ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗೆನಕಲ್‌: ತೆಪ್ಪ ಇಳಿಸಲು ನಿರ್ಬಂಧ

Last Updated 9 ಸೆಪ್ಟೆಂಬರ್ 2017, 7:36 IST
ಅಕ್ಷರ ಗಾತ್ರ

ಹನೂರು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಹೊಗೆನಕಲ್ ಜಲಪಾತದಲ್ಲಿ ನೀರಿನ ಹರಿವಿನ ಪ್ರಮಾಣ ಅಧಿಕವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತೆಪ್ಪಗಳನ್ನು ನದಿಗೆ ಇಳಿಸದಂತೆ ಅರಣ್ಯ ಇಲಾಖೆ ಸೂಚಿಸಿದೆ.

ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿದೆ. ನೀರಿನ ರಭಸ ಮತ್ತು ಸೆಳೆತ ಅಧಿಕವಾಗಿರುವುದರಿಂದ ತೆಪ್ಪದಲ್ಲಿ ಪ್ರವಾಸಿಗರನ್ನು ಕರೆದೊಯ್ಯುವುದಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.

ಜಲಪಾತದ ಸೊಬಗು ಇಮ್ಮಡಿಸಿದೆ. ತುಂಬಿ ಧುಮ್ಮಿಕ್ಕುತ್ತಿರುವ ಜಲಪಾತದ ಭೋರ್ಗರೆತ ಮತ್ತು ಮನಮೋಹಕ ದೃಶ್ಯಾವಳಿ ವೀಕ್ಷಣಾ ಸ್ಥಳದಿಂದ ಮನಸೆಳೆಯುವಂತಿದೆ. ಆದರೆ, ತೆಪ್ಪದಲ್ಲಿ ಜಲಪಾತದ ಕೆಳಭಾಗಕ್ಕೆ ತೆರಳಲು ಅವಕಾಶವಿಲ್ಲ. ಇದರಿಂದ ಸಾಲು ಸಾಲು ರಜೆಗಳ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಪ್ರವಾಸಿಗರು ನಿರಾಶೆ ಅನುಭವಿಸುವಂತಾಗಿದೆ.

ಕಳೆದ ವರ್ಷ ವರುಣನ ಅವಕೃಪೆಯಿಂದಾಗಿ ಕಾವೇರಿ ಒಡಲು ಬರಿದಾಗಿತ್ತು. ಹೀಗಾಗಿ ಹೊಗೆನಕಲ್‌ ಜಲಪಾತ ತನ್ನ ಅಂದ ಕಳೆದುಕೊಂಡಿತ್ತು. ನೀರಿಲ್ಲದ ಕಾರಣ ಪ್ರವಾಸಿಗರ ಸಂಖ್ಯೆಯೂ ಕುಸಿದಿತ್ತು. ಆದರೆ, ಎರಡು ತಿಂಗಳಿನಿಂದ ರಾಜ್ಯದ ವಿವಿಧೆಡೆ ಮಳೆ ಸುರಿದಿದ್ದರಿಂದ ಇಲ್ಲಿನ ಪ್ರವಾಸಿ ಚಟುವಟಿಕೆಗಳು ಮರುಜೀವ ಪಡೆದುಕೊಂಡಿದ್ದವು. ಜಲಪಾತ ಮೈದುಂಬಿಕೊಂಡಿರುವ ದೃಶ್ಯವನ್ನು ಸವಿಯಲು ರಜಾ ದಿನಗಳಲ್ಲಿ ನೂರಾರು ಪ್ರವಾಸಿಗರು ಇಲ್ಲಿಗೆ ಲಗ್ಗೆ ಇಡಲು ಆರಂಭಿಸಿದ್ದರು.

2015ರಲ್ಲಿ ತಮಿಳುನಾಡಿನ ಭಾಗದಲ್ಲಿ ಜರುಗಿದ ತೆಪ್ಪ ದುರಂತದಲ್ಲಿ ಹಸುಗೂಸು ಸೇರಿದಂತೆ ಒಂದೇ ಕುಟುಂಬದ 6 ಮಂದಿ ಜಲಸಮಾಧಿಯಾಗಿದ್ದರು. ಅಲ್ಲದೆ, ಜಲಪಾತಕ್ಕೆ ವೀಕ್ಷಣೆಗೆ ಬಂದ ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಪ್ರಕರಣಗಳು ಸಾಕಷ್ಟು ಜರುಗಿವೆ. ಈ ಭಾಗದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದೆ. ಹೀಗಾಗಿ, ಅಪಾಯಕ್ಕೆ ಆಸ್ಪದ ನೀಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ.

ಪರಿಣತರಿಗೆ ಮಾತ್ರ ಅವಕಾಶ: ನೀರಿನಲ್ಲಿ ಅಧಿಕ ಸೆಳೆತವಿರುವುದರಿಂದ ತಜ್ಞ ಈಜುಗಾರರು ಮತ್ತು ಪರಿಣತರಿಗೆ ಮಾತ್ರ ತೆಪ್ಪ ನಡೆಸಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಒಂದು ತೆಪ್ಪ ವಿಹಾರಕ್ಕೆ ಅನುಮತಿ ನೀಡಿದರೂ, ಜಲಪಾತದ ಬಳಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವಂತಿಲ್ಲ. ನದಿಯ ಇನ್ನೊಂದು ತೀರಕ್ಕೆ ಮಾತ್ರ ಕರೆದೊಯ್ಯಲು ಅವಕಾಶ ನೀಡಲಾಗಿದೆ.

ತೆಪ್ಪ ನಡೆಸುವ ವೃತ್ತಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ಜನರು ಬೇರೆ ವೃತ್ತಿಗಳನ್ನು ಅರಸಿ ಹೋಗುವಂತಾಗಿದೆ. ಕೆಲವರು ಸಮೀಪದ ಕಲ್ಲಿನ ಕ್ವಾರಿಗಳಲ್ಲಿ ಕೆಲಸ ಮಾಡಿದರೆ, ಇನ್ನು ಕೆಲವರು ಕೂಲಿ ಅರಸಿ ತಮಿಳುನಾಡಿಗೆ ತೆರಳುತ್ತಿದ್ದಾರೆ.

‘ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿರುವುರಿಂದ ತಾತ್ಕಾಲಿಕವಾಗಿ ತೆಪ್ಪ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಂದು ಪ್ರವಾಸಿಗರು ಬೇಸರ ಪಡುವ ಅಗತ್ಯವಿಲ್ಲ. ವ್ಯೂ ಪಾಯಿಂಟ್‌ನಿಂದ ಜಲಪಾತವನ್ನು ವೀಕ್ಷಿಸಬಹುದಾಗಿದೆ. ನೀರಿನ ಪ್ರಮಾಣ ಕಡಿಮೆಯಾದ ಕೂಡಲೇ ತೆಪ್ಪ ವಿಹಾರಕ್ಕೆ ಅನುಮತಿ ನೀಡಲಾಗುವುದು’ ಎಂದು ಅರಣ್ಯಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT