ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಗಿರಿ ಬೆಳೆ ಜಿಲ್ಲೆಗೆ ಅಂಟಿದ ಶಾಪ

Last Updated 9 ಸೆಪ್ಟೆಂಬರ್ 2017, 8:52 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ನೀಲಗಿರಿ ಬೆಳೆಯಿಂದ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ನೀಲಗಿರಿ ರೈತನ ಶತ್ರು. ಅಕೆಷಿಯಾ ಹಾವಿನಂತೆ. ಇವೆರಡು ಇರುವ ಕಡೆ ಯಾವ ಬೆಳೆಯೂ ಆಗುವುದಿಲ್ಲ. ನೀಲಗಿರಿಯು ಜಿಲ್ಲೆಗೆ ಅಂಟಿದ ಶಾಪ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಯಲ್ಲಿ ನೀಲಗಿರಿ ಲಾಬಿ ನಡೆಯುತ್ತಿದೆ. ಅಧಿಕಾರಿಗಳು ಲಾಬಿಕೋರರಿಗೆ ತಮ್ಮ ತಲೆ ಮಾರಿಕೊಂಡಿದ್ದಾರೆ ಎಂದು ಗುಡುಗಿದರು.

ವ್ಯವಸಾಯ ಮಾಡಲು ಆಸಕ್ತಿ ಇಲ್ಲದವರು ನೀಲಗಿರಿ ಬೆಳೆಯಲ್ಲಿ ಲಾಭ ನಿರೀಕ್ಷಿಸುತ್ತಾರೆ. ನೀಲಗಿರಿಗೆ ನೀರು ಹಾಯಿಸಬೇಕಿಲ್ಲ, ಗೊಬ್ಬರ ಹಾಕಬೇಕಿಲ್ಲ. ಇದು ಖರ್ಚಿಲ್ಲದ ಬೆಳೆ. ಜಿಲ್ಲೆಯಲ್ಲಿ ನೀಲಗಿರಿ ಉಳಿದರೆ ಜನ ಸತ್ತು ಹೋಗುತ್ತಾರೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸಿ ನೀಲಗಿರಿ ಮರಗಳನ್ನು ಬೇರು ಸಮೇತ ಕಿತ್ತು ಹಾಕಿ ಎಂದು ಸೂಚಿಸಿದರು.

ತಾನು ನೀಲಗಿರಿ ನಿರ್ಮೂಲನೆಗೆ ಹಟಕ್ಕೆ ಬಿದ್ದಿದ್ದರಿಂದ ಸರ್ಕಾರ ಕಾನೂನು ಮಾಡಿದೆ. ಆದರೆ, ನೀಲಗಿರಿ ನಿಷೇಧಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇಷ್ಟವಿಲ್ಲ. ಅವರು ವ್ಯಾಪಾರಿಗಳ ಜತೆ ಕೈಜೋಡಿಸಿದ್ದಾರೆ. ಜಿಲ್ಲೆಯ ಮಟ್ಟಿಗೆ ನೀಲಗಿರಿ ಸಂಪೂರ್ಣ ನಾಶ ಆಗಬೇಕು. ಇದು ಜಿಲ್ಲೆ ಜನರ ಜೀವನ್ಮರಣದ ಪ್ರಶ್ನೆ ಎಂದು ಎಚ್ಚರಿಕೆ ನೀಡಿದರು.

ಸಸಿ ನೆಡಲಾಗಿದೆ: ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ) ರಾಮಲಿಂಗೇಗೌಡ ಮಾತನಾಡಿ, ‘ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನೀಲಗಿರಿ ಬೆಳೆ ಇದೆ. ವರ್ಷಕ್ಕೆ 10 ಸಾವಿರ ಹೆಕ್ಟೇರ್‌ನಂತೆ ಹಂತ ಹಂತವಾಗಿ ತೆರವುಗೊಳಿಸಲಾಗುತ್ತದೆ. ಜಿಲ್ಲೆಯಲ್ಲಿ ಈ ಬಾರಿ 15 ಲಕ್ಷ ಸಸಿ ನೆಡಲಾಗಿದೆ. ಬೀಜದ ಹುಂಡೆಗಳನ್ನು ಹಾಕಲಾಗಿದೆ. ಎಲ್ಲಾ ಕಡೆ ಗಿಡಗಳು ಚೆನ್ನಾಗಿ ಬೆಳೆಯುತ್ತಿವೆ’ ಎಂದು ಅವರು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲೆಯಲ್ಲಿ ಈಗ ಮಳೆ ಶುರುವಾಗಿದೆ. ಅರಣ್ಯ ಇಲಾಖೆಯವರು ಈಗಾಗಲೇ ಸಸಿ ನೆಡುವ ಕಾರ್ಯಕ್ರಮ ಮುಗಿಸಿದ್ದೀರಿ. ವರ್ಷಕ್ಕೆ ಕನಿಷ್ಠ 2 ಕೋಟಿ ಸಸಿ ನೆಟ್ಟು ಕಾಪಾಡಿಕೊಂಡರೆ ಜಿಲ್ಲೆಯ ಚಿತ್ರಣವೇ ಬೇರೆಯಾಗುತ್ತದೆ. ಐದು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ತರಬಹುದು ಎಂದು ಕಿವಿಮಾತು ಹೇಳಿದರು.
ಸುಮ್ಮನಿದ್ದಾರೆ: ‘ಮಾಲೂರು ತಾಲ್ಲೂಕಿನ ಸರ್ಕಾರಿ ಜಾಗದಲ್ಲಿನ ನೀಲಗಿರಿ ತೆರವುಗೊಳಿಸಿ ಖಾಲಿ ಜಾಗ ನೀಡಿದರೆ ಐಟಿಸಿ ಕಂಪೆನಿಯವರು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು, ನೇರಳೆ, ಹೆಬ್ಬೇವು ಸಸಿಗಳನ್ನು ನೆಟ್ಟು ಬೆಳೆಸಿಕೊಡುತ್ತಾರೆ’ ಎಂದು ಶಾಸಕ ಮಂಜುನಾಥಗೌಡ ಹೇಳಿದರು.

ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯವರು ಸುಮಾರು 37 ಹೆಕ್ಟೇರ್ ಗೋಮಾಳದ ಜಮೀನನ್ನು ವಶಕ್ಕೆ ಪಡೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನೀಲಗಿರಿ, ಹೆಬ್ಬೇವು, ಶ್ರೀಗಂಧ, ಮಾವು ಬೆಳೆಸಿದ್ದರು. ಕೆಲ ವ್ಯಕ್ತಿಗಳು ಈ ಮರಗಳನ್ನು ಕಡಿದು ಸಾಗಿಸುತ್ತಿದ್ದರೂ ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ಸುಮ್ಮನಿದ್ದಾರೆ. ಪೊಲೀಸರಿಗೂ ದೂರು ಕೊಟ್ಟಿಲ್ಲ ಎಂದು ದೂರಿದರು.

ಪ್ರಚಾರ ಮಾಡಬೇಕು: ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಇಲಾಖಾವಾರು ಅಧಿಕಾರಿಗಳು ಪ್ರಚಾರ ಮಾಡಬೇಕು. ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಅಡ್ಡಿಪಡಿಸುವ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಸಹಕಾರ ನೀಡುವವರ ಸಂಖ್ಯೆ ಕಡಿಮೆ ಎಂದು ಸಚಿವರು ಹೇಳಿದರು.

ಸರ್ಕಾರ ಯೋಜನೆಗಳು ಹಾಗೂ ಅನುದಾನವನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡುತ್ತದೆ. ಅದನ್ನು ತಮ್ಮ ಕ್ಷೇತ್ರಕ್ಕೆ, ಇನ್ನೊಂದು ಕ್ಷೇತ್ರಕ್ಕೆಂದು ವಾದಿಸಿಕೊಂಡಿದ್ದರೆ ಯೋಜನೆ ಹಾಗೂ ಸರ್ಕಾರಕ್ಕೆ ವಾಪಸ್ ಹೋಗುತ್ತವೆ. ಜಾಗ ಸಿಕ್ಕಿದ ಕಡೆ ಯೋಜನೆ ಕಾರ್ಯಗತಗೊಳಿಸಲು ಮುಂದಾಗಬೇಕು. ಇದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜವಾಬ್ದಾರಿ ಎಂದರು.

ದೂರು ಬಂದಿವೆ: ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಮಾತನಾಡಿ, ‘ಕೆಲ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಮಿಶ್ರಿತ ಬಿತ್ತನೆ ಬೀಜ ವಿತರಿಸಿರುವ ಸಂಬಂಧ ದೂರು ಬಂದಿವೆ. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಬೇಕು’ ಎಂದು ಸೂಚಿಸಿದರು.

‘ಕೃಷಿ ಹೊಂಡಗಳಿಗೆ ವಿತರಣೆ ಮಾಡುತ್ತಿರುವ ಟಾರ್ಪಲ್‌ಗಳ ಗುಣಮಟ್ಟ ಕಳಪೆಯಾಗಿದೆ. ಇದರಿಂದ ಹೊಂಡಗಳಲ್ಲಿನ ನೀರು ಭೂಮಿಗೆ ಇಂಗಿ ಹೋಗುತ್ತಿದೆ’ ಎಂದು ಅವರು ಹೇಳಿದರು. ‘ಕಳೆದ ವರ್ಷ ನಾಶವಾದ ಮಾವಿನ ಬೆಳೆಗೆ ಪರಿಹಾರ ಕೊಟ್ಟಿಲ್ಲ. ಟೊಮೆಟೊ ಮತ್ತು ಆಲೂಗಡ್ಡೆ ಬೆಳೆಗಾರರಿಗೆ ಬೆಳೆ ವಿಮೆ ನೀಡಿಲ್ಲ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಅವರು ಆರೋಪಿಸಿದರು.

ಶಾಸಕಿ ವೈ.ರಾಮಕ್ಕ, ವಿಧಾನ ಪರಿಷತ್‌ ಸದಸ್ಯ ರಮೇಶ್‌ಬಾಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಯಶೋಧಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌, ಕೆಜಿಎಫ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ಲೋಕೇಶ್‌ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT