ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ದರ್ಶನ ಮಾಡಿಸಿದ ಗುರು-ಶಿಷ್ಯರು

Last Updated 9 ಸೆಪ್ಟೆಂಬರ್ 2017, 9:32 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಲ್ಲಿ ನೇಗಿಲು, ಕುಂಟೆ, ಕೂರಿಗೆ ಜೋಡಿಸಲಾಗಿತ್ತು. ಮತ್ತೊಂದು ಕಡೆ ರೇಷ್ಮೆ ಹುಳುಗಳು ಸೊಪ್ಪು ಮೇಯುತ್ತಿದ್ದರೆ, ಇನ್ನೊಂದೆಡೆ ಮನೆಯ ಮೇಲೆ ಸುರಿಯುತ್ತಿದ್ದ ಮಳೆನೀರು ಸಂಗ್ರಹಿಸಲಾಗುತ್ತಿತ್ತು. ಜಾನುವಾರು ಪೋಷಣೆ, ಏತದಿಂದ ನೀರು ಎತ್ತುವುದು.. ಅಬ್ಬಾ! ಸಮಗ್ರ ಕೃಷಿ– ತೋಟಗಾರಿಕಾ ಚಟುವಟಿಕೆಗಳು ಅಲ್ಲಿ ಅನಾವರಣಗೊಂಡಿದ್ದವು.

ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಗುರುಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನದಲ್ಲಿ ಕಂಡು ಬಂದು ‘ಮಾದರಿ’ಗಳಿವು. ಶಿಕ್ಷಕರ ಮಾರ್ಗದರ್ಶನದಲ್ಲಿ ತಾವು ಸಿದ್ಧಪಡಿಸಿದ್ದ ಮಾದರಿಗಳನ್ನು ವಿದ್ಯಾರ್ಥಿಗಳು, ವೀಕ್ಷಕರಾಗಿ ಬಂದವರಿಗೆ ಅರಳು ಹುರಿದಂತೆ ವಿವರಣೆ ನೀಡುತ್ತಿದ್ದರು.

ಬಹುತೇಕ ಹಳ್ಳಿಗಳಿಂದ ಬಂದ ವಿದ್ಯಾರ್ಥಿಗಳೇ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರಿಂದ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ತ್ಯಾಜ್ಯ ವಸ್ತುಗಳಿಂದ ಕರಕುಶಲ ವಸ್ತುಗಳ ತಯಾರಿಕೆ, ಹೊಲಿಗೆಗೆ ಸಂಬಂಧಿಸಿದ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಹೊಸದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಮಾರುತಿ ಗ್ರಾಮಾಂತರ ವಿದ್ಯಾಪೀಠದ ಪ್ರೌಢಶಾಲೆಯ ಟಿ.ಮಾರುತಿ, ಜಿ.ಮಾರುತಿ ಏತ ನೀರಾವರಿ ಮಾದರಿ, ಮಾಡದಕೆರೆ ಮುರಳೀಧರ ಪ್ರೌಢಶಾಲೆಯ ಟಿ.ಗಿರೀಶ್, ವಿ.ಅಜಯ, ಎಂ.ದೇವರಾಜ ಅವರು ತಯಾರಿಸಿದ್ದ ಮಳೆ ನೀರು ಸಂಗ್ರಹ ಮಾದರಿ, ಉಳುಮೆ, ಬಿತ್ತನೆಯಂತಹ ಕೃಷಿ ಚಟುವಟಿಕೆಗೆ ಬಳಸುವ ಬಹುತೇಕ ಸಾಧನಗಳನ್ನು ಮಕ್ಕಳು ಪರಿಚಯಿಸುತ್ತಿದ್ದ ರೀತಿ ವಿಶೇಷ ಎನಿಸಿತ್ತು.

ಔಷಧ ಸಸ್ಯಗಳು, ನರ್ಸರಿ, ಮನೆ–ಮದ್ದುಗಳ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿದ್ದ ಮಕ್ಕಳು, ಕೇಳಿದ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸುತ್ತಿದ್ದರು. ಜಿಲ್ಲೆಯ ಆರು ತಾಲ್ಲೂಕುಗಳ ನೂರಕ್ಕೂ ಹೆಚ್ಚು ಸರ್ಕಾರಿ,  ಅನುದಾನಿತ, ಅನುದಾನರಹಿತ ಪ್ರೌಢಶಾಲೆಯ ಆಯ್ದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಡಯಟ್ ಉಪಪ್ರಾಚಾರ್ಯ ಎನ್.ಎಂ.ರಮೇಶ್ ಮಾತನಾಡಿ, ‘ಪ್ರೌಢ ಶಾಲಾ ಹಂತದಲ್ಲೇ ವೃತ್ತಿ ಶಿಕ್ಷಣ ಒಂದು ಅವಿಭಾಜ್ಯ ಅಂಗ. ಆದರೆ, ವೃತ್ತಿ ಶಿಕ್ಷಕರು ಈ ಬಗ್ಗೆ ಕೀಳರಿಮೆ ಇಟ್ಟುಕೊಂಡಿದ್ದಾರೆ. ಇದನ್ನು ಬಿಟ್ಟು ಮಕ್ಕಳಲ್ಲಿ ವೃತ್ತಿ ಕೌಶಲ ಕಲಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಡಿಡಿಪಿಐ ಎಂ.ರೇವಣಸಿದ್ದಪ್ಪ ಮಾತ ನಾಡಿ, ‘ಕೇಳುವುದರಿಂದ ಬಹಳಷ್ಟು ಕಲಿಯುತ್ತೇವೆ. ಅದೇ ರೀತಿ ನೋಡುವುದರಿಂದಲೂ ಕಲಿಯುತ್ತೇವೆ. ಅದಕ್ಕೆ ಈ ವಸ್ತು ಪ್ರದರ್ಶನವೇ ಸಾಕ್ಷಿಯಾಗಿದೆ’ ಎಂದು ಹೇಳಿದರು.

ಪರಿಸರ ಸಂಚಾಲಕ ಡಾ.ಎಚ್.ಕೆ.ಎಸ್.ಸ್ವಾಮಿ, ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ ಅವರು ಶಾಲೆಗಳನ್ನು ಪರಿಸರ ಸ್ನೇಹಿಯಾಗಿ ಹೇಗೆ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಶಿಕ್ಷಕರು ಹಾಗೂ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.

ವೃತ್ತಿ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ, ದಾವಣಗೆರೆ ಸಂಘದ ಅಧ್ಯಕ್ಷ ಜಗದೀಶ್, ವಿಷಯ ಪರಿವೀಕ್ಷಕರಾದ ಮಹಲಿಂಗಪ್ಪ, ಆರ್.ನಾಗರಾಜ್, ಓಬಯ್ಯ, ನಾಗೇಂದ್ರಪ್ಪ, ಲಕ್ಷ್ಮಣ್ ಬೇಗಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT