ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಟಿವಿ ಕಣ್ಗಾವಲಿನಲ್ಲೂ ನಿಯಮಕ್ಕೆ ಎಳ್ಳುನೀರು!

Last Updated 9 ಸೆಪ್ಟೆಂಬರ್ 2017, 9:51 IST
ಅಕ್ಷರ ಗಾತ್ರ

ಶಿವಮೊಗ್ಗ: ಸಂಚಾರ ವ್ಯವಸ್ಥೆಯ ಮೇಲೆ ಹದ್ದಿನ ಕಣ್ಣಿಡಲು ಜಿಲ್ಲೆಯ ಎಲ್ಲ ನಗರ ಪ್ರದೇಶಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದ್ದರೂ ನಿಯಮ ಉಲ್ಲಂಘನೆ ಅವ್ಯಾಹತವಾಗಿ ನಡೆಯುತ್ತಿದೆ. ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಮೂಲಕ ನಗರದ ಪ್ರಮುಖ ವೃತ್ತ, ಮಾರ್ಗಗಳಲ್ಲಿನ ಸಂಚಾರ ವ್ಯಸ್ಥೆಯ ಸಂಪೂರ್ಣ ಚಿತ್ರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅಳವಡಿಸಿರುವ ದೊಡ್ಡ ಟಿವಿ ಪರದೆಯ ಮೇಲೆ ನೋಡಬಹುದು.

ನೆಹರೂ ರಸ್ತೆ, ಬಿ.ಎಚ್‌. ರಸ್ತೆ, ಅತಮೀರ್ ಅಹಮದ್ ವೃತ್ತ, ಶಿವಮೂರ್ತಿ ವೃತ್ತ, ಬಸ್‌ನಿಲ್ದಾಣ, ತೀರ್ಥಹಳ್ಳಿ ರಸ್ತೆ, ಸಾಗರ ರಸ್ತೆ, ಗೋಪಿ ವೃತ್ತ, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಕುವೆಂಪು ರಸ್ತೆ, ಗಾಂಧಿ ಬಜಾರ್ ಮತ್ತಿತರ ಭಾಗಗಳಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ. ಕ್ಯಾಮೆರಾ ಎಷ್ಟು ಸ್ಪಷ್ಟತೆಯಿಂದ ಕೂಡಿವೆ ಎಂದರೆ ಆ ರಸ್ತೆಗಳಲ್ಲಿ ಬಿದ್ದಿರುವ ಚಿಕ್ಕ ಕಲ್ಲುಗಳನ್ನೂ ಗುರುತಿಸಬಹುದು.

ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ನಂಬರ್, ವ್ಯಕ್ತಿಯ ಚಹರೆ, ಅವರ ಚಟುವಟಿಕೆ ಎಲ್ಲವೂ ಸಷ್ಟವಾಗಿ ಗೋಚರಿಸುತ್ತವೆ. ಆದರೂ, ನಿತ್ಯವೂ ಸಂಚಾರ ನಿಯಮಗಳ ಉಲ್ಲಂಘನೆ ಅವ್ಯಾಹತವಾಗಿ ಮುಂದುವರಿದಿದೆ. ಆಯಾ ವೃತ್ತ, ರಸ್ತೆಗಳಲ್ಲಿ ನಿಯೋಜಿಸಿರುವ ಪೊಲೀಸರು ಅದು ತಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎನ್ನುವಂತೆ ಇದ್ದು ಬಿಡುತ್ತಾರೆ.

ಬೈಕ್‌ ಮೇಲೆ ಮೂವರ ಸವಾರಿ: ಬಹುತೇಕ ರಸ್ತೆಗಳಲ್ಲಿ ಯುವಕರು ಮೂರು ಜನ ಕುಳಿತು ಕರ್ಕಶ ಸದ್ದು ಮಾಡುತ್ತಾ ವೇಗವಾಗಿ ಸಾಗುವುದು ಸಾಮಾನ್ಯವಾಗಿ ಕಾಣ ಸಿಗುತ್ತದೆ. ಹೆಲ್ಮೆಟ್‌ ಕಡ್ಡಾಯವಾಗಿದ್ದರೂ, ನಿಯಮಪಾಲನೆ ಉಲ್ಲಂಘನೆಯ ದಂಡ ಮಾಸಿಕ ಲೆಕ್ಕಕಷ್ಟೇ ಸೀಮಿತವಾಗಿದೆ. ಕೆಲವುಬೈಕ್‌ಗಳ ಶಬ್ದ ವಯಸ್ಸಾದವರ ಹೃದಯ
ಬಡಿತವೇ ನಿಂತು ಹೋಗುವಷ್ಟು ಭಯಾನಕವಾಗಿರುತ್ತದೆ.

ಜೀಬ್ರಾ ಕ್ರಾಸಿಂಗ್ ದಾಟುವ ವಾಹನಗಳು: ಸಿಗ್ನಲ್‌ ಲೈಟ್‌ ಅಳವಡಿಸಿರುವ ವೃತ್ತಗಳಲ್ಲಿ ವಾಹನಗಳು ಜೀಬ್ರಾ ಕ್ರಾಸಿಂಗ್ ದಾಟಿ ಮುಂದೆ ಹೋಗಬಾರದು. ಆದರೆ, ಬಹುತೇಕ ವೃತ್ತಗಳಲ್ಲಿ ವಾಹನಗಳು ಜೀಬ್ರಾ ಕ್ರಾಸಿಂಗ್ ದಾಟಿ ಮುಂದೆ ಬಂದು ನಿಲ್ಲುತ್ತವೆ.

ಎಡ ತಿರುವು ತಡೆರಹಿತವಾಗಿದ್ದರೂ ಶಿವಮೂರ್ತಿ ವೃತ್ತ, ಜೈಲ್‌ ವೃತ್ತ, ಮಹವೀರ ವೃತ್ತಗಳಲ್ಲಿ ಎಡಕ್ಕೆ ಚಲಿಸುವವರೂ ಮುಂದಿನ ವಾಹನ ಸಾಗುವರೆಗೂ ಕಾದು ನಿಲ್ಲಬೇಕಾಗುತ್ತದೆ. ಕೆಲವು ಕಡೆ ಸಿಗ್ನಲ್‌ ಲೈಟ್‌ಗಳ ಬಳಿಯೇ ಫುಟ್‌ಪಾತ್ ವ್ಯಾಪಾರಿಗಳು ಸಾಮಗ್ರಿ, ತಿಂಡಿ ಗಾಡಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಾರೆ.

ಕುವೆಂಪು ರಸ್ತೆ, ಜೈಲ್‌ವೃತ್ತ, ದುರ್ಗಿಗುಡಿ ರಸ್ತೆ, ಶಿವಪ್ಪ ನಾಯಕ ವೃತ್ತಗಳಲ್ಲಿ ಇಂತಹ ವ್ಯಾಪಾರಿಗಳ ಹಾವಳಿ ಹೆಚ್ಚಾಗಿದೆ. ಪಾದಚಾರಿಗಳು ವಾಹನಗಳ ನಡುವೆಯೇ ಸಾಹಸ
ಮಾಡುತ್ತಾ ರಸ್ತೆ ದಾಟುವುದು ಸಾಮಾನ್ಯವಾಗಿದೆ. ಪಾದಚಾರಿಗಳ ಗೋಳು ಕೇಳುವವರೇ ಇಲ್ಲದಂತೆ ಆಗಿದೆ.

ವಿನೋಬನಗರ ಪೊಲೀಸ್‌ ಚೌಕಿ, ಲಕ್ಷ್ಮಿ ಚಿತ್ರಮಂದಿರ ವೃತ್ತದಲ್ಲಿ ಫುಟ್‌ಪಾತ್ ವ್ಯಾಪಾರಿಗಳ ಹಾವಳಿ ಮಿತಿ ಮೀರಿದೆ. ಮೊದಲೆಲ್ಲ ಬೆಳಿಗ್ಗೆ ಸಮಯದಲ್ಲಿ ತರಕಾರಿ ಹಣ್ಣು ಮಾರುತ್ತಿದ್ದವರು ಈಗ ದಿನವಿಡೀ ಮಾರಾಟ ಮಾಡುತ್ತಾರೆ. ಅಲ್ಲೇ ನಗರ ಸಾರಿಗೆ ಬಸ್‌ಗಳು ನಿಲುಗಡೆ ಮಾಡುತ್ತವೆ. ಈ ಮಾರ್ಗದಲ್ಲೇ ಸವಳಂಗ ಮಾರ್ಗದ ಬಸ್‌ಗಳ ಸಂಚಾರಕ್ಕೂ ಅವಕಾಶ ನೀಡಲಾಗಿದೆ.

ಮೊಬೈಲ್‌ ಹಿಡಿದೇ ಬೈಕ್‌ ಸವಾರಿ: ಬಹುತೇಕ ರಸ್ತೆಗಳಲ್ಲಿ ದ್ವಿಚಕ್ರವಾಹನ ಸವಾರರು ಕಿವಿಯಲ್ಲಿ ಮೊಬೈಲ್‌ ಇಟ್ಟುಕೊಂಡೇ ಬೈಕ್ ಓಡಿಸುತ್ತಾರೆ. ಇದು ನಿಯಮ ಪಾಲಿಸುವವರಿಗೂ ಕಂಠಕವಾಗಿ ಪರಿಣಮಿಸುತ್ತಿದೆ. ಆಟೊರಿಕ್ಷಾಗಳಲ್ಲಿ ಕುರಿಮಂದೆಯಾದ ಶಾಲಾ ಮಕ್ಕಳು: ವಿವಿಧ ಖಾಸಗಿ ಶಾಲೆಗಳಿಗೆ ತೆರಳುವ ಮಕ್ಕಳನ್ನು ಆಟೊರಿಕ್ಷಾಗಳಲ್ಲಿ ಕುರಿಮಂದೆಯಂತೆ ತುಂಬಿಕೊಂಡು ಹೋಗಲಾಗುತ್ತಿದೆ. ಆಟೊಗಳ ಎರಡೂ ಬದಿ, ಚಾಲಕರ ಸೀಟಿನ ಪಕ್ಕ ಕುಳಿತುಕೊಂಡು ಸರ್ಕಸ್ ಮಾಡುತ್ತಾ ಮಕ್ಕಳು ಸಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT