ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆ- ಪರಿಶ್ರಮಕ್ಕೆ ತೊಡಿಸಿದ ‘ಮುಕುಟ’

Last Updated 9 ಸೆಪ್ಟೆಂಬರ್ 2017, 20:14 IST
ಅಕ್ಷರ ಗಾತ್ರ

ನಿರ್ಮಲಾ ಸೀತಾರಾಮನ್ ರಾಜಕೀಯವಾಗಿ ಭಾರೀ ಕುಳವೇನೂ ಅಲ್ಲ. ಸಂಸತ್ತಿನ ಮೆಟ್ಟಿಲು ತುಳಿದದ್ದು ಕೂಡ ಕೇವಲ ಮೂರು ವರ್ಷಗಳ ಹಿಂದೆ. ಬಿಜೆಪಿಯ ಅಧಿಕೃತ ವಕ್ತಾರರಾಗಿ ಅನವರತ ದುಡಿದವರು. 2014ರಲ್ಲಿ ಕಾರ್ಪೊರೇಟ್ ವ್ಯವಹಾರಗಳ ಖಾತೆಯ ಸ್ವತಂತ್ರ ಹೊಣೆಗಾರಿಕೆ ಅವರ ಹೆಗಲೇರಿತು. ಹುಬ್ಬುಗಳು ಮೇಲೇರುವಂತಹುದೇನೂ ಈ ನೇಮಕದಲ್ಲಿ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮೊನ್ನೆ ಸಚಿವ ಸಂಪುಟ ವಿಸ್ತರಣೆ ಮಾಡಿದಾಗ ನಿರ್ಮಲಾ ಅವರಿಗೆ ಭಾರೀ ಬಡ್ತಿ ದೊರೆಯಿತು. ಈ ಸಲ ನಿಜವಾಗಿಯೂ ಹುಬ್ಬುಗಳು ಮೇಲೇರಿದವು. ಮಹತ್ವದ ಖಾತೆಯೆಂದು ನಂಬಲಾಗಿದ್ದು, ಬಹುತೇಕ ಪುರುಷರೇ ನಿಭಾಯಿಸುತ್ತ ಬಂದಿರುವ ರಕ್ಷಣೆಯ ಹೊಣೆಯನ್ನು ಮಹಿಳೆಗೆ ನೀಡಿದ ನಿರ್ಧಾರ ಬಹುದೊಡ್ಡ ಸುದ್ದಿಯಾಯಿತು.

ಪಿತೃಪ್ರಧಾನ ಮೌಲ್ಯಗಳಲ್ಲಿ ನಂಬಿಕೆ ಇರಿಸಿಕೊಂಡು ಬಂದಿರುವ ಬಿಜೆಪಿ ಮತ್ತು ಈ ಪಕ್ಷದ ದಿಕ್ಕು ದೆಸೆಯನ್ನು ನಿರ್ದೇಶಿಸುವ ಆರೆಸ್ಸೆಸ್ ಕೂಡಿ ಮಾಡಿರುವ ಈ ನಿರ್ಧಾರ ಸ್ವಾಗತಾರ್ಹ. ಮಹಿಳೆಯನ್ನು ಸಾಂಪ್ರದಾಯಿಕ ಪಾತ್ರಗಳಿಗೆ ಕಟ್ಟಿ ಹಾಕುವ ತನ್ನ ಆಲೋಚನೆಯ ಅಚ್ಚು ನಿಜವಾಗಿಯೂ ಬಿರುಕು ಬಿಡುತ್ತಿದ್ದು, ಈಗಿನ ನಿರ್ಧಾರ ಕೇವಲ ಮೇಲ್ಪದರದ್ದಲ್ಲ ಎಂದು ಮನವರಿಕೆ ಮಾಡಿಸಲು ಈ ಎರಡೂ ಸಂಘಟನೆಗಳು ಕ್ರಮಿಸಬೇಕಿರುವ ದಾರಿ ಇನ್ನೂ ದೂರವಿದೆ.

ನಿರ್ಮಲಾ ಅವರಿಗೆ ಸಿಕ್ಕಿರುವ ಈ ಬಡ್ತಿಯಲ್ಲಿ ಆಕೆಯ ಪ್ರತಿಭೆ ಮತ್ತು ಕಠಿಣ ದುಡಿಮೆಯ ಸಾಮರ್ಥ್ಯವಿದೆ ಎಂಬುದು ಬಿಜೆಪಿ ಮೂಲಗಳ ವ್ಯಾಖ್ಯಾನ. ರಾಜಕಾರಣ ಬೇರೆ, ರಾಜ್ಯಭಾರ ಬೇರೆ. ರಾಜಕಾರಣ ಮಾಡಲು ಬಿಜೆಪಿಯಲ್ಲಿ ಬಹಳಷ್ಟು ಜನರಿದ್ದಾರೆ. ಆದರೆ ರಾಜ್ಯಭಾರ ಅಥವಾ ಸರ್ಕಾರ ನಡೆಸುವ ವಿಷಯ ಬಂದಾಗ ಮೋದಿ ಸಂಪುಟ ಪ್ರತಿಭೆಯ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಬಿಜೆಪಿಯಲ್ಲೇ ಅರಳಿ ಬೆಳೆದ ಪ್ರತಿಭೆಗಳು ಬೆರಳೆಣಿಕೆಯವು. ಉಳಿದಂತೆ ಹೊರಗಿನಿಂದ ಆಮದು ಬಿಟ್ಟರೆ ಬೇರೆ ದಾರಿಯಿಲ್ಲ. ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಸುರೇಶ್ ಪ್ರಭು, ಪೀಯೂಷ್ ಗೋಯಲ್ ಬಿಟ್ಟರೆ ಉಳಿದವರು ಯಾರು ಎಂಬ ಪ್ರಶ್ನೆಗೆ ಇತ್ತೀಚೆಗೆ ಈ ಏಣಿಯ ಮೆಟ್ಟಿಲುಗಳನ್ನು ಹತ್ತಿಕೊಂಡು ಮೇಲೆ ತಲುಪಿದವರು ನಿರ್ಮಲಾ. ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯಲ್ಲಿ ಆಕೆ ಮಾಡಿರುವ ಕೆಲಸ ಮೋದಿಯವರಿಗೆ ತೃಪ್ತಿ ತಂದಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕೊಡುಗೆಯಾದ ನಿರ್ಮಲಾ, ವಾಣಿಜ್ಯ-ಅರ್ಥಶಾಸ್ತ್ರ ಪರಿಣಿತೆ. ವಿಷಯವೊಂದನ್ನು ಆಳವಾಗಿ ಅಭ್ಯಾಸ ಮಾಡಿ ಸಾಧಕ ಬಾಧಕಗಳನ್ನು ತೀರ್ಮಾನಿಸುವ ಚುರುಕು ಬುದ್ಧಿಶಕ್ತಿ ಉಳ್ಳವರು. ಅಧಿಕಾರಶಾಹಿಯನ್ನು ಅವಲಂಬಿಸದೆ ಕ್ಲಿಷ್ಟ ಕಡತಗಳನ್ನು ಸ್ವತಂತ್ರವಾಗಿ ಓದಿ ಅರಗಿಸಿಕೊಂಡು ನಿರ್ಧಾರಕ್ಕೆ ಬರಬಲ್ಲ ಸಾಮರ್ಥ್ಯ ಉಳ್ಳವರು.

ಇತರೆ ಸಚಿವ ಖಾತೆಗಳಿಗೆ ಸಂಬಂಧಿಸಿದ ಕೆಲ ವಿಷಯಗಳನ್ನು ಕೂಡ ಅಭ್ಯಾಸ ಮಾಡಿ ಟೀಕೆ ಟಿಪ್ಪಣಿ ನೀಡುವಂತೆ ಕಾಲ ಕಾಲಕ್ಕೆ ಪ್ರಧಾನಿ ವಹಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡಿ ಅವರ ಮನಸ್ಸು ಗೆದ್ದವರು ನಿರ್ಮಲಾ. ದಿನಕ್ಕೆ ಹದಿನೆಂಟು ತಾಸು ಕೆಲಸ ಮಾಡಬಲ್ಲ ಪರಿಶ್ರಮಿ. ರಕ್ಷಣಾ ಖಾತೆಯನ್ನು ನಿಭಾಯಿಸಲೆಂದು ಐಐಟಿ ಪದವೀಧರ ಮನೋಹ ಪರಿಕ್ಕರ್ ಅವರನ್ನು ಗೋವಾದ ಮುಖ್ಯಮಂತ್ರಿ ಹುದ್ದೆಯಿಂದ ಬಿಡಿಸಿ ಕರೆ ತರಲಾಗಿತ್ತು. ಹಾಗೆಯೇ ಸುರೇಶ್ ಪ್ರಭು ಪ್ರತಿಭೆಯ ಕುರಿತು ಬಹಳಷ್ಟು ಒಳ್ಳೆಯ ಅಭಿಪ್ರಾಯವಿದ್ದ ಹಿನ್ನೆಲೆಯಲ್ಲಿ ಅವರನ್ನು ಶಿವಸೇನೆಯಿಂದ ಬಿಡಿಸಿ ಬಿಜೆಪಿಗೆ ಕರೆತಂದು ರೇಲ್ವೆ ಖಾತೆಯನ್ನು ಕೈಗಿಡಲಾಯಿತು. ಇಬ್ಬರ ಸಾಧನೆಯೂ ಆರಕ್ಕೇರಲಿಲ್ಲ. ಒಬ್ಬರು ಗೋವೆಗೆ ವಾಪಸಾದರು. ಮತ್ತೊಬ್ಬರಿಂದ ರೇಲ್ವೆಯನ್ನು ಕಿತ್ತುಕೊಂಡು ವಾಣಿಜ್ಯಕ್ಕೆ ಕಳಿಸಲಾಯಿತು. ಹಣಕಾಸಿನಂತಹ ಗುರುತರ ಖಾತೆಯನ್ನು ನಡೆಸುವುದರ ಜೊತೆಗೆ ರಕ್ಷಣೆಯಂತಹ ಮತ್ತೊಂದು ಸೂಕ್ಷ್ಮ ಸ್ವರೂಪದ ಖಾತೆಯ ಹೆಚ್ಚುವರಿ ಭಾರವನ್ನು ಜೇಟ್ಲಿಯೊಬ್ಬರೇ ಎಷ್ಟು ದಿನ ನಿಭಾಯಿಸಲು ಬಂದೀತು?

ಚುರುಕಾಗಿ ಕೆಲಸ ಮಾಡುತ್ತಿದ್ದಾರೆಂಬ ಹೆಸರು ಗಳಿಸಿರುವ ಮತ್ತೊಬ್ಬ ಮಂತ್ರಿ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ. ತಮ್ಮ ಖಾತೆಯನ್ನು ಬಿಟ್ಟು ಹೊಸ ಖಾತೆಯನ್ನು ವಹಿಸಿಕೊಳ್ಳಲು ಅವರಿಗೆ ಉತ್ಸಾಹ ಇಲ್ಲ. ಭೂಸಾರಿಗೆ ಜೊತೆಗೆ ರಕ್ಷಣೆಯನ್ನೂ ಹೆಚ್ಚುವರಿಯಾಗಿ ಕೊಟ್ಟರೆ ಆದೀತು ಎಂದರು. ಮೋದಿ ಮಂತ್ರಿ ಮಂಡಲದಲ್ಲಿ ಎರಡನೆಯ ಸ್ಥಾನದಲ್ಲಿರುವ ಹಿರಿಯ ಸಚಿವ ರಾಜನಾಥ್ ಸಿಂಗ್ ಅವರಿಗೆ ಕೂಡ ಕಡತ ಓದುವ ತಾಳ್ಮೆ ಶಿಸ್ತು ಇಲ್ಲ. ಆಮೂಲಾಗ್ರ ಸುಧಾರಣೆಗಳು, ವ್ಯಾಪಕ ಖರೀದಿಯ ಹೊಸ್ತಿಲಲ್ಲಿರುವ ರಕ್ಷಣಾ ಖಾತೆಗೆ ಅಧ್ಯಯನಶೀಲ ಶಿಸ್ತಿನ ಮಂತ್ರಿಯೊಬ್ಬರ ಅಗತ್ಯವಿತ್ತು. ಜೊತೆಗೆ ಈ ಹಿಂದೆ ಯಾರೂ ಮಾಡಿಲ್ಲದ್ದನ್ನು ತಾವು ಮಾಡಿ ತೋರಿಸಿ ಹೆಸರು ಗಳಿಸಿಕೊಳ್ಳಬೇಕು ಎಂಬ ಪ್ರಧಾನಿ ಮೋದಿಯವರ ಕೀರ್ತಿಮೋಹ. ಹೆಣ್ಣುಮಗಳೊಬ್ಬರ ಕೈಗೆ ರಕ್ಷಣಾ ಖಾತೆ ಇರಿಸಬೇಕೆಂಬ ಮನಸ್ಸು ಅವರಿಗೆ 2014ರಲ್ಲೇ ಇತ್ತು. ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಈ ಆಹ್ವಾನವನ್ನು ಒಪ್ಪುವ ಮನಸ್ಸು ಮಾಡಲಿಲ್ಲ ಎನ್ನುತ್ತವೆ ಬಿಜೆಪಿ ಮೂಲಗಳು. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ದೇಶ ಕಾಯುವ ಖಾತೆ ನಿರ್ಮಲಾ ಮಡಿಲಿಗೆ ಬಿತ್ತು. ರಕ್ಷಣಾ ಖಾತೆಯ ಪ್ರತ್ಯೇಕ ನಿರ್ವಹಣೆ ಹೊತ್ತ ಮೊದಲ ಮಹಿಳೆ ಅವರು. ಈ ಹಿಂದೆ ಇಂದಿರಾಗಾಂಧಿ ಅವರು ಪ್ರಧಾನಿ ಹುದ್ದೆಯ ಜೊತೆಗೆ ರಕ್ಷಣೆಯನ್ನೂ ನಿಭಾಯಿಸಿದ್ದುಂಟು. ಹದಿನಾರು ದೇಶಗಳಲ್ಲಿ ರಕ್ಷಣಾ ಖಾತೆಯನ್ನು ಮಹಿಳೆಯರು ನಿಭಾಯಿಸುತ್ತಿದ್ದಾರೆ. ಅವರ ಪೈಕಿ ನಿರ್ಮಲಾ ಕೂಡ ಒಬ್ಬರು.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆ.ಎನ್.ಯು) ‘ದೇಶದ್ರೋಹಿಗಳ ಕೂಪ’ ವೆಂದು ಬಿಜೆಪಿ ಮತ್ತು ಸಂಘಪರಿವಾರ ಇತ್ತೀಚೆಗೆ ಮಾಡಿದ್ದ ಆರೋಪ ಜನಮನದಲ್ಲಿ ಇನ್ನೂ ಹಸಿರಾಗಿದೆ. ಎಡಪಂಥೀಯರ ಬಿಗಿಮುಷ್ಠಿಯಿಂದ ಈ ವಿಶ್ವವಿದ್ಯಾಲಯವನ್ನು ಬಿಡಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನೂ ಮೋದಿ ಸರ್ಕಾರ ಮಾಡತೊಡಗಿದೆ. ದೇಶರಕ್ಷಣೆಯ ಖಾತೆಗೆ ಇದೇ ವಿಶ್ವವಿದ್ಯಾಲಯದ ಪದವೀಧರೆಯನ್ನು ಆರಿಸಿಕೊಳ್ಳಬೇಕಾದ ಅನಿವಾರ್ಯ ಒದಗಿದ್ದು ದೊಡ್ಡ ವಿಡಂಬನೆಯೇ ಸರಿ. ತಾವು ಇಂದು ತಲುಪಿರುವ ಎತ್ತರಕ್ಕೆ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದೇ ಕಾರಣ ಎಂಬುದು ಅವರ ಹೆಮ್ಮೆಯ ಹೇಳಿಕೆ. ಆದರೆ ಈಗಿನ ಜೆ.ಎನ್.ಯು ಮತ್ತು ಆಗಿನ ಜೆ.ಎನ್.ಯು ಬೇರೆ ಬೇರೆ. ಈಗಿನದು ಅತಿರೇಕಕ್ಕೆ ಹೋಗಿದೆ ಎನ್ನುವ ಅವರು ತಾವು ಮಂತ್ರಿಯಾಗಿರುವ ರಾಜಕೀಯ ಪಕ್ಷವೂ ಅತಿರೇಕದ ನಿಲುವುಗಳನ್ನು ಪ್ರತಿಪಾದಿಸತೊಡಗಿದೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ.

ಹಾಗೆ ನೋಡಿದರೆ ನಿರ್ಮಲಾ ಬಿಜೆಪಿ ಮೂಲದವರೂ ಅಲ್ಲ. ಆರೆಸ್ಸೆಸ್ ಸಂಪರ್ಕವೂ ಅವರಿಗೆ ಇರಲಿಲ್ಲ. ದೂರದ ತಮಿಳುನಾಡಿನ ತಿರುಚಿನಾಪಳ್ಳಿಯ ಮಧ್ಯಮವರ್ಗದ ‘ಮೇಲ್ಜಾತಿ’ ಕುಟುಂಬಕ್ಕೆ ಸೇರಿದವರು. ಉನ್ನತ ವ್ಯಾಸಂಗಕ್ಕೆ ಜೆ.ಎನ್.ಯು. ಸೇರಿ ಜಾಗತೀಕರಣದಲ್ಲಿ ಡಾಕ್ಟರೇಟ್ ಗಳಿಸಿದರು. ಅಲ್ಲಿ ‘ಎಡ’ ಮತ್ತು ‘ಬಲ’ ಎರಡನ್ನೂ ಸಮಾನ ದೂರದಲ್ಲಿಟ್ಟ ‘ಮುಕ್ತ ಚಿಂತಕ’ರ ಕೂಟದಲ್ಲಿದ್ದವರು. ಇದೇ ಕೂಟದ ಸದಸ್ಯರಾಗಿದ್ದ ಪರಕಾಲ ಪ್ರಭಾಕರ್ ಆಂಧ್ರದ ಕಾಂಗ್ರೆಸ್ ಕುಟುಂಬದಿಂದ ಬಂದವರು. ಇಬ್ಬರ ನಡುವೆ ಅಂಕುರಿಸಿದ ಪ್ರೇಮ ವಿವಾಹಕ್ಕೆ ದಾರಿ ಮಾಡಿತು. 1986ರಲ್ಲಿ ಲಂಡನ್‌ಗೆ ತೆರಳಿದ ಈ ಜೋಡಿ ನಾಲ್ಕಾರು ವರ್ಷ ಅಲ್ಲಿ ಉನ್ನತ ವ್ಯಾಸಂಗ ಮತ್ತು ಉದ್ಯೋಗ ಎರಡರಲ್ಲೂ ಪಳಗಿತು. ಪ್ರೈಸ್ ವಾಟರ್ ಹೌಸ್ ಕೂಪರ್ ಎಂಬ ಅಂತರರಾಷ್ಟ್ರೀಯ ಖ್ಯಾತಿಯ ಆಡಿಟಿಂಗ್ ಕಂಪೆನಿಯಲ್ಲಿ ಸಂಶೋಧಕಿಯಾಗಿ ಮತ್ತು ಬಿ.ಬಿ.ಸಿ. ಮಾಧ್ಯಮ ಸಂಸ್ಥೆಯಲ್ಲಿ ವಿಶ್ಲೇಷಕಿಯಾಗಿ ಕೆಲಸ ಮಾಡಿದ ನಿರ್ಮಲಾ, ನಡುವೆ ಕೆಲ ಕಾಲ ದೊಡ್ಡ ಅಂಗಡಿಯೊಂದರಲ್ಲಿ ಸೇಲ್ಸ್ ಗರ್ಲ್ ಆಗಿದ್ದೂ ಉಂಟು.

1991ರಲ್ಲಿ ಭಾರತಕ್ಕೆ ವಾಪಸು ಬಂದ ಅವರು ವಾಜಪೇಯಿ ಸರ್ಕಾರದ ಅವಧಿಯಲ್ಲಿ 2003ರಿಂದ 2005ರ ತನಕ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿದ್ದರು. ಸುಷ್ಮಾ ಸ್ವರಾಜ್ ಅವರ ಒತ್ತಾಸೆಯಿಂದ ಬಿಜೆಪಿಗೆ ಸೇರಿದ್ದು 2008ರಲ್ಲಿ. ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದವರು ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಹಾಗೂ ಇದೀಗ ನರೇಂದ್ರ ಮೋದಿ. ಮಧುರೈಯಲ್ಲಿ ಹುಟ್ಟಿದ್ದ ನಿರ್ಮಲಾ ಈಗ ಕರ್ನಾಟಕದ ಸಂಸದೆ. ರಾಜ್ಯ ವಿಧಾನಸಭೆಯಿಂದ ಅವರನ್ನು ರಾಜ್ಯಸಭೆಗೆ ಆರಿಸಿ ಕಳಿಸಲಾಗಿದೆ.

ಪತಿ ಪರಕಾಲ ಪ್ರಭಾಕರ್, ಕಾಂಗ್ರೆಸ್ ತೊರೆದು ಬಿಜೆಪಿ- ಚಿರಂಜೀಯವರ ಪ್ರಜಾರಾಜ್ಯಂ ಪಾರ್ಟಿಯನ್ನು ಹಾದು ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಸಂಪರ್ಕ ಸಂವಹನ ಸಲಹೆಗಾರ ಹುದ್ದೆಯಲ್ಲಿದ್ದಾರೆ. ದಂಪತಿಗೆ ಒಬ್ಬ ಮಗಳು. ಕರ್ನಾಟಕ ಶಾಸ್ತ್ರೀಯ ಸಂಗೀತವೆಂದರೆ ನಿರ್ಮಲಾ ಅವರಿಗೆ ಪ್ರಾಣ. ಅತ್ತೆಯೊಂದಿಗೆ ಕಲೆತು ನಿರ್ಮಲಾ ತಯಾರಿಸುವ ಆಂಧ್ರದ ಆವಕ್ಕಾಯಿ ಉಪ್ಪಿನಕಾಯಿ ಪತಿ ಪ್ರಭಾಕರ್ ಅವರಿಗೆ ಅಚ್ಚುಮೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT