ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವಿಗೆ ಬರ: ಜಾನುವಾರುಗಳ ಮಾರಾಟ

Last Updated 10 ಸೆಪ್ಟೆಂಬರ್ 2017, 4:23 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಮಳೆಗಾಲದಲ್ಲೇ ಮೇವಿಗೆ ತೀವ್ರ ತತ್ವಾರ ಉಂಟಾಗಿದೆ. ಈ ಬಾರಿ ಮುಂಗಾರು ಮಳೆ ಸಮರ್ಪಕವಾಗಿ ಆಗದ ಕಾರಣ ಬಿತ್ತನೆ ಸರಿಯಾಗಿ ಆಗಿಲ್ಲ. ಕೆಲವೆಡೆ ಜಮೀನುಗಳಲ್ಲಿ ಗರಿಕೆ ಹುಲ್ಲು ಸಹ ಬೆಳೆದಿಲ್ಲ.

ಜಾನುವಾರುಗಳ ಮೇವಿಗೆ ಪ್ರಮುಖ ಆಧಾರವಾಗಿದ್ದ  ಬಳ್ಳಿ ಶೇಂಗಾ, ಹೆಸರು, ಗೋವಿನ ಜೋಳ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಕೆಲವೆಡೆ ಮೊಳಕೆ ಹಂತದಲ್ಲೇ  ಒಣಗಿ ಹೋಗಿವೆ. ಹೀಗಾಗಿ ಜಾನುವಾರುಗಳಿಗೆ ಮೇವು ಹೊಂದಿಸಲು ರೈತರು ಪರದಾಡುತ್ತಿದ್ದಾರೆ.

ಪಶುಸಂಗೋಪನಾ ಇಲಾಖೆ ಜಿಲ್ಲೆಯ ಹಲವೆಡೆ ಮೇವು ಬ್ಯಾಂಕ್‌ ತೆರೆದಿದ್ದರೂ, ಇದರಲ್ಲಿ ಲಭ್ಯವಿರುವ ಮೇವು ಕಳಪೆ ಗುಣಮಟ್ಟದ್ದು ಮತ್ತು ಹಳೆಯದು ಎಂಬ ಕಾರಣಕ್ಕೆ ರೈತರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಮೇವಿನ ಸಮಸ್ಯೆಯಿಂದಾಗಿ ರೈತರು ಎತ್ತುಗಳನ್ನು ಮಾರಲು ಜಾನುವಾರು ಸಂತೆಗೆ ತರುತ್ತಿದ್ದಾರೆ.

‘ಮೊನ್ನೆ ಮೋಡಬಿತ್ತನೆ ಮಾಡಿದ ನಂತರ ಒಂದೆರಡು ಮಳೆ ಆಗಿದೆ. ಉಳಿದಂತೆ ನಮ್ಮ ಭಾಗದಲ್ಲಿ ಮಳೆಯೇ ಆಗಿಲ್ಲ. ಮುಂಗಾರು ಸಂಪೂರ್ಣವಾಗಿ ಕೈಕೊಟ್ಟಿದೆ. ಒಪ್ಪತ್ತಿನ ಊಟಕ್ಕೂ ಚಿಂತಿ ಮಾಡಬೇಕಾದ ಪರಿಸ್ಥಿತಿ ಐತಿ. ಮೇವು ಇಲ್ಲದೆ ದನಕರಗಳು ಸತ್ತ ಹೋಗ್ತಾವಂತ ‘ದನದ ಸಂತಿ’ಗೆ ತಂದೇವಿ.

ವರ್ಷದ ಹಿಂದೆ ₹ 78 ಸಾವಿರಕ್ಕೆ ಖರೀದಿಸಿದ್ದ  ಜೋಡಿ ಎತ್ತುಗಳನ್ನು ಈಗ ವಿಧಿ ಇಲ್ಲದೇ ₹ 56 ಸಾವಿರಕ್ಕೆ ಮಾರಾಟ ಮಾಡಿದ್ದೇವೆ’ ಎಂದು ಗದುಗಿನ ಜಾನುವಾರ ಸಂತೆಗೆ ಬಂದಿದ್ದ ನವಲಗುಂದ ತಾಲ್ಲೂಕಿನ ಇಬ್ರಾಹಿಂಪುರದ ರೈತ ಮಲ್ಲಪ್ಪ ಹೂಗಾರ ಅಸಹಾಯಕತೆ ವ್ಯಕ್ತಪಡಿಸಿದರು. 

‘ಹಿಂಗಾರಿನ ಕೃಷಿ ಚಟುವಟಿಗಳು ಈಗಾಗಲೇ ಆರಂಭವಾಗಬೇಕಿತ್ತು. ಆದರೆ, ಜಿಲ್ಲೆಯಾದ್ಯಂತ ಮಳೆ ಕೊರತೆ ಯಿಂದ ಬಿತ್ತನೆ ತಡವಾಗುತ್ತಿದೆ. ಬೇಸಿ ಗೆಯ ಬೀಸಿ ತಟ್ಟುವ ಮುನ್ನವೇ ಮೇವಿನ ಕೊರತೆ ಎದುರಾಗಿದೆ. ಗೋಶಾಲೆಯಲ್ಲಿ ಹಳೆಯದಾದ, ಕಳಪೆ ಗುಣಮಟ್ಟದ ಬಂದಿರುವ ಜೋಳದ ದಂಟನ್ನು ಮಾರಾಟ ಮಾಡುತ್ತಿದ್ದಾರೆ.

ಅದೂ ಒಬ್ಬರಿಗೆ 30 ಕೆ.ಜಿ ಮಾತ್ರ ಕೊಡುತ್ತಾರೆ. ಎಷ್ಟು ದಿನ ಹಣ ಕೊಟ್ಟು ಮೇವು ಖರೀದಿಸಿ ಕೊಡಲು ಆಗುತ್ತದೆ’ ಎಂದು ರೈತ ಶಂಕ ರಪ್ಪ ಕಳ್ಳಿಮನಿ  ಅಳಲು ತೋಡಿ ಕೊಂಡರು. ‘ನೀರಾವರಿ ಸೌಲಭ್ಯ ಇದ್ದ ವರು ಜಾನುವಾರುಗಳ ಅಗತ್ಯಕ್ಕೆ ಅನು ಗುಣವಾಗಿ ಹಸಿ ಮೇವು ಬೆಳೆದುಕೊಳ್ಳು ತ್ತಿದ್ದಾರೆ. ಒಣಬೇಸಾಯ ನಂಬಿರುವ ರೈತರು ಮೇವು ಹೊಂದಿಸಲು ಪರದಾ ಡುತ್ತಿದ್ದಾರೆ’ ಎಂದು ಅವರು ಹೇಳಿದರು.

ಎತ್ತುಗಳ ದರ ಕುಸಿತ: ಮಳೆ ಕೊರತೆ ಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಆಗಿರುವುದರಿಂದ ಎತ್ತುಗಳಿಗೆ ಬೇಡಿಕೆ ಮತ್ತು ಬೆಲೆ ಗಣನೀಯವಾಗಿ ತಗ್ಗಿದೆ. ಮುಂಗಾರಿನ ಆರಂಭದಲ್ಲಿ ಸದೃಢ ಕಾಯದ ಎತ್ತಿನ ಜೋಡಿಗೆ  ₹ 1ರಿಂದ ₹ 1.25 ಲಕ್ಷದವರೆಗೆ ದರ ಇತ್ತು. ಆದರೆ, ಈಗ ₹ 45ರಿಂದ ₹ 50 ಸಾವಿರಕ್ಕೆ ಜೋಡಿ ಎತ್ತುಗಳು ಸಿಗುತ್ತಿವೆ. ‘ನೀರು, ಮೇವಿನ ಅಲಭ್ಯತೆ ಕಾರಣ ರೈತರು ಚೌಕಾಸಿಗೆ ಇಳಿಯದೇ, ಕೇಳಿದ ದರಕ್ಕೆ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ’ ಎಂದು ಎತ್ತುಗಳನ್ನು ಮಾರಾಟಕ್ಕೆ ತಂದಿದ್ದ ತಾಲ್ಲೂಕಿನ ರೈತ ಮಂಜುನಾಥ ಗೌಡರ ಹೇಳಿದರು.

ಗದಗ  ಎಪಿಎಂಸಿ ಆವರಣದಲ್ಲಿ ಶನಿವಾರ ನಡೆದ ಸಂತೆಯಲ್ಲಿ ಜೋಡಿ ಎತ್ತುಗಳಿಗೆ ಸರಾಸರಿ ₹ 50 ಸಾವಿರ ದರ ಇತ್ತು. ಬೆಲೆ ಅರ್ಧದಷ್ಟು ಕಡಿಮೆ ಆದರೂ ಅವುಗಳನ್ನು ಕೊಳ್ಳಲು ಯಾರೊಬ್ಬ ರೈತರು ಮುಂದೆ ಬರುತ್ತಿಲ್ಲ. ಒಂದು ವೇಳೆ ಎತ್ತುಗಳನ್ನು ಕೊಂಡರೂ, ಅವುಗಳಿಗೆ ಮೇವು, ನೀರು ಒದಗಿಸು ವುದು ಹೇಗೆ ಎಂಬ ಪ್ರಶ್ನೆ ರೈತರಿಗೆ ಕಾಡುತ್ತಿದೆ.

ಹಳೆಯ ಮೇವು: ಜಾನುರುವಾರು ಸಂತೆ ಯಲ್ಲಿ ಹಳೆ ಮೇವು ಲಭ್ಯವಿದೆ. ಟ್ರ್ಯಾಕ್ಟರ್‌ ಬಿಳಿಜೋಳದ ಮೇವಿಗೆ ₹ 5 ರಿಂದ ₹ 7 ಸಾವಿರ ಹಾಗೂ ಹೊಟ್ಟಿಗೆ ₹ 3ರಿಂದ ₹ 4 ಸಾವಿರ ಬೆಲೆ ಇದೆ. ಸದ್ಯ ದುಡ್ಡಕೊಟ್ಟರೂ ಗುಣಮಟ್ಟದ ಮೇವು ದೊರೆಯುತ್ತಿಲ್ಲ. ಬದಲಾಗಿ ಹಳೆಯ, ಫಂಗಸ್‌ ಹಿಡಿದ ಮೇವು ಮಾರಾಟ ಮಾಡಲಾಗುತ್ತಿದೆ.
 

* * 

ಮೇವಿನ ಕೊರತೆಯಿಂದ ಎತ್ತುಗಳು ಸಾಯಬಾರದು ಎಂದು ಮಾರಾಟ ಮಾಡುತ್ತಿದ್ದೇನೆ. ಈ ಬಾರಿ ಮುಂಗಾರಿನಲ್ಲೇ ಗಂಭೀರ ಪರಿಸ್ಥಿತಿ ಎದುರಾಗಿದೆ
ಮಲ್ಲಪ್ಪ ಕುಂಚಗೇರಿ
ಚಿಕ್ಕಹಂದಿಗೋಳ ಗ್ರಾಮದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT