ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಯ ಮಧ್ಯೆ ಹೊಲ ಹರಗುವ ಟ್ರ್ಯಾಕ್ಟರ್

Last Updated 9 ಸೆಪ್ಟೆಂಬರ್ 2017, 7:00 IST
ಅಕ್ಷರ ಗಾತ್ರ

ಹನುಮಸಾಗರ: ಜೋಳ, ತೊಗರಿ, ಹತ್ತಿಯಂತಹ ಎತ್ತರದ ಸಸಿಗಳ ಮಧ್ಯೆ ಕಳೆ ನಿಯಂತ್ರಣಕ್ಕೆ ಸಮೀಪದ ಮಲಕಾಪುರ ಗ್ರಾಮದ ರೈತ ಅಡಿವೆಯ್ಯ ಹಿರೇಮಠ ಅಲ್ಲಿಲ್ಲಿ ಕೇಳಿದ ಮಾಹಿತಿ ಅನುಸರಿಸಿ ಕಬ್ಬಿಣದ ಅಲಗು (ಕುಡ) ತಯಾರಿಸಿ ಬೆಳೆಗಳ ಮಧ್ಯೆ ಉಳುಮೆ ಮಾಡುತ್ತಿದ್ದಾರೆ.

ಇಲ್ಲಿಯವರೆಗೆ ಬಯಲು ಜಮೀನು ಗಳಲ್ಲಿ ಮಾತ್ರ ಟ್ರ್ಯಾಕ್ಟರ್ ಮೂಲಕ ಹರಗುವ ಸಂಪ್ರದಾಯವಿತ್ತು. ಬೆಳೆಗಳ ಮಧ್ಯೆದಲ್ಲಿ ಟ್ರ್ಯಾಕ್ಟರ್ ಓಡಿಸಲು ಸಾಧ್ಯವೇ ಇರಲಿಲ್ಲ. ಆದರೆ ವಿನೂತನ ಮಾದರಿಯಲ್ಲಿ ತಯಾರಿಸಿರುವ ಕಬ್ಬಿಣದ ಅಲಗಿನಿಂದ ಎಡೆಗುಂಟೆ ಹೊಡೆದರೂ ಬೆಳೆಗಳಿಗೆ ಹಾನಿಯಾಗದೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗುವ ಲಕ್ಷಣ ಕಂಡು ಬರುತ್ತಿದೆ.

ತೊಗರಿ ಬೆಳೆ ಸಾಲಿನಿಂದ ಸಾಲಿಗೆ 45 ಅಂಗುಲ ಅಗಲವಿದ್ದು ಅದರಲ್ಲಿ 36 ಅಂಗುಲವಿರುವ ಟ್ರ್ಯಾಕ್ಟರ್‌ ಕುಂಟೆ ಹಾಕಲಾಗಿದೆ. ಒಂದೇ ಬಾರಿಗೆ ಎರಡು ಸಾಲಿನಲ್ಲಿ ಹರಗುವ ಪ್ರಕ್ರಿಯೆ ಇದಾಗಿದೆ. ಕುಂಟಿಯ ಮಧ್ಯದ ಸಾಲಿನಲ್ಲಿ ಬರುವ ಬೆಳೆಗಳಿಗೆ ತೊಂದರಯಾಗದಂತೆ ಆ ಭಾಗದಲ್ಲಿ 8 ಅಂಗುಲದಷ್ಟು ಸ್ಥಳ ಖಾಲಿ ಬಿಡಲಾಗಿದೆ. ಅದರ ಮೂಲಕ ಬೆಳೆಗಳು ಹಾದು ಹೋದರೂ ಬೆಳೆಗಳಿಗೇನೂ ಧಕ್ಕೆಯಾಗುವುದಿಲ್ಲ ಎಂದು ಅಡಿವೆಯ್ಯ ಹೇಳುತ್ತಾರೆ.

ಒಂದು ಗಂಟೆಯಲ್ಲಿ ಎತ್ತಿನ ಗಳೆಗಳ ಮೂಲಕ ಗರಿಷ್ಠ ಅರ್ಧ ಎಕರೆ ಮಾತ್ರ ಎಡೆಗುಂಟೆ ಹೊಡೆಯಬಹುದು. ದಿನಕ್ಕೆ ಗರಿಷ್ಟ ಎರಡು ಎಕರೆ ಉಳಬಹುದು. ಅಲ್ಲದೆ ಎತ್ತಿನ ಗಳೆ ಬಾಡಿಗೆ ದಿನವೊಂದಕ್ಕೆ ₹1,500 ಇದೆ. ಟ್ರಾಕ್ಟರ್ ಗಂಟೆಗೆ ಎರಡು ಎಕರೆ ಎಡಗುಂಟೆ ಹೊಡೆಯಬಹುದಾಗಿದ್ದು, ಗಂಟೆಗೆ ಮಾಲೀಕರು ₹400ಕ್ಕೆ ಟ್ರಾಕ್ಟರ್‌ ಬಾಡಿಗೆ ನಿಗದಿಪಡಿಸಿದ್ದಾರೆ ಎಂದು ಅವರು ಹೇಳುತ್ತಾರೆ.

ಇದೆಲ್ಲದಕ್ಕಿಂತ ಮಿಗಿಲಾಗಿ ಟ್ರಾಕ್ಟರ್ ಮೂಲಕ ಬೆಳೆಗಳ ಮಧ್ಯೆ ಎಡೆಗುಂಟೆ ಹೊಡೆದರೆ ಬೆಳೆಯ ಕಾಂಡಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಬಿದ್ದು ತೇವಾಂಶ ಹಿಡಿದಿಟ್ಟುಕೊಳ್ಳಲು ಸಹಾಯಕವಾಗುತ್ತದೆ. ಆಳವಾಗಿ ಕುಂಟಿ ಹಾಯುವುದರಿಂದ ಕಳೆ ಪ್ರಮಾಣ ತೀರಾ ಕಡಿಮೆಯಾಗುತ್ತದೆ. ಆದರೆ ಸಾಲಿನ ಕೊನೆಯಲ್ಲಿ ಮಾತ್ರ ಟ್ರ್ಯಾಕ್ಟರ್ ತಿರುಗಿಸುವಾಗ ಸ್ವಲ್ಪ ಪ್ರಮಾಣದಲ್ಲಿ ಬೆಳೆ ನಾಶವಾಗುತ್ತದೆ ಎಂದು ರೈತ ವಿಶ್ವನಾಥ ನಿಡಗುಂದಿಮಠ ಹೇಳುತ್ತಾರೆ. ಮಾಹಿತಿಗೆ ಮೊ. 98801 67279ಗೆ ಸಂರ್ಕಿಸಬಹುದು.
ಕಿಶನ್‌ರಾವ್‌ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT