ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಸು’ ದಮನಿಸುವ ಸಂಚಿನ ಹಿಂದೆ...

Last Updated 9 ಸೆಪ್ಟೆಂಬರ್ 2017, 20:17 IST
ಅಕ್ಷರ ಗಾತ್ರ

ಅಮೆರಿಕದ ಅಟಾರ್ನಿ ಜನರಲ್ ಜೆಫ್ ಸೆಷನ್ಸ್ ಅವರು, ಶಿಥಿಲ ಆರ್ಥಿಕತೆಯ ವಿಷಯ ಮುಂದಿಟ್ಟುಕೊಂಡು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು  ಸಮರ್ಥಿಸಿಕೊಳ್ಳಲು ಯತ್ನಿಸುತ್ತಿರುವುದರಲ್ಲಿ ಏನಾದರೂ ಹುರುಳಿದೆಯೇ?

ಖಂಡಿತವಾಗಿಯೂ ಇದು ಮುಖ್ಯ ಸಂಗತಿಯೇ ಅಲ್ಲ. ‘ವಲಸಿಗ ಮಕ್ಕಳ ವಿರುದ್ಧದ ಕ್ರಮ ಮುಂದೂಡಿಕೆ’ಗೆ (ಡಿ.ಎ.ಸಿ.ಎ) ಇತಿಶ್ರೀ ಹಾಡುವ ಟ್ರಂಪ್ ಅವರ ನಿರ್ಧಾರ ಅತ್ಯಂತ ಅನೈತಿಕವಾದುದು. ಈ ಡಿ.ಎ.ಸಿ.ಎ ನೀತಿಯ ಕನಸುಗಾರರೆಂದೇ ಗುರುತಿಸಿಕೊಳ್ಳುವ 8ಲಕ್ಷ ಫಲಾನುಭವಿಗಳು ತಾವಾಗಿಯೇ ಯಾವುದೇ ತಪ್ಪು ಎಸಗಿದವರಲ್ಲ. ತಮಗೆ ಅರಿವಿದ್ದೂ ಅವರು ಅಕ್ರಮವಾಗಿ ವಲಸೆ ಬಂದವರಲ್ಲ. ತಮ್ಮ ಪೋಷಕರು ಇಲ್ಲಿಗೆ ಬಂದಾಗ ಅವರಿನ್ನೂ ಲೋಕದ ವ್ಯವಹಾರಗಳು ಗೊತ್ತಿಲ್ಲದ ಬಾಲ್ಯಾವಸ್ಥೆಯಲ್ಲಿದ್ದವರು.

ಲಭ್ಯವಿರುವ ಯಾವುದೇ ಅಂಕಿಅಂಶಗಳ ಪ್ರಕಾರ ನೋಡಿದರೂ, ಈ ವಲಸಿಗ ಸಮುದಾಯವು ನಮ್ಮ ಜನಸಂಖ್ಯೆಯ ಒಂದು ವಿಶಿಷ್ಟ ವರ್ಗ ಎಂಬುದನ್ನು ಪುಷ್ಟೀಕರಿಸುತ್ತವೆ. ಇವರು ಪರಿಶ್ರಮ ಪಡುವ ಯುವಜನರಾಗಿದ್ದು ಉನ್ನತ ಶಿಕ್ಷಣದ ಬಲದಿಂದ ಸುಧಾರಿತ ಜೀವನಮಟ್ಟಕ್ಕಾಗಿ ಹಂಬಲಿಸುವವರಾಗಿದ್ದಾರೆ. ಅವರಿಗೆಲ್ಲಾ ಅಮೆರಿಕವೇ ‘ತವರು ನೆಲ’ವಾಗಿದ್ದು ಈ ನಾಡಿನ ಮೌಲ್ಯಗಳಿಗೆ ಬದ್ಧತೆ ಹೊಂದಿದವರಾಗಿದ್ದಾರೆ.

ಈ ಸಮುದಾಯದವರಿಗೆ ಈವರೆಗೆ ನೀಡುತ್ತಾ ಬಂದಿದ್ದ ಬೆಂಬಲವನ್ನು ಹಠಾತ್ ನಿಲ್ಲಿಸುವುದಾಗಲೀ ಅಥವಾ ಈ ಕನಸುಗಾರರು ಸ್ವಪ್ರೇರಣೆಯಿಂದ ನೀಡಿದ ಮಾಹಿತಿಯನ್ನು ಸ್ವತಃ ಅವರಿಗೇ ಕಿರುಕುಳ ಕೊಡಲು ಹಾಗೂ ಅವರನ್ನು ಎತ್ತಂಗಡಿ ಮಾಡಲು ಬಳಸುವುದಾಗಲೀ ಪರಮ ಹಾಗೂ ಕ್ರೂರ ವಿಶ್ವಾಸಘಾತುಕತನವಾಗುತ್ತದೆ. ಇದರ ಹಿಂದೆ ಜನಾಂಗೀಯ ದ್ವೇಷ ಹೆಡೆಯೆತ್ತಿಕೊಂಡು ಕುಳಿತಿದೆ ಎಂಬುದು ನಿಚ್ಚಳವಾಗಿಯೇ ಸ್ವಯಂವೇದ್ಯವಾಗುವ ಅಂಶವಾಗಿದೆ. ಒಂದೊಮ್ಮೆ ಈ ಕನಸುಗಾರರು ಮೆಕ್ಸಿಕೊ ಬದಲು ನಾರ್ವೆಯಲ್ಲಿ ಹುಟ್ಟಿದವರಾಗಿದ್ದರೆ ಇದೇ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು ಎಂಬುದನ್ನು ಯಾರಾದರೂ ನಂಬಲು ಸಾಧ್ಯವೇ?

ಇಷ್ಟಾಗಿಯೂ ಸೆಷನ್ಸ್ ಅವರು ಈ ಸಂಬಂಧ ಆರ್ಥಿಕತೆಯನ್ನೇ ಪ್ರಮುಖವಾಗಿ ಪ್ರಸ್ತಾಪಿಸುತ್ತಾ ಟ್ರಂಪ್ ಅವರನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ‘ಈ ಕನಸುಗಾರರಿಗೆ ಇಲ್ಲಿ ಉದ್ಯೋಗ ಮಾಡಲು ಕಾನೂನುಬದ್ಧ ಅವಕಾಶ ಕಲ್ಪಿಸುವ ಡಿ.ಎ.ಸಿ.ಎ ಹತ್ತಾರು ಸಾವಿರ ಅಮೆರಿಕನ್ನರ ಉದ್ಯೋಗಾವಕಾಶವನ್ನು ಕಬಳಿಸುತ್ತಿದೆ’ ಎಂದು ಅವರು ಹೇಳಿದ್ದಾರೆ. ಇದು ಹುರುಳಿಲ್ಲದ ಹೇಳಿಕೆಯಾಗಿದೆ. ಇಂತಹ ಆಧಾರರಹಿತ ಹೇಳಿಕೆಯನ್ನೇ ಪ್ರಚಾರ ಮಾಡುತ್ತಾ ತಮ್ಮ ನಿರ್ಧಾರ ಜಾರಿಗೊಳಿಸಲು ಮುಂದಾಗಿರುವುದು ಈ ನಿರ್ಧಾರದ ಬಗ್ಗೆ ಮಾತ್ರವಲ್ಲದೆ ಟ್ರಂಪ್ ಅವರ ಆಡಳಿತದ ವೈಖರಿಗೇ ಕನ್ನಡಿ ಹಿಡಿಯುತ್ತಿದೆ.

ಟ್ರಂಪ್ ಮತ್ತು ಅವರ ಬಳಗ ಆರ್ಥಿಕತೆ ಮಾತ್ರವಲ್ಲದೆ ಪ್ರತೀ ವಿಷಯದ ಬಗ್ಗೆಯೂ ದೊಡ್ಡ ದೊಡ್ಡ ಸುಳ್ಳುಗಳನ್ನು ಹೇಳುತ್ತಿದೆ ಎಂಬುದು ಕೂಡ ವಾಸ್ತವವೇ ಆಗಿದೆ. ಟ್ರಂಪ್ ಅವರು ಡಿ.ಎ.ಸಿ.ಎ ಕೈಬಿಡುವ ವಿಷಯ ಪ್ರಕಟಿಸಿದ ಮರುದಿನವೇ ತೆರಿಗೆ ಸುಧಾರಣೆ ಬಗ್ಗೆ ಸಾರ್ವಜನಿಕ ಭಾಷಣ ಮಾಡಿದರು. ಅದರಲ್ಲಿ ಅವರು ತಾವು ಈ ಹಿಂದೆ ಅನೇಕ ಸಲ ಹೇಳಿದ್ದನ್ನೇ ಪುನಃ ಪ್ರಸ್ತಾಪಿಸಿ, ‘ಅಮೆರಿಕವು ಪ್ರಪಂಚದಲ್ಲೇ ಅತ್ಯಂತ ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರ’ ಎಂದಿದ್ದಾರೆ. ಟ್ರಂಪ್ ಪ್ರತಿಯೊಮ್ಮೆ ಹೀಗೆ ಹೇಳಿದಾಗಲೂ ಸತ್ಯಶೋಧನಾ ವರದಿಗಳು ಇದನ್ನು ಅಲ್ಲಗಳೆಯುತ್ತಾ ಬಂದಿವೆ. ಅಷ್ಟೇ ಅಲ್ಲ, ವಾಸ್ತವವು ಇದಕ್ಕೆ ತದ್ವಿರುದ್ಧ ಎಂಬುದನ್ನೂ ಸ್ಪಷ್ಟಪಡಿಸಿವೆ. ‘ಅಮೆರಿಕವು ರಾಷ್ಟ್ರೀಯ ಆದಾಯವಾಗಿ ಸಂಗ್ರಹಿಸುತ್ತಿರುವ ತೆರಿಗೆ ಪ್ರಮಾಣವು ಬೇರಾವುದೇ ಸುಧಾರಿತ ದೇಶದ ತೆರಿಗೆಗಿಂತ ಬಹುತೇಕ ಕಡಿಮೆಯೇ ಇದೆ’ ಎನ್ನುತ್ತಿವೆ ಸತ್ಯಶೋಧನಾ ವರದಿಗಳು. ಆದರೂ ಟ್ರಂಪ್ ತಮ್ಮ ಸುಳ್ಳು ಹೇಳಿಕೆಯನ್ನು ಪದೇಪದೇ ಪುನರುಚ್ಚರಿಸುತ್ತಲೇ ಇದ್ದಾರೆ.

ಡಿ.ಎ.ಸಿ.ಎ ಆರ್ಥಿಕತೆ ಬಗ್ಗೆ ಅಧಿಕಾರಿಗಳ ಬಾಯಿಯಿಂದ ಸುಳ್ಳು ಹೇಳಿಕೆಗಳನ್ನು ಕೊಡಿಸುವುದು ಈ ಆಡಳಿತದ ಕಾರ್ಯನಿರ್ವಹಣಾ ನೀತಿಯೇ ಆಗಿಬಿಟ್ಟಿದೆ. ಇಷ್ಟಾಗಿಯೂ ಇದೊಂದು ಅಹಿತಕರ ಕ್ರಮವೆಂದೇ ನಾನು ವಾದ ಮಂಡಿಸಲು ಬಯಸುತ್ತೇನೆ. ಅಟಾರ್ನಿ ಜನರಲ್ ಅವರು ಉದ್ಯೋಗ ಕುರಿತು ಹೇಳಿಕೆ ನೀಡಿರುವುದರ ಅರ್ಥವಾದರೂ ಏನು?

‘ಟ್ರಂಪ್ ಅವರಿಗೆ ಬೇರೆ ಆಯ್ಕೆಯೇ ಇಲ್ಲ. ಡಿ.ಎ.ಸಿ.ಎ ಕಾನೂನು, ಕಾರ್ಯಾಂಗದ ಅಧಿಕಾರದ ಅಕ್ರಮ ನಡೆಯಾಗಿರುವುದರಿಂದ ಅವರು ವಿಷಾದದಿಂದಲೇ ಈ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ’ ಎಂದು ಸರ್ಕಾರ ಅಧಿಕೃತವಾಗಿಯೇ ಸಮರ್ಥಿಸಿಕೊಳ್ಳುತ್ತಿದೆ. ಟ್ರಂಪ್ ಅವರು ಸ್ವತಃ ಹೇಳಿಕೆ ನೀಡುವ ಬದಲು ಅಟಾರ್ನಿ ಜನರಲ್ ಸೆಷನ್ಸ್ ಅವರ ಮೂಲಕ ಹೇಳಿಕೆ ಪ್ರಕಟವಾಗಿರುವುದಕ್ಕೂ ಇದೇ ಕಾರಣ ಇರಬಹುದು. ವಾಸ್ತವವಾಗಿ, ಡಿ.ಎ.ಸಿ.ಎ ವಿರುದ್ಧ ಕಾನೂನು ಮೊಕದ್ದಮೆಯು ಪ್ರಬಲವಾಗಿಯೇ ಇದೆ. ಈ ವಿಷಯದಲ್ಲಿ ಎದೆಗೊಡಲು ಸೆಷನ್ಸ್ ಅವರನ್ನು ಮುಂಚೂಣಿಯಲ್ಲಿ ನಿಲ್ಲಿಸಿರುವುದು ಟ್ರಂಪ್ ಅವರ ಹೇಡಿತನವಲ್ಲದೆ ಮತ್ತೇನೂ ಅಲ್ಲ. ‘ನಮ್ಮ ಉದ್ಯೋಗಗಳನ್ನು ಅವರು ಕಬಳಿಸಿಸುತ್ತಿದ್ದಾರೆ’ ಎಂಬ ಹೇಳಿಕೆ ಇಡೀ ನಾಟಕದ ಬಲಗುಂದಿಸುತ್ತದೆ.

ಇದಕ್ಕಿಂತ ಹೆಚ್ಚಾಗಿ, ‘ಶಿಥಿಲ ಆರ್ಥಿಕತೆ’ ಕುರಿತ ಪ್ರಸ್ತಾಪವನ್ನೂ ನಾವು ಗಮನಿಸಬೇಕಿದೆ. ‘ಒಂದು ವ್ಯವಸ್ಥೆಯಲ್ಲಿ ನಿರ್ದಿಷ್ಟ ಸಂಖ್ಯೆಯ ಉದ್ಯೋಗಾವಕಾಶಗಳು ಇರುತ್ತವೆ. ಯಾವುದೇ ವಿದೇಶಿ ಮೂಲದ ವ್ಯಕ್ತಿ ಈ ಹುದ್ದೆಯನ್ನು ತನ್ನದಾಗಿಸಿಕೊಂಡರೆ ಅದನ್ನು ಸ್ವದೇಶದಲ್ಲಿ ಹುಟ್ಟಿದ ವ್ಯಕ್ತಿಯಿಂದಲೇ ಕಿತ್ತುಕೊಂಡಿರುತ್ತಾನೆ’ ಎಂಬ ಯೋಚನೆಯೇ ವಿಚಿತ್ರವಾಗಿದೆ. ಆರ್ಥಿಕತೆ ಎಂಬುದು ಹೇಗೆ ಕೆಲಸ ಮಾಡುತ್ತಿರುತ್ತದೆ ಎಂಬುದನ್ನು ತಿಳಿದಿರುವ ಯಾವ ಸಂಗತಿಗೂ ಈ ಯೋಚನೆ ತಾಳೆಯಾಗುವುದಿಲ್ಲ. ವಿಶೇಷವೆಂದರೆ, ಕನ್ಸರ್ವೇಟಿವ್ ಪಕ್ಷಕ್ಕೆ ಸೇರಿದ ವ್ಯಕ್ತಿಯಿಂದ ಇದನ್ನು ಕೇಳಿಸಿಕೊಳ್ಳುವುದು ಮಿಥ್ಯಾವಾಸ್ತವ ಆಗುತ್ತದೆ.

ಸತ್ಯವೇನೆಂದರೆ, ಈ ಕನಸುಗಾರರಿಗೆ ಕಾನೂನುಬದ್ಧವಾಗಿ ಉದ್ಯೋಗದಲ್ಲಿ ತೊಡಗಲು ಅವಕಾಶ ಕಲ್ಪಿಸುವುದರಿಂದ ಅಮೆರಿಕದ ಆರ್ಥಿಕತೆಗೆ ಸಹಾಯ ಮಾಡಿದಂತಾಗುತ್ತದೆ. ಇವರನ್ನು ಆಚೆ ದೂಡುವುದರಿಂದ ಜನಾಂಗೀಯವಾದಿಗಳನ್ನು ಹೊರತುಪಡಿಸಿ ಬೇರೆಲ್ಲರಿಗೂ ದುಷ್ಪರಿಣಾಮವೇ ಆಗುತ್ತದೆ.

ಪ್ರಪಂಚದ ಬೇರ‍್ಯಾವುದೇ ಅಭಿವೃದ್ಧಿ ಹೊಂದಿದ ಆರ್ಥಿಕತೆಯಂತೆಯೇ ಅಮೆರಿಕ ಕೂಡ ಜನನ ಪ್ರಮಾಣ ಕುಸಿತದಿಂದ ಎರಡಲಗಿನ ಸವಾಲು ಎದುರಿಸುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಒಂದೆಡೆ, ಅಮೆರಿಕದಲ್ಲಿ ವಯಸ್ಸಾದ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ. ಅಂದರೆ, ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ವೈದ್ಯಕೀಯ ಆರೈಕೆಯ ಕಾರ್ಯಕ್ರಮಗಳಿಗೆ ಅಗತ್ಯವಾದ ತೆರಿಗೆ ಭರಿಸುವ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಜನನ ಪ್ರಮಾಣ ಕುಸಿತ ಹಾಗೂ ವಯಸ್ಸಾದವರ ಸಂಖ್ಯೆ ಹೆಚ್ಚಳವು ಮುಂಬರುವ ವರ್ಷಗಳಲ್ಲಿ ಸಾಮಾಜಿಕ ಭದ್ರತೆ ಮತ್ತು ವೈದ್ಯಕೀಯ ಆರೈಕೆ ಯೋಜನೆಗಳಿಗೆ ಪ್ರಮುಖ ತೊಡಕಾಗಿ ಪರಿಣಮಿಸುತ್ತವೆ ಎಂಬುದನ್ನು ಅನೇಕ ಅಧ್ಯಯನ ವರದಿಗಳು ಕೂಡ ಸ್ಪಷ್ಟಪಡಿಸಿವೆ. ಇದರ ಜತೆಗೆ, ದಶಕಗಳ ಕಾಲ ವ್ಯವಸ್ಥೆಗೆ ತೆರಿಗೆ ನೀಡುವ ಯುವಜನರನ್ನು ಹೊರದಬ್ಬುವುದು ಈ ಸಮಸ್ಯೆಯನ್ನು ಇನ್ನಷ್ಟು ಕಗ್ಗಂಟಾಗಿಸುತ್ತದೆ.

ಇದರ ಜತೆಗೆ, ಉದ್ಯೋಗದಲ್ಲಿ ತೊಡಗುವ ವರ್ಗದ ಜನಸಂಖ್ಯೆ ಇಳಿಮುಖವಾಗುತ್ತಿರುವುದು ಖಾಸಗಿ ಹೂಡಿಕೆ ಪ್ರಮಾಣವನ್ನು ತಗ್ಗಿಸುತ್ತದೆ. ಜತೆಗೆ ಇದರಿಂದ 2008ರಲ್ಲಿ ಉಂಟಾದಂತಹ ಆರ್ಥಿಕ ಬಿಕ್ಕಟ್ಟಿನ ಗಂಡಾಂತರಗಳ ಸಾಧ್ಯತೆ ಕೂಡ ಏರಿಕೆಯಾಗುತ್ತದೆ.

ಜಪಾನ್ ದೇಶವೇ ಇದಕ್ಕೆ ನಮ್ಮ ಕಣ್ಣ ಮುಂದಿನ ಉದಾಹರಣೆಯಾಗಿದೆ. ಜನಸಂಖ್ಯೆ ಇಳಿಮುಖದ ತೊಂದರೆ ಎದುರಿಸುತ್ತಿರುವ ಹಾಗೂ ವಲಸೆಯನ್ನು ತೀವ್ರವಾಗಿ ವಿರೋಧಿಸುವ ಆ ದೇಶವು ಜಗತ್ತಿನ ಬೇರೆಲ್ಲಾ ರಾಷ್ಟ್ರಗಳಿಗಿಂತ 10 ವರ್ಷ ಮುಂಚೆಯೇ ಆರ್ಥಿಕ ಹಿಂಜರಿತ ಹಾಗೂ ನಿಶ್ಚಲತೆಗೆ ತುತ್ತಾಯಿತು. ಡಿ.ಎ.ಸಿ.ಎ ರದ್ದುಪಡಿಸಿದರೆ ಅಮೆರಿಕ ಕೂಡ ಹೆಚ್ಚೂಕಡಿಮೆ ಜಪಾನ್ ಹಾದಿಯಲ್ಲೇ ಸಾಗಲಿದೆ. ಹಾಗಾಗುವುದು ನಮಗೆ ಬೇಕೇನು?

ಈ ಕನಸುಗಾರ ವಲಸಿಗರು ಕಡಿಮೆ ಶಿಕ್ಷಣ ಹೊಂದಿದ ಸ್ವದೇಶಿ ಮೂಲದ ಉದ್ಯೋಗಿಗಳೊಡನೆ ಪೈಪೋಟಿ ನಡೆಸುತ್ತಾರೆ, ಇದರಿಂದ ಸ್ವದೇಶಿ ಉದ್ಯೋಗಾಕಾಂಕ್ಷಿಗಳ ವೇತನ ಕಡಿಮೆ ಆಗುವುದರ ಜತೆಗೆ ವರಮಾನದ ಅಂತರ ಕೂಡ ಹೆಚ್ಚಾಗುತ್ತದೆ ಎಂಬ ಹೇಳಿಕೆಗಳ ಬಗ್ಗೆ ಏನು ಹೇಳುವುದು? ಈ ಹೇಳಿಕೆಗಳಲ್ಲಿ ಸತ್ಯಾಂಶವಿಲ್ಲ ಎಂಬುದಕ್ಕೆ ಅನೇಕ ಸಾಕ್ಷ್ಯಾಧಾರಗಳು ಇವೆ. ಅವೇನೇ ಇರಲಿ, ಈಗಿನ ಸಂದರ್ಭದಲ್ಲಿ ಅದು ಅಪ್ರಸ್ತುತ. ಈ ಕನಸುಗಾರರು ಉತ್ತಮ ಶಿಕ್ಷಣ ಹೊಂದಿದ ಸಮುದಾಯವಾಗಿದ್ದು, ವಯಸ್ಕರಾದ ಅವಧಿಯಲ್ಲಿ ಯಾವುದೇ ದಾಖಲೆಯಿಲ್ಲದೆ ಅಕ್ರಮವಾಗಿ ವಲಸೆ ಬಂದವರಿಗೂ ಇವರಿಗೂ ಬಹಳಷ್ಟು
ವ್ಯತ್ಯಾಸಗಳಿವೆ.

ವಿಷಯವನ್ನು ತುಂಬಾ ಎಳೆಯದೆ ಸರಳವಾಗಿ ಹೇಳಬೇಕೆಂದರೆ, ಕನಸುಗಾರರಿಗೆ ಇಲ್ಲಿ ಉದ್ಯೋಗಾವಕಾಶ ಮುಂದುವರಿಸುವುದು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾದುದಾಗಿದೆ. ಆದರೆ ಕಂದು ಮೈಬಣ್ಣದ ಹಾಗೂ ಸ್ಪೇನ್ ಮೂಲದವರ ಬಗ್ಗೆ ಏನೋ ಒಂದು ಬಗೆಯ ಅಸಹನೆಯನ್ನೋ, ದ್ವೇಷವನ್ನೋ ಹೊಂದಿದವರಿಗೆ ಮಾತ್ರ ಇದು ಬೆಳವಣಿಗೆಗೆ ಕಂಟಕ ಎಂಬಂತೆ ತೋರುತ್ತಿದೆ ಎಂಬುದೇ ಕಟು ವಾಸ್ತವದ ಸಂಗತಿಯಾಗಿದೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT