ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮಾಂಚಕಾರಿ ಮಡಿಕೇರಿ ಪ್ರವಾಸ!

Last Updated 9 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

–ಎಲ್.ಚಿನ್ನಪ್ಪ, ಬೆಂಗಳೂರು

*

ಜೀವನದ ಕೆಲವು ಘಟನೆಗಳು ನೆನಪಿನ ಅಂಗಳದಿಂದ ಸರಿದರೆ, ಮತ್ತೆ ಕೆಲವು ನೆನಪಿನ ಬ್ಯಾಂಕ್‌ನಲ್ಲಿ ಭದ್ರವಾಗಿರುತ್ತವೆ. 1983ರಲ್ಲಿ ಜರುಗಿದ ಅಂಥ ಒಂದು ರೋಚಕ ಘಟನೆ ನನ್ನ ಮನಸ್ಸಿನಲ್ಲಿ ಮಾಸದೆ ಉಳಿದಿದೆ.ನಮ್ಮ ಕಚೇರಿ ಸಹೋದ್ಯೋಗಿಗಳಲ್ಲಿ ನಾವು ಹದಿನೈದು ಮಂದಿ ಒಂದು ಸಣ್ಣ ಗೆಳೆಯರ ತಂಡ ಕಟ್ಟಿಕೊಂಡಿದ್ದೆವು. ವರ್ಷಕ್ಕೊಮ್ಮೆ ಮೂರು-ನಾಲ್ಕು ದಿನಗಳ ಪುಟ್ಟ ಪ್ರವಾಸ ಹಮ್ಮಿಕೊಳ್ಳುತ್ತಿದ್ದೆವು.

1983ರ ಮೇ ತಿಂಗಳಿನಲ್ಲಿ ಮಡಿಕೇರಿಗೆ ಪ್ರವಾಸ ಹಮ್ಮಿಕೊಂಡಿದ್ದೆವು. ಆ ಪ್ರವಾಸದಲ್ಲಿ ಸಂಭವಿಸಿದ ಆಕಸ್ಮಿಕ ಘಟನೆಗಳ ನೆನಪು ನನ್ನಲ್ಲಿ ಇನ್ನೂ ಇದೆ. ಅಂತಹ ಆಕಸ್ಮಿಕ ಘಟನೆಗಳು ಮನಸ್ಸಿನಿಂದ ದೂರವಾಗುವುದಿಲ್ಲ.

ನಿಗದಿಯಾದ ದಿನ ನಾವು ಬೆಂಗಳೂರು ಬಿಟ್ಟು, ಸುಮಾರು 2 ಗಂಟೆ ಹೊತ್ತಿಗೆ ಮಡಿಕೇರಿ ತಲುಪಿದೆವು. ಅಲ್ಲಿನ ಹವಾಗುಣ ತಂಪಾಗಿತ್ತಲ್ಲದೆ ಮನಸ್ಸಿಗೆ ಆಹ್ಲಾದಕರವೂ ಆಗಿತ್ತು. ಮೊದಲೇ ಅಲ್ಲಿ ಕಾಯ್ದಿರಿಸಿದ್ದ ಹೋಟೆಲ್‌ನಲ್ಲಿ ಊಟ ಮುಗಿಸಿ, ವಿಶ್ರಾಂತಿ ಪಡೆದೆವು. ಅಂದಿನ ಕಾಯಕ್ರಮದಂತೆ ಅಲ್ಲಿಂದ ಸುಮಾರು 35–40 ಕಿ.ಮೀ.ದೂರದಲ್ಲಿದ್ದ ತಲಕಾವೇರಿ ನೋಡಿಕೊಂಡು ರಾತ್ರಿ 9 ಗಂಟೆಗೆ ವಾಪಸ್ ಬರುವುದಿತ್ತು.

ನಮ್ಮ ಲಗೇಜುಗಳನ್ನೆಲ್ಲ ಅಲ್ಲಿಯೇ ಬಿಟ್ಟು ಭಾಗಮಂಡಲದ ದಾರಿ ಹಿಡಿದೆವು. ಆಗ ಆ ಹಾದಿ ಈಗಿನಷ್ಟು ಸುಗಮವಾಗಿರಲಿಲ್ಲ. ಕೇವಲ 40 ಕಿ.ಮೀ. ದೂರವನ್ನು ಕ್ರಮಿಸಲು ನಮಗೆ ಆಗ ಒಂದೂವರೆ ಗಂಟೆ ಹಿಡಿಯಿತು. ಮುಂದಿನ ಒಂದು ಗಂಟೆಯೊಳಗೆ ಪುಷ್ಕರಣಿ, ಅಗಸ್ತ್ಯೇಶ್ವರ ದೇವಾಲಯ, ಮತ್ತಿತರ ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳನ್ನೆಲ್ಲ ಒಂದು ಸುತ್ತು ಹಾಕುವಷ್ಟರಲ್ಲಿ ಸಂಜೆ 6 ಗಂಟೆಯಾಗಿತ್ತು. ಪುಣ್ಯಕ್ಷೇತ್ರ ಬಿಟ್ಟು ಮಡಿಕೇರಿಗೆ ವಾಪಸ್ ಬರುವಾಗ ಹಾದಿಯ ನಡುವಿನ ತಪ್ಪಲು ಪ್ರದೇಶವನ್ನು ಹಾಯ್ದು ಬರಬೇಕಾಗಿತ್ತು. ಆದಷ್ಟು ಬೇಗ ಎಲ್ಲರಿಗೂ ಮಡಿಕೇರಿ ಸೇರಿಕೊಳ್ಳುವ ತವಕ. ಆದರೂ ಅಲ್ಲಿನ ವಿಶಾಲವಾದ ಹಸಿರು ಪ್ರದೇಶ ಮತ್ತು ಆಕರ್ಷಕ ಗುಡ್ಡಗಳ ಸಾಲು ನಮ್ಮನ್ನು ತಡೆದು ನಿಲ್ಲಿಸಿದವು. ಎತ್ತರದ ಇಳಿಜಾರು ಗುಡ್ಡಗಳನ್ನು ಆವರಿಸಿ ನಿಂತಿದ್ದ ಕಪ್ಪು ಬಿಳಿ ಮೋಡಗಳ ಆಕರ್ಷಕ ದೃಶ್ಯವನ್ನು ಹತ್ತಿರದಿಂದಲೇ ನೋಡಬೇಕೆಂಬ ಕಾತರದಿಂದ ಗುಡ್ಡ ಹತ್ತಿದೆವು. ಅಲ್ಲಿ ಗುಡ್ಡವನ್ನು ಸುತ್ತುವರೆದಿದ್ದ ಕಪ್ಪನೆಯ ಮೋಡಗಳು ನಮ್ಮನ್ನು ಯಾವುದೋ ಯಕ್ಷಲೋಕಕ್ಕೆ ಕೊಂಡೊಯ್ದಂತಾಗಿತ್ತು! ಗುಡ್ಡ ಇಳಿದು ವಾಹನ ಹತ್ತಿ ಕುಳಿತ ಮೇಲೆ ಅಲ್ಲಿಂದ ನಮ್ಮ ವಾಹನವು ಎರಡು ಕಿ.ಮೀ. ಕ್ರಮಿಸುವಷ್ಟರಲ್ಲಿ ಹಠಾತ್ತನೆ ನಿಂತು ಬಿಟ್ಟಿತು. ಡ್ರೈವರ್ ಎಷ್ಟೇ ಪ್ರಯತ್ನಿಸಿದರೂ ವಾಹನ ಮುಂದಕ್ಕೆ ಹೋಗಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಬ್ಯಾಟರಿ ಕೂಡ ಡೌನ್ ಆಯಿತು. ಒಳಗಿದ್ದ ಒಂದು ಲೈಟೂ ಸಹ ಆರಿಹೋಯಿತು. ನಮ್ಮ ದುರಾದೃಷ್ಟಕ್ಕೆ, ಅಂದು ಅಮವಾಸ್ಯೆಯ ಕತ್ತಲು ಬೇರೆ!

ಕತ್ತಲೆ ಹೊರತು ನಮಗೆ ಬೇರೇನೂ ಅಲ್ಲಿ ಕಾಣಿಸಲೇ ಇಲ್ಲ. ಒಬ್ಬರ ಮುಖ ಒಬ್ಬರಿಗೆ ಗೊತ್ತಾಗಲಿಲ್ಲ. ಸಮೀಪದಲ್ಲಿ ಮನೆಯಾಗಲಿ, ಅಂಗಡಿಯಾಗಲಿ ಯಾವುದೂ ಇರಲಿಲ್ಲ. ನಾವೆಲ್ಲ ವಾಹನದಲ್ಲೇ ಒತ್ತರಿಸಿಕೊಂಡು ಕುಳಿತಿದ್ದೆವು. ಎರಡು ಗಂಟೆ ಕಳೆಯಿತು. ಒಂದು ವಾಹನವೂ ಅತ್ತ ಬರಲಿಲ್ಲ. ಡ್ರೈವರ್ ತನ್ನ ಪಾಡಿಗೆ ತಾನು ಆರಾಮವಾಗಿ ಕುಳಿತು ಬಿಟ್ಟಿದ್ದ. ‘ಯಾಕೆ ಹೀಗಾಯ್ತು ಇಷ್ಟೊತ್ನಲ್ಲಿ ಈ ಕಡೆ ಯಾವುದೇ ವೆಹಿಕಲ್‌ಗಳು ಬರೋದಿಲ್ವೆ’ ಎಂದು ಕೇಳಿದ್ದಕ್ಕೆ ಅವನು ಕೊಟ್ಟ ಉತ್ತರ ನಮ್ಮನ್ನು ಮತ್ತಷ್ಟು ಧೃತಿಗೆಡಿಸಿತು. ‘ಸಾರ್ ಕತ್ಲಾದ ಮೇಲೆ, ಈ ರೂಟ್‌ನಲ್ಲಿ ವೆಹಿಕಲ್‌ಗಳು ಓಡಾಡೋದಿಲ್ಲ. ಏನೇ ಆಗಲಿ ನಾಳೆ ಬೆಳಿಗ್ಗೆವರೆಗೂ ನಾವು ಇಲ್ಲಿ ಹೀಗೇ ಕುಳಿತಿರಬೇಕು’ ಎಂದ. ಅವನು ಮಾತು ಕೇಳಿ, ನಮ್ಮ ಉತ್ಸಾಹವೆಲ್ಲ ಇಳಿದು ಹೋಯಿತು. ಸುತ್ತಲೂ ನಿಶ್ಶಬ್ದ! ಅದರ ನಡುವೆಯೇ ರಸ್ತೆ ಬದಿಯ ಮರಗಳಲ್ಲಿ ಒಮ್ಮೊಮ್ಮೆ ಜೀರುಂಡೆಗಳ ಶಬ್ದ ಕೇಳಿಸುತ್ತಿತ್ತು. ಆಗ ರಾತ್ರಿ ಊಟದ ಹೊತ್ತು. ಎಲ್ಲರಿಗೂ ಹಸಿವು. ಯಾರದೋ ಬ್ಯಾಗ್‌ನಲ್ಲಿದ್ದ ಐದಾರು ಸೀಬೆ ಹಣ್ಣುಗಳು, ಒಂದೆರಡು ಬಿಸ್ಕೆಟ್ ಪಾಕೆಟ್‌ಗಳು ಹೊರಬಂದವು. ಸಿಕ್ಕಷ್ಟೇ ಸೀರುಂಡೆ ಎಂಬಂತೆ ಅವುಗಳನ್ನೇ ಹಂಚಿ ತಿಂದೆವು. ಯಾವ ಮೂಲೆಗೂ ಎಟುಕಲಿಲ್ಲ. ಇದ್ದ ಅರ್ಧ ಬಾಟಲ್ ನೀರನ್ನೇ ಗುಟುಕರಿಸಿ ಎಲ್ಲರೂ ಬಾಯಿಗಳನ್ನು ಒದ್ದೆ ಮಾಡಿಕೊಂಡೆವು. ಮಾತಾಡಿದರೆ ನೀರಡಿಕೆ ಜಾಸ್ತಿ ಆಗುವುದೆಂದು ಮಾತಿಗೆ ಕಡಿವಾಣ ಹಾಕಿದೆವು. ಏನೇ ಆಗಲಿ ಇಕ್ಕಟ್ಟಾದ ಸೀಟ್‌ನಲ್ಲಿ ಕುಳಿತೇ ಅಂದು ರಾತ್ರಿಯೆಲ್ಲ ಕಾಲ ಕಳೆಯಬೇಕಾಗಿತ್ತು. ಮಡಿಕೇರಿ ಇನ್ನೂ 30 ಕಿ.ಮೀ. ದೂರದಲ್ಲಿತ್ತು. ಗಂಟೆ 9.45! ನಿರ್ಜನ ರಾತ್ರಿ! ಕೆಲವರು ಕುಳಿತಲ್ಲೇ ನಿದ್ರೆಗೆ ಜಾರಿದ್ದರೆ ಮತ್ತೆ ಕೆಲವರು ತೆಪ್ಪಗೆ ಕುಳಿತಿದ್ದರು. ಏನಾಶ್ಚರ್ಯ! ನಿದ್ರೆಗೆ ಜಾರಿದ್ದವರೆಲ್ಲರೂ ತಟ್ಟನೆ ಎಚ್ಚರಗೊಂಡರು. ಎಲ್ಲರ ಕಿವಿಗಳು ಚುರುಕಾದವು. ದೂರದಲ್ಲಿ ಒಂದು ವಾಹನ ಬರುತ್ತಿರುವ ಶಬ್ದ ಕೇಳಿಸಿತು. ಅದರ ಹೆಡ್‌ಲೈಟ್ ಬೆಳಕು ಸಹ ಗೋಚರಿಸತೊಡಗಿತು. ಅಂತೂ ಯಾವುದೋ ಒಂದು ವಾಹನ ಅದು ಬಸ್ಸೋ, ಟ್ರಕ್ಕೋ, ಕಾರೋ... ನಮ್ಮ ಕಡೆಗೆ ಸಾಗಿ ಬರುತ್ತಿದ್ದುದು ನಿಚ್ಚಳವಾಗಿ ಕಂಡಿತು.

ಯಾವುದೋ ವೆಹಿಕಲ್ ಬರ‍್ತಾ ಇದೆ ಎಂದು ಯಾರೋ ಒಬ್ಬರು ಮೆಲು ದನಿಯಲ್ಲಿ ಉಲಿದರು. ತೂಕಡಿಸುತ್ತಿದ್ದ ಡ್ರೈವರ್ ಎಚ್ಚರಗೊಂಡ. ‘ಎಲ್ಲಿ, ಎಲ್ಲಿ ಬರ‍್ತಾ ಇದೆ ಸಾರ್? ಅದು ಬಂದ್ರೂ ಈ ರಸ್ತೇಲಿ, ಈ ರಾತ್ರೀಲಿ ಇಂಥ ಸ್ಥಳದಲ್ಲಿ ಯಾರೂ ನಿಲ್ಸೋದಿಲ್ಲ, ಸಾರ್. ಕಳ್ರು ದರೋಡೆಕೋರರು ಅಂತ ಅವರ ಪಾಡ್ಗೆ ಅವ್ರು ಹೊರ‍್ಟೋಗ್ತಾರೆ. ಏನಾದರೂ ಅಡ್ಡ ಹಾಕ್ದ್ರೆ, ವೆಹಿಕಲ್ನೇ ಅವರ‍್ಮೇಲೆ ಹತ್ತಿಸಿಕೊಂಡು ಹೋಗ್ತಾರೆ, ಯಾರು ಸತ್ರೆ ನಮ್ಗೇನು ಅಂತ ಅವರ ಉಸಾಬರಿ. ಅವರ ಸೇಫ್ಟಿ ಅವರ‍್ಗೆ ಸಾರ್’ ಎಂದು ಡ್ರೈವರ್ ನಮ್ಮಲ್ಲಿ ಆತಂಕ ಹುಟ್ಟಿಸಿದ. ನಾವು ಡ್ರೈವರ್ ಮಾತಿಗೆ ಸೊಪ್ಪು ಹಾಕಲಿಲ್ಲ. ಅಷ್ಟರಲ್ಲಿ ನಾವು ಸಮಯಪ್ರಜ್ಞೆ ಮೆರೆದು ರಸ್ತೆಗೆ ಅಡ್ಡಲಾಗಿ ನಿಂತೆವು. ನಮ್ಮ ದೊಡ್ಡ ಗುಂಪನ್ನು ಕಂಡ ವಾಹನ ತಕ್ಷಣ ನಿಂತಿತು. ಅದೊಂದು ಭರ್ಜರಿ ಲೋಡಿನ ಟ್ರಕ್. ಹತ್ತಿರಕ್ಕೆ ಹೋಗಿ ಡ್ರೈವರ್ ಮುಂದೆ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡೆವು. ನಮ್ಮನ್ನು ಮಡಿಕೇರಿವರೆಗೆ ಕರೆದುಕೊಂಡು ಹೋಗುವಂತೆ ಅವನನ್ನು ಕೇಳಿಕೊಂಡೆವು. ಮೊದಲು ನಮ್ಮಿಬ್ಬರ ಭಾಷೆ ಯಾರಿಗೂ ಅರ್ಥವಾಗಲಿಲ್ಲ. ಆದರೆ ನಮ್ಮ ಪರಿಸ್ಥಿತಿ ಅವನಿಗೆ ಅರ್ಥವಾಗಿರಬೇಕು. ಡ್ರೈವರ್ ಕೇರಳದ ಕಡೆಯಿಂದ ಭರ್ಜರಿ ಗೋಡಂಬಿ ಲೋಡ್ ಹೇರಿಕೊಂಡು ಬರುತ್ತಿದ್ದ ಎಂದು ಗೋಡಂಬಿ ಘಾಟಿನ ವಾಸನೆಯೇ ನಮಗೆ ಹೇಳುತ್ತಿತ್ತು. ನಮ್ಮ ಪರಿಸ್ಥಿತಿಯನ್ನು ಅರಿತು ಅವನು ಮಡಿಕೇರಿವರೆಗೆ ಕರೆದುಕೊಂಡು ಹೋಗಲು ಒಪ್ಪಿಕೊಂಡ. ‘ಆದರೆ ಹದಿನೈದು ಮಂದಿ ಟ್ರಕ್ ಕ್ಯಾಬಿನ್ ಒಳಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ, ಬೇಕಾದರೆ ಟಾಪ್ ಮೇಲೆ ಕುಳಿತುಕೊಂಡು ಬರಬಹುದು’ ಎಂದ. ಸಿಕ್ಕ ಅವಕಾಶವನ್ನು ಕಳೆದುಕೊಂಡರೆ, ನಾಳೆ ಬೆಳಿಗ್ಗೆವರೆಗೂ ಅನ್ನ ನೀರು ಇಲ್ಲದೆ ಇಲ್ಲೇ ಬಿದ್ದು ಸಾಯಬೇಕು, ಬೇರೆ ವೆಹಿಕಲ್‌ಅನ್ನು ನೆಚ್ಚಿಕೊಂಡರೆ ಅದು ಬರುವ ಗ್ಯಾರಂಟಿಯೇ ಇಲ್ಲ ಎಂದುಕೊಂಡು, ಒಬ್ಬೊಬ್ಬರಾಗಿ ಟ್ರಕ್ಕನ್ನು ಹತ್ತತೊಡಗಿದೆವು. ಟ್ರಕ್‌ಗೆ ಬಿಗಿದಿದ್ದ ಹಗ್ಗವನ್ನು ಜಗ್ಗಿ ಹಿಡಿದುಕೊಂಡು ಮಂಗಗಳು ಮರ ಏರುವಂತೆ ಕತ್ತಲಿನಲ್ಲೇ ಟ್ರಕ್ ಹತ್ತಿ ಕುಳಿತೆವು. (ನಮ್ಮ ಡ್ರೈವರ್ ತನ್ನ ವಾಹನ ಬಿಟ್ಟು ಕೆಳಗಿಳಿಯಲೇ ಇಲ್ಲ).

ನಮ್ಮನ್ನು ಹತ್ತಿಸಿಕೊಂಡ ಟ್ರಕ್ ಕತ್ತಲೆಯನ್ನು ಭೇದಿಸಿಕೊಂಡು ಮಡಿಕೇರಿಯತ್ತ ಹೊರಟಿತು. ಆಗ ರಾತ್ರಿ ಸುಮಾರು 10 ಗಂಟೆ. ಟ್ರಕ್ ಮೇಲೆ ನಾವೆಲ್ಲ ಒಬ್ಬರನ್ನೊಬ್ಬರು ಆಧಾರವಾಗಿ ಹಿಡಿದುಕೊಂಡು ಕುಳಿತಿದ್ದೆವು. ಕ್ಯಾಬಿನ್ ಟಾಪ್‌ಗಿಂತ ಒಂದಡಿ ಎತ್ತರದಷ್ಟು ಲೋಡ್ ಡ್ರೈವರ್ ಅದರ ಮೇಲೆ ಹೇರಿದ್ದ. ಕತ್ತಲೆಯಲ್ಲಿ ಒಬ್ಬರ ಮುಖ ಒಬ್ಬರಿಗೆ ಕಾಣಿಸುತ್ತಿರಲಿಲ್ಲ. ಎಷ್ಟು ಹೊತ್ತಿಗೆ ಮಡಿಕೇರಿ ಸೇರಿಕೊಳ್ಳುತ್ತೇವೆಯೋ ಎಂಬ ಧಾವಂತ. ಯಮಭಾರದಷ್ಟು ಗೋಡಂಬಿಯನ್ನು ಹೊತ್ತಿದ್ದ ಟ್ರಕ್ ಒಂದೇ ವೇಗದಲ್ಲಿ ಮಡಿಕೇರಿ ಕಡೆಗೆ ಹೋಗುತ್ತಿತ್ತು. 2–3 ಕಿ.ಮೀ. ದೂರ ಕ್ರಮಿಸಿರಬೇಕು. ಅಷ್ಟರಲ್ಲಿ ರಸ್ತೆಗೆ ಅಡ್ಡಲಾಗಿ ಹೈಟೆನ್ಷನ್ ವಯರ್‌ಗಳು ಹಾದು ಹೋಗಿರುವುದು ಕಂಡಿತು. ಅದು ಹೆಡ್‌ಲೈಟ್ ಬೆಳಕಿನಲ್ಲಿ ನಮಗೆ ಸ್ಪಷ್ಟವಾಗಿ ಕಂಡಿತ್ತು. ನಮಗೆ ಏನು ಮಾಡಬೇಕೋ ಹೊಳೆಯಲಿಲ್ಲ. ಟ್ರಕ್ ನಿಲ್ಲಿಸುವಂತೆ ಜೋರಾಗಿ ನಾವೆಲ್ಲ ಒಕ್ಕೊರಲಿನಿಂದ ಬೊಬ್ಬೆ ಹಾಕಬೇಕಿತ್ತು ಅಥವಾ ಎಲ್ಲರೂ ಒಟ್ಟಿಗೆ ಕೆಳಕ್ಕೆ ಜಿಗಿಯಬೇಕಿತ್ತು. ಏನು ಮಾಡಲೂ ಸಮಯವೇ ಇರಲಿಲ್ಲ. ಪ್ರಾಣ ಭಯದಿಂದ ನಮ್ಮ ಎದೆಗಳು ಡವಗುಟ್ಟತೊಡಗಿದವು. ಬಾಣಲೆಯಿಂದ ಜಿಗಿದು ಬೆಂಕಿಗೆ ಬೀಳುವಂತಾಗಿತ್ತು ನಮ್ಮ ಸ್ಥಿತಿ. ಕೊನೆಗೆ ಆದದ್ದು ಆಗಲಿ ಎಂದು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಎಲ್ಲರೂ ಟ್ರಕ್ ಮೇಲೆ ಬೋರಲು ಬಿದ್ದೆವು. ಅರೆಕ್ಷಣದಲ್ಲಿ ನಮ್ಮ ಟ್ರಕ್ ಹೈಟೆನ್ಷನ್ ವಯರ್‌ಗಳ ಕೆಳಗೆ ಹಾದು ಹೋಯಿತು! ಹೈಟೆನ್ಷನ್ ವಯರ್‌ಗಳು ನಮಗೆ ತಾಕಲಿಲ್ಲ. ಬದುಕಿದೆಯಾ ಬಡಜೀವವೇ ಎಂದು ಬಿಗಿ ಹಿಡಿದಿದ್ದ ಉಸಿರನ್ನು ಬಿಟ್ಟೆವು. ಹೈಟೆನ್ಷನ್ ವಯರ್‌ಗಳಿಗೂ ನಮಗೂ ಇದ್ದ ಅಂತರ ಕೇವಲ ಒಂದು ಅಡಿ! ನಾವೇನಾದರೂ ಒಂದು ವೇಳೆ ಟ್ರಕ್ ಮೇಲೆ ಬೋರಲು ಬೀಳದಿದ್ದರೆ, ಹೈಟೆನ್ಷನ್ ವೈರ್‌ಗಳ ಕೆನ್ನಾಲಿಗೆ ತುತ್ತಾಗಿ ಕ್ಷಣಮಾತ್ರದಲ್ಲಿ ನಾವೆಲ್ಲ ಸುಟ್ಟು ಭಸ್ಮವಾಗುತ್ತಿದ್ದೆವು. ಅಂತೂ ಹೇಗೋ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡೆವು. ಎರಡೂ ಪ್ರಾಣಾಂತಿಕ ಕಂಟಕಗಳಿಂದ ಪಾರಾಗಿ ಪ್ರಾಣ ಉಳಿಸಿಕೊಂಡೆವು. ನಮ್ಮೆಲ್ಲರ ಆಯಸ್ಸು ಗಟ್ಟಿಯಾಗಿಯೇ ಇತ್ತು. ಕಡೆಗೆ ಮಧ್ಯರಾತ್ರಿ ಹೊತ್ತಿಗೆ ಮಡಿಕೇರಿ ಸೇರಿಕೊಂಡೆವು. ಮಡಿಕೇರಿ ಪ್ರವಾಸವನ್ನು ನೆನೆದರೆ, ಈಗಲೂ ಮೈ ಜುಮ್ಮೆನ್ನುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT