ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ನೇ ದಿನಕ್ಕೆ ಕಾಲಿಟ್ಟ ಧರಣಿ

Last Updated 9 ಸೆಪ್ಟೆಂಬರ್ 2017, 10:03 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ತಾಲ್ಲೂಕು ನಿರ್ಮಾಣಕ್ಕೆ ಒತ್ತಾಯಿಸಿ, ಹೋರಾಟಗಾರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 25 ನೇ ದಿನಕ್ಕೆ ಕಾಲಿಟ್ಟಿದೆ.
ಇಲ್ಲಿನ ಶಿವಗಣೇಶ ವೃತ್ತದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನವದೆಹಲಿಯ ಭಾರತೀಯ ಕೃಷಿಕ ಸಮಾಜ, ರಾಷ್ಟ್ರೀಯ ರೈತ ಸಂಘ ಕರ್ನಾಟಕ ರಾಜ್ಯ, ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ಬೆಂಬಲ ನೀಡಿ, ಹೋರಾಟ ಮಾಡಿದರು.

ವೃತ್ತದಿಂದ ಹೋರಾಟ ಆರಂಭಿಸಿದ ಹೋರಾಟಗಾರರು, ಪ್ರತಿಭಟನಾ ಮೆರವಣಿಗೆಯ ಮೂಲಕ ಬಸ್ ನಿಲ್ದಾಣ, ವೆಂಕಟರವಣಸ್ವಾಮಿ ಬೀದಿ, ಗಾಂಧಿಚೌಕ, ಹಳೇ ಕೆನರಾ ಬ್ಯಾಂಕ್ ರಸ್ತೆಯ ಮೂಲಕ ಮರಳಿ ಧರಣಿ ಸ್ಥಳಕ್ಕೆ ಬಂದರು.

ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್.ಕೃಷ್ಣಮೂರ್ತಿ ಮಾತನಾಡಿ, ಅಭಿವೃದ್ಧಿ ಪರವಾಗಿದ್ದೇವೆಂದು ಸುಳ್ಳು ಹೇಳಿಕೆ ನೀಡುವ ರಾಜಕಾರಣಿಗಳಿಗೆ ಬದ್ಧತೆಯಿಲ್ಲ. ಇದರಿಂದ ತಾಲ್ಲೂಕು ಕೇಂದ್ರ ಘೋಷಣೆಗಾಗಿ ಒತ್ತಾಯಿಸಿ ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದರು.

‘ಹೋರಾಟ ಆರಂಭಿಸಿ 25 ದಿನಗಳು ಕಳೆದರೂ ಯಾವೊಬ್ಬ ರಾಜಕಾರಣಿ ಈ ಕಡೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲ, ನಾವು ಕಂದಾಯ ಇಲಾಖೆಯ ಅಧಿಕಾರಿಗಳ ಮೂಲಕ ಸಲ್ಲಿಸುತ್ತಿರುವ ಮನವಿಗಳನ್ನು ಸ್ವೀಕರಿಸುತ್ತಿದ್ದಾರೆಯೇ ಹೊರತು, ಇಲ್ಲಿಗೆ ಬಂದು ಹೋರಾಟಗಾರರ ಸಮಸ್ಯೆಗಳನ್ನು ಆಲಿಸಿಲ್ಲ’ ಎಂದು ಟೀಕಿಸಿದರು.

ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಗಂಗಾ ಓಂಕಾರ್ ಮಾತನಾಡಿ, ಜನಪ್ರತಿನಿಧಿಗಳಿಗೆ ಈ ಭಾಗದ ಜನರ ಹಿತ ಕಾಯುವುದಕ್ಕಿಂತ ರಾಜಕೀಯ ಇಚ್ಛಾಶಕ್ತಿ ಹೆಚ್ಚಾಗಿದೆ. ಹೋರಾಟಗಾರರನ್ನು ಕಡೆಗಣಿಸುತ್ತಿದ್ದಾರೆ ಎಂದರು.

ಹೋರಾಟವನ್ನು ಕಡೆಗಣಿಸಿದರೆ ಸರ್ಕಾರ ಭಾರಿ ಬೆಲೆ ತೆರಬೇಕಾಗುತ್ತದೆ. ಸರ್ಕಾರ, ಬಜೆಟ್ ನಲ್ಲಿ ಘೋಷಣೆ ಮಾಡಿರುವ ಹೊಸ ತಾಲ್ಲೂಕು ಬಿಟ್ಟು, ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕನ್ನಾಗಿ ಹೊಸದಾಗಿ ಮಾಡುತ್ತಿದೆ. ವಿಜಯಪುರದಲ್ಲಿ 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದಾರೆ, ಆದರೂ ಪರಿಗಣಿಸುತ್ತಿಲ್ಲ, ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರ ಬಿ.ಕೆ.ಶಿವಪ್ಪ ಮಾತನಾಡಿ, ವಿಜಯಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲು ಸನ್ನದ್ಧರಾಗುತ್ತೇವೆ ಎಂದು ಎಚ್ಚರಿಸಿದರು.

ಹೋರಾಟಗಾರರಾದ ಮುನಿವೆಂಕಟರವಣಪ್ಪ, ಮಹೇಶ್ ಕುಮಾರ್, ರವಿಕುಮಾರ್, ವಿ.ರಾ.ಶಿವಕುಮಾರ್, ಗಜೇಂದ್ರ, ಎಚ್.ಎಸ್. ರಮೇಶ್, ಅಶೋಕ್, ಶ್ರೀಧರ್, ನಾರಾಯಣಗೌಡ, ಜೆ.ಆರ್. ಮುನಿವೀರಣ್ಣ, ಡಾ.ವಿ.ನಾ.ರಮೇಶ್, ಶಿವಕುಮಾರ್, ವೆಂಕಟೇಶ್, ಮುನಿಕೃಷ್ಣಪ್ಪ, ಮುನಿಬೈರಪ್ಪ, ಎನ್.ರಾಜಗೋಪಾಲ್, ಚಂದ್ರಪ್ಪ, ವೀರಭದ್ರಯ್ಯ, ನಜೀರ್ ಅಹ್ಮದ್, ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT