ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣನ ಉಳಿಸಹೋಗಿ ಆರೋಪಿಯಾದ

ಕಟಕಟೆ–83
Last Updated 9 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅದೊಂದು ರಾತ್ರಿ ರಾಮನಗರ ಪೊಲೀಸ್‌ ಠಾಣೆಯ ಸರಹದ್ದಿನಲ್ಲಿ ಡಕಾಯಿತರು ಕಾರೊಂದನ್ನು ಅಡ್ಡಗಟ್ಟಿ ಪ್ರಯಾಣಿಕರ ಒಡವೆಗಳನ್ನು ದೋಚಿದ್ದರು. ಪೊಲೀಸರು ತಮಗೆ ಸಿಕ್ಕಿದ ಅವಶೇಷಗಳ ಜಾಡನ್ನು ಹಿಡಿದು ಒಂದು ತಿಂಗಳ ನಂತರ ಬಾಚಣ್ಣ ಎಂಬಾತನನ್ನು ಬಂಧಿಸಿದರು. ಉಳಿದವರು ತಪ್ಪಿಸಿಕೊಂಡರು. ಬಾಚಣ್ಣನ ವಿಚಾರಿಸಿದಾಗ ದೋಚಿದ್ದ ಒಡವೆಗಳು ರಾಮನಗರದ ಇನಾಯತ್‍ಗೆ ಮಾರಾಟ ಮಾಡಿದ್ದಾಗಿ ತಿಳಿಸಿದ. ಇನಾಯತ್ ಮನೆಯಲ್ಲಿ ಪೊಲೀಸರು ಶೋಧ ಮಾಡಿದಾಗ ಒಡವೆಗಳು ದೊರೆತವು. ಡಕಾಯಿತಿ ಮಾಲನ್ನು ಖರೀದಿಸಿದ ಆರೋಪದ ಮೇಲೆ ಪೊಲೀಸರು, ಇನಾಯತ್‍ನನ್ನು ಬಂಧಿಸಿ ಆರೋಪಿಯನ್ನಾಗಿಸಿದರು.

ಇನಾಯತ್ ಸ್ವಂತ ಕಾರಿಟ್ಟುಕೊಂಡು, ಟ್ಯಾಕ್ಸಿ ಓಡಿಸಿ ಮನೆ ಮಂದಿಯನ್ನು ಮತ್ತು ಕಾಲೇಜಿಗೆ ಹೋಗುತ್ತಿದ್ದ ಒಬ್ಬ ತಮ್ಮನನ್ನು ಸಾಕುತ್ತಿದ್ದ. ಈ ಕ್ರಿಮಿನಲ್ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದರೂ ಕೋರ್ಟಿನ ಅಲೆದಾಟ ಅವನನ್ನು ಸುಸ್ತಾಗಿಸಿತ್ತು, ಮನೆ ನಿರ್ವಹಣೆಯಲ್ಲಿ ಏರುಪೇರಾಯಿತು.

ಇನಾಯತ್ ದರೋಡೆಕೋರನಾಗಿರಲಿಲ್ಲ, ಆದರೆ ಅವನ ವಿವೇಕ ಕೈಕೊಟ್ಟಿತ್ತು. ‘ಗುಂಡಿಗೆ ಬಿದ್ದವನಿಗೆ ಆಳಿಗೊಂದು ಕಲ್ಲು’ ಎಂಬಂತೆ ಮೊದಲೇ ನೊಂದಿದ್ದ ಇನಾಯತ್, ಬಂಧುಬಳಗದ
ವರ, ಸ್ನೇಹಿತರ ಕುಹಕದಿಂದ ಮಾನಸಿಕ ಹಿಂಸೆ ಅನುಭವಿಸುತ್ತಾ ಖಿನ್ನತೆಗೆ ಒಳಗಾದ. ಅಣ್ಣನ ಈ ದುಃಸ್ಥಿತಿಯನ್ನು ಗಮನಿಸಿದ್ದ ಅವನ ತಮ್ಮ ಅಸ್ಲಂಪಾಷ ಅಣ್ಣನಿಗೆ ನೆರವಾಗುವ ಕುರಿತು ಚಿಂತಿತನಾದ. ಇವರೂ ನೋಡಲು ಒಂದೇ ರೀತಿ ಇದ್ದರು.

ಕೋರ್ಟ್ ಅಲೆದಾಟದಿಂದ ಅಣ್ಣನಿಗೆ ಒಂದಷ್ಟು ವಿರಾಮ ಕೊಡಿಸಲು ತಾನೇ ಅಣ್ಣನ ಬದಲಾಗಿ ಕೋರ್ಟಿನಲ್ಲಿ ಹಾಜರಾದರೆ ಹೇಗಿರುತ್ತದೆ ಎಂಬ ಕುರಿತು ಯೋಚಿಸಿದ. ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿಕೊಂಡ. ಸಿದ್ಧತೆ ಮಾಡಿಕೊಂಡ ಮೇಲೆ ಅಣ್ಣನನ್ನೂ ಒಪ್ಪಿಸಿದ. ಎಂದೂ ಯಾರೂ ತನ್ನ ಯೊಜನೆಯನ್ನು ಭೇದಿಸಲು ಸಾಧ್ಯವಿಲ್ಲವೆಂದು ತಿಳಿದ. ಇನಾಯತ್ ಬದಲಾಗಿ ಅಸ್ಲಂ ಸುಮಾರು 10-12 ಬಾರಿ ಕೋರ್ಟಿಗೆ ಹೋಗಿ ಬಂದರೂ ಇನಾಯತ್‍ನ ವಕೀಲರಾದಿಯಾಗಿ ಯಾರಿಗೂ ಅಸ್ಲಂಪಾಷ ಇನಾಯತ್‍ನಂತೆ ನಟಿಸುತ್ತಿರುವುದು ಗೊತ್ತಾಗಲೇ ಇಲ್ಲ.

ದುರದೃಷ್ಟವೆಂಬಂತೆ ತನಿಖಾಧಿಕಾರಿಗೆ ಇದರ ವಾಸನೆ ಬಡಿಯಿತು. ಮುಂದಿನ ವಿಚಾರಣೆಯ ದಿನ ಕೇಸನ್ನು ಕರೆದಾಗ ನ್ಯಾಯಾಲಯದ ಒಳಗೆ ಹೋಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಮೂಲಕ ನ್ಯಾಯಾಧೀಶರ ಗಮನಕ್ಕೆ ತಂದೇಬಿಟ್ಟರು. ಸಿಡಿಮಿಡಿಗೊಂಡ ನ್ಯಾಯಾಧೀಶರು ಅಸ್ಲಂಪಾಷನನ್ನು ಕರೆಸಿ ಪ್ರಶ್ನೆಗಳ ಸುರಿಮಳೆ ಸುರಿದರು. ವಿಚಲಿತಗೊಂಡ ಅಸ್ಲಂಪಾಷ ತಾನು ಅಣ್ಣನ ವೇಷಧಾರಿಯೆಂದು ಒಪ್ಪಿಕೊಂಡ.

ಇದರಿಂದ ಅಸ್ಲಂ ವಿರುದ್ಧ ದೂರು ದಾಖಲಾಯಿತು. ಮೂರು ವರ್ಷ ಶಿಕ್ಷೆ ಅಥವಾ ದಂಡ ಅಥವಾ ಸಂದರ್ಭಾನುಸಾರ ಎರಡನ್ನೂ ವಿಧಿಸಬಹುದಾದ ಅಪರಾಧ ಇದು.

ಪ್ರಕರಣದ ವಿಚಾರಣೆ ಸಾಗಿದಂತೆಲ್ಲಾ ಆರೋಪಿಗಳು ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯ ಎಂಬುದು ದಟ್ಟವಾಗತೊಡಗಿತು. ಈ ಹಂತದಲ್ಲಿ ಬೆಂಗಳೂರಿನಲ್ಲಿದ್ದ ಈ ಸೋದರರ ಸಂಬಂಧಿ
ಯೊಬ್ಬರು ನನ್ನನ್ನು ಕಂಡು ಆರೋಪಿಗಳ ಪರ ವಕಾಲತು ವಹಿಸಲು ಕೇಳಿಕೊಂಡರು. ಪ್ರಕರಣದ ಬೆಳವಣಿಗೆಗಳನ್ನು ಅವರು ಮನದಟ್ಟು ಮಾಡಿಕೊಡುತ್ತಿರುವಾಗ ಆರೋಪಿಗಳು ಆಕಸ್ಮಿಕಗಳಿಗೆ ಎಡವಿ ಬಿದ್ದಂತೆ ಕಂಡರು.

ಈ ಪ್ರಕರಣದ ವಿಚಾರಣೆ ನಡೆಸುವವರು ನ್ಯಾಯಾಧೀಶ ಕೆ.ಚಂದ್ರಶೇಖರಯ್ಯ ಎಂದು ಗೊತ್ತಾಗಿ ಸಮಾಧಾನವಾಯಿತು. ಚಂದ್ರಶೇಖರಯ್ಯನವರು ಯಾವುದೇ ವಿಷಯವನ್ನು ನಿರ್ವಹಿಸುವಲ್ಲಿ ಅಸಾಧಾರಣ ಸೂಕ್ಷ್ಮತೆ ತೋರುತ್ತಿದ್ದರು. ಅದಕ್ಕಿಂತಲೂ ಹೆಚ್ಚಾಗಿ ತಾನು ಸೂಕ್ಷ್ಮವಾಗಿ ಗಮನಿಸಿಕೊಂಡದ್ದನ್ನು ಯಾರೂ ಊಹಿಸದ ಕ್ಷಣದಲ್ಲಿ ಪ್ರದರ್ಶಿಸುವ ಅವರ ವಿಶಿಷ್ಟ ರೀತಿಯನ್ನು ಅವರು ಬೆಂಗಳೂರಿನಲ್ಲಿ ಹಲವಾರು ವರ್ಷ ಮ್ಯಾಜಿಸ್ಟ್ರೇಟ್ ಆಗಿದ್ದಾಗ ಕಂಡಿದ್ದೆ.

ಸೋದರ ಆರೋಪಿಗಳ ಪರವಾಗಿ ನಾನು ಕೋರ್ಟಿನಲ್ಲಿ ಹಾಜರಾದಾಗ, ‘ಏನು ಹನುಮಂತರಾಯರೆ, ಈ ಕೇಸಿನಲ್ಲಿ ಸಾಕ್ಷಿಗಳ ವಿಚಾರಣೆ ನಡೆದುಹೋಗಿದೆ. ಈ ಹಂತದಲ್ಲಿ ನಿಮ್ಮ ಹಾಜರಾತಿ ಯಾವ ವ್ಯತ್ಯಾಸವನ್ನೂ ಮಾಡಲಾರದೇನೋ’ ಎಂದರು. ‘ನನಗೆ ತಮ್ಮಂತಹ ಮೇಧಾವಿ ನ್ಯಾಯಾಧೀಶರ ಮುಂದೆ ಈ ಹಂತವೇ ಅತಿ ಮುಖ್ಯವಾದುದು ಅನ್ನಿಸುತ್ತಿದೆ ಸ್ವಾಮಿ’ ಎಂದೆ. ಅದಕ್ಕೆ ಅವರು, ‘ನನಗೂ ನೋಡುವಾಸೆ’ ಎಂದರು. ವಿಚಾರಣೆ ಮುಂದೂಡಲಾಯಿತು.

ಈ ಸಹೋದರರ ಪ್ರಕರಣದ ವಿಚಾರಣೆ ಇದ್ದ ಕೋರ್ಟ್‌ನಲ್ಲೇ ಅಂದು ಬೇರೊಂದು ಪ್ರಕರಣದಲ್ಲಿ ನಾಲ್ಕು ಜನ ಆರೋಪಿಗಳು ಖುಲಾಸೆಗೊಂಡಿದ್ದರು. ಅದರ ಸಂಭ್ರಮಾರ್ಥ ತಮ್ಮನ್ನು ಕರೆತಂದಿದ್ದ ನಾಲ್ಕು ಜನ ಬೆಂಗಾವಲು ಪೊಲೀಸರೊಂದಿಗೆ ರಾಮನಗರದ ಹೊರವಲಯದಲ್ಲಿದ್ದ ಅಶೋಕ ಡಾಬಾದಲ್ಲಿ ಅವರು ಒಂದು ಪಾರ್ಟಿ ಏರ್ಪಡಿಸಿದ್ದರು. ಬಿಡುಗಡೆ ಹೊಂದಿದ ಆರೋಪಿಗಳು ಮತ್ತೊಂದು ಕಾರಿನಲ್ಲಿ ಅಲ್ಲಿಗೆ ಬಂದು ಎಸ್ಕಾರ್ಟ್ ಪೊಲೀಸರೊಂದಿಗೆ ಪಾನಗೋಷ್ಠಿಯಲ್ಲಿ ತೊಡಗಿದರು. ಸೋದರ-ಆರೋಪಿಗಳನ್ನು ಜೈಲಿಗೆ ಕರೆದುಕೊಂಡು ಹೋಗಬೇಕಿದ್ದರಿಂದ ಅವರನ್ನೂ ಡಾಬಾದ ಬಳಿ ಕರೆತಂದರು.

ಪೊಲೀಸರು ಸತತವಾಗಿ ಮೂರ್ನಾಲ್ಕು ಗಂಟೆ ಕುಡಿದರು. ಕೋರ್ಟ್‌ನಿಂದ ಜಾಮೀನು ಪಡೆದರೂ ಆರೋಪಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಬೇಕೆಂದರೆ ಸಂಜೆ 6ಗಂಟೆಯ ಒಳಗೆ ತಾಲ್ಲೂಕು ಜೈಲಿನ ರಿಜಿಸ್ಟರ್‌ನಲ್ಲಿ ಅದನ್ನು ನಮೂದಿಸಬೇಕು. ಆದ್ದರಿಂದ ಆರೋಪಿ ಸೋದರರನ್ನು ಪೊಲೀಸರು ತಮ್ಮ ಟ್ಯಾಕ್ಸಿಯೊಳಗೂ, ಬಿಡುಗಡೆಗೊಂಡ ಆರೋಪಿಗಳನ್ನು ಇನ್ನೊಂದು ಆಟೊದಲ್ಲಿ ಕುಳ್ಳಿರಿಸಿಕೊಂಡೂ ತಾಲ್ಲೂಕು ಜೈಲಿಗೆ ಬಂದರು. ಆದರೆ ಆ ವೇಳೆಗೆ ಸಂಜೆ 7 ಗಂಟೆಯಾಯಿತು. ಜೈಲು ಮುಚ್ಚಿತ್ತು. ಆದ್ದರಿಂದ ಬಿಡುಗಡೆಯಾದ ಆರೋಪಿಗಳಿಗೆ ಒಳಗೆ ಪ್ರವೇಶ ಕೊಡಲಿಲ್ಲ. ಆ ರಾತ್ರಿ ಅವರೆಲ್ಲರೂ ಅಲ್ಲೇ ಉಳಿದುಕೊಂಡರು. ಇದರಿಂದಾಗಿ ಎಸ್ಕಾರ್ಟ್ ಪೊಲೀಸರು ಕರ್ತವ್ಯ ಲೋಪದ ಆಪಾದನೆಯ ಮೇಲೆ ಇಲಾಖಾ ವಿಚಾರಣೆಗೆ ಗುರಿಯಾದರು.

ಈ ಪ್ರಕರಣ ವಿಚಾರಣೆ ಬಂತು. ಪ್ರಾಸಿಕ್ಯೂಟರರು ಚೆನ್ನಾಗಿ ವಾದಿಸಿದರು. ಅವರ ವಾದದ ನಂತರ ನನಗೇನೂ ಉಳಿದಿಲ್ಲವೆನ್ನುವಂತೆ ನ್ಯಾಯಾಧೀಶರು ನನ್ನನ್ನು ನೋಡಿದರು. ‘ಯುವರ್ ಆನರ್, ಇಲ್ಲಿ ಯಾವ ಸಂಗತಿಯೂ ರಹಸ್ಯವಲ್ಲ. ಆರೋಪಿಗಳ ಬಿಡುಗಡೆಗಾಗಿ ಪ್ರತಿವಾದ ಮಂಡಿಸಲು ನನಗೆ ಏನೂ ಉಳಿದಿಲ್ಲ. ಕಾರಣ ಅವರ ವಿರುದ್ಧವಿರುವ ಎಲ್ಲವನ್ನೂ ಮಾನ್ಯ ಪ್ರಾಸಿಕ್ಯೂಟರವರು ಸಾಕ್ಷ್ಯ ಮತ್ತು ಪುರಾವೆಗಳಿಂದ ಸಾಬೀತುಪಡಿಸಿರುತ್ತಾರೆ. ಈ ವಿಚಾರವನ್ನು ಹೇಳಲು ನನಗೆ ನಾಚಿಕೆಯಾಗುವುದಿಲ್ಲ. ಆದರೆ ನಾನು ಮಾಡಬೇಕಾಗಿರುವ ವಾದ ಮುಂದೆ ಇದೆ’ ಎಂದೆ.

ಇದಕ್ಕೆ ಅವಾಕ್ಕಾದ ನ್ಯಾಯಾಧೀಶರು, ‘ಹಾಗಾದರೆ ನಿಮ್ಮ ವಾದವನ್ನು ಯಾವಾಗ ಮಾಡುತ್ತೀರಿ?’ ಎಂದು ಪ್ರಶ್ನಿಸಿದರು. ‘ಆರೋಪಿಗಳು ತಪ್ಪಿತಸ್ಥರೆಂದು ನಿರ್ಣಯಿಸಿದ ಮೇಲೆ’ ಎಂದೆ. ನಗುಮೊಗದಿಂದ ನ್ಯಾಯಾಲಯದಲ್ಲಿದ್ದ ಇತರೆ ವಕೀಲರ ಕಡೆ ನೋಡುತ್ತಾ, ‘ನೋಡಿ, ಹನುಮಂತರಾಯರು ಬಿಡುಗಡೆಗಾಗಿ ವಾದ ಮಾಡುವುದಿಲ್ಲವಂತೆ. ಇನ್ನು ಮುಂದೆ ನೀವೂ ಹೀಗೇ ಮಾಡೋದು ಸೂಕ್ತವೇನೋ, ಅದೇನ್ ವಾದ ಮಾಡ್ತಾರೋ ನೋಡೋಣ’ ಎನ್ನುತ್ತ ತೀರ್ಪನ್ನು ಕಾಯ್ದಿರಿಸಿದರು.

ತೀರ್ಪಿನ ದಿನ ಬಂತು. ‘ಮೇಲಿನ ಎಲ್ಲಾ ಕಾರಣಗಳಿಂದಾಗಿ ಆರೋಪಿಗಳ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿ ಅವರನ್ನು ತಪ್ಪಿತಸ್ಥರೆಂದು ನಿರ್ಣಯಿಸಲಾಗಿದೆ’ ಎಂದು ತೀರ್ಪು ಓದಿದ ನ್ಯಾಯಾಧೀಶರು, ‘ಹನುಮಂತರಾಯರೇ, ಇನ್ನು ನೀವು ಪ್ರಾರಂಭಿಸಬಹುದು’ ಎಂದರು.

‘ಯುವರ್ ಆನರ್, ಕ್ರಿಮಿನಲ್ ನ್ಯಾಯಾಲಯಗಳ ಆಳ-ಅಗಲಗಳು ಸಾಮಾನ್ಯವಲ್ಲ. ಅವು ಆರೋಪಿಗಳ ಸಣ್ಣತನ, ವಂಚನೆ, ಉದಾರತೆ, ಶೀಲ ಮತ್ತು ಚಾರಿತ್ರ್ಯ ಮುಂತಾದವುಗಳ ಪರಿಚಯವನ್ನು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಗಳಿಗೆ ಮಾಡಿಕೊಡುತ್ತವೆ. ಅಲ್ಲದೆ ನ್ಯಾಯದ ಹುಡುಕಾಟದಲ್ಲಿ ಅವುಗಳು ವಸ್ತುಗಳಾಗಿಯೂ ಪರಿಣಮಿಸುತ್ತವೆ. ಆರೋಪಿಯು ಅಪರಾಧಿಯೆಂದು ನಿರ್ಣಯಿಸಿದಾಗಲೂ ಆ ವಸ್ತುಗಳು ಅವನನ್ನು ಸೆರೆಮನೆಗೆ ಹೋಗದಂತೆ ನೋಡಿಕೊಳ್ಳುವ ತೀರ್ಪಿಗೂ ನೆರವಾಗುತ್ತವೆ. ದಂಡ ಪ್ರಕ್ರಿಯಾ ಸಂಹಿತೆಯ ಕಲಂ 360ಅನ್ನು ಗಮನಿಸಿದಾಗ, ‘ಆರೋಪಿಯು 21 ವರ್ಷಕ್ಕಿಂತ ಜಾಸ್ತಿ ವಯಸ್ಸಿನವನಿದ್ದೂ, ಏಳು ವರ್ಷಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಜೈಲುಶಿಕ್ಷೆಯಿಂದ ದಂಡನೀಯವಾದ ಅಪರಾಧವನ್ನು ಮಾಡಿರುವನೆಂದು ನಿರ್ಣಯಿಸಿದಾಗ; 21 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಆರೋಪಿಯು ಮರಣದಂಡನೆಯಿಂದ ಅಥವಾ ಆಜೀವ ಜೈಲುಶಿಕ್ಷೆಯಿಂದ ದಂಡನೀಯವಲ್ಲದ ಅಪರಾಧವನ್ನು ಮಾಡಿದ್ದಾನೆಂದು ನಿರ್ಣಯಿಸಿದಾಗ; ಅವರ ವಿರುದ್ಧ ಈ ಹಿಂದೆ ಯಾವುದೇ ಅಪರಾಧಗಳು ಸಾಬೀತಾದ ಪ್ರಕರಣಗಳು ಇಲ್ಲದಿರುವಾಗ ಅಪರಾಧಿಯ ವಯಸ್ಸು, ಶೀಲ, ಪೂರ್ವೋತ್ತರಗಳು, ಅಪರಾಧ ನಡೆದ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಂಡು ಅಪರಾಧಿಯನ್ನು ಸನ್ನಡತೆಯ ಪರಿವೀಕ್ಷಣೆಗಾಗಿ ಬಿಡುಗಡೆ ಮಾಡತಕ್ಕದ್ದು ಎಂದು ಒತ್ತಿ ಹೇಳುತ್ತದೆ. ಇಂತಹ ಸಂದರ್ಭದಲ್ಲಿ ಅಪರಾಧಿಗಳ ಪರಿವೀಕ್ಷಣೆ ಅಧಿನಿಯಮವನ್ನು ಗಮನಿಸಿಕೊಳ್ಳದೆಯೂ ನ್ಯಾಯಾಧೀಶರು ಅಧಿಕಾರವನ್ನು ಚಲಾಯಿಸಬಹುದು’ ಎಂದು ಈ ಕಲಮು ಹೇಳುತ್ತದೆ’ ಎಂದು ಕಲಮಿನಲ್ಲಿ ಲಭ್ಯವಿರುವ ವಿಶೇಷ ಗುಣಸ್ವಭಾವ ಕುರಿತು ಹೇಳಿದೆ.

ವಾದವನ್ನು ಮುಂದುವರೆಸುತ್ತಾ, ‘ಅಪರಾಧಿ ಇನಾಯತ್ 21ವರ್ಷ ವಯಸ್ಸು ಮೀರಿದವನು, ಅಸ್ಲಂಪಾಷನಿಗೆ ಇನ್ನೂ 21 ವರ್ಷ ಆಗಿಲ್ಲ. ಇಬ್ಬರ ಮೇಲೂ ಹೊರಿಸಿರುವ ಆರೋಪಗಳಿಗೆ ಇರುವ ಶಿಕ್ಷಾವಧಿ 7ವರ್ಷಕ್ಕಿಂತ ಕಡಿಮೆ; ಇಬ್ಬರೂ ತಮ್ಮ ಬದುಕಿನಲ್ಲಿ ಮೊದಲ ಬಾರಿಗೆ ಆರೋಪಗಳಿಗೆ ಗುರಿಯಾಗಿರುವವರು; ಅವರ ವ್ಯಕ್ತಿತ್ವಕ್ಕೆ ಕಳಂಕ ಮೆತ್ತಿಕೊಳ್ಳುವಂತಹ ಯಾವ ಕೃತ್ಯವನ್ನೂ ಈ ಪ್ರಕರಣಕ್ಕೂ ಮುಂಚೆ ಮಾಡಿಲ್ಲ; ಇಬ್ಬರೂ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ತಪ್ಪದೇ ಎಲ್ಲ ದಿನಗಳಂದೂ ಹಾಜರಾಗಿದ್ದು ಕಾನೂನಿನ ಬಗ್ಗೆ ತಮಗಿರುವ ಗೌರವ ವ್ಯಕ್ತಪಡಿಸಿದ್ದಾರೆ. ಈ ಸೋದರರು ಅಪರಾಧಿತನದ ಮನೋಭಾವ ಇಲ್ಲದವರೆಂದು ನ್ಯಾಯಾಲಯದಲ್ಲಿ ನಿರೂಪಿತವಾಗಿದೆ. ಶಿಕ್ಷೆಯನ್ನು ಅನುಭವಿಸುವ ವಿಚಾರದಲ್ಲಿ ಸನ್ನಡತೆಗಾಗಿ ಸಂಪೂರ್ಣ ವಿನಾಯಿತಿಗೆ ಅರ್ಹರಿರುತ್ತಾರೆ. ಇದರಿಂದ ಕಲಂ 360ರ ಧೋರಣೆಯಷ್ಟೇ ಅಲ್ಲದೆ ಭಾವಾವೇಷದಲ್ಲಿ ಮಾಮೂಲಿ ಮನುಷ್ಯರಿಂದ ಘಟಿಸುವ ಪಾತಕಗಳನ್ನು ಮಾನವೀಯ ನೆಲೆಯಿಂದಲೂ ಪರೀಕ್ಷಿಸಬೇಕೆಂಬ ಕಲಂ 360ರ ಅಗತ್ಯವೂ ಈಡೇರಿದಂತಾಗುತ್ತದೆ. ನನ್ನ ವಾದಮಂಡನೆಯಲ್ಲಿ ತಿಳಿಸಿಕೊಂಡಿರುವ ಅಂಶಗಳು ಶಿಕ್ಷೆಯ ಉಗ್ರತೆಯನ್ನು ಸೋದರ-ಅಪರಾಧಿಗಳ ವಿಚಾರದಲ್ಲಿ ಮೃದು ಮಾಡಲು ಸಾಕಾಗುತ್ತದೆ ಎಂದು ತಮ್ಮಲ್ಲಿ ನಿವೇದಿಸಿಕೊಳ್ಳುತ್ತೇನೆ’ ಎನ್ನುತ್ತಾ ನ್ಯಾಯಾಧೀಶರನ್ನು ಗಮನಿಸಿದೆ.

ನಾನು ಮಂಡಿಸಿದ ವಿಚಾರಗಳು ಅವರ ಮನಸ್ಸಿನಲ್ಲಿ ಇಂಗಿದ್ದವು ಎನಿಸಿತು. ನ್ಯಾಯಾಧೀಶರು ಕೂಡಲೇ ತೀರ್ಪಿನ ಕೊನೆಯ ಭಾಗವಾಗಿ ನನ್ನ ವಾದವನ್ನು ಸೇರ್ಪಡೆ ಮಾಡುತ್ತಾ, ಅಪರಾಧಿಗಳನ್ನು ಬಂದಿಖಾನೆಗೆ ಕಳುಹಿಸದೆ ಅಂದಿನಿಂದ ಮೂರು ವರ್ಷಗಳವರೆಗೆ ಶಾಂತಿಪಾಲನೆ ಮಾಡಲು, ಸದ್ವರ್ತನೆಯಲ್ಲಿರಲು ಜಾಮೀನುಸಹಿತ ಮುಚ್ಚಳಿಕೆಯನ್ನು ಬರೆದುಕೊಟ್ಟು ಹೋಗುವಂತೆ ತಿಳಿಸಿದರು.

ಕೆ.ಚಂದ್ರಶೇಖರಯ್ಯನವರು ಬಡ್ತಿ ಪಡೆದು ತುಮಕೂರು ಸೆಷನ್ಸ್ ನ್ಯಾಯಾಧೀಶರಾಗಿದ್ದಾಗ ಕೊಲೆ ಪ್ರಕರಣವೊಂದರಲ್ಲಿ ಅವರ ಮುಂದೆ ಹಾಜರಾದೆ. ಇನಾಯತ್-ಅಸ್ಲಂ ಪ್ರಕರಣವನ್ನು ನೆನಪು ಮಾಡಿಕೊಂಡರು. ಕಲಂ 360ರ ಲಾಭವನ್ನು ಸೋದರ-ಅಪರಾಧಿಗಳಿಗೆ ದೊರಕಿಸಿಕೊಡುವಾಗ ಅವರಿಬ್ಬರು ಅಶೋಕ ಡಾಬಾದಲ್ಲಿ ಪೊಲೀಸರು ಕಂಠಪೂರ್ತಿ ಕುಡಿದು ಕರ್ತವ್ಯ ಮರೆತಿದ್ದಾಗ ಓಡಿಹೋಗದೆ, ಅವರನ್ನು ತಮ್ಮ ಟ್ಯಾಕ್ಸಿಯಲ್ಲಿ ಪೊಲೀಸ್ ಠಾಣೆಗೆ ಸಾಗಿಸಿದ್ದ ಅಂಶ ತಮ್ಮ ಗಮನಲ್ಲಿದ್ದುದನ್ನು ತಿಳಿಸಿದರು. ಈ ಕಾರಣದಿಂದಲೇ ಕೆ.ಚಂದ್ರಶೇಖರ್‍ ಅವರ ವಿಚಾರ ಬಂದಾಗಲೇ ಅವರು ಕ್ರಿಮಿನಲ್ ಪ್ರಕರಣವನ್ನು ನಿರ್ವಹಿಸುವಲ್ಲಿ ಸೂಕ್ಷ್ಮಾತಿಸೂಕ್ಷ್ಮ ಗುಣಗಳನ್ನು ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸುತ್ತಿದ್ದರು ಎಂದು ನಾ ಹೇಳಿದ್ದು.

ಕಾನೂನು, ಮಾನವೀಯತೆ, ಔದಾರ್ಯ ಎಲ್ಲವೂ ಮೇಳೈಸಿದ್ದ ನ್ಯಾಯಾಧೀಶರ ಪರಿಪಕ್ವ ತೀರ್ಪು ನಾಶವಾಗಿಬಿಡಬಹುದಾಗಿದ್ದ ಇನಾಯತ್ ಮತ್ತು ಅಸ್ಲಂ ಅವರ ಬದುಕುಗಳನ್ನು ಉಳಿಸಿಕೊಟ್ಟಿತು. ಅವರು ಮುಚ್ಚಳಿಕೆ ಬರೆದುಕೊಟ್ಟಂತೆ ಮೂರು ವರ್ಷಗಳ ಸನ್ನಡತೆ ನಿರೂಪಿಸಿ ನಿರಪರಾಧಿಗಳಾದರು.

(ಆರೋಪಿಗಳ ಹೆಸರುಗಳನ್ನು ಬದಲಾಯಿಸಲಾಗಿದೆ)

ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT