ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳೆಗಿಳಿದ ಮಳೆ ನೋಡಿ ಪುಳಕಗೊಂಡರು

Last Updated 9 ಸೆಪ್ಟೆಂಬರ್ 2017, 7:06 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆ ರೈತರಲ್ಲಿ ಹೊಸ ಚೈತನ್ಯ ಸೃಷ್ಟಿಸಿದೆ. ಮಳೆ ಹಿನ್ನಡೆಯಿಂದ ಹತಾಶರಾಗಿ ಕೈಚೆಲ್ಲಿ ಕುಳಿತ ರೈತರಲ್ಲಿ ಹೊಸ ಭರವಸೆ ಮೂಡಿದೆ.
ಜಿಲ್ಲಾ ಕೇಂದ್ರದಿಂದ ಅಳವಂಡಿ, ಬೆಟಗೇರಿ ಭಾಗದವರೆಗೆ ಸಂಚರಿಸಿದ ಪ್ರಜಾವಾಣಿಗೆ ಹೊಸ ನಿರೀಕ್ಷೆಯ ನೋಟಗಳು ಸಿಕ್ಕಿದವು.

ತುಂಬಿದ ಕೃಷಿ ಹೊಂಡಗಳು: ಜಿಲ್ಲೆಯಲ್ಲಿ ಕೃಷಿ ಹೊಂಡ ನಿರ್ಮಾಣದಲ್ಲಿ ಮೊದಲ ಸ್ಥಾನ ಪಡೆದಿದ್ದ ಬನ್ನಿಕೊಪ್ಪದಲ್ಲಿ ಎಲ್ಲ ಹೊಂಡಗಳು ಭರ್ತಿಯಾಗಿವೆ. ಚೆಕ್‌ಡ್ಯಾಂಗಳಲ್ಲಿ ನೀರಿನ ಸೆಲೆ ನಿಂತಿದೆ. ಅಲ್ಲಲ್ಲಿ ಹರಗಿಟ್ಟು ಬಿಟ್ಟಿದ್ದ ಹೊಲಗಳಲ್ಲಿ ನಿಂತ ನೀರು ಕೃಷಿ ಚಟುವಟಿಕೆ ಮುಂದುವರಿಸುವಂತೆ ರೈತರಿಗೆ ಸೂಚನೆ ನೀಡಿದೆ.

'ಒಮ್ಮೆ ಬಿತ್ತಿದ್ದ ಬೆಳೆ ಮಳೆ ಹಿನ್ನಡೆಯಿಂದ ಕೈಕೊಟ್ಟಿತ್ತು. ಈಗ ಮರು ಬಿತ್ತನೆಗೆ ಮುಂದಾಗಿದ್ದೇವೆ. ಮೂರು ದಿನಗಳು ಸುರಿದ ಮಳೆ ಹೊಸ ಭರವಸೆ ಮೂಡಿಸಿದೆ. ಬರಗಾಲದ ಛಾಯೆ ಮರೆಯಾಗುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ' ಎಂದು ಬಿಕನಹಳ್ಳಿಯ ರೈತರು ಹೇಳಿದರು.

ಸಮೀಪದ ಮೈನಹಳ್ಳಿಯಲ್ಲೂ ಇದೇ ನೋಟ ಕಂಡುಬಂದಿತು. ಕ್ಯಾಮೆರಾ ಕಂಡೊಡನೆ ರೇಗಿದ ರೈತ ಬಸವರಾಜ, 'ಹಸಿರು ಕಂಡಾಕ್ಷಣ ಎಲ್ಲವೂ ಚೆನ್ನಾಗಿದೆ ಎಂದು ಅರ್ಥವಲ್ಲ. ಅದರ ಹಿಂದೆ ಸಾಕಷ್ಟು ಸಂಕಟಗಳೂ ಇವೆ. ಆಳುಗಳ ನಿರ್ವಹಣೆ, ಬಿತ್ತನೆ ಬೀಜ ಗೊಬ್ಬರದ ಬೆಲೆ, ಅದಕ್ಕೆ ಹೊಂದಿಸಬೇಕಾದ ಹಣ... ಇತ್ಯಾದಿ ತೊಂದರೆ ನಿಮಗೆ ಗೊತ್ತೇ?' ಎಂದು ಪ್ರಶ್ನಿಸಿದರು. 

ಖುಷಿಯಲ್ಲಿ ಕುರಿಗಳು, ಕುದುರೆಗಳು: ಹಿರೇಸಿಂಧೋಗಿಯಿಂದ ಅಳವಂಡಿ ಯವರೆಗಿನ ಮಾರ್ಗದಲ್ಲಿ ಸಾಲು ಸಾಲು ಸಾವಿರಾರು ಕುರಿಗಳು, ಜತೆಗಿದ್ದ ಕುದುರೆಗಳು ಸಮೃದ್ಧವಾಗಿ ಮೇಯುತ್ತಿದ್ದವು. ಕೇವಲ ಒಂದು ತಿಂಗಳ ಹಿಂದಷ್ಟೇ ಹಸಿರು ಹುಲ್ಲು ಸಿಗದೆ ಕಂಗಾಲಾಗಿದ್ದ ಅವುಗಳಿಗೆ ಈಗ ಸಮೃದ್ಧ ಮೇವು ಸಿಗುತ್ತಿದೆ. ಹಳ್ಳಗಳಲ್ಲಿ ಹರಿಯುವ ಸ್ವಚ್ಛ ನೀರು ದಾಹ ಇಂಗಿಸಿದೆ.

ಸಮೃದ್ಧ ಸಜ್ಜೆ ಬೆಳೆ: ಈ ಬಾರಿ ಸಜ್ಜೆ ಬೆಳೆ ನಿರೀಕ್ಷೆಗೂ ಮೀರಿ ಫಸಲು ಬಂದಿದೆ. ರಸ್ತೆಗಳಲ್ಲೇ ಸಜ್ಜೆ ತೆನೆ ಹರಡಿ ಕಾಳು ಬೇರ್ಪಡಿಸುವ ಕಾಯಕ ದಲ್ಲಿ ರೈತರು ತಲ್ಲೀನರಾಗಿದ್ದರು. ವೇಗವಾಗಿ ಸಂಚರಿಸುವ ವಾಹನಗಳಿಂದಾಗ ಬಹುದಾದ ಅಥವಾ ವಾಹನಗಳಿಗೆ ಈ ತೆನೆರಾಶಿಯಿಂದಾಗಬಹುದಾದ ಅಪಾಯವೂ ಅವರ ಗಣನೆಗೆ ಇರಲಿಲ್ಲ.

ಹಳ್ಳಗಳಲ್ಲಿ ಜಲಧಾರೆ: ಹಿರೇಹಳ್ಳದಲ್ಲಿ ನೀರು ಹರಿದಿದೆ. ಪರಿಣಾಮ ಕೋಳೂರು ಬ್ರಿಡ್ಜ್‌ ಕಂ ಬ್ಯಾರೇಜ್‌ನಲ್ಲಿ ನೀರು ತುಂಬಿ ಧಾರೆಯಾಗಿ ಹರಿಯುತ್ತಿದೆ. ಹಿರೇಸಿಂಧೋಗಿ ಸಮೀಪದ ಹಳ್ಳದಲ್ಲಿ ಯೂ ಇದೇ ನೋಟ, ಕೋಳೂರು ಗ್ರಾಮದ ರಸ್ತೆಬದಿಯ ಹಳ್ಳಗಳಲ್ಲೂ ನೀರು ತುಂಬಿದೆ. ಕೊಳವೆ ಬಾವಿಗಳಿಗೆ ಮೇಲ್ಮಟ್ಟದ ನೀರು ಲಭ್ಯವಾಗಿದೆ.

ಹೀಗೆಯೇ ಇರಲಿ: ಕೊನೆಗೂ ಮಳೆ ದೇವರು ಕಣ್ಣು ತೆರೆದಿದ್ದಾನೆ. ಮಳೆ ಧಾರಾಕಾರ ಬಂದಿದೆ. ಏನೂ ಹಾನಿ ಮಾಡಿಲ್ಲ ಎಂಬುದೊಂದು ಸಮಾಧಾನಕರ ವಿಚಾರ. ಹಿಂಗಾರು ಬೆಳೆಗಾದರೂ ಅನುಕೂಲವಾಗಲಿ ಎಂದು ರೈತರು ನಿರೀಕ್ಷಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT