ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ ರಹಿತ ಹೇಳಿಕೆ ಖಂಡನೀಯ

Last Updated 10 ಸೆಪ್ಟೆಂಬರ್ 2017, 5:13 IST
ಅಕ್ಷರ ಗಾತ್ರ

ಬೆಳಗಾವಿ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ಸಂಗೊಳ್ಳಿ ರಾಯಣ್ಣನ ವಂಶಸ್ಥರ ಬಗ್ಗೆ ಕೆಲವು ಸ್ವಯಂಘೋಷಿತ ಇತಿಹಾಸ ಸಂಶೋಧಕರು ದಾರಿತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಇವರ ವಾದಕ್ಕೆ ಯಾವುದೇ ರೀತಿಯ ದಾಖಲೆಗಳಿಲ್ಲ. ಇವೆಲ್ಲ ಕಪೋಲಕಲ್ಪಿತ ಎಂದು ಸಂಗೊಳ್ಳಿ ರಾಯಣ್ಣ ಚರಿತ್ರೆ ಪುಸ್ತಕದ ಲೇಖಕ, ಇತಿಹಾಸಕಾರ ಪ್ರೊ. ಜ್ಯೋತಿ ಹೊಸೂರು ಹೇಳಿದರು.

ಇತ್ತೀಚೆಗೆ ಬೈಲಹೊಂಗಲದಲ್ಲಿ ಬಸವರಾಜ ಕಮತೆ ಎನ್ನುವವರು ಸಂಗೊಳ್ಳಿ ರಾಯಣ್ಣನ ಬಗ್ಗೆ ಮಾಧ್ಯಮಗಳಿಗೆ ನೀಡಿರುವ ಮಾಹಿತಿಯಲ್ಲಿ ಎಳ್ಳಷ್ಟು ಸತ್ಯಾಂಶವಿಲ್ಲ ಎಂದು ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸಂಗೊಳ್ಳಿ ರಾಯಣ್ಣ ಅವರಿಗೆ ರೇತವ್ವ ಎನ್ನುವ ಪತ್ನಿ ಇದ್ದರು. ರಾಯಣ್ಣ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ ನಂತರ ಅವರ ಹೆಸರಿನಲ್ಲಿದ್ದ 13 ಎಕರೆ 24 ಗುಂಟೆ ಹಾಗೂ 6 ಎಕರೆ 34 ಗುಂಟೆ ಜಾಗವನ್ನು ರೇತವ್ವ ಹೆಸರಿನಲ್ಲಿ ವರ್ಗಾವಣೆ ಮಾಡಲಾಯಿತೆಂದು ಕಮತೆ ಹೇಳಿರುವುದು ಸಂಪೂರ್ಣ ಸುಳ್ಳು. ಆ ಕಾಲದಲ್ಲಿ ಭೂಮಿಯನ್ನು ಎಕರೆ– ಗುಂಟೆ ಮಾನದಂಡದಲ್ಲಿ ಅಳೆಯುತ್ತಿರಲಿಲ್ಲ. ಕುರಗಿ ಲೆಕ್ಕದಲ್ಲಿ ಅಳೆಯಲಾಗುತ್ತಿತ್ತು ಎಂದು ಸ್ಪಷ್ಟನೆ ನೀಡಿದರು.

ರಾಯಣ್ಣ ಅವರನ್ನು 1831ರ ಜನವರಿ 26ರಂದು ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಬ್ರಿಟಿಷರು ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಇದಾಗಿ 21 ವರ್ಷಗಳ ನಂತರ ರೇತವ್ವ ಅವರ ಹೆಸರಿನಲ್ಲಿ ಜಮೀನು ವರ್ಗಾವಣೆ ಮಾಡಲಾಯಿತೆಂದು ಕಮತೆ ಹೇಳುತ್ತಾರೆ. ಆದರೆ, ಇದು ಹೇಗೆ ಸಾಧ್ಯ? ಆಗಿನ ಕಾಲಘಟ್ಟದಲ್ಲಿ ಗಂಡುಮಕ್ಕಳಿಗೆ ಆಸ್ತಿ ವರ್ಗಾವಣೆಯಾಗುತ್ತಿತ್ತು. ರೇತವ್ವ ಅವರ ಮಡಿವಾಳಪ್ಪ ಹೆಸರಿಗೆ ಏಕೆ ವರ್ಗಾವಣೆಯಾಗಲಿಲ್ಲ ಎಂದು ಅವರು ಪ್ರಶ್ನಿಸಿದರು.

ಕಮತೆ ಅವರು ಸರ್ವೇ ನಂಬರ್‌ 81 ಉಲ್ಲೇಖಿಸಿ ಕೆಲವೊಂದು ದಾಖಲೆ ನೀಡಿದ್ದಾರೆ. ಆದರೆ, ರೇತವ್ವ ಹೆಸರಿಗೆ ವರ್ಗಾವಣೆಯಾಗಿರುವುದು ಸರ್ವೇ ನಂಬರ್‌ 80ರ ಜಾಗ. ಇದರ ಬಗ್ಗೆ ಉಲ್ಲೇಖವಿಲ್ಲ. ಹೀಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದರು.

ಕಮತೆ ಅವರು ಕೆಲವೊಂದು ಬರಹಗಳ ದಾಖಲೆ ನೀಡಿದ್ದಾರೆ. ಆದರೆ, ಈ ದಾಖಲೆಗಳು ಎಲ್ಲಿಂದ ಬಂದವು, ಯಾವ ಇಲಾಖೆಗೆ ಸೇರಿದ್ದು? ಯಾರ ಅಂಗೀಕಾರ ಇದೆ ಎನ್ನುವ ಮಾಹಿತಿಯಿಲ್ಲ ಎಂದರು.

ಆಸ್ತಿ ಮುಟ್ಟುಗೋಲು: ರಾಯಣ್ಣ ಸೆರೆ ಸಿಕ್ಕ ನಂತರ ಆತನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಗಲ್ಲು ಶಿಕ್ಷೆ ನೀಡಲು ತೀರ್ಪು ನೀಡಿದ ನ್ಯಾಯಾಧೀಶರು, ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳು ವಂತೆಯೂ ಆದೇಶ ಹೊರಡಿಸಿದ್ದರು. ಇದರ ಬಗ್ಗೆ ಎಂ.ವಿ. ಕೃಷ್ಣರಾವ್‌ ಅವರು 1962ರಲ್ಲಿ ಬರೆದ ‘ಹಿಸ್ಟರಿ ಆಫ್‌ ಫ್ರೀಡಂ ಮೂವ್‌ಮೆಂಟ್‌ ಆಫ್‌ ಕರ್ನಾಟಕ’ ಪುಸ್ತಕದಲ್ಲಿ ಉಲ್ಲೇಖವಿದೆ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ನಂತರ ಇನ್ನೊಬ್ಬರಿಗೆ ವರ್ಗಾವಣೆಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

‘ಪ್ರಸ್ತುತ ಲಭ್ಯ ಇರುವ ನಂಬಲಾರ್ಹ ದಾಖಲೆಗಳ ಪ್ರಕಾರ, ಸಂಗೊಳ್ಳಿ ರಾಯಣ್ಣನಿಗೆ ಮದುವೆಯಾಗಿರಲಿಲ್ಲ. ಸೂರ್ಯನಾಥ ಕಾಮತ ಸಂಪಾದಿಸಿದ ‘ಸಂಗೊಳ್ಳಿ ರಾಯಣ್ಣ’ ಪುಸ್ತಕದಲ್ಲಿ ರಾಯಣ್ಣನ ಪತ್ನಿಯ ಬಗ್ಗೆ ಉಲ್ಲೇಖವಿದೆ. ಆದರೆ, ಆಧಾರ ಇಲ್ಲ. ಹಳವರ ವಂಶಾವಳಿಯಲ್ಲೂ ಇದರ ಬಗ್ಗೆ ಪ್ರಸ್ತಾಪವಿಲ್ಲ’ ಎಂದು ವಿವರಿಸಿದರು.

ರಾಯಣ್ಣನ ಚಿಕ್ಕಪ್ಪ ಸಣ್ಣ ಭರಮಪ್ಪ ಅವರ ವಂಶಸ್ಥರು ಜೀವಿತವಾಗಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಇವರ ವಂಶಸ್ಥರಾದ ಕೆ.ಡಿ. ರೋಗಣ್ಣವರ ಬೆಳಗಾವಿಯಲ್ಲಿ ವಾಸವಾಗಿದ್ದಾರೆ ಎಂದು ಹೇಳಿದರು.

ಕೆ.ಡಿ. ರೋಗಣ್ಣವರ ಮಾತನಾಡಿ, ‘1990ರ ಅವಧಿಯಲ್ಲಿ ಎಸ್‌.ಬಂಗಾರಪ್ಪ ಮುಖ್ಯಮಂತ್ರಿ ಅವರು, ಸಂಗೊಳ್ಳಿ ರಾಯಣ್ಣನ ವಂಶಸ್ಥರಿಗೆ ಜಮೀನು ನೀಡುವುದಾಗಿ ಘೋಷಣೆ ಮಾಡಿದ್ದರು. ಆ ನಂತರ ಕೆಲವು ದೂರದ ಸಂಬಂಧಿಗಳು ತಮ್ಮನ್ನು ತಾವು ವಂಶಸ್ಥರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇತಿಹಾಸಕ್ಕೆ ಅಪಚಾರ ಎಸಗುತ್ತಿದ್ದಾರೆ’ ಎಂದರು.

ಬೈಲಹೊಂಗಲದಲ್ಲಿ ವಾಸವಾಗಿರುವ ನಿಂಗಪ್ಪ ಕರಿಗಾರ ನಮಗೆ ಬೀಗರಾಗಿದ್ದಾರೆ. ಆದರೆ, ಪ್ರಚಾರ ಪಡೆಯಲು ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯುವುದಕ್ಕಾಗಿ ತಮ್ಮನ್ನು ತಾವು ರಾಯಣ್ಣನ ವಂಶಸ್ಥರು ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರು ಹೇಳುತ್ತಿರುವುದು ಸಂಪೂರ್ಣ ಸುಳ್ಳು ಎಂದು ನ್ಯಾಯಾಲಯದಲ್ಲಿಯೂ ಸಾಬೀತಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT