ಗೌರಿ ಲಂಕೇಶ್ ಹತ್ಯೆಯ ಪಾಠಗಳು...

ಗೌರಿ ಅವರದ್ದು ರಾಜಕೀಯ ಹತ್ಯೆ ಎಂದು ನಾವು ಸಕಾರಣವಾದ ಖಚಿತತೆಯಿಂದ ಹೇಳಬಹುದಾಗಿದೆ. ನಾವು ನಿರ್ದಿಷ್ಟ ಉದ್ದೇಶ ಅಥವಾ ಸಕಾರಣ ಇಲ್ಲದೇ ಮೂರ್ಖತನದ ತಪ್ಪುಗಳನ್ನು ಎಸಗುವ ಸಾಮಾಜಿಕ ಮಾಧ್ಯಮದವರೂ ಅಲ್ಲ ಅಥವಾ ರಾಜಕೀಯ ಪೂರ್ವಗ್ರಹಪೀಡಿತರೂ ಅಲ್ಲ.

ಗೌರಿ ಲಂಕೇಶ್ ಹತ್ಯೆಯ ಪಾಠಗಳು...

ಪತ್ರಕರ್ತೆ ಗೌರಿ ಲಂಕೇಶ್‌ ಹಾಗೂ ಅವರ ಕೊಲೆ ಅಥವಾ ಹೆಚ್ಚು ಸ್ಫುಟವಾಗಿ ಹೇಳುವುದಾದರೆ ಹತ್ಯೆಗೆ ಸಂಬಂಧಿಸಿದಂತೆ ಅನೇಕ ಸಂಗತಿಗಳಿವೆ. ತಮ್ಮ ಅನಿಸಿಕೆಗಳನ್ನು ದಿಟ್ಟತನದಿಂದ ಹೇಳುವ ಸಮರ್ಥ ನಾಯಕಿಯಾಗಿರುವುದರ ಜತೆಗೆ ಕೆಚ್ಚೆದೆಯ ಎಡಪಂಥೀಯ ವಿಚಾರವಾದಿಯೂ ಅವರಾಗಿದ್ದರು. ತಮ್ಮ ಜೀವಕ್ಕೆ ಬೆದರಿಕೆ ಇದ್ದರೂ ಅದನ್ನು ಲೆಕ್ಕಿದೆ ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಧೈರ್ಯವೂ ಅವರಿಗಿತ್ತು.

ಗೌರಿ ಅವರ ವಿಚಾರಧಾರೆಗಳನ್ನು ಒಪ್ಪಿಕೊಳ್ಳುತ್ತಿದ್ದವರೆಲ್ಲ ಈ ಘಟನೆಯಿಂದ ತೀವ್ರವಾಗಿ ನೊಂದಿದ್ದಾರೆ. ಇನ್ನೊಂದೆಡೆ ಅವರ ಚಿಂತನೆಗಳನ್ನು ಒಪ್ಪಿಕೊಳ್ಳದವರು ಬೇಲಿಯ ಆಚೆಗೆ ನಿಂತು ಇಲ್ಲವೇ ಭಿನ್ನ ಸೈದ್ಧಾಂತಿಕ ಗರಡಿಯಲ್ಲಿದ್ದುಕೊಂಡು ಈ ಹತ್ಯೆಯನ್ನು ಶ್ಲಾಘಿಸುತ್ತಿದ್ದಾರೆ. ಕೆಲ ಟೀಕಾಕಾರರು ಗೌರಿ ಅವರ ನಿಲುವು ಮತ್ತು ಉದ್ದೇಶಗಳ ಬಗ್ಗೆಯೇ ದೋಷಾರೋಪಣೆ ಮಾಡುತ್ತಿದ್ದಾರೆ. ಕೆಲವರಂತೂ ನೀಚ ರೀತಿಯಲ್ಲಿ ಬೆದರಿಕೆ ಒಡ್ಡುತ್ತಿದ್ದಾರೆ. ಇಂತಹ ಪ್ರವೃತ್ತಿಯು ಕಳೆದ ಒಂದು ದಶಕದಿಂದೀಚೆಗೆ ಸಾಮಾನ್ಯವಾಗಿ ಕಂಡು ಬರುತ್ತಿದೆ.

ಗೌರಿ ಅವರದ್ದು ರಾಜಕೀಯ ಹತ್ಯೆ ಎಂದು ನಾವು ಸಕಾರಣವಾದ ಖಚಿತತೆಯಿಂದ ಹೇಳಬಹುದಾಗಿದೆ. ನಾವು ನಿರ್ದಿಷ್ಟ ಉದ್ದೇಶ ಅಥವಾ ಸಕಾರಣ ಇಲ್ಲದೇ ಮೂರ್ಖತನದ ತಪ್ಪುಗಳನ್ನು ಎಸಗುವ ಸಾಮಾಜಿಕ ಮಾಧ್ಯಮದವರೂ ಅಲ್ಲ ಅಥವಾ ರಾಜಕೀಯ ಪೂರ್ವಗ್ರಹಪೀಡಿತರೂ ಅಲ್ಲ. ಸಾಮಾನ್ಯವಾಗಿ ಅನುಮಾನ ಪಡುವವರ ಮೇಲೆ ಆರೋಪ ಹೊರಿಸಿ ಮುಂದುವರೆಯುವ ಜಾಯಮಾನವೂ ನಮ್ಮದಲ್ಲ. ರಾಜಕೀಯ ಹತ್ಯೆಗಳು ನಡೆದಾಗಲೆಲ್ಲ, ಇಂತಹ ಪ್ರಕರಣಗಳು ರಾಜಕೀಯ ಪ್ರಭಾವಕ್ಕೆ ಒಳಗಾದ ಪೊಲೀಸ್‌ ಮತ್ತು ಕೋರ್ಟ್‌ಗಳ ಕಕ್ಷೆ ಒಳಗೆ ಸೇರಿಕೊಂಡು ಬಿಡುತ್ತವೆ. ಬದಲಾದ ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ಇವುಗಳ ಧೋರಣೆಗಳು ಬದಲಾಗುತ್ತಲೇ ಇರುತ್ತವೆ.

ಸಂಜೋತಾ ಎಕ್ಸ್‌ಪ್ರೆಸ್‌, ಮಾಲೆಗಾಂವ್‌, ಅಸೀಮಾನಂದ ಮತ್ತು ಸಾಧ್ವಿ ಪ್ರಗ್ಯಾ ಸಿಂಗ್‌ ಭಾಗವಹಿಸಿದ ಪ್ರಕರಣಗಳಲ್ಲಿನ ತನಿಖೆಯು ಕೆಲವರು ಇಚ್ಛಿಸಿದ ರೀತಿಯಲ್ಲಿ ನಡೆಯುತ್ತಿರುವುದನ್ನು ನಾವೀಗ ಕಾಣುತ್ತಿದ್ದೇವೆ. ಜನರು ಯಾವುದೇ ಅಭಿಪ್ರಾಯಕ್ಕೆ ಬರಲು, ತಾವು ನಂಬಿದ ವಿಚಾರಧಾರೆ ಪ್ರಚುರಪಡಿಸಲು, ಈ ಉದ್ದೇಶಕ್ಕೆ ಯಾವುದೇ ವಿಧಾನ ಅನುಸರಿಸಲು, ಮನಗಾಣಿಸಲು, ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟಿಸಬಹುದಾಗಿದೆ. ಹಿಂಸಾಕೃತ್ಯಗಳಲ್ಲಿ ತೊಡಗದೆ ಅಥವಾ ಹಿಂಸೆಗೆ ಪ್ರಚೋದನೆ ನೀಡದೆಯೂ ತಮ್ಮ ಚಿಂತನೆಗಳನ್ನು ಪ್ರಚಾರ ಮಾಡಬಹುದು.

ಅದೇ ಬಗೆಯಲ್ಲಿ, ಯಾವುದೇ ಚಿಂತನೆ ಒಪ್ಪದವರೂ ಶಾಂತಿಯುತವಾಗಿ ದೊಡ್ಡದಾಗಿಯೂ ದನಿ ಎತ್ತಬಹುದು. ತಮ್ಮ ಅಭಿಪ್ರಾಯ ಮತ್ತು ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಬಲವಂತವಾಗಿ ಹೇರುವ ಹಕ್ಕು ಯಾರೊಬ್ಬರಿಗೂ ಇಲ್ಲ. ತಾನು ಹೊಂದಿದ ಅಭಿಪ್ರಾಯಗಳಿಗಾಗಿ ನಾಗರಿಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾದೀತು ಎನ್ನುವ ಆಲೋಚನೆಯನ್ನು ಯಾವುದೇ ನಾಗರಿಕ ಸಮಾಜವು ಖಂಡಿತವಾಗಿಯೂ ಒಪ್ಪುವುದಿಲ್ಲ.

ವ್ಯಕ್ತಿಯೊಬ್ಬ ನಿರ್ದಿಷ್ಟ ಅಭಿಪ್ರಾಯ ತಳೆದ ಕಾರಣಕ್ಕೆ ಆತನ ಪ್ರಾಣವನ್ನೇ ಬಲಿ ಪಡೆಯುವುದನ್ನು ಸಮರ್ಥಿಸಿಕೊಳ್ಳುವುದು ಎಂದರೆ ನಾಗರಿಕ, ಸಂವಿಧಾನಬದ್ಧ ರಾಷ್ಟ್ರೀಯ ಏಕತೆಯ ಬದಲಿಗೆ ಭಯ ಮೂಡಿಸುವ ತಾಣಕ್ಕೆ ನಮ್ಮನ್ನು ಸ್ಥಳಾಂತರಿಸಿದಂತೆ ಆಗಲಿದೆ. ಹೀಗಾಗಿ ವ್ಯಕ್ತಿಯೊಬ್ಬ ತಳೆದಿರುವ ಅಭಿಪ್ರಾಯಕ್ಕೆ ಆತನಿಗೆ ಹಿಂಸೆ ನೀಡುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಾಗಲಾರದು.
ಒಂದು ದಶಕದ ಹಿಂದೆ ಸಾಮಾಜಿಕ ಮಾಧ್ಯಮವು ನಮ್ಮ ಬದುಕಿನಲ್ಲಿ ಪ್ರವೇಶ ಮಾಡಿದಾಗ, ನನ್ನಂತಹ ಹಳೆಯ ತಲೆಮಾರಿನವರು ಅದರ ಬಗ್ಗೆ ಲಘುವಾಗಿ ಮಾತನಾಡಿ ಅದು ಅಷ್ಟೇನೂ ಮಹತ್ವ ಬೀರಲಾರದು ಎಂದು ಪರಿಗಣಿಸಿದ್ದೆವು. ಆದರೆ, ಇಂದು ಈ ಮಾಧ್ಯಮವು ಜನರ ಜತೆ ನೇರ ಸಂವಹನ ಹೊಂದುವ ಪ್ರಭಾವಿ ಮಾಧ್ಯಮವಾಗಿ ಅಗಾಧವಾಗಿ ಬೆಳೆದು ನಿಂತಿದೆ. ವಿಶ್ವದಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿದೆ. ವಿಶ್ವದ ಪ್ರಜಾಸತ್ತಾತ್ಮಕ ದೇಶಗಳಲ್ಲಿ ಲಕ್ಷಾಂತರ ಜನರು ಇದನ್ನು ತಮ್ಮ ನೇರ ಸಂಪರ್ಕ ಕೊಂಡಿಯಾಗಿ ವ್ಯಾಪಕವಾಗಿ ಬಳಸುತ್ತಿದ್ದಾರೆ. ಈ ಮಾಧ್ಯಮವನ್ನು ಕೆಲವರು ಹಿಂಸೆ ಮತ್ತು ಅಪರಾಧ ಚಟುವಟಿಕೆಗಳಿಗೆ ಚಿತಾವಣೆ ನೀಡಲೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ದೇಶದಲ್ಲಿ ಮಹಾತ್ಮಾ ಗಾಂಧಿ ಅವರ ಹತ್ಯೆಯ ಮೂಲಕ ರಾಜಕೀಯ ಹತ್ಯೆಗಳ ಸರಣಿ ಆರಂಭಗೊಳ್ಳುತ್ತದೆ. ಅಧಿಕಾರ, ದ್ವೇಷ ಸಾಧನೆ ಮತ್ತು ಇಷ್ಟವಾಗದ ಚಿಂತನೆಯ ಕಾರಣಕ್ಕೆ ಪ್ರತಿಸ್ಪರ್ಧಿಗಳನ್ನು ಮುಗಿಸಿಬಿಟ್ಟ ಹಲವಾರು ನಿದರ್ಶನಗಳನ್ನು ನಮ್ಮ ಇತಿಹಾಸದ ಪುಟಗಳಲ್ಲಿ ಕಾಣಬಹುದು. ಅವುಗಳ ಪೈಕಿ, ಪ್ರತಾಪ್‌ ಸಿಂಗ್‌ ಕೈರೊನ್‌, ಲಲಿತ್‌ ನರೇನ್‌ ಮಿಶ್ರಾ, ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಅವರ ಹತ್ಯೆಗಳು ಪ್ರಮುಖವಾದವು.

ಸೈದ್ಧಾಂತಿಕವಾಗಿ ಧ್ರುವೀಕರಣಗೊಂಡಿರುವ ವಲಯಗಳಲ್ಲಿ ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ಎಡ ಮತ್ತು ಬಲಪಂಥೀಯ ವಿಚಾರಧಾರೆಯವರು ಪರಸ್ಪರರ ದನಿ ಹತ್ತಿಕ್ಕಲು ಹತ್ಯಾ ಮಾರ್ಗ ತುಳಿದಿದ್ದಾರೆ. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅವರು ತಮ್ಮ ಮೇಲೆ ನಡೆದ ನಕ್ಸಲ್‌ ದಾಳಿಯಲ್ಲಿ ಪಾರಾಗಿದ್ದಾರೆ. ಹಿಂದಿನ ಮುಖ್ಯಮಂತ್ರಿ ದಿವಂಗತ ವೈ. ಎಸ್‌. ರಾಜಶೇಖರ ರೆಡ್ಡಿ ಅವರ ತಂದೆಯನ್ನು ರಾಜಕೀಯ ದ್ವೇಷ ಸಾಧನೆಗೆ ಅವರ ಕಾರ್‌ ಮೇಲೆ ಬಾಂಬ್‌ ಹಾಕಿ ಹತ್ಯೆ ಮಾಡಲಾಗಿತ್ತು. ಪಂಜಾಬ್‌ನಲ್ಲಿ 1978 ರಿಂದ 94ರ ಅವಧಿಯಲ್ಲಿ ಸಾವಿರಾರು ಜನರನ್ನು ಅವರು ತಳೆದಿರುವ ವಿಚಾರಧಾರೆಯ ಕಾರಣಕ್ಕೆ ಕೊಂದು ಹಾಕಲಾಗಿತ್ತು. ಅವರಲ್ಲಿ ಹಿಂದಿ, ಉರ್ದು ಮತ್ತು ಪಂಜಾಬ್‌ ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದ ಪಂಜಾಬ್‌ ಕೇಸರಿ ಸಮೂಹದ ಲಾಲಾ ಜಗತ್‌ ನರೇನ್‌, ನಂತರ ಅವರ ಮಗ ರಮೇಶ್‌ ಚಂದರ್‌ ಸೇರಿದ್ದಾರೆ. ಇವರಿಗಾಗಿ ದುಡಿಯುತ್ತಿದ್ದ ಹಲವಾರು ಪತ್ರಕರ್ತರು, ಪತ್ರಿಕಾ ಮಾರಾಟಗಾರರೂ ಜೀವ ತೆತ್ತಿದ್ದಾರೆ.

ತಮಗೆ ಇಷ್ಟವಾಗದ ವಿಚಾರಧಾರೆ ಹೊಂದಿದವರ ಜೀವ ತೆಗೆಯುವಲ್ಲಿ ಜರ್ನೇಲ್‌ ಸಿಂಗ್‌ ಭಿಂದ್ರನ್‌ವಾಲೆ ವಿಶಿಷ್ಟ ವಿಧಾನ ಅನುಸರಿಸುತ್ತಿದ್ದ. ಸ್ವರ್ಣ ಮಂದಿರದಲ್ಲಿ ಸಭೆ ನಡೆಸುತ್ತಿದ್ದ ಆತ, ಸಭೆಯಲ್ಲಿದ್ದ ಯಾರಾದರೂ ಎದ್ದು ನಿಂತು ಇಂತಿಂಥ ರಾಜಕಾರಣಿ ಅಥವಾ ಬುದ್ಧಿಜೀವಿಗಳು ಧರ್ಮನಿಂದನೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದರೆ ಸಾಕಿತ್ತು. ಅವರಿಗೇನು ಶಿಕ್ಷೆ ನೀಡಬೇಕು ಎಂದು ಪ್ರಶ್ನಿಸಿ ಆ ವಿಷಯವನ್ನು ಅಲ್ಲಿಗೆ ಬಿಟ್ಟು ಬಿಡುತ್ತಿದ್ದ. ಆತನ ಹಿಂಬಾಲಕರಿಗೆ ಇಷ್ಟೇ ಸಾಕಾಗುತ್ತಿತ್ತು. ಬಂದೂಕು ಕೈಗೆತ್ತಿಕೊಳ್ಳುತ್ತಿದ್ದ ಅವರು ತಮಗಾಗದವರನ್ನು ಸದ್ದಿಲ್ಲದೆ ಮುಗಿಸುತ್ತಿದ್ದರು.

ಒಂದು ಬಾರಿ ಏನಾಯ್ತು ಎಂದರೆ, ಬುದ್ಧಿಜೀವಿಯೊಬ್ಬರನ್ನು ಮುಗಿಸಲು ಆತ ಸಮ್ಮತಿ ನೀಡಿದ್ದ. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದ ಬುದ್ಧಿಜೀವಿಯೊಬ್ಬರು, ಖಲಿಸ್ತಾನ್‌ ಪ್ರಚಾರ ಕುರಿತು ಬರೆದಿದ್ದ ಲೇಖನಗಳ ಅನುವಾದಿತ ಪ್ರತಿಗಳ ಕಂತೆಯನ್ನು ಅನುಯಾಯಿಗಳು ಭಿಂದ್ರನ್‌ವಾಲೆ ಮುಂದಿಟ್ಟಿದ್ದರು. ತನಗೆ ಅನಿಸಿದ್ದನ್ನು ಬರೆದಿರುವ ಬುದ್ಧಿಜೀವಿಯನ್ನು ನೀವು ಯಾವ ನೆಲೆಯಲ್ಲಿ ದ್ವೇಷಿಸುವಿರಿ ಎಂದು ನಾನು ಭಿಂದ್ರನ್‌ವಾಲೆನನ್ನು ನೇರವಾಗಿ ಪ್ರಶ್ನಿಸಿದ್ದೆ. ಕಾರಣಗಳನ್ನು ತಿಳಿದುಕೊಳ್ಳಲು ಆತ ಇಚ್ಛಿಸುತ್ತಾನೆ ಎನ್ನುವುದು ನನ್ನ ನಿರೀಕ್ಷೆಯಾಗಿತ್ತು. ‘ಯಾರಾದರೂ ನಿಮ್ಮ ಗುರುವನ್ನು ನಿಂದಿಸಿದರೆ ನೀವು ಏನು ಮಾಡುವಿರಿ ಶೇಖರ್‌ಜಿ’ ಎಂದು ಆತ ನನ್ನನ್ನೇ ಮರು ಪ್ರಶ್ನಿಸಿದ್ದ. ಆ ಇಡೀ ಲೇಖನವನ್ನು ನಾನು ಮತ್ತೊಮ್ಮೆ ಓದಿದಾಗ, ಬುದ್ಧಿಜೀವಿಯು ತಮ್ಮ ಲೇಖನದಲ್ಲಿ ಸಿಖ್‌ರ ಇತಿಹಾಸವನ್ನಷ್ಟೆ ಉಲ್ಲೇಖಿಸಿದ್ದರು. ಆದರೆ, ಬುದ್ಧಿಜೀವಿಯ ಮೇಲೆ ಆರೋಪ ಬರುವ ರೀತಿಯಲ್ಲಿ ದುರುದ್ದೇಶದಿಂದ ಲೇಖನವನ್ನು ಅನುವಾದಿಸಲಾಗಿತ್ತು. ದೈವನಿಂದೆ ಕಾರಣಕ್ಕೆ ಬುದ್ಧಿಜೀವಿಯನ್ನು ಮುಗಿಸುವ ಆದೇಶ ಹೊರಡಿಸಲು ಭಿಂದ್ರನ್‌ವಾಲೆ ತುದಿಗಾಲಲ್ಲಿ ನಿಂತಿದ್ದ. ಹಲವಾರು ಸುತ್ತಿನ ಮಾತುಕತೆ ಮತ್ತು ಮನವೊಲಿಕೆ ನಂತರ, ಕೆಲ ಸಿಖ್‌ ವಿದ್ವಾಂಸರೂ ಪ್ರಭಾವ ಬೀರಿ ಆತ ತನ್ನ ನಿಲುವನ್ನು ಬದಲಿಸುವಂತೆ ಮಾಡಿದ್ದರು. ಇದರಿಂದ ಬುದ್ಧಿಜೀವಿಯ ಜೀವ ಉಳಿದಿತ್ತು. ಅದೊಂದು ನಿಜಕ್ಕೂ ನನ್ನ ಪಾಲಿಗೆ ತೀವ್ರ ತಲ್ಲಣ ಮೂಡಿಸಿದ ಅನುಭವವಾಗಿತ್ತು.

ಈ ಪ್ರಕರಣದಲ್ಲಿ, ಆಧ್ಯಾತ್ಮಿಕ ಪೀಠದ ಮೇಲೆ ಕುಳಿತುಕೊಂಡಿದ್ದ ವ್ಯಕ್ತಿಯು ತನ್ನ ನಂಬಿಕೆಗಳಿಗೆ ಧಕ್ಕೆ ತಂದವರನ್ನು ಹತ್ಯೆ ಮಾಡಲು ಆದೇಶಿಸಿದ ಘಟನೆಗೆ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೆ. ಅಂತಹ ಆಧ್ಯಾತ್ಮಿಕ ಗುರುವಿನ ಬೋಧನೆಯ ಸ್ಥಾನವನ್ನು ಈಗ ಸಾಮಾಜಿಕ ಮಾಧ್ಯಮಗಳು ಆಕ್ರಮಿಸಿಕೊಂಡಿವೆ. ಇವುಗಳನ್ನು ಬಳಸಿಕೊಳ್ಳಲು (ದುರ್ಬಳಕೆ ಮಾಡಿಕೊಳ್ಳಲು) ಸಾಧು, ಬಾಬಾ, ಸಂತ ಅಥವಾ ಮೌಲಾನಾಗಳೇ ಬೇಕಾಗಿಲ್ಲ. ಇಂತಿಂತಹ ವ್ಯಕ್ತಿಗಳು ದೇಶದ್ರೋಹಿಗಳು, ಧರ್ಮ ನಿಂದಕರು, ವಿದೇಶಿ ಏಜೆಂಟರು ಎಂದು ಟ್ವೀಟ್‌ ಮಾಡಿದರೆ ಸಾಕು, ಅದು ಅನಾಹುತಕಾರಿ ಪರಿಣಾಮ ಬೀರಿರುತ್ತದೆ. ಯಾರಾದರೊಬ್ಬರು ಅವರನ್ನು ಕೊಲ್ಲಲು ಬಂದೂಕು ಕೈಗೆತ್ತಿಕೊಳ್ಳಲು ಅಥವಾ ಗುಂಪೊಂದು ಆ ವ್ಯಕ್ತಿ ಮೇಲೆ ದಾಳಿ ಮಾಡಿ ಜೀವ ತೆಗೆಯಲು ನೀವು ಬಲವಾದ ಸಮರ್ಥನೆಯನ್ನು ಒದಗಿಸಿದಿರಿ ಎಂದೇ ಅರ್ಥ.

ಯಾರದ್ದಾದರೂ ಜೀವ ತೆಗೆಯಲು ವ್ಯಕ್ತಿ ಅಥವಾ ಗುಂಪಿಗೆ ನೈತಿಕ ಸಮರ್ಥನೆ ಸಿಕ್ಕಿದರೆ ಅವರು ಬಂದೂಕನ್ನು ಕೈಗೆತ್ತಿಕೊಳ್ಳುತ್ತಾರೆ. ಕೃತ್ಯ ಎಸಗಿದ ನಂತರ ರಾಜಕಾರಣವು ಇಡೀ ಘಟನೆಯನ್ನು ಆಕ್ರಮಿಸಿಕೊಳ್ಳುತ್ತದೆ. ನಂತರ ನಡೆಯುವ ಕಾನೂನು ಪ್ರಕ್ರಿಯೆಗಳು ವಿಚಾರಣೆಯನ್ನು ಸಾಕಷ್ಟು ವಿಳಂಬ ಮಾಡುತ್ತವೆ ಎಂದೇ ಅವರು ಭಾವಿಸಿರುತ್ತಾರೆ. ಒಂದೆಡೆ ಅಪರಾಧ ಕೃತ್ಯದ ಕುರಿತು ಪ್ರತಿಸ್ಪರ್ಧಿಗಳು ಹೋರಾಟ ನಡೆಸುತ್ತಲೇ ಇರುತ್ತಾರೆ. ಇನ್ನೊಂದೆಡೆ ಹತ್ಯೆ ಮಾಡಿದವರು ಸುಲಭವಾಗಿ ಪಾರಾಗಿರುತ್ತಾರೆ. ಮಾಲೆಗಾಂವ್‌ ಮತ್ತು ಸಂಜೋತಾ ಸ್ಫೋಟ ಪ್ರಕರಣಗಳಲ್ಲಿ ಈಗ ಇಂತಹದೇ ಬೆಳವಣಿಗೆ ಕಂಡು ಬರುತ್ತಿದೆ.

1978ರಲ್ಲಿ ಕೇಂದ್ರದಲ್ಲಿ ಇದ್ದ ಜನತಾ ಪಾರ್ಟಿ ಸರ್ಕಾರವು ಇಂದಿರಾ ಗಾಂಧಿ ಅವರನ್ನು ಬಂಧಿಸಿದ್ದನ್ನು ವಿರೋಧಿಸಿ ಸ್ನೇಹಿತರಾಗಿದ್ದ ಭೋಲಾನಾಥ ಪಾಂಡೆ ಮತ್ತು ದೇವೇಂದ್ರ ಪಾಂಡೆ ಅವರು, ಇಂಡಿಯನ್‌ ಏರ್‌ಲೈನ್ಸ್‌ ವಿಮಾನವನ್ನು ಲಖನೌದಿಂದ ದೆಹಲಿಗೆ ಅಪಹರಿಸಿದ್ದರು. ಇಂದಿರಾ ಗಾಂಧಿ ಅವರು 1980ರಲ್ಲಿ ಅಧಿಕಾರಕ್ಕೆ ಬಂದರು. ಆ ನಂತರ ಇವರ ವಿರುದ್ಧದ ವಿಚಾರಣೆ ಮುಂದುವರೆಯಲಿಲ್ಲ.

ರಾಜಕೀಯ ಅಪರಾಧ ಎಸಗುವವರು ತಮ್ಮ ಕೃತ್ಯಕ್ಕೆ ರಾಜಕೀಯ ಬಣ್ಣ ಬರುತ್ತಿದ್ದಂತೆ ತ್ವರಿತವಾಗಿ ಏಳಿಗೆ ಕಾಣುತ್ತಾರೆ. ಅವರು ಎಸಗಿದ ಅಪರಾಧಕ್ಕೆ ಶಿಕ್ಷೆಯಾಗುವ ಬದಲಿಗೆ ಪುರಸ್ಕಾರಗಳು ಸಿಗುತ್ತವೆ.  ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಕೆಲ ನಿಯಮಗಳನ್ನೂ ಪಾಲಿಸಬೇಕಾಗಿದೆ. ತನಿಖೆ ಮತ್ತು ಕಾನೂನು ಪ್ರಕ್ರಿಯೆಯನ್ನು ರಾಜಕೀಯ ಪ್ರಭಾವದಿಂದ ದೂರ ಇಡಬೇಕಾಗಿದೆ. ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದಲೇ (ಎನ್‌ಐಎ) ತನಿಖೆ ನಡೆಸಬೇಕು ಎಂಬ ಹಕ್ಕೊತ್ತಾಯ ಮುಂದಿಡಲು ಅವಸರ ಪಡಬಾರದು. ಕೋರ್ಟ್‌ ತನ್ನ ನೇರ ಉಸ್ತುವಾರಿಯಲ್ಲಿ ಪ್ರಕರಣದ ತನಿಖೆ ನಡೆಸುವುದೇ ಹೆಚ್ಚು ಸೂಕ್ತವಾಗಿದೆ.

ಈ ರಾಜಕೀಯ ಹತ್ಯೆಯ ತನಿಖೆಗೆ ಕೋರ್ಟ್‌ ಮಧ್ಯ ಪ್ರವೇಶಿಸುವುದು ಹೆಚ್ಚು ಮಹತ್ವದ್ದಾಗಿದೆ. ಇಲ್ಲದಿದ್ದರೆ ಇಡೀ ಪ್ರಕರಣವು ಟೆಲಿವಿಷನ್‌ ಚಾನೆಲ್‌ಗಳಲ್ಲಿ ವೀರಾವೇಶದಿಂದ ಮಾತನಾಡುವ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮೆಲ್ಲ ವಿಚಾರಧಾರೆ ಹರಿಬಿಡುವವರ ಮಧ್ಯೆ ಸಿಲುಕಿಕೊಂಡು ತನ್ನ ಮಹತ್ವ ಕಳೆದುಕೊಳ್ಳಲಿದೆ. ಗೌರಿ ಲಂಕೇಶ್‌ ಅಂತ್ಯಕ್ರಿಯೆ ಸಂದರ್ಭದಲ್ಲಿ ಪೊಲೀಸ್ ಗೌರವ ನೀಡುವ ಮೂಲಕ ಈ ಸಾವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವು ಹಾಸ್ಯಾಸ್ಪದವಾಗಿದೆ. ರಾಜ್ಯದ ಪ್ರಖರ ವಿಚಾರವಾದಿಗಳಿಗೆ ರಕ್ಷಣೆ ನೀಡಲು ಅಥವಾ ಕೊಲೆಗಡುಕರನ್ನು ಸೆರೆಹಿಡಿಯಲು ತಮ್ಮ ಸರ್ಕಾರ ವಿಫಲವಾಗಿರುವುದಕ್ಕೆ ಸಿದ್ದರಾಮಯ್ಯ ಅವರು ಉತ್ತರ ನೀಡಬೇಕಾಗಿದೆ.

ಸಾಮಾಜಿಕ ಮಾಧ್ಯಮಗಳನ್ನು ಹೊಣೆಗಾರಿಕೆಯಿಂದ ಬಳಸಿಕೊಳ್ಳುವುದರ ಅಗತ್ಯ ಕುರಿತ ಚರ್ಚೆಯನ್ನು ಗೌರಿ ಲಂಕೇಶ್‌ ತಮ್ಮ ಸಾವಿನ ಮೂಲಕ ಬಹುಶಃ ಕೊನೆಗೊಳಿಸಿದ್ದಾರೆ ಎನ್ನಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಭಾಷಣ ಮಾಡುವವರು ಮತ್ತು ಹಿಂಸೆಗೆ ಪ್ರಚೋದನೆ ನೀಡುವವರನ್ನು ಗಂಭೀರ ಅಪರಾಧ ಆರೋಪದಡಿ ಸಮಾನವಾಗಿ ವಿಚಾರಣೆಗೆ ಗುರಿಪಡಿಸುವ ಅಗತ್ಯವೂ ಇದೆ.ಯಾರೇ ಆಗಲಿ ಈ ಮಾಧ್ಯಮವನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಸಮರ್ಥನೆ ಇರಲಾರದು. ಭಯದ ಭಾವನೆ ಬಿತ್ತುವ ದುಷ್ಕೃತ್ಯಗಳ ಮೂಲಕ ತಮ್ಮ ಟೀಕಾಕಾರರ ದನಿ ಅಡಗಿಸುವುದನ್ನು ಕೆಲವರು ರೂಢಿ ಮಾಡಿಕೊಂಡಿದ್ದಾರೆ. ಗುಂಪುಗಳು ಹಿಂಸಾ ಮನೋಭಾವದಿಂದ ದಾಳಿ ನಡೆಸಿ ಪ್ರಾಣ ತೆಗೆಯುವಂತೆ ಪ್ರಚೋದನೆ ನೀಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವುದನ್ನು ರಾಜಕಾರಣಿಗಳೂ ಬಿಡಬೇಕಾಗಿದೆ. ಈ ಕಾರ್ಯದಲ್ಲಿ ಪ್ರಧಾನಿ ಮುಂಚೂಣಿಯಲ್ಲಿ ಇರಬೇಕಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವವರನ್ನು ಅನುಸರಿಸುವುದು ಎಂದರೆ, ಅವರ ಅನಿಸಿಕೆಗಳನ್ನು ಪ್ರಚುರಪಡಿಸಿದಂತೆ ಅಲ್ಲ ಎನ್ನುವ ವಾದವನ್ನು ಸುಲಭವಾಗಿ ಒಪ್ಪಿಕೊಳ್ಳಲಿಕ್ಕಾಗದು. ಕೆಲವರ ಹೆಸರು ದುರ್ಬಳಕೆ ಮಾಡಿಕೊಂಡು ದೂಷಿಸುವವರನ್ನು ಅನುಸರಿಸುವುದರಿಂದ ಅವರ ಅನಿಸಿಕೆಗಳಿಗೆ ಬೆಂಬಲ ನೀಡಿದಂತಾಗುವುದು.

ಅಂತಿಮವಾಗಿ, ಮಾಧ್ಯಮದವರಾದ ನಮಗೆ ಮತ್ತು ಉದಾರವಾದಿ ಚಿಂತಕರಿಗೆ ಇಲ್ಲೊಂದು ಪಾಠ ಇದೆ. ನಾವು ಎಲ್ಲಾದರೂ ಗಡಿ ಗುರುತಿಸುವುದರ ಹೊರತಾಗಿಯೂ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಚಿಂತನೆಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತವೆ. ಆಕ್ರೋಶಗಳು ಮಡುಗಟ್ಟಿರುವಕಾಲಘಟ್ಟದಲ್ಲಿ ಗೆಲುವು ಪಡೆಯಲು ಈ ಸ್ವಾತಂತ್ರ್ಯದ ರಕ್ಷಣೆಯು ಸಂದೇಹಕ್ಕೆ ಆಸ್ಪದ ಕೊಡದಂತೆ ಇರಬೇಕೆ ಹೊರತು ನಿರ್ದಿಷ್ಟ ಆಯ್ಕೆಗಳಿಗೆ ಸೀಮಿತವಾಗಿರಬಾರದು. ಉದಾರವಾದ ಎಂದರೆ, ವಿಭಿನ್ನ ವಿಚಾರಧಾರೆಯ ಇತರರ ಜತೆ ಸಂವಹನ ಹೊಂದಲು, ಅವರ ಅಭಿಪ್ರಾಯವನ್ನೂ ಕೇಳುವಂತಿರಬೇಕೆ ಹೊರತು, ಭಿನ್ನ ಚಿಂತನೆಯ ಎದುರಾಳಿಗಳನ್ನು ಅವಿವೇಕಿಗಳು, ವಿವೇಚನೆ ಇಲ್ಲದವರು ಎಂದು ಹೀಯಾಳಿಸಿ ತಳ್ಳಿ ಹಾಕುವಂತಿರಬಾರದು. ಪ್ರತಿಯೊಬ್ಬರೂ ಅಂತಹ ಮನೋಭಾವ ರೂಢಿಸಿಕೊಂಡರೆ ಮಾತ್ರ ವೈಚಾರಿಕ ಭಿನ್ನತೆ ಕುರಿತ ಹಿಂಸೆ ಮತ್ತು ನಿಂದನೆಯನ್ನು ಸೌಜನ್ಯದ ಎಲ್ಲೆ ಒಳಗೆ ತರಲು ಸಾಧ್ಯವಾಗಲಿದೆ.

(ಲೇಖಕ ‘ದಿ ಪ್ರಿಂಟ್’ ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

Comments
ಈ ವಿಭಾಗದಿಂದ ಇನ್ನಷ್ಟು
ಕವಲು ಹಾದಿಯಲ್ಲಿ ‘ಎಎಪಿ’

ರಾಷ್ಟ್ರಕಾರಣ
ಕವಲು ಹಾದಿಯಲ್ಲಿ ‘ಎಎಪಿ’

18 Mar, 2018
ಬದಲಾವಣೆಗೆ ಒಗ್ಗದ ಎಡಪಕ್ಷಗಳು

ರಾಷ್ಟ್ರಕಾರಣ
ಬದಲಾವಣೆಗೆ ಒಗ್ಗದ ಎಡಪಕ್ಷಗಳು

11 Mar, 2018
ಬಿಜೆಪಿಯ ದಂಗುಬಡಿಸುವ ಚಾಣಾಕ್ಷತೆ

ರಾಷ್ಟ್ರಕಾರಣ
ಬಿಜೆಪಿಯ ದಂಗುಬಡಿಸುವ ಚಾಣಾಕ್ಷತೆ

4 Mar, 2018
ಸಂಯಮ ರೂಢಿಸಿಕೊಳ್ಳದ ಕೇಜ್ರಿವಾಲ್‌

ರಾಷ್ಟ್ರಕಾರಣ
ಸಂಯಮ ರೂಢಿಸಿಕೊಳ್ಳದ ಕೇಜ್ರಿವಾಲ್‌

25 Feb, 2018
ಬ್ಯಾಂಕ್‌ ರಾಷ್ಟ್ರೀಕರಣದ ಉದ್ದೇಶ ವಿಫಲ

ರಾಷ್ಟ್ರಕಾರಣ
ಬ್ಯಾಂಕ್‌ ರಾಷ್ಟ್ರೀಕರಣದ ಉದ್ದೇಶ ವಿಫಲ

18 Feb, 2018