕಿಸ್ಕಾರ ಚಿಗುರೆಲೆ 3-4, ಮಾವಿನ ಚಿಗುರೆಲೆ 3-4, ನೆಕ್ಕರಿಕೆ ಚಿಗುರೆಲೆ 3-4, ½ ಕಪ್ ತೆಂಗಿನ ತುರಿ, 2-3 ಒಣಮೆಣಸು, 1 ಚಮಚ ತುಪ್ಪ, 3-4 ಚಮಚ ಸಿಹಿ ಮಜ್ಜಿಗೆ, ಉಪ್ಪು ರುಚಿಗೆ ತಕ್ಕಷ್ಟು, ½ ಚಮಚ ಸಾಸಿವೆ.

ಮಾಡುವ ವಿಧಾನ: ಚಿಗುರುಗಳನ್ನು ಚೆನ್ನಾಗಿ ತೊಳೆದು, ಕೆಂಪುಮೆಣಸು, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಿ. ನಂತರ ತೆಂಗಿನ ತುರಿಯ ಜೊತೆಗೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಈ ಮಿಶ್ರಣಕ್ಕೆ ಸಿಹಿ ಮಜ್ಜಿಗೆ ಮತ್ತು ಸ್ವಲ್ಪ ನೀರು ಮತ್ತು ಉಪ್ಪು ಸೇರಿಸಿ ಒಂದೆರಡು ಕುದಿ ಕುದಿಸಿ. ನಂತರ ತುಪ್ಪದಲ್ಲಿ ಸಾಸಿವೆ ಒಗ್ಗರಣೆ ಕೊಡಿ. ಈ ತಂಬುಳಿ ಸೇವಿಸುವುದರಿಂದ ಜೀರ್ಣ ಶಕ್ತಿ ಚೆನ್ನಾಗಿ ಆಗುತ್ತದೆ. ಹುಳದ ತೊಂದರೆ ನಿವಾರಣೆಯಾಗುತ್ತದೆ.

*
ಸಾಂಬ್ರಾಣಿ ಸೊಪ್ಪಿನ ತಂಬುಳಿ (ದೊಡ್ಡಪತ್ರ ಸೊಪ್ಪು)
ಬೇಕಾಗುವ ವಸ್ತುಗಳು:
9-10 ಸಾಂಬ್ರಾಣಿ ಸೊಪ್ಪು, 7-8 ಕಾಳುಮೆಣಸು, ½ ಕಪ್ ತೆಂಗಿನ ತುರಿ, 1 ಚಮಚ ತುಪ್ಪ, ಉಪ್ಪು ರುಚಿಗೆ ತಕ್ಕಷ್ಟು, 2-3 ಸಿಹಿ ಮಜ್ಜಿಗೆ, ½ ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು.

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಸಾಂಬ್ರಾಣಿ ಸೊಪ್ಪಿನ ತುಂಡುಗಳನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಸೊಪ್ಪು ಅಲ್ಲಲ್ಲಿ ನಸು ಕಂದು ಬಣ್ಣವಾದಾಗ ತೆಂಗಿನ ತುರಿ ಮತ್ತು ಕಾಳುಮೆಣಸು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಸ್ವಲ್ಪ ನೀರು ಮಜ್ಜಿಗೆ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಅನ್ನದೊಂದಿಗೆ ಸವಿಯಿರಿ. ಶೀತ, ಕಫ, ಕೆಮ್ಮು ಇರುವವರು ಈ ತಂಬುಳಿಯನ್ನು ಊಟದಲ್ಲಿ ಬಳಸುತ್ತಿದ್ದರೆ ಹಿತವೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT