ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಲ್ಯಕ್ಕೆ ಕಂಟಕವಾದ ಭೂತಗಳ ವಿರುದ್ಧದ ಸಮರ’

ಕೈಲಾಶ ಸತ್ಯಾರ್ಥಿ
Last Updated 9 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮಕ್ಕಳ ಹಕ್ಕುಗಳ ಹೋರಾಟಗಾರ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕೈಲಾಶ ಸತ್ಯಾರ್ಥಿ ಅವರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಸೆಪ್ಟೆಂಬರ್‌ 11ರಂದು ಕನ್ಯಾಕುಮಾರಿಯಿಂದ ‘ಭಾರತ ಯಾತ್ರೆ’ ಆರಂಭಿಸಲಿದ್ದಾರೆ. ಯಾತ್ರೆಗೆ ಹೊರಡುವ ಮುನ್ನ ‘ಪ್ರಜಾವಾಣಿ’ಗೆ ಅವರು ನೀಡಿದ ಸಂದರ್ಶನ ಇಲ್ಲಿದೆ.

* ಯಾಕಾಗಿ ‘ಭಾರತ ಯಾತ್ರೆ’? ಅದರ ಸ್ವರೂಪ ಹೇಗಿರುತ್ತದೆ?

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅವರ ಕಳ್ಳ ಸಾಗಾಟದ ವಿರುದ್ಧ ಸಮರ ಸಾರುವ ಸಲುವಾಗಿ ಈ ‘ಭಾರತ ಯಾತ್ರೆ’. ಬಾಲ್ಯದ ರಕ್ಷಣೆಗಾಗಿ ರೂಪಿಸಿರುವ ಚಾರಿತ್ರಿಕವಾದ ಸಾಮಾಜಿಕ ಆಂದೋಲನ ಇದಾಗಿದೆ. ಲೈಂಗಿಕ ದೌರ್ಜನ್ಯ ಮತ್ತು ಕಳ್ಳ ಸಾಗಾಟ – ಸಮಾಜದೊಳಗೆ ಅಡಗಿ ಕುಳಿತು ಮಕ್ಕಳ ಬಾಲ್ಯವನ್ನು ಕಸಿಯುತ್ತಿರುವ ಎರಡು ಮಹಾನ್‌ ಭೂತಗಳು. ಇದುವರೆಗೆ ಅವುಗಳ ವಿರುದ್ಧ ಧ್ವನಿ ಎತ್ತಿದವರು ಕಡಿಮೆ.

ವ್ಯಥೆಯ ಸಂಗತಿ ಎಂದರೆ ನಾವೀಗ ನೈತಿಕ ಕ್ಷಾಮದ ಕಾಲದಲ್ಲಿದ್ದೇವೆ. ಇಲ್ಲದಿದ್ದರೆ ಶೇ 53ರಷ್ಟು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಹತ್ತಿರದ ಸಂಬಂಧಿಗಳು ಇಲ್ಲವೆ ನೆರೆಹೊರೆಯವರೇ ಕಾರಣರಾಗುತ್ತಿದ್ದರೇ? ಮಕ್ಕಳ ರಕ್ಷಣೆಯ ಹೊಣೆ ಹೊತ್ತವರೇ ಪೀಡಕರಾಗಿದ್ದಾರೆ. ಮನೆಯ ಪಡಸಾಲೆ, ಶಾಲೆಯ ಕೋಣೆ, ಆಟದ ಮೈದಾನ... ಮಕ್ಕಳಿಗೆ ಮುದ ನೀಡಬೇಕಾದ ಇಂತಹ ತಾಣಗಳೇ ದೌರ್ಜನ್ಯದ ನೆಲೆಯಾಗುತ್ತಿವೆ.

ಅಪ್ಪಂದಿರಿಂದಲೇ ಬಸುರಿಯರಾದ ಬಾಲೆಯರ ಕುರಿತು ಪತ್ರಿಕೆಗಳಲ್ಲಿ ವರದಿಗಳು ಬಂದಾಗ ಕರುಳು ಚುರ್‌ ಎನ್ನುತ್ತದೆ. ಚಿಕ್ಕಪ್ಪಂದಿರು, ಮಾವಂದಿರು, ಅಣ್ಣಂದಿರು... ಇಂಥವರ ಕಾಮತೃಷೆಗೆ ಬಲಿಯಾಗುತ್ತಿರುವುದು ಅವರದೇ ಮನೆಯೊಳಗಿನ ಕಂದಮ್ಮಗಳು. ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಬಗೆಗೆ ಗೊತ್ತಿದ್ದರೂ ಕುಟುಂಬದ ಮರ್ಯಾದೆ ಪ್ರಶ್ನೆಯೇ ದೊಡ್ಡದಾಗಿ ಸಂತ್ರಸ್ತರ ತಾಯಂದಿರು, ಇತರ ಸಂಬಂಧಿಗಳು ಮಾತನಾಡಲು ಹಿಂದೇಟು ಹಾಕುತ್ತಾರೆ. ಈ ಮೌನವನ್ನು ಮುರಿಯುವುದೇ ನನ್ನ ಯಾತ್ರೆಯ ಉದ್ದೇಶ. ಏಳು ಮಾರ್ಗಗಳಲ್ಲಿ ಯಾತ್ರೆ ನಡೆಯಲಿದೆ. 22 ರಾಜ್ಯಗಳಲ್ಲಿ ನಡೆಯಲಿರುವ ಈ ಆಂದೋಲನ ಹನ್ನೊಂದು ಸಾವಿರ ಕಿ.ಮೀ.ಗಳಷ್ಟು ದೂರ ಸಂಚರಿಸಲಿದೆ.

* ಇಂತಹ ಯಾತ್ರೆಗಳು ಮೊದಲು ಭರ್ಜರಿ ಪ್ರಚಾರಗಿಟ್ಟಿಸಿ ಕೊನೆಗೆ ಜಾತ್ರೆ ಸ್ವರೂಪದಲ್ಲಿ ಮುಗಿಯುವುದೇ ಹೆಚ್ಚು. ಸಮಾಜದಲ್ಲಿ ಅಡಗಿ ಕುಳಿತ ಪಿಡುಗುಗಳನ್ನು ನಿಮ್ಮ ಯಾತ್ರೆ ನಿಜಕ್ಕೂ ಹುರಿದು ಮುಕ್ಕುವುದೇ?

ರಾಷ್ಟ್ರಪತಿಯಿಂದ ಹಿಡಿದು ಸಾಮಾನ್ಯ ಪ್ರಜೆಯವರೆಗೆ ಈ ಯಾತ್ರೆಗೆ ಎಲ್ಲ ಸ್ತರದ ಬಹುದೊಡ್ಡ ಬೆಂಬಲವೇ ಸಿಕ್ಕಿದೆ. ಕರ್ನಾಟಕವನ್ನೂ ಒಳಗೊಂಡಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಇದರ ಭಾಗವಾಗಲು ಮುಂದೆ ಬಂದಿದ್ದಾರೆ. ಎಲ್ಲಾ ಧರ್ಮಗಳ ಮುಖಂಡರು, ರಾಜಕೀಯ ಪಕ್ಷಗಳ ನೇತಾರರು, ವಿವಿಧ ಕ್ಷೇತ್ರಗಳ ಗಣ್ಯರು ಸಹ ಆಂದೋಲನದಲ್ಲಿ ಭಾಗಿಯಾಗುತ್ತಿದ್ದಾರೆ.

ಸಮುದಾಯದ ಸಹಭಾಗಿತ್ವದಿಂದ ಈ ಪಿಡುಗುಗಳ ಮೂಲೋತ್ಪಾಟನೆ ಸಾಧ್ಯವಿದೆ. ಸುರಕ್ಷಿತ ಭಾರತಕ್ಕೆ ಸುರಕ್ಷಿತ ಬಾಲ್ಯವೇ ಸೋಪಾನ. ಭಾರತವನ್ನು ಮತ್ತೆ ಸುರಕ್ಷಿತ ತಾಣವನ್ನಾಗಿ ಮಾಡುತ್ತೇವೆಂದು ಒಂದು ಕೋಟಿ ಜನ ಯಾತ್ರೆಯಲ್ಲಿ ಪ್ರಮಾಣ ಮಾಡಲಿದ್ದಾರೆ. ದೌರ್ಜನ್ಯಗಳ ತಡೆಗೆ ಯುವಕರ ಗುಂಪು ಹಾಗೂ ಗ್ರಾಮ ಸಮಿತಿಗಳನ್ನು ರಚಿಸಲಿದ್ದೇವೆ. ಸ್ವಯಂಸೇವಕರ ಪಡೆಯನ್ನೂ ಕಟ್ಟುತ್ತಿ
ದ್ದೇವೆ. ಎಂತಹ ಸಂದರ್ಭದಲ್ಲೂ ದೌರ್ಜನ್ಯ ಪ್ರಕರಣಗಳನ್ನು ಮುಚ್ಚಿಹಾಕದೆ ದಾಖಲಿಸಿಕೊಳ್ಳುವಂತೆ ಪೊಲೀಸರ ಮನ ಒಲಿಸಲಿದ್ದೇವೆ. ಮಕ್ಕಳ ಕಳ್ಳ ಸಾಗಾಟದ ವಿರುದ್ಧ ಕಠಿಣ ಕಾನೂನು ರೂಪಿಸುವಂತೆ, ಅವರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ಫಾಸ್ಟ್‌ಟ್ರ್ಯಾಕ್‌ ಕೋರ್ಟ್‌ ಸ್ಥಾಪಿಸುವಂತೆ ಸರ್ಕಾರದ ಮೇಲೂ ಒತ್ತಡ ಹೇರಲಿದ್ದೇವೆ.

* ಸಮಾಜದಲ್ಲಿ ಅಷ್ಟೊಂದು ಆಳವಾಗಿ ಬೇರೂರಿರುವ ಈ ಸಮಸ್ಯೆಗಳಿಗೆ ಪೂರ್ಣ ವಿರಾಮ ಹಾಕುವುದು ಅಷ್ಟು ಸುಲಭವೇ?

ಮಕ್ಕಳ ಶೋಷಣೆ ಹಾಗೂ ಅವರ ಕಳ್ಳ ಸಾಗಾಟದ ಸಮಸ್ಯೆಗಳಿಗೆ ಪೂರ್ಣ ವಿರಾಮ ಹಾಕಲು ನಾನಾ ಆಯಾಮಗಳಲ್ಲಿ ಪ್ರಯತ್ನಗಳು ನಡೆದಿವೆ. ನಮ್ಮ ಸ್ವಯಂಸೇವಕರು ಸಾವಿರಾರು ಶಾಲೆಗಳಿಗೆ ಹೋಗಿ ಮಕ್ಕಳ ಜತೆ ಮಾತನಾಡಿದ್ದಾರೆ. ಯಾವುದು ‘ಒಳ್ಳೆಯ ಸ್ಪರ್ಶ’, ಯಾವುದು ‘ಕೆಟ್ಟ ಸ್ಪರ್ಶ’ ಎಂಬ ಸೂಕ್ಷ್ಮಗಳನ್ನು ಅವರಿಗೆ ಹೇಳಿಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಕೂಡ ಜಾಗೃತಿ ಕಾರ್ಯ ನಡೆದಿದೆ. ‘ಮಗು ಏನೋ ಹೇಳಲು ಹವಣಿಸುತ್ತಿದೆ, ಅದರ ಮಾತಿಗೆ ಕಿವಿಗೊಡಿ’ ಎಂದು ಪಾಲಕರಿಗೂ ತಿಳಿಹೇಳುತ್ತಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ನ್ಯಾಯಾಂಗದ ಜತೆಗೂ ಕೆಲಸ ಮಾಡುತ್ತಿದ್ದೇವೆ. ನನ್ನ ಜೀವಿತದ ಅವಧಿಯಲ್ಲೇ ಎರಡೂ ಪಿಡುಗುಗಳಿಗೆ ಪೂರ್ಣವಿರಾಮ ಬೀಳುವುದನ್ನು ಕಾಣುತ್ತೇನೆ ಎಂಬ ವಿಶ್ವಾಸವಿದೆ.

* ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ತಡೆಗೆ ನೀವು ಕಾನೂನು ಬಲಗೊಳಿಸುವ ಕುರಿತು ಮಾತನಾಡುತ್ತಿದ್ದೀರಿ. ಪೋಕ್ಸೊದಂತಹ ಕಾಯ್ದೆ ಈಗಾಗಲೇ ಜಾರಿಯಲ್ಲಿ ಇದೆಯಲ್ಲ?

ನಿಸ್ಸಂಶಯವಾಗಿ ಪೋಕ್ಸೊ ಒಂದು ಬಲಿಷ್ಠವಾದ ಕಾಯ್ದೆ. ಕಾನೂನು ರೂಪಿಸುವುದು ಎಷ್ಟು ಮುಖ್ಯವೋ ಅದಕ್ಕಿಂತ ಆ ಕಾನೂನಿನ ಅನುಷ್ಠಾನ ಇನ್ನೂ ಮುಖ್ಯವಾಗುತ್ತದೆ. ಪೋಕ್ಸೊ ಜಾರಿಯಾದ ಬಗೆ ನಾಚಿಕೆ ತರಿಸುವಂತಿದೆ. ಅಪರಾಧಿಗಳಿಂದ ನಗೆಪಾಟಲಿಗೆ ಈಡಾಗಿದೆ. ದಾಖಲಾದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಪೈಕಿ ಶೇ 4ರಷ್ಟಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಶೇ 6ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ದೋಷಮುಕ್ತರಾಗಿದ್ದಾರೆ. ಉಳಿದ ಶೇ 90ರಷ್ಟು ಪ್ರಕರಣಗಳು ಬಾಕಿಯಿವೆ. ಇನ್ನು ಮುಂದೆ ಇಂತಹ ಒಂದೇ ಒಂದು ಅಪರಾಧವೂ ನಡೆಯದಿದ್ದರೆ ಈಗಿರುವ ಪ್ರಕರಣಗಳ ವಿಲೇವಾರಿಗೆ 40 ವರ್ಷಗಳಷ್ಟು ಸುದೀರ್ಘ ಅವಧಿ ಬೇಕಾಗುತ್ತದೆ. ನಮಗೆ ಶೀಘ್ರನ್ಯಾಯ ಬೇಕು. ಅದಕ್ಕಾಗಿ ಕಾನೂನಿನ ಅಸ್ತ್ರ ಇನ್ನಷ್ಟು ಹರಿತವಾಗಲೇಬೇಕು.

* ಬಾಲ ಕಾರ್ಮಿಕ ಪದ್ಧತಿ ನೀಗುವುದು ಯಾವಾಗ?

ನಿಮಗೆ ಗೊತ್ತೆ? ದೇಶದ ಸುಮಾರು 43 ಲಕ್ಷ ಮಕ್ಕಳು ಮುಂಜಾನೆ ಎದ್ದು ಹೋಗುವುದು ಶಾಲೆಗಲ್ಲ; ಕೆಲಸಕ್ಕೆ. ಬಲು ನೋವಿನ ಸಂಗತಿ ಇದು. ಆದರೆ, ಬಾಲ ಕಾರ್ಮಿಕ ಪದ್ಧತಿ ವಿಷಯವಾಗಿ ಎಲ್ಲೆಡೆ ಜಾಗೃತಿ ಮೂಡುತ್ತಿದೆ. ಅದರ ಸಂಕೇತವಾಗಿ ಕಳೆದ 15 ವರ್ಷಗಳಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಇಳಿಮುಖವಾಗುತ್ತಾ ಸಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯೂ ಗಣನೀಯವಾಗಿ ತಗ್ಗಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ರಚಿಸಿದ ಬಾಲಕಾರ್ಮಿಕ ಪದ್ಧತಿ ನಿಷೇಧ (ತಿದ್ದುಪಡಿ) ಕಾನೂನು ಒಂದು ಪ್ರಬಲ ಅಸ್ತ್ರವಾಗಿದೆ. ಸರ್ಕಾರಗಳು ಇನ್ನಷ್ಟು ಕ್ರಿಯಾಶೀಲವಾಗಿ ಸ್ಪಂದಿಸಿದರೆ ಈ ಸಮಸ್ಯೆ ನೀಗುವ ದಿನಗಳು ದೂರವಿಲ್ಲ.

* ಯಾತ್ರೆಯಲ್ಲಿ ಬಾಲಕಾರ್ಮಿಕ ಪದ್ಧತಿ ವಿರುದ್ಧ ಏಕೆ ಸಮರ ಸಾರಿಲ್ಲ?

ಕಳೆದ 40 ವರ್ಷಗಳಿಂದಲೂ ನನ್ನ ಹೋರಾಟ ಈ ಸಮಸ್ಯೆಯ ವಿರುದ್ಧವೇ ನಡೆದಿದೆ. ಮಕ್ಕಳ ಎಲ್ಲ ಸಮಸ್ಯೆಗಳು ನೀಗಬೇಕು, ಅವರ ಹಕ್ಕುಗಳ ರಕ್ಷಣೆ ಆಗಬೇಕು ಎನ್ನುವುದು ನನ್ನ ಮಹತ್ವಾಕಾಂಕ್ಷೆಯೇನೋ ಹೌದು. ಆದರೆ, ಈಗಾಗಲೇ ನಾನು ಹೇಳಿದಂತೆ ಸದ್ಯ ನೈತಿಕ ಕ್ಷಾಮ ಆವರಿಸಿದ್ದು ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಹೆಚ್ಚುತ್ತಿದೆ. ಅದನ್ನು ತಡೆಗಟ್ಟುವುದೇ ಯಾತ್ರೆಯ ಮುಖ್ಯ ಗುರಿಯಾಗಿದೆ. ಹೀಗಾಗಿ ನೊಬೆಲ್‌ ಪ್ರಶಸ್ತಿ ಜತೆಗೆ ಸಿಕ್ಕ ಹಣವನ್ನು ಈ ಉದ್ದೇಶಕ್ಕಾಗಿಯೇ ಖರ್ಚು ಮಾಡುತ್ತಿದ್ದೇನೆ.

* ಶಿಕ್ಷಣದ ಹಕ್ಕು (ಆರ್‌ಟಿಇ) ಕಾಯ್ದೆ ಬಡಮಕ್ಕಳಿಗೆ ನಿಜಕ್ಕೂ ವರದಾನವಾಗಿದೆಯೇ?

ನಮ್ಮ ಇಂದಿನ ಶೈಕ್ಷಣಿಕ ಬಿಕ್ಕಟ್ಟುಗಳಿಗೆ ಅದರ ಖಾಸಗೀಕರಣ ಹಾಗೂ ವಾಣಿಜ್ಯೀಕರಣವೇ ನೇರ ಕಾರಣ. 2009ರಲ್ಲಿ ಬಂದ ಶಿಕ್ಷಣದ ಹಕ್ಕು ಕಾಯ್ದೆ ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗಿರಬಹುದು. ಆದರೆ, ಶಿಕ್ಷಣದ ಗುಣಮಟ್ಟ ಇನ್ನೂ ದೈನ್ಯಾವಸ್ಥೆಯಲ್ಲೇ ಇದೆ. ಈ ಕಾಯ್ದೆಯನ್ನು ಅನುಷ್ಠಾನಗೊಳಿಸುವುದು ಶಿಕ್ಷಣ ಇಲಾಖೆಯ ಹೊಣೆಯಾದರೆ, ನಿರ್ವಹಣೆ ಮಾಡುವುದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌). ಆರ್‌ಟಿಇ ಕಾಯ್ದೆ ಅನುಷ್ಠಾನದಲ್ಲಿ ಹೊಂದಾಣಿಕೆ ಕೊರತೆಯೂ ಎದ್ದುಕಾಣುತ್ತಿದೆ.

* ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿಕೊಳ್ಳಲು ನಿಮಗೆ ಪ್ರೇರಣೆ ಸಿಕ್ಕಿದ್ದು ಹೇಗೆ?

ಅದು ನಾನು ಶಾಲೆಗೆ ಪ್ರವೇಶ ಪಡೆದ ಮೊದಲ ದಿನ. ಅಂದು ಶಾಲೆಯಿಂದ ಹೊರಗುಳಿದ ಮೋಚಿ ಹುಡುಗನೊಬ್ಬನನ್ನು ನಾನು ಕಂಡೆ. ನಾವೇಕೆ ಹೊಸ ಸಮವಸ್ತ್ರ ತೊಟ್ಟು, ಹೊಸ ಪುಸ್ತಕ ಹಾಗೂ ಕನಸು ಹೊತ್ತು ಶಾಲೆಗೆ ಬಂದಿದ್ದೇವೆ ಮತ್ತು ಆ ಹುಡುಗನೇಕೆ ಹೊರಗೇ ಉಳಿದಿದ್ದಾನೆ ಎಂಬ ಪ್ರಶ್ನೆ ಕಾಡುತ್ತಿತ್ತು. ಒಂದುದಿನ ಧೈರ್ಯ ಒಗ್ಗೂಡಿಸಿಕೊಂಡು ಸೀದಾ ಆ ಹುಡುಗನ ತಂದೆಯ ಬಳಿ ಹೋದೆ. ‘ನಿಮ್ಮ ಮಗನನ್ನು ಯಾಕೆ ಶಾಲೆಗೆ ಕಳುಹಿಸುತ್ತಿಲ್ಲ’ ಎಂದು ಪ್ರಶ್ನಿಸಿದೆ. ‘ಬಾಬೂಜಿ, ನಾನು ಎಂದಿಗೂ ಆ ಕುರಿತು ಯೋಚಿಸಿಲ್ಲ. ನನ್ನ ತಂದೆ, ನನ್ನ ಅಜ್ಜ, ಅಷ್ಟೇ ಏಕೆ, ನಾನು ಸಹ ಬಾಲ್ಯದಿಂದಲೇ ಕೆಲಸ ಮಾಡುತ್ತ ಬಂದಿದ್ದೇವೆ. ಈಗ ನನ್ನ ಮಗನ ಸರದಿ. ಇಷ್ಟಕ್ಕೂ ನಾವು ಕೆಲಸ ಮಾಡುವುದಕ್ಕೆ ತಾನೇ ಜನಿಸಿದ್ದು’ ಎನ್ನುವುದು ಅವರ ಉತ್ತರವಾಗಿತ್ತು.

ಭವಿಷ್ಯ ರೂಪಿಸಿಕೊಳ್ಳುವ, ಕನಸು ಕಾಣುವ ವಯಸ್ಸಿನಲ್ಲಿ ಎಷ್ಟೋ ಮಕ್ಕಳು ತಮ್ಮ ಬಾಲ್ಯ, ಸ್ವಾತಂತ್ರ್ಯ ಹಾಗೂ ಕಲಿಕೆಯನ್ನು ಬಲಿಕೊಟ್ಟು ಕೆಲಸ ಮಾಡಬೇಕಾದ ಸಂದರ್ಭ ಸೃಷ್ಟಿಯಾಗಿದ್ದೇಕೆ ಎಂಬ ಪ್ರಶ್ನೆ ನನ್ನನ್ನು ಬಲವಾಗಿ ಕಾಡಿತು. ಅಪ್ಪ–ಅಮ್ಮನ ಒತ್ತಾಯಕ್ಕೆ ನಾನು ಎಂಜಿನಿಯರಿಂಗ್‌ ಓದಿದರೂ ನಾನು ಜನಿಸಿದ್ದು ಎಂಜಿನಿಯರ್‌ ಆಗಲಿಕ್ಕಲ್ಲ ಎಂದು ನಾನು ಆಗಲೇ ನಿರ್ಧರಿಸಿದೆ. ಹೋರಾಟದ ಹಾದಿಯನ್ನು ಆರಿಸಿಕೊಂಡೆ. ನಾಲ್ಕು ದಶಕಗಳ ಹಿಂದೆ ಸಾಬೊ ಎಂಬ ಬಾಲಕಿಯನ್ನು ರಕ್ಷಿಸಿದ್ದು ನನ್ನ ಮೊಟ್ಟಮೊದಲ ಹೆಜ್ಜೆ. ಅಲ್ಲಿಂದ ಇಲ್ಲಿವರೆಗೆ 86 ಸಾವಿರ ಮಕ್ಕಳನ್ನು ಬಂಧಮುಕ್ತಗೊಳಿಸಿದ ತೃಪ್ತಿಯಿದೆ. ಒಂದೊಂದು ಮಗು ಬಿಡುಗಡೆ ಪಡೆದಾಗಲೂ ನನಗೆ ಮರುಜನ್ಮ ಪಡೆದ ಅನುಭವ. ಒಳಗಿನಿಂದಲೂ ಮುಕ್ತನಾದ ಭಾವ.

* ನೊಬೆಲ್‌ ಪ್ರಶಸ್ತಿ ಬಂದ ಬಳಿಕ ನಿಮ್ಮ ಹೋರಾಟದ ಹಾದಿ ಹೇಗೆ ಸಾಗಿದೆ?

ಪ್ರಪಂಚದ ನೂರಕ್ಕೂ ಹೆಚ್ಚು ದೇಶಗಳ ವಿವಿಧ (ಸುಮಾರು ಎರಡು ಸಾವಿರ) ಸಂಘಟನೆಗಳ ಜತೆ ನಾನು ಕೆಲಸ ಮಾಡುತ್ತಿದ್ದೇನೆ. ನನಗೆ ಸಿಕ್ಕ ನೊಬೆಲ್‌ ಪ್ರಶಸ್ತಿ ಈ ಎಲ್ಲ ಸಂಘಟನೆಗಳಿಗೂ ಉಮೇದಿ ತಂದಿದೆ. ಮಕ್ಕಳ ಹಕ್ಕುಗಳ ರಕ್ಷಣೆಯ ಮಹತ್ವವನ್ನು ಇಡೀ ಜಗತ್ತು ಗುರುತಿಸಿದ ದ್ಯೋತಕವಾಗಿ ಅದು ಕಾಣುತ್ತಿದೆ. ಪ್ರಪಂಚದ ನಾನಾ ಕಡೆಗಳಿಂದ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ 18 ಸಾವಿರಕ್ಕೂ ಅಧಿಕ ಆಹ್ವಾನಗಳು ಬಂದಿವೆ. ಆ ಎಲ್ಲ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಲು ಶುರು ಮಾಡಿದರೆ ಇಂದಿನಿಂದ ನನಗೆ ನೂರು ವರ್ಷಗಳೇ ಬೇಕು. ನೊಬೆಲ್‌ ಕ್ಲಬ್‌ನ ಸೆಲೆಬ್ರಿಟಿಗಳಂತೆ ನಾನೇನು ಪ್ರಖ್ಯಾತನಲ್ಲ. ಒಬ್ಬ ಸಾಮಾನ್ಯ ಮನುಷ್ಯ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನಡೆಸಿರುವ ಹೋರಾಟಕ್ಕೆ ಹೆಚ್ಚು ಹೆಚ್ಚು ಜನ ಧುಮುಕುತ್ತಿರುವುದು ಖುಷಿ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT