ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ: ಗುಡುಗು, ಮಿಂಚಿನ ಆರ್ಭಟದ ಮಳೆ 66ಮಿ.ಮೀ ಮಳೆ, ನೆಲಕ್ಕುರುಳಿದ 34ವಿದ್ಯುತ್ ಕಂಬ

Last Updated 9 ಸೆಪ್ಟೆಂಬರ್ 2017, 6:59 IST
ಅಕ್ಷರ ಗಾತ್ರ

ಕಾಳಗಿ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಜೆ ಮತ್ತು ತಡರಾತ್ರಿ ಬಿದ್ದ ಭಾರಿ ಮಳೆಗೆ ಕೆಲವೆಡೆ ಗಿಡ ಮರಗಳು, ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿಬಿದ್ದು ಹಾನಿ ಉಂಟಾಗಿದೆ.

ಈ ವರ್ಷದ ಮಳೆಗಾಲದಲ್ಲಿ ಆ. 27ರಂದು ಸುರಿದ 43.22ಮಿ.ಮೀ ಮಳೆ ಬಿಟ್ಟರೆ, ಗುರುವಾರ ತಡರಾತ್ರಿವರೆಗೂ ಬಂದಿರುವ 66ಮಿ.ಮೀ ಮಳೆಯೆ ಅಧಿಕವಾಗಿದೆ ಎಂದು ಕೃಷಿ ಅಧಿಕಾರಿ ರುಚಿ ಕೆಂಗಾಪುರ ತಿಳಿಸಿದ್ದಾರೆ.

ಗುಡುಗು, ಮಿಂಚಿನ ಆರ್ಭಟಕ್ಕೆ ನಿಪ್ಪಾಣಿ ಗ್ರಾಮದಲ್ಲಿ ಮೂವರಿಗೆ ಸಿಡಿಲಿನ ಶಾಕ್‌ ತಗುಲಿ ತಲೆಸುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕೆಲಕಡೆ ಗಾಳಿ ಮಿಶ್ರಿತ ಮಳೆಯಿಂದಾಗಿ ರಾಜಾಪುರ ಗ್ರಾಮದಲ್ಲಿ 4, ಅರಜಂಬಗಾ ಗ್ರಾಮದಲ್ಲಿ 14, ಕೊಡದೂರ ಗ್ರಾಮದಲ್ಲಿ 2, ಸುಗೂರ ಗ್ರಾಮದಲ್ಲಿ 1, ಇವಣಿ ಗ್ರಾಮದಲ್ಲಿ 13 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಇನ್ನು ಕೆಲವೆಡೆ ವಿದ್ಯುತ್ ಸಮಸ್ಯೆ ಉಂಟಾಗಿದೆ ಎಂದು ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜುಕುಮಾರ ಆಲಹಳ್ಳಿಕರ್ ಹೇಳಿದರು.

ಹೇರೂರ ಕೆ. ಬೆಣ್ಣೆತೊರಾ ಜಲಾಶಯಕ್ಕೆ ಹರಿದುಬಂದ ಹೊಸ ನೀರಿನಿಂದಾಗಿ ಒಳಹರಿವು 1,157ಕ್ಯೂಸೆಕ್ ಹೆಚ್ಚಾಗಿದೆ. ಪರಿಣಾಮ ಶುಕ್ರವಾರ ಮಧ್ಯಾಹ್ನ 12.20ಕ್ಕೆ ಒಂದು ಗೇಟ್‌ನಿಂದ 3ಇಂಚ್ ವಿಸ್ತಾರದಲ್ಲಿ 360ಕ್ಯೂಸೆಕ್ ನೀರು ಹೊರಬಿಡಲಾಗಿದೆ ಎಂದು ಬೆಣ್ಣೆತೊರಾ ಜಲಾಶಯದ ಎಇ ಪ್ರೇಮಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಚ್ಚಾ, ಕಲಗುರ್ತಿ ಹಳ್ಳಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಬಂದು ಕಾಗಿಣಾ ನದಿಗೆ ಹರಿದುಹೋಗುತ್ತಿದೆ. ಉದ್ದಿನ ಬೆಳೆ ರಾಶಿಯಲ್ಲಿ ತೊಡಗಿದ ರೈತರು ಬಹುತೇಕ ಹೊಲಗಳಲ್ಲಿ ಉದ್ದು ಕತ್ತರಿಸಿ ಹಾಕಿದ್ದಾರೆ. ಇದೇ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದುದ್ದರಿಂದ ಹೊಲಗಳೆಲ್ಲ ಕೆಸರಾಗಿ ಓಡಾಡಲು ಬಾರದಂತಾಗಿದೆ.

ಹಾಗೆ ಬಿಟ್ಟರೆ ಉದ್ದು ಅಲ್ಲೆ ಬಿದ್ದು ಮಣ್ಣಿನಲ್ಲಿ ಕೊಳೆತು ಹಾಳಾಗಿ ಹೋಗುತ್ತದೆ. ಕೈಗೆ ಬಂದಷ್ಟಾದರು ಫಸಲು ಮನೆಗೆ ಒಯ್ಯೋಣ ಎಂದುಕೊಂಡು ಅನೇಕ ರೈತರು ಹಾಗೊ ಹೀಗೊ ಮಾಡಿ ಬೆಳೆಯ ಫಳ್ಳೆಯನ್ನು ಅನುಕೂಲವಾಗುವ ರಸ್ತೆಗೆ ತಂದು ಒಣಗಿಸುತ್ತಿದ್ದಾರೆ.

ರಸ್ತೆ ಮೇಲೆ ಸಂಚರಿಸುವ ವಾಹನಗಳ ಭಾರಕ್ಕೆ ಉದ್ದಿನ ಕಾಳು, ತ್ಯಾಜ್ಯ ಬೇರ್ಪಡುತ್ತಿದೆ. ಬಳಿಕ ರೈತರು ರಾಶಿ ಮಾಡಿಕೊಂಡು ಮನೆ ಸೇರುತ್ತಿದ್ದಾರೆ. ಈ ದೃಶ್ಯ ಸಾಮಾನ್ಯವಾಗಿ ಕಾಳಗಿ ಸುತ್ತಲಿನ ಎಲ್ಲ ಜಿಲ್ಲಾ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಕಂಡುಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT