ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದಂಗಡಿಗೆ ಅನುಮತಿ: ವಾಗ್ವಾದ

Last Updated 9 ಸೆಪ್ಟೆಂಬರ್ 2017, 8:54 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ತೀಮಾಕಲಪಲ್ಲಿ ಬಳಿ ಪರಗೋಡು ಗ್ರಾಮ ಪಂಚಾಯಿತಿ ಎದುರು ಎಂ.ಎಸ್.ಐ.ಎಲ್ ಮದ್ಯದಂಗಡಿ ಸ್ಥಾಪನೆ ಕುರಿತು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು.

ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ತೆರಳಿ ಮದ್ಯದಂಗಡಿ ಸ್ಥಾಪಿಸಲು ನಿರಾಕ್ಷೇಪಣ ಪತ್ರವನ್ನು ನೀಡಬಾರದು. ಅದಕ್ಕೆ ಅನುಮತಿ ನೀಡಿದರೆ ಗ್ರಾಮದಲ್ಲಿರುವ ಸೌಹಾರ್ದ ವಾತಾವರಣಕ್ಕೆ ತೊಂದರೆ ಆಗಲಿದೆ. ಅನುಮತಿ ಪತ್ರ ನೀಡಲು ಮುಂದಾಗಿರುವ ಅಧಿಕಾರಿಗಳ ಕ್ರಮ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಪಂಚಾಯಿತಿ ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಕೈಕೈ ಮಿಲಾಯಿಸುವ ಹಂತವನ್ನೂ ತಲುಪಿತ್ತು. ಪಂಚಾಯಿತಿ ಕಾರ್ಯದರ್ಶಿ ಪಾರ್ಥಸಾರಥಿ ಮಾತನಾಡಿ, ಮದ್ಯದಂಗಡಿ ಸ್ಥಾಪನೆಗೆ ಪರವಾನಗಿ ನೀಡುವ ಜವಾಬ್ದಾರಿ ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲ, ಅಧಿಕಾರ ಜಿಲ್ಲಾಧಿಕಾರಿ ಹಾಗೂ ಅಬಕಾರಿ ಇಲಾಖೆಗೆ ಸೇರಿದೆ.

ತೀಮಾಕಲಪಲ್ಲಿದ ಮನೆಯೊಂದರಲ್ಲಿ ಮದ್ಯದಂಗಡಿ ಸ್ಥಾಪಿಸಲು ಅಶ್ವತ್ಥನಾರಾಯಣ ಎಂಬುವವರು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಗ್ರಾಮಸ್ಥರ ಸಮ್ಮುಖದಲ್ಲಿ ಮಹಜರ್ ನಡೆಸಿ ಮುಂದಿನ ಕ್ರಮಕ್ಕೆ ಶಿಫಾರಸು ಮಾಡುವರು ಎಂದು ವಿವರಿಸಿದರು.

ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿದ್ದಾರೆ. ಗ್ರಾಮದಲ್ಲಿ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಪರವಾನಗಿ ನೀಡುವುದು ಬೇಡ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರಾಕ್ಷೇಪಣ ಪತ್ರ ನೀಡದಿದ್ದರೆ ಮದ್ಯದಂಗತಿ ಸ್ಥಾಪಿಸಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಅಧಿಕಾರಿಗಳೂ ಗ್ರಾಮಸ್ಥರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT