ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಅತಿಹೆಚ್ಚು ಹಾಲು ಉತ್ಪಾದಿಸುವ ರಾಜ್ಯ

Last Updated 9 ಸೆಪ್ಟೆಂಬರ್ 2017, 8:34 IST
ಅಕ್ಷರ ಗಾತ್ರ

ಮಂಡ್ಯ: ಗಜರಾತ್‌ ಹೊರತುಪಡಿಸಿದರೆ ರಾಜ್ಯ ದೇಶದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುತ್ತದೆ. ಈ ಸಾಧನೆಯಲ್ಲಿ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಮನ್‌ಮುಲ್‌)ದ ಪಾಲೂ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಮನ್‌ಮುಲ್‌ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ಮೇಗಾಡೇರಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ನಾನು 1987ರಲ್ಲಿ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಪಶುಸಂಗೋಪನೆ ಸಚಿವನಾಗಿ ಕೆಲಸ ಮಾಡುತ್ತಿದ್ದಾಗ ಮನ್‌ಮುಲ್‌ ರಚನೆಯಾಯಿತು. ಆ ಸಂದರ್ಭದಲ್ಲಿ ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಒಗ್ಗೂಡಿಸಿ ಒಂದು ಒಕ್ಕೂಟದಡಿ ಸೇರಿಸಿ ನಿರ್ಣಯ ಕೈಗೊಳ್ಳಲಾಯಿತು. ಅಂದಿನಿಂದ ಇಂದಿನವರೆಗೆ ಹೈನೋದ್ಯಮದಲ್ಲಿ ಅಪಾರ ಬದಲಾವಣೆಯಾಗಿದೆ. ನಿತ್ಯ ರಾಜ್ಯದಲ್ಲಿ 75 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು ಸಾವಿರಾರು ಕುಟುಂಬಗಳ ಉಪಕಸುಬಾಗಿದೆ’ ಎಂದು ಹೇಳಿದರು.

‘ರೈತರಿಗೆ ಪ್ರತಿ ಲೀಟರ್‌ ಹಾಲಿಗೆ ₹5 ಸಹಾಯ ಧನ ನೀಡಲಾಗುತ್ತಿದ್ದು ಅದಕ್ಕಾಗಿ ಬಜೆಟ್‌ನಲ್ಲಿ ₹ 1,206 ಮೀಸಲಿಡಲಾಗಿದೆ. ಇದರಿಂದ 10 ಲಕ್ಷ ಕುಟುಂಬಗಳಿಗೆ ವರದಾನವಾಗಿದೆ. ಒಕ್ಕೂಟಗಳು ಆರ್ಥಿಕವಾಗಿ ಸದೃಢವಾಗಲು ಹಾಲಿನ ವಿವಿಧ ಉತ್ಪನ್ನ ಮಾರಾಟ ಮಾಡಬೇಕು.

ಹಾಲು ಉತ್ಪಾದಕರು ಆರ್ಥಿಕವಾಗಿ ಸದೃಢಗೊಳ್ಳಲು ಸರ್ಕಾರದಿಂದ ಎಲ್ಲಾ ಸಹಕಾರ ನೀಡಲಾಗುವುದು. ಹಾಲು ಉತ್ಪಾದಕ ಸಂಘಗಳಿಗೆ ಪ್ರತಿ ಲೀಟರ್‌ ₹ 20 ಪೈಸೆ ನೀಡಲು ಒತ್ತಾಯ ಬಂದಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಎ.ಮಂಜು ಮಾತನಾಡಿ ‘ಜಿಲ್ಲೆಯಾದ್ಯಂತ ₹ 100 ಕೋಟಿ ವೆಚ್ಚದಲ್ಲಿ ವಿವಿಧೆಡೆ ಪಶು ಚಿಕಿತ್ಸಾಲಯ ನಿರ್ಮಿಸಲಾಗಿದೆ. ಹಾಲು ಕರೆಯುವ ಹಸುಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೆ ಸೂಕ್ತ ಚಿಕಿತ್ಸೆ ನೀಡಲು ಪಶುವೈದ್ಯರಿಗೆ ಸೂಚನೆ ನೀಡಲಾಗಿದೆ. ಇಂದು ಹೈನುಗಾರಿಕೆ ಎಂಬುದು ಉಪಕಸುಬಿಗಿಂತಲೂ ಮುಖ್ಯ ಕಸುಬಾಗಿ ಬೆಳೆಯುತ್ತಿದೆ. ಮಳೆ ಕೊರತೆ ಸಮಸ್ಯೆಯಿಂದಾಗಿ ರೈತರ ಬಾಳಿನಲ್ಲಿ ಹೈನುಗಾರಿಕೆ ಆಶಾಕಿರಣವಾಗಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವ ಎ.ಮಂಜು ಮೆಗಾಡೇರಿ ನಕ್ಷೆ ಅನಾವರಣಗೊಳಿಸಿದರು. ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಮನ್‌ಮುಲ್‌ ಪಡೆದಿರುವ ಕ್ವಾಲಿಟಿ ಮಾರ್ಕ್‌ ಪ್ರಶಸ್ತಿ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ,ಶಾಸಕರಾದ ಕೆ.ನರೇಂದ್ರಸ್ವಾಮಿ, ಕೆ.ಎಸ್‌.ಪುಟ್ಟಣ್ಣಯ್ಯ, ಎನ್‌.ಚಲುವರಾಯಸ್ವಾಮಿ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಕೆ.ಸಿ.ನಾರಾಯಣಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಮನ್‌ಮುಲ್‌ ಅಧ್ಯಕ್ಷ ಕದಲೂರು ರಾಮಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಡಾ.ಸುರೇಶ್‌ ಬಾಬು ಹಾಜರಿದ್ದರು.

ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ ‘ಮನ್‌ಮುಲ್‌ ಹೈನುಗಾರಿಕೆ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಲು ಇಬ್ಬರು ವ್ಯಕ್ತಿಗಳ ಶ್ರಮವಿದೆ. ಕೇಂದ್ರದಲ್ಲಿ ಸಚಿವರಾಗಿದ್ದ ಎಂ.ವಿ.ಕೃಷ್ಣಪ್ಪ ಅವರು ಹೈನುಗಾರಿಕೆ ಬೆಳೆಸಲು ಅಪಾರ ಶ್ರಮಪಟ್ಟಿದ್ದಾರೆ. ಜೊತೆಗೆ ಹೊಳೇನರಸೀಪುರ ಶಾಸಕ ಎಚ್‌.ಡಿ.ರೇವಣ್ಣ ಅವರು ಮನ್‌ಮುಲ್‌ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ ರೇವಣ್ಣ ಅವರನ್ನು ಕರ್ನಾಟಕದ ಕುರಿಯನ್‌ ಎಂದು ಕರೆಯಬುಹುದು’ ಎಂದು ಹೇಳಿದರು.

ಹಳ್ಳಿಯ ಹಾಲು ನಗರಕ್ಕೆ, ನಗರದ ವಿಸ್ಕಿ ಹಳ್ಳಿಗೆ!
‘ಹಿಂದೆ ಜನರು ಹಾಲು ಕರೆದು ತಮ್ಮ ಮನೆಗೆ ಬಳಸಿ ಮಿಕ್ಕಿದ ಹಾಲನ್ನು ಡೇರಿಗೆ ಹಾಕುತ್ತಿದ್ದರು. ಆದರೆ ಈಗ ಜನರು ಹಾಲು ಕುಡಿಯುವುದನ್ನು ಬಿಟ್ಟಿದ್ದಾರೆ. ಎಲ್ಲವನ್ನು ಡೇರಿಗೆ ಹಾಕುತ್ತಾರೆ. ಹಳ್ಳಿಗಳಲ್ಲಿ ಉತ್ಪಾದನೆಯಾಗುವ ಹಾಲು ನಗರಗಳಿಗೆ ಹೋಗುತ್ತಿದೆ. ನಗರಗಳಲ್ಲಿ ಉತ್ಪಾದನೆಯಾಗುವ ಮಿಸ್ಕಿ, ರಮ್ಮು ಬಾಟಲಿಗಳು ಹಳ್ಳಿಗೆ ಬರುತ್ತಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT