ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಗಿಡಗಳಿಗೆ ಮಾರಕ ದೈತ್ಯ ಆಫ್ರಿಕನ್‌ ಶಂಖುಹುಳು

Last Updated 9 ಸೆಪ್ಟೆಂಬರ್ 2017, 8:20 IST
ಅಕ್ಷರ ಗಾತ್ರ

ಸಕಲೇಶಪುರ: ಕಾಫಿ ಬೆಳೆಗೆ ಮಾರಕವಾಗಿರುವ ದೈತ್ಯ ಆಫ್ರಿಕನ್‌ ಶಂಖುಹುಳು ತಾಲ್ಲೂಕಿನ ಬಾಳ್ಳುಪೇಟೆ ವ್ಯಾಪ್ತಿಯ ಹಸುಗವಳ್ಳಿ, ಮೆಣಸುಮಕ್ಕಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ.

ಸಣ್ಣ ಗಾತ್ರದ ಶಂಖುಹುಳುಗಳು ಹೆಚ್ಚಾಗಿ ಕಂಡು ಬರುವುದು ಸಹಜ. ಆದರೆ, ದೈತ್ಯಾಕಾರದ ಆಫ್ರಿಕನ್‌ ಶಂಖುಹುಳುಗಳ ಬಾಧೆ ಹೆಚ್ಚಾದರೆ ಬಹಳಷ್ಟು ಪ್ರಮಾಣದ ಬೆಳೆ ನಾಶ ಆಗುತ್ತದೆ ಎಂದು ಬಾಳ್ಳುಪೇಟೆ ಮಾಸ್‌ ಕಾಫಿ ಸಂಸ್ಥೆಯ ತೇಜೇಶ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಅನಿಯಮಿತ ಮಳೆ, ಅತಿ ಉಷ್ಣಾಂಶ, ಸುಲಭವಾಗಿ ದೊರಕುವ ಆಹಾರ ಮೂಲಗಳಿಂದ (ಕಳೆ, ಪಾಚಿ ) ಶಂಖುಹುಳುವಿನ ಸಂತತಿ ಹೆಚ್ಚುತ್ತದೆ. ಈ ಹುಳು ಉಭಯಲಿಂಗಿಯಾಗಿದ್ದು, 50ರಿಂದ 200 ಹಳದಿ ಬಣ್ಣದ ಮೊಟ್ಟೆಗಳನ್ನು ಮಣ್ಣಿನಲ್ಲಿ ಇಡುತ್ತವೆ.

ಸಾಮಾನ್ಯವಾಗಿ 3ರಿಂದ 5 ವರ್ಷಗಳವರೆಗೆ ಜೀವಿತಾವಧಿ ಹೊಂದಿರುತ್ತದೆ ಎಂದು ಇಲ್ಲಿಯ ಕಾಫಿ ಮಂಡಳಿಯ ವಿಸ್ತರಣಾ ಅಧಿಕಾರಿ ಡಾ.ತಂಗರಾಜ್‌ ತಿಳಿಸಿದರು. ಈ ಹುಳುವು ಎಲೆಗಳ ಮೇಲೆ ಕಂಡು ಬಂದು, ಎಲೆಗಳಲ್ಲಿ ರಂಧ್ರಗಳನ್ನು ಮಾಡುತ್ತವೆ. ಇದರಿಂದ ಎಲೆ ಉದುರುತ್ತದೆ.

ನಿಯಂತ್ರಣ ಹೇಗೆ: ಕೊಳೆತ ಮರದ ತುಂಡುಗಳು ಹಾಗೂ ಇತರ ಆಶ್ರಯದಾತ ಗಿಡಗಳನ್ನು ತೆಗೆದು ಹಾಕಬೇಕು. ಇವುಗಳು ಶಂಖುಹುಳುಗಳ ಅಡಗುತಾಣಗಳಾಗಿವೆ. ತೋಟದಲ್ಲಿ ಕಂಡು ಬಂದ ಹುಳುಗಳನ್ನು ಸಂಗ್ರಹಿಸಿ ನಾಶ ಪಡಿಸಬೇಕು. ಹುಳುಗಳ ಗುಂಪಿನ ಮೇಲೆ ಚಿಪ್ಪಿನ ಸುಣ್ಣದ ಪುಡಿ, ಉಪ್ಪು, ಅಥವಾ ಬ್ಲೀಚಿಂಗ್‌ ಪುಡಿ ಹರಡುವುದರಿಂದ ನಾಶ ಮಾಡಹುದು.

ಅಕ್ಕಿ ತೌಡಿನ ಬೈಟ್‌: 60 ಕೆ.ಜಿ. ಅಕ್ಕಿ ತೌಡಿಗೆ 160 ಗ್ರಾಂನಷ್ಟು ಲಾರ್ವಿನ್‌ ಮತ್ತು 300 ಮಿಲಿಯಷ್ಟು ಹರಳೆಣ್ಣೆಯನ್ನು ಸೇರಿಸಬೇಕು. ನಂತರ 5 ಲೀಟರ್‌ ನೀರಿನಲ್ಲಿ 6 ಕೆ.ಜಿ. ಬೆಲ್ಲವನ್ನು ಕರಗಿಸಿ ತಯಾರಿಸಿದ ದ್ರಾವಣವನ್ನು ಅಕ್ಕಿ ತೌಡಿನೊಂದಿಗೆ ಮಿಶ್ರಣ ಮಾಡಬೇಕು.

ಮಿಶ್ರಣವು ಅತಿಯಾಗಿ ಒಣಗಿರದೆ, ಹೆಚ್ಚು ತೇವವೂ ಆಗಿರದಂತೆ ನೋಡಿಕೊಳ್ಳಬೇಕು. 150 ಗ್ರಾಂನಷ್ಟು ತೂಕದ 400 ಉಂಡೆಗಳನ್ನು ತಯಾರಿಸಿ 4 ಕಾಫಿ ಗಿಡಗಳ ಮಧ್ಯದಲ್ಲಿ ಸುಮಾರು 1 ಎಕರೆ ಪ್ರದೇಶದಲ್ಲಿ ಇಡಬೇಕು. ಇದು ಹುಳುವನ್ನು ಆಕರ್ಷಿಸುತ್ತದೆ. ಇದನ್ನು ತಿಂದ ಹುಳುಗಳು ಸಾಮೂಹಿಕವಾಗಿ ಸಾಯುತ್ತವೆ ಎಂದು ಡಾ.ತಂಗರಾಜ್‌ ಹೇಳುತ್ತಾರೆ.

ಮೆಟಾಲ್ಡಿ ಹೈಡ್‌ ಉಂಡೆಗಳು: ಕಾಫಿ ಗಡಿಗಳ ಬೇರುಗಳ ಬುಡದಲ್ಲಿ ಅಥವಾ ಹುಳುವಿನ ಚಲನವಲನ ಕಂಡು ಬಂದ ಪ್ರದೇಶದಲ್ಲಿ ಶೇ 5ರಷ್ಉ ಮೆಟಾಲ್ಡಿಹೈಡ್‌ ಉಂಡೆಗಳನ್ನು ಸೂರ್ಯಾಸ್ತಮಾನಕ್ಕೂ ಮೊದಲೇ ಸಮನಾಗಿ ಹರಡಬೇಕು. ಈ ಹುಳುಗಳು ರಾತ್ರಿ ವೇಳೆ ಚುರುಕಾಗಿ ಆಹಾರವನ್ನು ಹುಡುಕಿಕೊಂಡು ತಿರುಗುತ್ತವೆ. ಮರುದಿನ ಬೆಳಿಗ್ಗೆ ಹುಳುಗಳನ್ನು ಸಂಗ್ರಹಿಸಿ ನಾಶಪಡಿಸುವುದಕ್ಕೆ ಸುಲಭ ಎನ್ನುತ್ತಾರೆ.

ಕೊಡಗಿನ ಶನಿವಾರಸಂತೆಯಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ಹುಳು ಇದೀಗ ತಾಲ್ಲೂಕಿನಲ್ಲಿಯೂ ಹರಡುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT