ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಕುಂಟುತ್ತಿದೆ ‘ಜನೌಷಧ’ ಯೋಜನೆ

Last Updated 9 ಸೆಪ್ಟೆಂಬರ್ 2017, 6:21 IST
ಅಕ್ಷರ ಗಾತ್ರ

ಬೆಳಗಾವಿ: ಜನೌಷಧ ಜನರಿಕ್‌ ಮೆಡಿಕಲ್‌ ಸ್ಟೋರ್‌ಗಳನ್ನು ತೆರೆಯುವ ಯೋಜನೆ ಜಿಲ್ಲೆಯಲ್ಲಿ ಕುಂಟುತ್ತಿದೆ! ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ‘ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನ’ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲೂ ಮಳಿಗೆಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದೆ. ಇದರಿಂದಾಗಿ, ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧಿಗಳನ್ನು ಒದಗಿಸುವ ಉದ್ದೇಶದ ಯೋಜನೆಗೆ ಗ್ರಹಣ ಬಡಿದಿದೆ.

ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಅಂತೆಯೇ, ಜಿಲ್ಲೆಗೆ 12 ಮಳಿಗೆಗಳನ್ನು ಮಂಜೂರು ಮಾಡಲಾಗಿದೆ. 9 ತಾಲ್ಲೂಕು ಆಸ್ಪತ್ರೆಗಳ ಜತೆಗೆ, ಸಂಕೇಶ್ವರ, ನಿಪ್ಪಾಣಿ ಹಾಗೂ ಕಾಗವಾಡದಲ್ಲಿ ಆರಂಭಕ್ಕೆ ಯೋಜಿಸಲಾಗಿದೆ. ಪ್ರಸ್ತುತ ಚಿಕ್ಕೋಡಿ ಹಾಗೂ ಹುಕ್ಕೇರಿಯಲ್ಲಿ ಮಾತ್ರ ಈ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಇತರೆಡೆಗೆ ವಿಸ್ತರಿಸುವ ಕಾರ್ಯ ನನೆಗುದಿದೆ ಬಿದ್ದಿದೆ. ಪರಿಣಾಮ, ಮಹತ್ವದ ಯೋಜನೆಯ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ.

ಫಾರ್ಮಾಸಿಸ್ಟ್‌ಗಳಿಂದ ತೆರೆದ ಬಿಡ್‌ಗಳನ್ನು ಸರ್ಕಾರವು ಈಚೆಗಷ್ಟೇ ಆಹ್ವಾನಿಸಲಾಗಿದೆ. ಇದರಿಂದಾಗಿ, ಸದ್ಯಕ್ಕೆ ಮಳಿಗೆಗಳು ಕಾರ್ಯಾರಂಭ ಮಾಡುವ ಸಾಧ್ಯತೆಗಳಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಅನುಕೂಲ ಮಾಡಿಕೊಡುವ ಉದ್ದೇಶ: ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಪ್ಪಾಸಾಹೇಬ ನರಹಟ್ಟಿ, ‘ಈ ಮೊದಲು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಮಳಿಗೆ ತೆರೆಯಲು ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ಗೆ (ಎಂಎಸ್‌ಐಎಲ್‌) ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಚಿಕ್ಕೋಡಿ, ಹುಕ್ಕೇರಿಯಲ್ಲಿ ಮಳಿಗೆಗಳು ಆರಂಭಗೊಂಡಿವೆ. ಈಚೆಗೆ ಹೊರಡಿಸಿದ ಆದೇಶದ ಪ್ರಕಾರ, ಉಳಿದ ಮಳಿಗೆಗಳನ್ನು ಪರವಾನಗಿ ಹೊಂದಿರುವ ಫಾರ್ಮಾಸಿಸ್ಟ್‌ಗಳಿಗೆ ನೀಡುವುದಕ್ಕೆ ಉದ್ದೇಶಿಸಲಾಗಿದೆ ಎನ್ನುವ ಮಾಹಿತಿ ಬಂದಿದೆ’ ಎಂದು ಹೇಳಿದರು.

‘ಮಳಿಗೆಗಳನ್ನು ಆರಂಭಿಸಲು ತಾಲ್ಲೂಕು ಆಸ್ಪತ್ರೆಗಳ ಆವರಣದಲ್ಲಿ ಜಾಗ ತೋರಿಸಲಾಗಿದೆ. ನವೀಕರಣ ಮಾಡಿಕೊಳ್ಳಬೇಕು. ಯಾರು ಮಳಿಗೆ ತರಿಸುತ್ತಾರೋ ಅವರೇ ಔಷಧಿಗಳನ್ನು ತರಿಸಿಕೊಳ್ಳಬೇಕು. ರೋಗಿಗಳಿಗೆ ಅಗ್ಗದ ದರದಲ್ಲಿ ಔಷಧಿಗಳು ಲಭ್ಯವಾಗುವಂತೆ ಮಾಡುವುದು ಯೋಜನೆಯ ಉದ್ದೇಶ. ಇದರಿಂದ ಜನಸಾಮಾನ್ಯರಿಗೆ ಬಹಳಷ್ಟು ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಪಟ್ಟಿ ಮಾಡಿದ 500ಕ್ಕೂ ಹೆಚ್ಚು ಜನರಿಕ್‌ ಔಷಧಿಗಳನ್ನು ಈ ಮಳಿಗೆಯಲ್ಲಿ ಮಾರಲಾಗುವುದು. ನಿರ್ವಹಣೆ ಮತ್ತು ಜವಾಬ್ದಾರಿ ನೋಡಿಕೊಳ್ಳುವುದಕ್ಕೆ ‘ಬಿ ಫಾರ್ಮಸಿ’ ಮುಗಿದವರನ್ನು ನಿಯೋಜಿಸಲಾಗುತ್ತದೆ. ಲಾಭದ ಉದ್ದೇಶದಿಂದ ಮಳಿಗೆಗಳನ್ನು ತೆರೆಯುವಂತಿಲ್ಲ. ಮಳಿಗೆ ಸ್ಥಾಪಿಸುವುದಕ್ಕೆ ₹ 1.5 ಲಕ್ಷ ಹಾಗೂ ₹ 1 ಲಕ್ಷ ಮೊತ್ತದ ಔಷಧಿಗಳನ್ನು ಕೇಂದ್ರ ಸರ್ಕಾರವು ಕೊಡಲಿದೆ. ಔಷಧಿ ಮಾರಾಟದಿಂದ ಬರುವ ಹಣದಿಂದಲೆ ಮತ್ತೆ ಔಷಧಿ ಸಂಗ್ರಹಿಸಿಕೊಂಡು ಇವುಗಳನ್ನು ಮುನ್ನಡೆಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಜನೌಷಧಿ ಮಳಿಗೆ ಆರಂಭಿಸುವುದಕ್ಕೆ ಕರ್ನಾಟಕ ರಾಜ್ಯ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಅಂಡ್‌ ವೇರ್‌ ಹೌಸಿಂಗ್‌ ಸೊಸೈಟಿ ಹಾಗೂ ರೆಡ್‌ ಕ್ರಾಸ್‌ ಸೊಸೈಟಿಗಳಿಗೆ ಈ ಹಿಂದೆಯೇ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಆದರೆ, ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಮಳಿಗೆಗಳನ್ನು ತೆರೆಯಲಾಗಿತ್ತು. ಇದಾದ ನಂತರ ಎಂಎಸ್‌ಐಎಲ್‌ಗೆ ವಹಿಸಲಾಗಿತ್ತು. ಬಳಿಕವೂ ಯೋಜನೆ ನಿರೀಕ್ಷಿತ ಪ್ರಗತಿ ಕಂಡಿಲ್ಲ.

‘ಕೇಂದ್ರ ಪೂರೈಸುತ್ತದೆ’
ಕಂಪೆನಿಗಳ ಹೆಸರಿಲ್ಲದೆ ಅಗ್ಗದ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳನ್ನು ಜನರಿಕ್‌ ಔಷಧಿಗಳೆಂದು ಕರೆಯಲಾಗುತ್ತದೆ. ಬ್ರಾಂಡೆಡ್‌ ಔಷಧಿಯಷ್ಟೇ ಉತ್ತಮ ಗುಣಮಟ್ಟ ಮತ್ತು ರೋಗನಿವಾರಣೆಯ ಸಾಮರ್ಥ್ಯ ಹೊಂದಿರುತ್ತವೆ. ಪ್ರಧಾನಮಂತ್ರಿ ಜನೌಷಧಿ ಯೋಜನೆ ಅಡಿಯಲ್ಲಿ ಕೇಂದ್ರವು ಈ ಔಷಧಿಗಳನ್ನು ಪೂರೈಸುತ್ತದೆ ಎನ್ನುತ್ತಾರೆ ಅಧಿಕಾರಿಗಳು.

‘ಮಳಿಗೆ ಆರಂಭಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಂಡು ಬಂದವರಿಗೆ ನಾವು ಪರವಾನಗಿ ನೀಡುತ್ತೇವೆ’ ಎಂದು ಉಪಔಷಧ ನಿಯಂತ್ರಕ ದೀಪಕ್ ಗಾಯಕವಾಡ ಪ್ರತಿಕ್ರಿಯಿಸಿದರು.

‘ಮಹಾಂತೇಶ ನಗರದ ಕೆಎಚ್‌ಬಿ ಕಾಲೊನಿಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ ಆರಂಭಿಸಲಾಗಿದೆ. ಅಧಿಕ ರಕ್ತದೊತ್ತಡ, ಮಧುಮೇಹದಂಥ ಸಮಸ್ಯೆಗಳಿಗೆ ನಿತ್ಯವೂ ಔಷಧ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ವಿದೇಶಗಳಿಂದ ಬರುವ ಔಷಧಗಳನ್ನು ಉತ್ಪಾದನಾ ವೆಚ್ಚಕ್ಕಿಂತ ಶೇ. 75ರಷ್ಟು ಹೆಚ್ಚಿನ ದರ ವಿಧಿಸಿ ಕಂಪೆನಿಗಳು ಮಾರುತ್ತವೆ. ಬಡವರಿಂದ ಇವುಗಳನ್ನು ಖರೀದಿಸಲಾಗುವುದಿಲ್ಲ.

ಈ ಪರಿಸ್ಥಿತಿ ಮನಗಂಡ ಪ್ರಧಾನಿ ನರೇಂದ್ರ ಮೋದಿ ‘ಭಾರತದಲ್ಲೇ ತಯಾರಿಸಿ’ ಕಾರ್ಯಕ್ರಮದಲ್ಲಿ ಔಷಧಿಗಳನ್ನು ರಿಯಾಯತಿ ದರದಲ್ಲಿ ಸಿಗುವಂತೆ ಮಾಡಲು ಯೋಜನೆ ಜಾರಿಗೊಳಿಸಿದ್ದಾರೆ. ಜನೌಷಧ ಮಳಿಗೆಗಳ ಆರಂಭಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದರು.

* *

ತಾಂತ್ರಿಕ ಕಾರಣದಿಂದ ಜನೌಷಧಿ ಮಳಿಗೆಗಳ ಆರಂಭ ನಿಧಾನವಾಗಿದೆ. ಈ ತಿಂಗಳ ಅಂತ್ಯದಲ್ಲಿ ಕಾರ್ಯಾರಂಭಕ್ಕೆ ಕ್ರಮ ವಹಿಸಲಾಗಿದೆ
ಡಾ.ಅಪ್ಪಾಸಾಹೇಬ ನರಹಟ್ಟಿ
ಡಿಎಚ್‌ಒ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT