ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಸಿದ್ಧೇಶ್ವರ ರಥೋತ್ಸವ 12ರಂದು

Last Updated 10 ಸೆಪ್ಟೆಂಬರ್ 2017, 4:43 IST
ಅಕ್ಷರ ಗಾತ್ರ

ಬನಹಟ್ಟಿಯ ಕಾಡಸಿದ್ಧೇಶ್ವರ ರಥೋತ್ಸವವು ಇದೇ 12ರಂದು ನಡೆಯಲಿದೆ. ರಥೋತ್ಸವ ಕಾರ್ಯಕ್ರಮವು ಆಕರ್ಷಣೀಯ ಹಾಗೂ ಮನಮೋಹಕವಾದುದು.
ಈ ರಥೋತ್ಸವಕ್ಕೆ ಮೆರುಗು ತರುವುದು ಇಲ್ಲಿರುವ ಭವ್ಯವಾದ ರಥ. ಬನಹಟ್ಟಿಯ ಜಾತ್ರೆಯ ಸಂದರ್ಭದಲ್ಲಿ ಎಳೆಯುವ ರಥ ಉತ್ತರ ಕರ್ನಾಟಕದಲ್ಲಿ ನೋಡಲು ಸಿಗುವುದಿಲ್ಲ.

ಈ ರಥವನ್ನು ಜಮಖಂಡಿ ಸಂಸ್ಥಾನದ ಮಹಾರಾಜರಾಗಿದ್ದ ಪರಶುರಾಮಭಾವು ಶಂಕರರಾವ್‌ ಪಟವರ್ಧನ ಸರ್ಕಾರ ಇವರು ಬನಹಟ್ಟಿಯ ಮಂಗಳವಾರ ಪೇಟೆ ದೈವ ಮಂಡಳಿಗೆ ಕಾಣಿಕೆಯನ್ನಾಗಿ ನೀಡಿದ್ದರು. ಈ ರಥಕ್ಕೆ ಈಗ ಅಂದಾಜು 148 ವರ್ಷಗಳು. ಉತ್ತರ ಕರ್ನಾಟಕದಲ್ಲಿ ಇಷ್ಟು ಹಳೆಯ ರಥ ಬೇರೊಂದು ಇರಲಿಕ್ಕಿಲ್ಲ.

ರಥದ ಹಿನ್ನೆಲೆ: ಬನಹಟ್ಟಿಯ ಕಾಡ ಸಿದ್ಧೇಶ್ವರ ಜಾತ್ರೆಯ ಸಂದರ್ಭದಲ್ಲಿ ರಥದ ಕೊರತೆಯಿತ್ತು. ಈ ವಿಷಯವನ್ನು ಸ್ಥಳೀಯ ಮುಖಂಡರು ಮಹಾರಾಜರ ಗಮನಕ್ಕೆ ತಂದಾಗ ಜಮಖಂಡಿಯ ಮಹಾರಾಜರು ರಥವನ್ನು ಕಾಡಸಿದ್ಧೇಶ್ವರ ಜಾತ್ರೆಯ ಸಂದರ್ಭದಲ್ಲಿ ನಡೆಯುವ ರಥೋ ತ್ಸವಕ್ಕೆ ಮಾತ್ರ ಉಪ ಯೋಗಿಸ ಬೇಕೆಂದು ಬನಹಟ್ಟಿಯ ಹಿರಿಯರಿಂದ ಕರಾರು ಪತ್ರ ಬರೆಯಿಸಿಕೊಂಡು ನೀಡಿ ದ್ದರು. ಅದರಂತೆ ಸ್ಥಳೀಯರು ಈಗಲೂ ಅದನ್ನು ಕೇವಲ ರಥೋತ್ಸವಕ್ಕೆ ಮಾತ್ರ ಬಳಸುತ್ತ ಬಂದಿದ್ದಾರೆ.

ಈ ಕರಾರು ಪತ್ರವನ್ನು ಅಂದಿನ ಮಂಗಳವಾರ ಪೇಟೆಯ ದೈವದ ಮಂಡಳದ ಅಧ್ಯಕ್ಷರಾಗಿದ್ದ ಚ. ಚ. ಅಬಕಾರ ಬರೆದು ಕೊಟ್ಟು ರಥವನ್ನು 1949ರ ಆ.23ರಂದು ವಶಕ್ಕೆ ತೆಗೆದುಕೊಂಡಿದ್ದರು. ಇಂದು ರಥ ಜಮಖಂಡಿಯಿಂದ ಬನಹಟ್ಟಿಗೆ ಬಂದು 68 ವರ್ಷಗಳು ಗತಿಸಿವೆ. ಅಂದಿನಿಂದ ಇಂದಿನವರೆಗೂ ಈ ರಥವು ಜಾತ್ರೆಯ ಸಂದರ್ಭದಲ್ಲಿ ನಡೆಯುವ ರಥೋತ್ಸವದ ಆಕರ್ಷಣಿಯ ಕೇಂದ್ರವಾಗಿದೆ.

ರಥವನ್ನು ಬನಹಟ್ಟಿಗೆ ತಗೆದುಕೊಂಡು ಬಂದ ನಂತರ ಅಂದಿನ ದೈವ ಮಂಡಳಿಯ ಅಧ್ಯಕ್ಷ ಚ. ಚ. ಅಬಕಾರ ಅವರು 1949ರ ಆ.31ರಂದು ನವಯುಗ ಪತ್ರಿಕೆಯ ಮೂಲಕ ಸಮಸ್ತ ಬನಹಟ್ಟಿ ನಾಗರಿಕರ ಪರವಾಗಿ ಜಮಖಂಡಿ ಮಹಾರಾಜರಿಗೆ ಅಭಿನಂದನೆಯನ್ನು ಸಲ್ಲಿಸಿದ್ದರು.

ಆ ಒಂದು ಪತ್ರದಂತೆ  ಜಮಖಂಡಿ ಮಹಾರಾಜರ ತಮ್ಮ ರಾಜವಾಡೆಯ ವಸ್ತು ಸಂಗ್ರಹಾಲಯದಲ್ಲಿದ್ದ ಬಹುಮುಖ್ಯ ಆಸ್ತಿಗಳಲ್ಲಿ ಒಂದಾದ ಸೀಸಂ ಕಟ್ಟಿಗೆಯಿಂದ ನಿರ್ಮಾಣ ಮಾಡಿದ ಸುಮಾರು ಎಂಬತ್ತು ವರ್ಷದಷ್ಟು ಹಳೆಯದಾದ ರಥ ಎಂದು ತಿಳಿಸಿದ್ದಾರೆ. ಇದರ ಪ್ರಕಾರ 80 ಮತ್ತು 68 ಸೇರಿದಾಗ ಈ ರಥಕ್ಕೆ ಒಟ್ಟು ಅಂದಾಜು 148 ವರ್ಷ ಇತಿಹಾಸವಿದೆ ಎಂದು ತಿಳಿಯಬಹುದಾಗಿದೆ.

ಈ ರಥವನ್ನು ಜಮಖಂಡಿಯಿಂದ ಬನಹಟ್ಟಿಗೆ ತರುವ ಮಾರ್ಗದಲ್ಲಿ ರಸ್ತೆ ಬದಿಗಿದ್ದ ಹತ್ತು ಹಲವು ಮರಗಳನ್ನು ಕಡಿಯಲಾಗಿತ್ತು ಎಂದು ನೆರೆಯ ಯಲ್ಲಟ್ಟಿ ಗ್ರಾಮದ ಮಾಳಪ್ಪ ಹೇಳುತ್ತಾರೆ.

ಜಾತ್ರೆಯ ಸಂದರ್ಭದಲ್ಲಿ ಕಾಡಸಿದ್ಧೇಶ್ವರ ಬೆಳ್ಳಿಯ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಬಣ್ಣ ಬಣ್ಣದ ದೀಪಾಲಂಕಾರಗಳಿಂದ, ಭಕ್ತರು ಕಟ್ಟಿದ ಕಂಠಮಾಲೆ ಮತ್ತು ಹೂ ಮಾಲೆಗಳಿಂದ ಶೃಂಗರಿಸಲ್ಪಡುವ ರಥ ನೋಡುಗರ ಕಣ್ಮಣ ಸೆಳೆಯುತ್ತದೆ. ಶೃಂಗಾರಗೊಂಡ ರಥವನ್ನು ನೋಡುವುದೇ ಒಂದು ಭಾಗ್ಯ. ಈ ವೈಭವಯುತವಾದ ರಥ ಕಾಡಸಿದ್ದೇಶ್ವರ ಜಾತ್ರೆಗೆ ಮೆರುಗನ್ನು ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT