ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿ ಹರಿದ ತುಂಗಭದ್ರೆ, ಹಗರಿ ನದಿ ಹಳ್ಳಗಳು

Last Updated 9 ಸೆಪ್ಟೆಂಬರ್ 2017, 6:43 IST
ಅಕ್ಷರ ಗಾತ್ರ

ಬಳ್ಳಾರಿ: ತಾಲ್ಲೂಕಿನಲ್ಲಿ ಶುಕ್ರವಾರ ಬೆಳಗಿನ ಜಾವ ಸುಮಾರು ಮೂರು ತಾಸು ಮಳೆ ಸುರಿಯಿತು. ರೂಪನಗುಡಿ ಸಮೀಪ ಹಳ್ಳ ತುಂಬಿ ರಸ್ತೆಸೇತುವೆಯಲ್ಲಿ ನೀರು ಹರಿದ ಪರಿಣಾಮ ಜನ–ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಕೆಂಪು ಮಣ್ಣಿನ ಜಲಪಾತವೊಂದು ರಸ್ತೆಯು ದ್ದಕ್ಕೂ ಮೂಡಿದ್ದನ್ನು ಕಂಡು ಗ್ರಾಮಸ್ಥರು ಬೆಳಿಗ್ಗೆಯೇ ಖುಷಿಪಟ್ಟರೂ, ಅದನ್ನು ದಾಟಿಹೋಗಲು ಸಾಧ್ಯವಾಗದೆ ಪರದಾಡಿದರು. ಚಿಣ್ಣರು ನೀರಿನಲ್ಲಿ ಆಟವಾಡಿದರು.

ನಗರದ ಜಿಲ್ಲಾ ಕ್ರೀಡಾಂಗಣ ರಸ್ತೆಯ ರೈಲು ಕೆಳಸೇತುವೆಯಲ್ಲಿ ಎಂದಿನಂತೆ ಮೊಣಕಾಲುದ್ದ ನೀರು ನಿಂತ ಪರಿಣಾಮ ವಾಗಿ ಜನ ಪರದಾಡಿದರು. ಪಾಲಿಕೆಯ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಮೋಟರ್ ಬಳಸಿ ನೀರನ್ನು ತೆರವು ಗೊಳಿಸಿದರು. ಆದರೆ ಎಲ್ಲ ನೀರನ್ನೂ ತೆರವುಗೊಳಿಸದೇ ಇದ್ದುದರಿಂದ ಮಧ್ಯಾಹ್ನದವರೆಗೂ ಸಂಚಾರ ಅಸ್ತವ್ಯಸ್ತವಾಗಿತ್ತು.

ಸ್ವಚ್ಛತೆ ಇಲ್ಲ: ‘ಮಂಗಳವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ನಗರದ ಹಲವೆಡೆ ಚರಂಡಿಗಳಲ್ಲಿ ನೀರು ಉಕ್ಕಿ ಹರಿದಿತ್ತು. ಮೂರು ದಿನವಾದರೂ ಚರಂಡಿ ಸ್ವಚ್ಛತೆಯೂ ನಡೆಯದೇ ಇರುವುದರಿಂದ ಅನಾರೋಗ್ಯಕಾರಿ ವಾತಾವರಣ ನಿರ್ಮಾಣವಾಗಿದೆ’ ಎಂದು ಕಪ್ಪಗಲ್ಲು ರಸ್ತೆಯ ನಿವಾಸಿ ನಾಗಭೂಷಣ ದೂರಿದರು.

‘ಇದೇ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಮೈದಾನದಲ್ಲಿ ನಿಂತ ನೀರನ್ನು ಚರಂಡಿಗಳಲ್ಲಿ ಹರಿಸಲಾಗುತ್ತಿದೆ. ಆದರೆ ಅಲ್ಲಿಂದ ಸಂಜೀವಿನ ಆಸ್ಪತ್ರೆಯವರೆಗೂ ಚರಂಡಿಯಲ್ಲಿ ನೀರು ಹರಿದುಹೋಗದೆ ರಸ್ತೆಯಲ್ಲೇ ನಿಲ್ಲುತ್ತಿದೆ. ಪಾಲಿಕೆ ಕೂಡಲೇ ಈ ಕಡೆಗೆ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

ಕೆಳಸೇತುವೆಯಲ್ಲೂ ನೀರು: ‘ನಗರದ ಕ್ರೀಡಾಂಗಣ ರಸ್ತೆ ಮತ್ತು ಸತ್ಯನಾರಾ ಯಣಪೇಟೆಯ ರೈಲು ಕೆಳಸೇತುವೆ ಗಳಲ್ಲೂ ಹೆಚ್ಚು ನೀರು ನಿಲ್ಲುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಈ ಸ್ಥಳಗಳಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲು ಪಾಲಿಕೆಗೆ ಇನ್ನೂ ಎಷ್ಟು ವರ್ಷ ಬೇಕು’ ಎಂದು ಸತ್ಯನಾರಾಯಣ ಪೇಟೆಯ ಸತ್ಯಪ್ಪ ಪ್ರಶ್ನಿಸಿದರು.
‘ಹವಾಮಾನ ಇಲಾಖೆಯ ಮುನ್ಸೂ ಚನೆಯಂತೆ ಇನ್ನೂ ನಾಲ್ಕು ದಿನ ಮಳೆ ಸಾಧ್ಯತೆ ಇರುವುದರಿಂದ ಪಾಲಿಕೆಯು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಗಾಂಧಿನಗರದ ನಾರಾಯಣ ಆಗ್ರಹಿಸಿದರು.

ನದಿಗಳಿಗೆ ಜೀವಕಳೆ
ಸಿರುಗುಪ್ಪ: ತಾಲ್ಲೂಕಿನಲ್ಲಿ ಗುರುವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಗೆ ಬತ್ತಿ ಹೋಗಿದ್ದ ತುಂಗಭದ್ರೆ, ಹಗರಿನದಿ, ಹಳ್ಳಗಳು ತುಂಬಿ ಹರಿಯುತ್ತಿದ್ದು, ತೆಕ್ಕಲ ಕೋಟೆಯ ಸಿಂಧೋಳ ಕಾಲೊನಿಯ ಮನೆಗಳು, ಶಾಲೆಯ ಮೈದಾನಕ್ಕೆ ಮಳೆನೀರು ನುಗ್ಗಿದೆ. ತಾಲ್ಲೂಕಿನಲ್ಲಿ ಹರಿಯುವ ತುಂಗ ಭದ್ರಾ ಮತ್ತು ಹಗರಿ ನದಿ, ಗರ್ಜಿಹಳ್ಳ, ಕರೂರು ಹಳ್ಳದಲ್ಲಿ ಮಳೆ ನೀರಿನ ಹರಿವು ಹೆಚ್ಚಿದೆ.

ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಸಿಂಧೋಳು ಕಾಲೊನಿಯಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳಿಗೆ ತೊಂದರೆ ಅನುಭವಿಸುವಂತಾಯಿತು. ದವಸ ಧಾನ್ಯ, ಬಟ್ಟೆಗಳು ತೊಯ್ದು ತೊಪ್ಪೆ ಯಾಗಿವೆ. ಕಾಲೊನಿಯ ಶಾಲಾ ಮೈದಾ ನದಲ್ಲಿ  ನೀರು ನಿಂತಿದ್ದರಿಂದ ಶುಕ್ರವಾರ ಶಾಲೆಗೆ ರಜೆ ಘೋಷಿಸಲಾಯಿತು. ಶಾಲೆಯ ಕಾಂಪೌಂಡ್ ಕಟ್ಟಡ ಕುಸಿದಿದೆ.

‘ಈ ಕಾಲೊನಿಗೆ ಸರಿಯಾದ ರಸ್ತೆ, ಚರಂಡಿ ಇಲ್ಲ. ಮಳೆ ಬಂದ್ರೆ  ಬಗಲಾಗಿನ ಹೊಲದ ನೀರು ಮನೆಗಳಿಗೆ ನುಗ್ಗುತ್ತದೆ. ಮನೆಯಲ್ಲಿನ ಅಕ್ಕಿ, ಬೇಳೆ ನೀರಿನಲ್ಲಿ ತೋಯ್ದು ಹೋಗ್ಯಾವ, ಅಡಿಗೆ ಮಾಡಲು ಜಾಗವಿಲ್ಲ’ ಎಂದು ನಿವಾಸಿ ಗಳಾದ ಈರಮ್ಮ, ಮಂಗಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಳ್ಳಾರಿ–ಸಿರುಗುಪ್ಪ ಮಾರ್ಗದ ರಾಜ್ಯ ಹೆದ್ದಾರಿಯ ತೆಕ್ಕಲಕೋಟೆ ಪಟ್ಟಣದ ಮುಖ್ಯರಸ್ತೆ ಮಳೆಯ ರಭಸಕ್ಕೆ ಕೊಚ್ಚಿ ಹೋಗಿ ಜಲಾವೃತಗೊಂಡಿದೆ. ವಾಹನ ಗಳು ಸಂಚರಿಸಲು ಅಡಚಣೆಯಾಗಿದೆ.

ಮಳೆ ವಿವರ : ‘ಸಿರುಗುಪ್ಪ- 27.4 ಮಿ.ಮೀ, ತೆಕ್ಕಲಕೋಟೆ- 85.4 ಮಿ.ಮೀ, ಸಿರಿಗೇರಿ-37.1ಮಿ.ಮೀ, ಎಂ.ಸುಗೂರು- 79.2 ಮಿ.ಮೀ , ಹಚ್ಚೊಳ್ಳಿ- 21.4 ಮಿ.ಮೀ , ರಾವಿಹಾಳ -20.2 ಮಿ.ಮೀ , ಕರೂರು -50.4 ಮಿ.ಮೀ , ಕೆ.ಬೆಳಗಲ್ಲು- 44.4 ಮೀ.ಮಿ. ಮಳೆಯಾಗಿದೆ’ ಎಂದು ಗ್ರೇಡ್‌ 2 ತಹಶೀಲ್ದಾರ್‌ ಬಿ.ಮಲ್ಲೇಶಪ್ಪ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಹೊಂಡವಾದ ಹೆದ್ದಾರಿ!
ಕಂಪ್ಲಿ: ಇಲ್ಲಿಯ ಸತ್ಯನಾರಾಯಣ ಪೇಟೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವ ರೀಯ ವಿಶ್ವವಿದ್ಯಾಲಯದ ಮುಂಭಾಗದ ಹೆದ್ದಾರಿಯು ಸರ್ಕಾರಿ ಆಸ್ಪತ್ರೆಯಿಂದ ವೆಂಕಟೇಶ್ವರ ಚಿತ್ರಮಂದಿರವರೆಗೆ ವಿಸ್ತರಣೆ ಮಾಡಿದ್ದು, ವಿದ್ಯುತ್‌ ಸ್ಥಳಾಂತರ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆ ದುರಸ್ತಿ ವಿಳಂಬವಾಗಿದೆ. ಇದರಿಂದ ರಸ್ತೆಯ ಬಹುತೇಕ ಕಡೆ ಗುಂಡಿಗಳು ನಿರ್ಮಾಣವಾಗಿದ್ದು, ನಿತ್ಯ ಸಂಚರಿಸುವ ವರು ತೊಂದರೆ ಅನುಭವಿಸುತ್ತಿದ್ದಾರೆ.

‘ಸದ್ಯ ರಸ್ತೆಯಲ್ಲಿನ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿ ದುರಸ್ತಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸ ಲಾಗಿದೆ. ರಸ್ತೆ ಡಾಂಬರೀಕರಣ ಶೀಘ್ರ ಆರಂಭವಾಗಲಿದೆ. ಅಲ್ಲಿಯವರೆಗೆ ರಸ್ತೆ ಮೂಲಕ ಸಂಚರಿಸುವವರು ಸಹಕಾರ ನೀಡಬೇಕು’ ಎಂದು ಪುರಸಭೆ ಅಧ್ಯಕ್ಷ ಎಂ. ಸುಧೀರ್ ಮನವಿ ಮಾಡಿದರು.

ಜಿನುಗು ಮಳೆ
ಸಂಡೂರು: ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ಜಿನುಗು ಮಳೆ ಯಾಗಿದೆ. ಶುಕ್ರವಾರ ಸಂಡೂರು ಮಳೆ ಮಾಪನ ಕೇಂದ್ರದಲ್ಲಿ 10 ಮಿ.ಮೀ, ಕುರೆಕುಪ್ಪ ಮಳೆ ಮಾಪನ ಕೇಂದ್ರದಲ್ಲಿ 51 ಮಿ.ಮೀ ಹಾಗೂ ಚೋರುನೂರು ಮಳೆ ಮಾಪನ ಕೇಂದ್ರದಲ್ಲಿ 7.3 ಮಿ.ಮೀ ಮಳೆಯಾದ ವರದಿಯಾಗಿದೆ.

ಮಳೆಗೆ ಮಣ್ಣಿನ ಮನೆ ಕುಸಿತ
ಕುರುಗೋಡು: ಪಟ್ಟಣವೂ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಮೀಪದ ಗೆಣಿಕೆಹಾಳು ಗ್ರಾಮದ ಮೆಹಬೂಬ್ ಅವರಿಗೆ ಸೇರಿದ ಮಣ್ಣಿನ ಮನೆ ಕುಸಿದಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

ಪಟ್ಟಣದ ಮಳೆ ಮಾಪನ ಕೇಂದ್ರ ದಲ್ಲಿ 36.2 ಮಿ.ಮೀ ಮಳೆ ದಾಖ ಲಾಗಿದೆ.  ಧಾರಾಕಾರ ಮಳೆಯಿಂದ ಈ ಭಾಗದ ಬಹುತೇಕ ಹಳ್ಳಕೊಳ್ಳಗಳು ತುಂಬಿವೆ. ತಗ್ಗು ಪ್ರದೇಶ ಮತ್ತು ಹೊಲಗದ್ದೆಗಳಲ್ಲಿ ನೀರು ನಿಂತಿದೆ.  ಮದಿರೆ ಗ್ರಾಮದ ಬಳಿ ಹರಿಯುವ ಹಿರೇಹಳ್ಳ ತುಂಬಿ ಸೇತುವೆಯ ಮೇಲೆ ಹರಿದ ಪರಿಣಾಮ ಮದಿರೆ ಮತ್ತು ಕೋಳೂರು ನಡುವೆ ಸಂಚಾರಕ್ಕೆ ಅಡ್ಡಿಯಾಯಿತು. ಗ್ರಾಮದಿಂದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮದಿರೆ ಕ್ರಾಸ್ ನಿಂದ ಕೋಳೂರು ಕ್ರಾಸ್ ಮಾರ್ಗವಾಗಿ ಬಳ್ಳಾರಿಗೆ ತೆರಳ ಬೇಕಾಯಿತು.

ಬಾದನಹಟ್ಟಿ ಮತ್ತು ಗೆಣಿಕೆಹಾಳು ಗ್ರಾಮಗಳ ಬಳಿ ಹರಿಯುವ ಹಳ್ಳಗಳು ತುಂಬಿದ ಪರಿಣಾಮ ರಸ್ತೆ ಸಂಚಾರಕ್ಕೂ ತೊಂದರೆಯಾಯಿತು. ಶುಕ್ರವಾರ ಮಧ್ಯಾ ಹ್ನದ ನಂತರ ನೀರಿನ ಹರಿವು ಕಡಿಮೆ ಯಾಗಿ ಸಂಚಾರ ಮುಂದುವರೆಯಿತು. ಪಟ್ಟಣ ದಾದ್ಯಂತ ಕಳೆದ ಒಂದು ವಾರ ದಿಂದ ಉತ್ತಮ ಮಳೆಯಾಗು ತ್ತಿದ್ದು, ರೈತರು ಹರ್ಷಚಿತ್ತರಾಗಿದ್ದಾರೆ. ಕಾಲುವೆ ನೀರಿಗಾಗಿ ಕಾಯುತ್ತಿದ್ದ ರೈತರು ಈಗ ಬಿತ್ತನೆ ಮತ್ತು ಸಸಿ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT