ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ‘ವೈ–ಫೈ’ ಯೋಜನೆಗೆ ಗ್ರಹಣ

Last Updated 9 ಸೆಪ್ಟೆಂಬರ್ 2017, 6:12 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ರೈಲು ನಿಲ್ದಾಣ ಹಾಗೂ ಜಿಲ್ಲಾಸ್ಪತ್ರೆ ಆವರಣದಲ್ಲಿ ಸಂಸದ ಸುರೇಶ ಅಂಗಡಿಯವರ ಪ್ರದೇಶಾಭಿವೃದ್ಧಿ ನಿಧಿಯಡಿ ಸ್ಥಾಪನೆಯಾಗಿದ್ದ ವೈ–ಫೈ ಸೇವೆಗೆ ಬಿಎಸ್‌ಎನ್‌ಎಲ್‌ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ರಹಣ ಹಿಡಿದಿದೆ. ಹಲವು ದಿನಗಳಿಂದ ಬಳಕೆದಾರರಿಗೆ ಉಚಿತ ಅಂತರ್ಜಾಲದ ಸೇವೆ ಲಭ್ಯವಾಗುತ್ತಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರ ‘ಡಿಜಿಟಲ್‌ ಇಂಡಿಯಾ’ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಾಗೂ ಎಲ್ಲರಿಗೂ ಅಂತರ್ಜಾಲ ಸೇವೆ ದೊರೆಯಬೇಕೆನ್ನುವ ಉದ್ದೇಶದಿಂದ ಸುರೇಶ ಅಂಗಡಿ ಅವರು ವೈ–ಫೈ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಹೆಚ್ಚಿನ ಜನಸಾಂದ್ರತೆ ಇರುವ ಕಾರಣದಿಂದಾಗಿ ರೈಲು ನಿಲ್ದಾಣ ಹಾಗೂ ಜಿಲ್ಲಾಸ್ಪತ್ರೆ ಆವರಣಗಳನ್ನು ಅವರು ಆಯ್ಕೆ ಮಾಡಿಕೊಂಡಿದ್ದರು.

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಹಯೋಗದಲ್ಲಿ ಕಳೆದ ವರ್ಷ ನವೆಂಬರ್‌ 26ರಂದು ರೈಲು ನಿಲ್ದಾಣದಲ್ಲಿ ಹಾಗೂ ನಂತರದ ದಿನಗಳಲ್ಲಿ ಜಿಲ್ಲಾಸ್ಪತ್ರೆಯಲ್ಲಿ ವೈ–ಫೈ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ತಲಾ ₹4 ಲಕ್ಷ ವೆಚ್ಚ ಮಾಡಲಾಗಿತ್ತು. ಆರಂಭದಲ್ಲಿ ಉತ್ತಮವಾಗಿಯೇ ಕಾರ್ಯನಿರ್ವಹಿಸಿತ್ತು.

ಒಂದು ದಿನದಲ್ಲಿ 200 ಎಂ.ಬಿಯವರೆಗೆ ಪ್ರತಿಯೊಬ್ಬ ಬಳಕೆದಾರರು ಡಾಟಾವನ್ನು ಉಚಿತವಾಗಿ ಬಳಸಬಹುದಿತ್ತು. 2 ಎಂಬಿಪಿಎಸ್‌ವರೆಗೆ ವೇಗದಲ್ಲಿ ಅಂತರ್ಜಾಲದ ಸೇವೆ ಲಭ್ಯವಿತ್ತು.

ನಿರ್ವಹಣೆ ಸಮಸ್ಯೆ: ‘ಆರಂಭದ ದಿನಗಳ ನಂತರ ನಿರ್ವಹಣೆಯಲ್ಲಿ ಕೊರತೆ ಕಂಡುಬಂದಿದ್ದರಿಂದ ವೈ– ಫೈ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ವೈ– ಫೈ ಸಂಪರ್ಕ ಕಡಿತಗೊಳ್ಳುತ್ತಿರುವ ಬಗ್ಗೆ ಹಲವು ಬಾರಿ ಬಿಎಸ್‌ಎನ್‌ಎಲ್‌ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ದೂರು ನೀಡಿದ ತಕ್ಷಣ ಬಂದು ದುರಸ್ತಿ ಮಾಡಿಹೋಗುತ್ತಾರೆ. ಪುನಃ ಒಂದೆರಡು ದಿನಗಳಲ್ಲಿ ಮತ್ತೆ ಕಡಿತಗೊಳ್ಳುತ್ತದೆ. ಇದರಿಂದ ಬೇಸತ್ತು ಈಗೀಗ ದೂರು ನೀಡುವುದನ್ನೇ ನಿಲ್ಲಿಸಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರೇಲ್ವೆ ಅಧಿಕಾರಿಯೊಬ್ಬರು ತಿಳಿಸಿದರು.

‘ವೈ–ಫೈ ಕೇಂದ್ರ ಸ್ಥಾಪಿಸಲು ನಾವು ಜಾಗವನ್ನು ನೀಡಿದ್ದೇವೆ. ಇದರ ನಿರ್ವಹಣೆಯು ಸಂಪೂರ್ಣವಾಗಿ ಬಿಎಸ್‌ಎನ್‌ಎಲ್‌ಗೆ ಸೇರಿದೆ. ರೈಲ್ವೆ ಇಲಾಖೆಗೆ ವೈ–ಫೈ ಸೇವೆಗೆ ಯಾವುದೇ ಸಂಬಂಧವಿಲ್ಲ. ವೈ– ಫೈ ಕೇಂದ್ರವನ್ನು ನಿರ್ವಹಿಸಲು ಸಂಸದರ ನಿಧಿಯಿಂದ ಯಾವುದೇ ಅನುದಾನ ಬಿಎಸ್‌ಎನ್‌ಎಲ್‌ಗೆ ಬರುವುದಿಲ್ಲ. ಹೀಗಾಗಿ
ಅವರು ಆಸಕ್ತಿ ತೋರುತ್ತಿಲ್ಲವೆಂದು ಕೇಳಿದ್ದೇನೆ’ ಎಂದು ಅವರು ಹೇಳಿದರು.

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಎಸ್‌.ಟಿ. ಕಳಸದ ಮಾತನಾಡಿ, ‘ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗಿರುವ ವೈ–ಫೈ ಕೇಂದ್ರದ ಸೇವೆಯಲ್ಲಿ ಆಗಾಗ ವ್ಯತ್ಯಯ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಬಿಎಸ್‌ಎನ್‌ಎಲ್‌ ಅವರಿಗೆ ದೂರು ನೀಡಲಾಗಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿಯಾವುಲ್ಲಾ ಮಾತನಾಡಿ, ‘ವೈ–ಫೈ ಕೇಂದ್ರ ಸ್ಥಾಪಿಸಲು ಮಾತ್ರ ಸಂಸದರ ನಿಧಿಯಡಿ ಅನುದಾನ ನೀಡಲು ಅವಕಾಶವಿತ್ತು. ಅದರಂತೆ ನಾವು ತಲಾ ₹4 ಲಕ್ಷ ನೀಡಿದ್ದೇವೆ. ಆದರೆ, ಇದರ ನಿರ್ವಹಣೆಗಾಗಿ ಅನುದಾನ ನೀಡಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲ’ ಎಂದರು.

ಬೆಳಗಾವಿ ಬಿಎಸ್‌ಎನ್‌ಎಲ್‌ ವೃತ್ತದ ಪ್ರಧಾನ ವ್ಯವಸ್ಥಾಪಕ ದೀಪಕ್‌ ತಯಾಲ್‌ ಮಾತನಾಡಿ, ‘ವೈ– ಫೈ ಕೇಂದ್ರದ ನಿರ್ವಹಣೆಯು ಸಂಪೂರ್ಣವಾಗಿ ನಮಗೆ ಸೇರಿದೆ. ದುರಸ್ತಿ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದ್ದೇನೆ. ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದಲ್ಲಿ ನಿರ್ಧಾರವಾಗಬೇಕಾಗಿದೆ’ ಎಂದು ಹೇಳಿದರು.

* *

ಈ ಸಮಸ್ಯೆ ನನ್ನ ಗಮನಕ್ಕೆ ಬಂದಿರಲಿಲ್ಲ. ಬಿಎಸ್‌ಎನ್‌ಎಲ್‌ ಹಿರಿಯ ಅಧಿಕಾರಿಗಳ ಹಾಗೂ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಬಗೆಹರಿಸಲು ಪ್ರಯತ್ನಿಸುತ್ತೇನೆ
ಸುರೇಶ ಅಂಗಡಿ  
ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT